Women’s ODI World Cup 2025: ಸೆ.30 ರಿಂದ ವಿಶ್ವಕಪ್‌ ಆರಂಭ; ಮೊದಲ ದಿನವೇ ಭಾರತ ಕಣಕ್ಕೆ

ವಾರದೊಳಗೆ ಭಾರತ- ಪಾಕ್ ಮತ್ತೆ ಮುಖಾಮುಖಿ; ಇಲ್ಲಿದೆ ವೇಳಾಪಟ್ಟಿ.Women's ODI World Cup 2025 India's Full Schedule: ಭಾರತದಲ್ಲಿ ನಡೆಯಲಿರುವ ಮಹಿಳಾ ಏಕದಿನ ವಿಶ್ವಕಪ್ ಸೆಪ್ಟೆಂಬರ್ 30 ರಿಂದ ಆರಂಭವಾಗಲಿದೆ. ಟೀಂ ಇಂಡಿಯಾ ಮೊದಲ ಪಂದ್ಯವನ್ನು ಶ್ರೀಲಂಕಾ ವಿರುದ್ಧ ಆಡಲಿದ್ದು, ಅಕ್ಟೋಬರ್ 5 ರಂದು ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನವನ್ನು ಎದುರಿಸಲಿದೆ. ಹರ್ಮನ್‌ಪ್ರೀತ್ ಕೌರ್ ನಾಯಕತ್ವದಲ್ಲಿ ಭಾರತ ತಂಡ ತವರಿನಲ್ಲಿ ತನ್ನ ಮೊದಲ ವಿಶ್ವಕಪ್ ಪ್ರಶಸ್ತಿ ಗೆಲ್ಲುವ ಗುರಿಯನ್ನು ಹೊಂದಿದೆ.

ಭಾರತ ತಂಡ 2025 ರ ಏಷ್ಯಾಕಪ್ನಲ್ಲಿ ಅದ್ಭುತ ಪ್ರದರ್ಶನ ನೀಡಿ ಫೈನಲ್‌ನಲ್ಲಿ ಪಾಕಿಸ್ತಾನವನ್ನು ಸೋಲಿಸಿ ಟ್ರೋಫಿ ಗೆದ್ದುಕೊಂಡಿದೆ. ಅದರೊಂದಿಗೆ ಈ ಟೂರ್ನಿಗೆ ಅಂತ್ಯ ಕೂಡ ಹಾಡಲಾಗಿದೆ. ಇದೀಗ ಮತ್ತೊಂದು ಐಸಿಸಿ ಟೂರ್ನಿ ಆರಂಭವಾಗುತ್ತಿದ್ದು, ಅದು ಭಾರತದಲ್ಲಿ ನಡೆಯುತ್ತಿರುವುದು ಮತ್ತೊಂದು ವಿಶೇಷವಾಗಿದೆ. ವಾಸ್ತವವಾಗಿ ಮಹಿಳಾ ಏಕದಿನ ವಿಶ್ವಕಪ್ (Women’s ODI World Cup) ಸೆಪ್ಟೆಂಬರ್ 30 ರಿಂದ ಆರಂಭವಾಗುತ್ತಿದೆ. ಟೂರ್ನಿಯ ಮೊದಲ ದಿನವೇ ಟೀಂ ಇಂಡಿಯಾ ಕಣಕ್ಕಿಳಿಯುತ್ತಿರುವುದರಿಂದ ಅಭಿಮಾನಿಗಳಿಗೆ ಆರಂಭದಲ್ಲೇ ರಸದೌತಣ ಸಿಗಲಿದೆ. ಇನ್ನೊಂದು ಸಂಗತಿಯೆಂದರೆ, ಈ ವಿಶ್ವಕಪ್‌ನಲ್ಲಿ ಭಾರತ ಹಾಗೂ ಪಾಕಿಸ್ತಾನ (India vs Pakistan) ತಂಡಗಳು ಪರಸ್ಪರ ಮುಖಾಮುಖಿಯಾಗಲಿದ್ದು, ಆ ಪಂದ್ಯದಲ್ಲೂ ಭಾರತ ಗೆಲುವು ಸಾಧಿಸಲಿ ಎಂಬುದು ಅಭಿಮಾನಿಗಳ ಆಶಯವಾಗಿದೆ.

ಶ್ರೀಲಂಕಾ ವಿರುದ್ಧ ಮೊದಲ ಪಂದ್ಯ

ಈ ವಿಶ್ವಕಪ್‌ನಲ್ಲಿ ಭಾರತ ಮಹಿಳಾ ತಂಡ ಸೆಪ್ಟೆಂಬರ್ 30 ರಂದು ಶ್ರೀಲಂಕಾ ವಿರುದ್ಧ ತನ್ನ ಮೊದಲ ಪಂದ್ಯವನ್ನು ಆಡಲಿದೆ. ಗುವಾಹಟಿಯಲ್ಲಿ ನಡೆಯುವ ಈ ಪಂದ್ಯವನ್ನು ಗೆಲ್ಲುವ ಮೂಲಕ ಟೀಂ ಇಂಡಿಯಾ ತನ್ನ ಅಭಿಯಾನವನ್ನು ಉತ್ತಮ ಆರಂಭಕ್ಕೆ ತರಲು ಪ್ರಯತ್ನಿಸಲಿದೆ. ಕಳೆದ ವಿಶ್ವಕಪ್‌ನಲ್ಲಿ ಭಾರತೀಯ ಮಹಿಳಾ ತಂಡ ಸೆಮಿಫೈನಲ್ ತಲುಪಲು ವಿಫಲವಾಯಿತು. ಆದರೆ ಈ ಬಾರಿ, ಹರ್ಮನ್‌ಪ್ರೀತ್ ಕೌರ್ ನಾಯಕತ್ವದಲ್ಲಿ ಆತಿಥೇಯರು ತವರಿನಲ್ಲಿ ತಮ್ಮ ಮೊದಲ ವಿಶ್ವಕಪ್ ಗೆಲ್ಲುವ ಗುರಿಯನ್ನು ಹೊಂದಿದ್ದಾರೆ. ಈ ಟೂರ್ನಿಯಲ್ಲಿ ಭಾರತ ತಂಡ ಎರಡು ಬಾರಿ ಫೈನಲ್ ತಲುಪಿದೆ, ಆದರೆ ಒಮ್ಮೆಯೂ ಪ್ರಶಸ್ತಿ ಗೆದ್ದಿಲ್ಲ. ಈ ಬಾರಿ ಪ್ರಶಸ್ತಿ ಗೆಲ್ಲುವ ಗುರಿ ಹೊಂದಿದೆ.

ಅಕ್ಟೋಬರ್ 5 ರಂದು ಪಾಕ್ ವಿರುದ್ಧ ಪಂದ್ಯ

ಭಾರತ ತಂಡವು ಅಕ್ಟೋಬರ್ 5 ರಂದು ಕೊಲಂಬೊದಲ್ಲಿ ನಡೆಯುವ ಪಂದ್ಯದಲ್ಲಿ ಪಾಕಿಸ್ತಾನ ತಂಡವನ್ನು ಎದುರಿಸಲಿದೆ. ಎರಡೂ ತಂಡಗಳು ಇಲ್ಲಿಯವರೆಗೆ 11 ಏಕದಿನ ಪಂದ್ಯಗಳಲ್ಲಿ ಮುಖಾಮುಖಿಯಾಗಿದ್ದು, ಭಾರತ ತಂಡವು ಎಲ್ಲಾ ಪಂದ್ಯಗಳಲ್ಲಿ ಗೆಲುವು ಸಾಧಿಸಿದೆ. ಈ ಪ್ರದರ್ಶನದ ಮೇಲೆ ಭಾರತ ತಂಡವು ತನ್ನನ್ನು ತಾನು ಬಲಪಡಿಸಿಕೊಳ್ಳಲು ಪ್ರಯತ್ನಿಸಲಿದೆ. ಎರಡೂ ತಂಡಗಳು ವಿಶ್ವಕಪ್‌ನಲ್ಲಿ ನಾಲ್ಕು ಬಾರಿ ಮುಖಾಮುಖಿಯಾಗಿದ್ದು, ಭಾರತವು ಎಲ್ಲಾ ಪಂದ್ಯಗಳನ್ನು ಗೆದ್ದಿದೆ. ಹೀಗಾಗಿ ಈ ಬಾರಿಯ ವಿಶ್ವಕಪ್‌ನಲ್ಲೂ ಭಾರತ ಗೆಲುವು ಸಾಧಿಸುವುದು ಖಚಿತವಾಗಿದೆ.

ಭಾರತೀಯ ಮಹಿಳಾ ತಂಡದ ವೇಳಾಪಟ್ಟಿ ಹೇಗಿದೆ?

ಮೊದಲ ಪಂದ್ಯ: ಭಾರತ vs ಶ್ರೀಲಂಕಾ (ಸೆಪ್ಟೆಂಬರ್ 30, ಗುವಾಹಟಿ)

ಎರಡನೇ ಪಂದ್ಯ: ಭಾರತ vs ಪಾಕಿಸ್ತಾನ (ಅಕ್ಟೋಬರ್ 5, ಕೊಲಂಬೊ)

3 ನೇ ಪಂದ್ಯ: ಭಾರತ vs ದಕ್ಷಿಣ ಆಫ್ರಿಕಾ (9 ಅಕ್ಟೋಬರ್, ವಿಶಾಖಪಟ್ಟಣ)

4 ನೇ ಪಂದ್ಯ: ಭಾರತ vs ಆಸ್ಟ್ರೇಲಿಯಾ (12 ಅಕ್ಟೋಬರ್, ವಿಶಾಖಪಟ್ಟಣಂ)

ಐದನೇ ಪಂದ್ಯ: ಭಾರತ vs ಇಂಗ್ಲೆಂಡ್ (19 ಅಕ್ಟೋಬರ್, ಇಂದೋರ್)

6 ನೇ ಪಂದ್ಯ: ಭಾರತ vs ನ್ಯೂಜಿಲೆಂಡ್ (23 ಅಕ್ಟೋಬರ್, ನವಿ ಮುಂಬೈ)

7 ನೇ: ಭಾರತ vs ಬಾಂಗ್ಲಾದೇಶ (26 ಅಕ್ಟೋಬರ್, ನವಿ ಮುಂಬೈ)

Previous Post Next Post