ಅನ್ನ ಭಾಗ್ಯ ಯೋಜನೆಯಡಿ ಇಂದಿರಾ ಕಿಟ್ ಬದಲು ಇ-ವೋಚರ್; ಹಣಕಾಸು ಇಲಾಖೆಯ ಶಿಫಾರಸುಗಳೇನು.ತನ್ನ ಮಹತ್ವಕಾಂಕ್ಷಿ ಪಂಚ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಅನ್ನ ಭಾಗ್ಯ ಯೋಜನೆಯಲ್ಲಿ ಬದಲಾವಣೆಯನ್ನು ಮಾಡಿರುವ ರಾಜ್ಯ ಸರ್ಕಾರ ಐದು ಕೇಜಿ ಅಕ್ಕಿಯ ಬದಲು ಇಂದಿರಾ ಆಹಾರ ಕಿಟ್ ಅನ್ನು ನೀಡಲು ನಿರ್ಧರಿಸಿದೆ. ಆದರೆ, ಇಂದಿರಾ ಆಹಾರ ಕಿಟ್‌ಗಳಲ್ಲಿ ಗುಣಮಟ್ಟದ ಬೇಳೆಕಾಳು, ಅಡುಗೆ ಎಣ್ಣೆ, ಸಕ್ಕರೆ ಮತ್ತಿತರ ಆಹಾರ ಪದಾರ್ಧಗಳನ್ನು ಒದಗಿಸುವುದು ಸರ್ಕಾರಕ್ಕೆ ದೊಡ್ಡ ಸವಾಲಾಗಿದೆ. ಹೀಗಾಗಿ ಅನ್ನ ಭಾಗ್ಯ ಯೋಜನೆಯ ಫಲಾನುಭವಿಗಳಿಗೆ ಇ-ವೋಚರ್‌ಗಳನ್ನು ನೀಡುವಂತೆ ಹಣಕಾಸು ಇಲಾಖೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದೆ. ಈ ಹಿನ್ನೆಲೆಯಲ್ಲಿ ಇ- ವೊಚರ್ ಹೇಗೆ ಬಳಕೆ ಆಗಲಿದೆ ಎಂಬ ಮಾಹಿತಿಗಳು ಇಲ್ಲಿವೆ.
ಆಹಾರ ಕಿಟ್‌ಗಳಿಗೆ ಸಾಮಗ್ರಿ ಖರೀದಿ, ಸಂಭಾವ್ಯ ಬೆಲೆ ಏರಿಕೆ ಮತ್ತು ಗುಣಮಟ್ಟದ ಸಮಸ್ಯೆಗಳ ಬಗ್ಗೆ ಕಳವಳ
ಕಳಪೆ ಗುಣಮಟ್ಟದ ಉತ್ಪನ್ನಗಳು ಹಾಗೂ ದುರುಪಯೋಗ ಸರ್ಕಾರಕ್ಕೆ ಮುಜುಗರ ಉಂಟುಮಾಡಬಹುದು
ಅನ್ನ ಭಾಗ್ಯ ಫಲಾನುಭವಿಗಳಿಗೆ ಇ-ವೋಚರ್ ಆಯ್ಕೆ ಪರಿಗಣಿಸುವಂತೆ ಸಲಹೆ ನೀಡಿರುವ ಹಣಕಾಸು ಇಲಾಖೆ
ಸರ್ಕಾರ ನೀಡುವ ಉತ್ಪನ್ನಗಳ ಬದಲು, ತಮಗೆ ಬೇಕಾದ ಪೌಷ್ಟಿಕಾಂಶದ ವಸ್ತುಗಳನ್ನು ಆಯ್ಕೆ ಮಾಡಲು ಅವಕಾಶ
ಏನಿದು ಇಂದಿರಾ ಆಹಾರ ಕಿಟ್?
"ಇಂದಿರಾ ಕಿಟ್ ಯೋಜನೆ" ಕರ್ನಾಟಕ ಸರ್ಕಾರದ ಇತ್ತೀಚಿನ ಉಪಕ್ರಮವಾಗಿದ್ದು, ಇದು ಅನ್ನ ಭಾಗ್ಯ ಯೋಜನೆಯಡಿ ಒದಗಿಸಲಾದ 5 ಕೆಜಿ ಹೆಚ್ಚುವರಿ ಅಕ್ಕಿಯ ಬದಲಾಗಿ ಪೌಷ್ಟಿಕಾಂಶಯುಕ್ತ ಇತರ ಆಹಾರ ಪದಾರ್ಥಗಳನ್ನು ನೀಡಲಾಗುತ್ತಿದೆ. ಈ ಕಿಟ್‌ನಲ್ಲಿ ಅರ್ಹ ಕುಟುಂಬಗಳಿಗೆ ತಲಾ ಒಂದು ಕೆಜಿ ತೊಗರಿ ಬೇಳೆ, ಹಸಿರು ಕಡಲೆ, ಸಕ್ಕರೆ, ಉಪ್ಪು ಮತ್ತು ಅಡುಗೆ ಎಣ್ಣೆ ಸೇರಿವೆ. ಹೆಚ್ಚು ಸಮತೋಲಿತ ಪೌಷ್ಟಿಕಾಂಶದ ಪ್ಯಾಕೇಜ್ ಅನ್ನು ಒದಗಿಸುವುದು ಮತ್ತು ಹೆಚ್ಚುವರಿ ಅಕ್ಕಿ ಕಾಳ ಸಂತೆಯಲ್ಲಿ ಮಾರಾಟವಾಗುವುದನ್ನು ತಡೆಯುವ ಉದ್ದೇಶದಿಂದ ಸರ್ಕಾರ ಈ ಕ್ರಮವನ್ನು ಜಾರಿಗೊಳಿಸಿದೆ.
ಇಂದಿರಾ ಕಿಟ್ ನೀಡಿಕೆಯ ಉದ್ದೇಶವೇನು?
ಅನ್ನ ಭಾಗ್ಯ ಯೋಜನೆಯಡಿಯಲ್ಲಿ, BPL ಕುಟುಂಬದ ಪ್ರತಿ ಸದಸ್ಯರಿಗೆ 10 ಕೆ.ಜಿ ಅಕ್ಕಿ ದೊರೆಯುತ್ತದೆ. ಅದರಲ್ಲಿ 5 ಕೆ.ಜಿ ಅಕ್ಕಿಯನ್ನು ಕೇಂದ್ರ ಸರ್ಕಾರ ಪೂರೈಸುತ್ತದೆ. ಪರಿಷ್ಕೃತ ನೀತಿಯಡಿಯಲ್ಲಿ, ಫಲಾನುಭವಿಗಳು 5 ಕೆ.ಜಿ ಅಕ್ಕಿಯ ಬದಲಿಗೆ ತಲಾ 1 ಕೆ.ಜಿ ತೊಗರಿಬೇಳೆ, ಹೆಸರುಬೇಳೆ, ಸಕ್ಕರೆ ಮತ್ತು ಉಪ್ಪು, ಜೊತೆಗೆ 1 ಲೀಟರ್ ಅಡುಗೆ ಎಣ್ಣೆಯನ್ನು ಪಡೆಯುತ್ತಾರೆ. ಈ ಬದಲಾವಣೆಯು 1.2 ಕೋಟಿ ಪಡಿತರ ಚೀಟಿ ಹೊಂದಿರುವವರಲ್ಲಿ ಉತ್ತಮ ಪೋಷಣೆಯನ್ನು ಉತ್ತೇಜಿಸುವ ಗುರಿ ಹೊಂದಿದೆ ಮತ್ತು ಹೆಚ್ಚುವರಿ ಅಕ್ಕಿ ವಿತರಣೆಗೆ ಸಂಬಂಧಿಸಿದ ಕಳ್ಳ ಮಾರುಕಟ್ಟೆ ಚಟುವಟಿಕೆಯನ್ನು ಏಕಕಾಲದಲ್ಲಿ ಕಡಿತಗೊಳಿಸುವ ಗುರಿಯನ್ನು ಹೊಂದಿದೆ. ಇಂದಿರಾ ಕಿಟ್ ನೀಡಿಕೆಯಿಂದ ಫಲಾನುಭವಿಗಳು ಪ್ರತಿ ತಿಂಗಳು ಅಗತ್ಯ ವಸ್ತುಗಳ ಮೇಲೆ ಒಟ್ಟಾಗಿ 630 ಕೋಟಿ ರೂ. ಉಳಿಸಬಹುದು ಎಂದು ಸರ್ಕಾರ ನಿರೀಕ್ಷಿಸಿದೆ.
ಹಣಕಾಸು ಇಲಾಖೆಯ ಆಕ್ಷೇಪಗಳೇನು?
ಅನ್ನ ಭಾಗ್ಯ ಯೋಜನೆಯಡಿ 5 ಕೆಜಿ ಅಕ್ಕಿಯನ್ನು ಇಂದಿರಾ ಆಹಾರ ಕಿಟ್‌ನಿಂದ ಬದಲಿಸುವ ಸರ್ಕಾರದ ನಿರ್ಧಾರವು ಖರೀದಿ, ಸಂಭಾವ್ಯ ಬೆಲೆ ಏರಿಕೆ ಮತ್ತು ಗುಣಮಟ್ಟದ ಸಮಸ್ಯೆಗಳ ಬಗ್ಗೆ ಕಳವಳವನ್ನು ಹುಟ್ಟುಹಾಕಿದೆ. 5 ಕೆಜಿ ಅಕ್ಕಿಯ ಬದಲಿಗೆ ಇಂದಿರಾ ಆಹಾರ ಕಿಟ್‌ಗಳನ್ನು ಪರಿಚಯಿಸುವ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ನಿರ್ಧಾರವು ಕಳಪೆ ಗುಣಮಟ್ಟದ ಉತ್ಪನ್ನಗಳು ಮತ್ತು ಖರೀದಿಯಲ್ಲಿ ಸಂಭವನೀಯ ದುರುಪಯೋಗದ ಬಗ್ಗೆ ಸರ್ಕಾರಕ್ಕೆ ಮುಜುಗರವನ್ನುಂಟುಮಾಡಬಹುದು ಎಂದು ಹಣಕಾಸು ಇಲಾಖೆಯು ಸರ್ಕಾರಕ್ಕೆ ತನ್ನ ಅಭಿಪ್ರಾಯನ್ನು ತಿಳಿಸಿದೆ ಎಂದು ಮೂಲಗಳು ತಿಳಿಸಿವೆ. ಇದಲ್ಲದೆ, ಮಾರುಕಟ್ಟೆಯಲ್ಲಿ ಅಗತ್ಯ ವಸ್ತುಗಳ ಬೆಲೆ ಹೆಚ್ಚಳವಾಗುವುದರಿಂದ, ಸರ್ಕಾರವು ನಿಗದಿಪಡಿಸಿದ ಬಜೆಟ್‌ನಲ್ಲಿ ಎಲ್ಲ ವಸ್ತುಗಳನ್ನು ಕೊಂಡು ಫಲಾನುಭವಿಗಳಿಗೆ ವಿತರಿಸಲು ಸಾಧ್ಯವಾಗದೇ ಇರಬಹುದು. ದೊಡ್ಡ ಪ್ರಮಾಣದಲ್ಲಿ ಲಕ್ಷಾಂತರ ಕುಟುಂಬಗಳಿಗೆ ಅಗತ್ಯವಿರುವ ಬೇಳೆಕಾಳುಗಳು, ಎಣ್ಣೆ ಮತ್ತು ಸಕ್ಕರೆಯಂತಹ ವಸ್ತುಗಳು ಮಾರುಕಟ್ಟೆಯಲ್ಲಿ ನಿರಂತರವಾಗಿ ಲಭ್ಯವಾಗದಿರಬಹುದು. ಹೊಸ ವಸ್ತುಗಳನ್ನು (ಅಕ್ಕಿಯ ಬದಲಿಗೆ ಬೇಳೆ, ಎಣ್ಣೆ, ಇತ್ಯಾದಿ) ಖರೀದಿಸಿ, ವಿಂಗಡಿಸಿ, ಪ್ಯಾಕ್ ಮಾಡಿ ಪಡಿತರ ಅಂಗಡಿಗಳಿಗೆ ತಲುಪಿಸುವ ಪ್ರಕ್ರಿಯೆಯಲ್ಲಿ ತೊಡಕುಗಳು ಎದುರಾಗಬಹುದು. ಇದು ವಿತರಣೆಯನ್ನು ವಿಳಂಬಗೊಳಿಸಬಹುದು ಅಥವಾ ಅಡ್ಡಿಪಡಿಸಬಹುದು ಎಂದು ಹಣಕಾಸು ಇಲಾಖೆ ತನ್ನ ಆತಂಕ ವ್ಯಕ್ತಪಡಿಸಿದೆ.
ಇಂದಿರಾ ಕಿಟ್‌ಗೆ ಪರ್ಯಾಯವಾಗಿ ಇ-ವೋಚರ್
ಹಣಕಾಸು ಇಲಾಖೆಯು ಹೆಚ್ಚು ಹೊಂದಿಕೊಳ್ಳುವ ಪರ್ಯಾಯವನ್ನು ಸಹ ಶಿಫಾರಸು ಮಾಡಿದೆ. ಅನ್ನ ಭಾಗ್ಯ ಫಲಾನುಭವಿಗಳಿಗೆ ಇ-ವೋಚರ್‌ಗಳನ್ನು ಪರಿಚಯಿಸುವುದು. ಇದರಿಂದ ಸರ್ಕಾರ ನೀಡುವ ಉತ್ಪನ್ನಗಳಿಗೆ ಬದ್ಧರಾಗುವ ಬದಲು, ಅವರು ತಮ್ಮದೇ ಆದ ಪೌಷ್ಟಿಕಾಂಶದ ವಸ್ತುಗಳನ್ನು ಆಯ್ಕೆ ಮಾಡಲು ಅವಕಾಶವಾಗುತ್ತದೆ ಎಂದು ಹಣಕಾಸು ಸಚಿವಾಲಯ ಸಲಹೆಗಳನ್ನು ನೀಡಿದೆ.
ಹಣಕಾಸು ಇಲಾಖೆಯ ಶಿಫಾರಸುಗಳೇನು?
"ಅನ್ನ ಭಾಗ್ಯ ಫಲಾನುಭವಿಗಳಿಗೆ ಇ-ವೋಚರ್‌ಗಳ ಆಯ್ಕೆಯನ್ನು ಪರಿಗಣಿಸಲು ಮತ್ತು ಅಧ್ಯಯನ ಮಾಡಲು ನಾವು ಇಲಾಖೆಗೆ ಸಲಹೆ ನೀಡಿದ್ದೇವೆ. ಇದರಿಂದ ಅವರು ಹತ್ತಿರದ ಪಡಿತರ ಅಂಗಡಿಯಿಂದ ತಮಗೆ ಬೇಕಾದ್ದನ್ನು ಖರೀದಿಸುವ ಸ್ವಾತಂತ್ರ್ಯ ಪಡೆಯುತ್ತಾರೆ. ವಿತರಣೆ ಜಾಲವನ್ನು ವಿಸ್ತರಿಸಲು ಇಲಾಖೆಯು ಗ್ರಾಮ ಪಂಚಾಯತ್ ಮಟ್ಟದಲ್ಲಿ ಖಾಸಗಿ ಅಂಗಡಿಗಳನ್ನೂ ಸಹ ಪರಿಗಣಿಸಬಹುದು. ಈ ಇ-ವೋಚರ್‌ಗಳನ್ನು ಫಲಾನುಭವಿಗಳ ಖಾತೆಗೆ ನೇರವಾಗಿ ಜಮಾ ಮಾಡಬಹುದು." ಎಂದು ಹಣಕಾಸು ಇಲಾಖೆ ಇಳಿಸಿದೆ.
ಇದಕ್ಕೆ ಪೂರವಾಗಿ ಹಣಕಾಸು ಇಲಾಖೆಯು ನಿರ್ದಿಷ್ಟ ಸೇವೆಗಳಿಗಾಗಿ ಸಮಾಜ ಕಲ್ಯಾಣ ಇಲಾಖೆಯು ಇ-ವೋಚರ್‌ಗಳನ್ನು ನೀಡುವ 'ಗಂಗಾ ಕಲ್ಯಾಣ' ಯೋಜನೆಯನ್ನು ಉಲ್ಲೇಖಿಸಿದೆ. ಹಣಕಾಸು ಇಲಾಖೆ ತನ್ನ ಅಭಿಪ್ರಾಯದಲ್ಲಿ, "ಇತರ ರಾಜ್ಯಗಳಲ್ಲಿನ ಆಹಾರ ಕಿಟ್ ನೀತಿಗಳನ್ನು ಅಧ್ಯಯನ ಮಾಡಲು ನಾವು ಇಲಾಖೆಗೆ ಕೇಳಿದ್ದೆವು, ಆದರೆ ಪ್ರಯೋಜನವಾಗಲಿಲ್ಲ. ಪರಿಣಾಮವಾಗಿ, ಅಸ್ತಿತ್ವದಲ್ಲಿರುವ ವ್ಯವಸ್ಥೆಯನ್ನು ಬದಲಾಯಿಸಲು ಬಲವಾದ ಕಾರಣವಿಲ್ಲ" ಎಂದು ತಿಳಿಸಿದೆ.
ಅನ್ನಭಾಗ್ಯ ಯೋಜನೆಯಲ್ಲಿ ಮತ್ತೆ ಅಕ್ಕಿ ಕಡಿತಗೊಳಿಸಿದ ಸರ್ಕಾರ, ಬದಲಿಗೆ ಫುಡ್ ಕಿಟ್ ಕೊಡಲು ಪ್ಲಾನ್, ಜನ ಏನಂದ್ರು ನೋಡಿ!
ಇಂದಿರಾ ಕಿಟ್ ನೀಡಿಕೆಗೆ ಸರ್ಕಾರದ ಸಮರ್ಥನೆ
ಈ ಆಕ್ಷೇಪಣೆಗಳ ಹೊರತಾಗಿಯೂ, ಸರ್ಕಾರವು ಇಂದಿರಾ ಕಿಟ್ ಯೋಜನೆಯೊಂದಿಗೆ ಮುಂದುವರೆಯಿತು. ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಕಾರ್ಯದರ್ಶಿ ಮನೋಜ್ ಜೈನ್ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯನವರ ಸಚಿವ ಸಂಪುಟವು ಈ ನಿರ್ಧಾರ ಕೈಗೊಳ್ಳುವ ಮೊದಲು ಎಲ್ಲಾ ಅಂಶಗಳ ಬಗ್ಗೆ ಚರ್ಚಿಸಿದೆ ಎಂದು ಸಮರ್ಥಿಸಿಕೊಂಡಿದ್ದಾರೆ. ಹೀಗಾಗಿ ಸದ್ಯದ ಮಟ್ಟಿಗೆ ಇಂದಿರಾ ಕಿಟ್ ಯೋಜನೆಯನ್ನೇ ಮುಂದುವರಿಸಲು ಸರ್ಕಾರ ಮುಂದಾಗಿದೆ.
