ಕರ್ನಾಟಕ ರಾಜ್ಯದಲ್ಲಿ ಅಕ್ಟೋಬರ್ 12, 2005 ರಲ್ಲಿ ಅಸ್ತಿತ್ವಕ್ಕೆ ಬಂದ ಮಾಹಿತಿ ಆಯೋಗವು ಆಡಳಿತದಲ್ಲಿ ಪಾರದರ್ಶಕತೆ ಮತ್ತು ಬದ್ಧತೆಯನ್ನು ತರುವಲ್ಲಿ ಪ್ರಮುಖ ಪಾತ್ರ ವಹಿಸಿದೆ. ಸಾರ್ವಜನಿಕರಿಂದ ಮಾಹಿತಿ ಬಯಸಿ ಸಲ್ಲಿಕೆಯಾಗುವ ಅರ್ಜಿಗಳನ್ನು ನಿಯಮಾನುಸಾರ ವಿಲೇವಾರಿ ಮಾಡುವಲ್ಲಿ ಎಲ್ಲ ಸಾರ್ವಜನಿಕ ಮಾಹಿತಿ ಅಧಿಕಾರಿಗಳು ಕ್ರಮವಹಿಸಿದ್ದಾರೆ. ಅದಾಗಿಯೂ ಕರ್ನಾಟಕ ರಾಜ್ಯದಲ್ಲಿ ಸಪ್ಟೆಂಬರ್ 2025 ರ ವರೆಗೆ ಸುಮಾರು 40 ಸಾವಿರ ಆರ್‍ಟಿಐ ಅರ್ಜಿಗಳು ಬಾಕಿ ಉಳಿದಿವೆ.
ಇನ್ನು ಧಾರವಾಡ ಜಿಲ್ಲೆಯಲ್ಲಿ 1,623 ಆರ್‍ಟಿಐ ಅರ್ಜಿಗಳು ವಿಲೇವಾರಿಗೆ ಬಾಕಿ ಉಳಿದಿದ್ದು, ಸಂಬಂಧಿಸಿದ ಸಾರ್ವಜನಿಕ ಮಾಹಿತಿ ಅಧಿಕಾರಿಗಳು ಶೀಘ್ರವಾಗಿ ಅವುಗಳನ್ನು ನಿಯಮಾನುಸಾರ ವಿಲೇವಾರಿ ಮಾಡಬೇಕೆಂದು ಕರ್ನಾಟಕ ರಾಜ್ಯ ಮಾಹಿತಿ ಆಯೋಗದ ಮುಖ್ಯ ಮಾಹಿತಿ ಆಯುಕ್ತ ಅಶಿತ್ ಮೋಹನ್ ಪ್ರಸಾದ್ ಅವರು ತಿಳಿಸಿದ್ದಾರೆ.
RTI Delay in Karnataka 40 000 Applications Pending Government Officials Fined 10 Crore
ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯತ್‍ದಿಂದ ಜಿಲ್ಲಾ ಪಂಚಾಯತ ಸಭಾಂಗಣದಲ್ಲಿ ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ಮತ್ತು ನೌಕರರಿಗೆ ಆಯೋಜಿಸಿದ್ದ ಮಾಹಿತಿ ಹಕ್ಕು ಅಧಿನಿಯಮ-2005 ಕುರಿತ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದ್ದಾರೆ. ಸಾರ್ವಜನಿಕ ಮಾಹಿತಿ ಅಧಿಕಾರಿಗಳಿಗೆ ಮಾಹಿತಿ ಹಕ್ಕು ಕಾಯ್ದೆಯ ಅಧ್ಯಯನ ಮತ್ತು ಸಾಮಾನ್ಯ ತಿಳವಳಿಕೆ ಇರಬೇಕು. ಮಾಹಿತಿ ಬಯಸಿ ಸಲ್ಲಿಕೆಯಾಗುವ ಅರ್ಜಿಗಳನ್ನು ನಿಯಮಾನುಸಾರ ಪರಿಶೀಲಿಸಿ, ಕಾಯ್ದೆಯಲ್ಲಿ ಲಭ್ಯವಿರುವ ಸೆಕ್ಷನ್‍ಗಳ ಆಧಾರದ ಮೇಲೆ ಉತ್ತರ ಮತ್ತು ಮಾಹಿತಿಯನ್ನು ಒದಗಿಸಬೇಕು.
ಕಳೆದ 10 ವರ್ಷದಲ್ಲಿ ಮಾಹಿತಿ ಹಕ್ಕು ಕಾಯ್ದೆ ಅನ್ವಯ ಮಾಹಿತಿ ನೀಡುವಲ್ಲಿ ವಿಳಂಬ, ಸರಿಯಾದ ಮಾಹಿತಿ ನೀಡದಿರುವುದು ಮತ್ತು ಇತರ ಕಾರಣಗಳಿಂದಾಗಿ ಸುಮಾರು 10 ಕೋಟಿ ಅಷ್ಟು ದಂಡವು ಸರ್ಕಾರಿ ಅಧಿಕಾರಿಗಳಿಂದ ಆಯೋಗಕ್ಕೆ ಜಮೆಯಾಗಿದೆ. ಆದ್ದರಿಂದ ಮಾಹಿತಿ ಅಧಿಕಾರಿಗಳು ಸಲ್ಲಿಕೆ ಆಗುವ ಅರ್ಜಿಗಳಿಗೆ ಕಾಯ್ದೆಯನ್ವಯ ಕಾಲಮಿತಿಯಲ್ಲಿ ಉತ್ತರ ಒದಗಿಸಬೇಕೆಂದು ಅವರು ಹೇಳಿದರು.
ಸಾರ್ವಜನಿಕರು ಆರ್‍ಟಿಐ ಕಾಯ್ದೆಯಡಿ ಸಲ್ಲಿಕೆಯಾಗುವ ಅರ್ಜಿಗಳನ್ನು 30 ದಿನಗಳಲ್ಲಿ ವಿಲೇವಾರಿ ಮಾಡಬೇಕು. ಕಡತಗಳಲ್ಲಿನ ಫೈಲ್ ನೋಟ್‍ಗಳನ್ನು ನೀಡಬಹುದು. ನೋಟ್ ಮಾಡಿದ ಅಧಿಕಾರಿಯ ಹೆಸರು, ಗುರುತು ಗೌಪ್ಯವಾಗಿರಬೇಕು. ಸರ್ಕಾರಿ ಇಲಾಖೆಗಳ ವೆಬ್‍ಸೈಟ್‍ನಿಂದ ಪಡೆಯುವ ಮಾಹಿತಿಗೆ ದೃಢಿಕರಣದ ಅಗತ್ಯವಿಲ್ಲ. ಸರ್ಕಾರಿ ಯೋಜನೆ, ಕಾಮಗಾರಿಗಳ ಕುರಿತು ಸಲ್ಲಿಕೆಯಾಗುವ ಅರ್ಜಿಗಳಿಗೆ ಆಯಾ ವೆಬ್‍ಸೈಟ್‍ಗಳಿಂದ ಮಾಹಿತಿ ಪಡೆಯಬಹುದು ಎಂದು ಉತ್ತರಿಸಬಹುದು ಎಂದು ಹೇಳಿದರು.
ಮಾಹಿತಿ ಕೇಳಿ ಯಾವುದೇ ವ್ಯಕ್ತಿಯು ಸರ್ಕಾರದ ಉದ್ಯೋಗ, ಸೌಲಭ್ಯಗಳ ಬಗ್ಗೆ ಮಾಹಿತಿ ಕೇಳಿ ಅರ್ಜಿ ಸಲ್ಲಿಸಿದ್ದಲ್ಲಿ ಮಾಹಿತಿ ನೀಡಬೇಕಾಗುತ್ತದೆ. ಅಧಿಕಾರಿಯ ಹೆಸರು ಮತ್ತು ಹುದ್ದೆ ಸಾರ್ವಜನಿಕ ದಾಖಲೆ ಯಾಗಿರುವದರಿಂದ ಅವುಗಳನ್ನು ಸಹ ನೀಡಬೇಕಾಗುತ್ತದೆ.
ಯಾವುದೇ ಪ್ರಕರಣದ ತನಿಖೆ ಪ್ರಗತಿಯಲ್ಲಿದ್ದು ಅಥವಾ ತನಿಖೆ ಮುಕ್ತಾಯವಾಗಿ ಅಂತಿಮ ವರದಿ ಸಲ್ಲಿಸದಿರುವ ಅಥವಾ ತನಿಖೆ ಮುಕ್ತಾಯವಾದ ಬಗ್ಗೆ ಸಂಬಂಧಿಸಿದ ಅಧಿಕಾರಿ ಅಥವಾ ಸಂಸ್ಥೆ ದೃಢಿಕರಣ ನೀಡದ ಹೊರತು ಯಾವುದೇ ಮಾಹಿತಿಯನ್ನು ನೀಡುವಂತಿಲ್ಲ. ಸಾರ್ವಜನಿಕ ಮಾಹಿತಿ ಅಧಿಕಾರಿಗೆ ಕಾಯ್ದೆ ಹಾಗೂ ಕಾನೂನುಗಳ ಸಾಮಾನ್ಯ ಜ್ಞಾನವು ಅಗತ್ಯವಾಗಿದೆ ಎಂದು ಮುಖ್ಯ ಮಾಹಿತಿ ಆಯುಕ್ತರು ತಿಳಿಸಿದರು.
ಮಾಹಿತಿ ಹಕ್ಕು ಕಾಯ್ದೆ 2005 ರಲ್ಲಿ ಜಾರಿಗೆ ಬಂದಿದ್ದರೂ ಸಹ ಹಿಂದಿನ 20 ವರ್ಷಗಳ ಮಾಹಿತಿಗಳಿಗೂ ಈ ಕಾಯ್ದೆ ಅನ್ವಯವಾಗುತ್ತದೆ. ಕಳೆದ 20 ವರ್ಷಗಳಲ್ಲಿ ಮಾಹಿತಿ ಹಕ್ಕು ಕಾಯ್ದೆಯ ಕುರಿತು ಉಚ್ಛ ನ್ಯಾಯಾಲಯಗಳಿಂದ ಸುಮಾರು 200 ಕ್ಕೂ ಹೆಚ್ಚು ಹಾಗೂ ಸರ್ವೋಚ್ಚ ನ್ಯಾಯಾಲಯದಿಂದ ಸುಮಾರು 100 ಕ್ಕೂ ಹೆಚ್ಚು ಆದೇಶಗಳು ಬಂದಿವೆ. ಈ ಆದೇಶಗಳು ಮಾಹಿತಿ ಹಕ್ಕು ಕಾಯ್ದೆಯ ಅನ್ವಯ, ಅಳವಡಿಕೆ ಹಾಗೂ ವಿಸ್ತರಣೆಗೆ ಸಾಕಷ್ಟು ಬಲ ತುಂಬಿವೆ ಎಂದು ಅವರು ಇದೇ ಸಂದರ್ಭದಲ್ಲಿ ಹೇಳಿದರು.
ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಪ್ರತಿ ಮೂರು ತಿಂಗಳಿಗೊಮ್ಮೆ ಆರ್‍ಟಿಐ ಅರ್ಜಿಗಳ ಕುರಿತು ಪ್ರಗತಿ ಪರಿಶೀಲನೆ ಮಾಡಬೇಕು. ಮತ್ತು ಅರ್ಜಿ ವಿಲೇವಾರಿಯಲ್ಲಿ ಇಲಾಖೆಗಳ ಸಾರ್ವಜನಿಕ ಮಾಹಿತಿ ಅಧಿಕಾರಿಗಳಿಗೆ ಸೂಕ್ತ ಸಲಹೆ, ಮಾರ್ಗದರ್ಶನ ನೀಡಬೇಕು. ರಾಜ್ಯ ಮಟ್ಟದಲ್ಲಿ ಮಾಹಿತಿ ಹಕ್ಕು ಕಾಯ್ದೆ ದಿನಾಚರಣೆ ಸಂದರ್ಭದಲ್ಲಿ ಆರ್‍ಟಿಐ ಶೂನ್ಯ ಪ್ರಕರಣಗಳನ್ನು ಹೊಂದಿರುವ ಜಿಲ್ಲೆಗೆ ಪ್ರತಿ ವರ್ಷ ಉತ್ತಮ ಆರ್‍ಟಿಐ ನಿರ್ವಹಣೆಯ ಜಿಲ್ಲೆ ಎಂದು ಗುರುತಿಸಿ, ಗೌರವಿಸಲಾಗುತ್ತದೆ.
ಅದರಂತೆ ಜಿಲ್ಲಾಧಿಕಾರಿಗಳು ತಮ್ಮ ಜಿಲ್ಲೆಯಲ್ಲಿ ಆರ್‍ಟಿಐ ಅರ್ಜಿಗಳನ್ನು ಕಾಲಮಿತಿಯಲ್ಲಿ ನಿಯಮಾನುಸಾರ ವಿಲೇವಾರಿ ಮಾಡಿ, ಯಾವುದೇ ಅರ್ಜಿಗಳನ್ನು ಬಾಕಿ ಹೊಂದಿರದ ಅಧಿಕಾರಿ, ಸಿಬ್ಬಂದಿಯನ್ನು ಉತ್ತಮ ಸಾರ್ವಜನಿಕ ಮಾಹಿತಿ ಅಧಿಕಾರಿ ಎಂದು ಗುರುತಿಸಿ, ಪ್ರಶಸ್ತಿ ನೀಡಿ ಗೌರವಿಸಬೇಕು. ಇಂತಹ ಉಪಕ್ರಮಗಳು ಕಾಯ್ದೆಯ ಅನುಷ್ಠಾನದಲ್ಲಿ ಶೀಘ್ರತೆ ಹಾಗೂ ಆಡಳಿತದಲ್ಲಿ ಪಾರದರ್ಶಕತೆಯನ್ನು ಮೂಡಿಸುತ್ತದೆ ಎಂದು ಮುಖ್ಯ ಮಾಹಿತಿ ಆಯುಕ್ತ ಅಶಿತ್ ಮೋಹನ್ ಪ್ರಸಾದ್ ಅವರು ತಿಳಿಸಿದರು.
ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ಮಾತನಾಡಿ, ಪ್ರತಿ ಆರು ತಿಂಗಳಿಗೊಮ್ಮೆ ಆರ್‍ಟಿಐ ಕಾಯ್ದೆಯ ಕುರಿತು ಸಾರ್ವಜನಿಕ ಮಾಹಿತಿ ಅಧಿಕಾರಿಗಳಿಗೆ, ಪ್ರಥಮ ಮೇಲ್ಮನವಿ ಪ್ರಾಧಿಕಾರಿಗಳಿಗೆ, ದ್ವಿತೀಯ ಮೇಲ್ಮನವಿ ಪ್ರಾಧಿಕಾರಿಗಳಿಗೆ ಅಗತ್ಯ ತರಬೇತಿಯನ್ನು ನೀಡಲಾಗುತ್ತಿದೆ.
ವಿವಿಧ ಇಲಾಖೆಗಳಲ್ಲಿ ಮಾಹಿತಿ ಕೇಳಿ ಸಲ್ಲಿಕೆ ಆಗುವ ಆರ್‍ಟಿಐ ಅರ್ಜಿಗಳನ್ನು ಗಮನಿಸಿದಾಗ ಜಿಲ್ಲೆಯ ಅಧಿಕಾರಿಗಳು ಉತ್ತಮವಾಗಿ ಕಾರ್ಯನಿರ್ವಹಿಸಿದ್ದಾರೆ. ಆಯೋಗವು ನೀಡಿರುವ ಮಾಹಿತಿ ಅನ್ವಯ ಬಾಕಿ ಇರುವ ಆರ್‍ಟಿಐ ಅರ್ಜಿಗಳನ್ನು ಕಾಲಮಿತಿಯಲ್ಲಿ ವಿಲೇವಾರಿ ಮಾಡಲು ಕ್ರಮವಹಿಸಲಾಗುತ್ತದೆ ಎಂದಿದ್ದಾರೆ.