ಸ್ವ–ಉದ್ಯೋಗಕ್ಕೆ ಸಿಗಲಿದೆ ಸಾಲ ಸೌಲಭ್ಯ: ಪಡೆಯುವುದು ಹೇಗೆ? ಇಲ್ಲಿದೆ ಮಾಹಿತಿ

ಈ ಯೋಜನೆಯಡಿ ಸಾಲ ಪಡೆದು ಗೃಹ ಉದ್ಯಮವನ್ನು ಮಾಡಬಹುದು. ಬುಕ್‌ ಬೈಂಡಿಗ್‌, ನೋಟ್‌ಬುಕ್‌ ತಯಾರಿಕೆ, ಸೀಮೆಸುಣ್ಣ ತಯಾರಿಕೆ, ಜಾಮ್, ಜೆಲ್ಲಿ, ಉಪ್ಪಿನಕಾಯಿ ತಯಾರಿಕೆ, ಸೀರೆ ಹಾಗೂ ಕಸೂತಿ ಕೆಲಸ, ಉಣ್ಣೆಯ ಬಟ್ಟೆ ತಯಾರಿಕೆ ಮಾಡುವ ಮಹಿಳೆಯರಿಗೆ ಈ ಯೋಜನೆ ಸಹಕಾರಿಯಾಗಲಿದೆ ಎಂದು ಇಲಾಖೆಯು ತನ್ನ ಅಂತರ್ಜಾಲ ತಾಣದಲ್ಲಿ ತಿಳಿಸಿದೆ. 

ಕರ್ನಾಟಕ ಸರ್ಕಾರ ಜಾರಿ ಮಾಡಿರುವ ವಿವಿಧ ಯೋಜನೆಗಳಲ್ಲಿ ಉದ್ಯೋಗಿನಿ ಯೋಜನೆಯೂ ಒಂದಾಗಿದೆ. ಈ ಯೋಜನೆಯನ್ನು 1997–1998ರಲ್ಲಿ ಆರಂಭಿಸಲಾಯಿತು. ನಂತರ 2004–2005ರಲ್ಲಿ ತಿದ್ದುಪಡಿಯನ್ನು ತರಲಾಯಿತು. ಮಹಿಳೆಯರಿಗೆ ಸ್ವ–ಉದ್ಯೋಗ ಕೈಗೊಳ್ಳಲು ಹಣಕಾಸು ನೆರವನ್ನು ನೀಡುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ.

ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮಗಳಿಂದ ಸಾಲ ಹಾಗೂ ಸಹಾಯಧನ ಈ ಯೋಜನೆಗೆ ಲಭ್ಯವಿದೆ. ಜಿಲ್ಲಾ ಸಹಕಾರಿ ಬ್ಯಾಂಕುಗಳು ಮತ್ತು ಪ್ರಾದೇಶಿಕ ಗ್ರಾಮೀಣ ಬ್ಯಾಂಕುಗಳಿಂದ ಸಾಲ ಪಡೆಯಬಹುದು. 

ಈ ಯೋಜನೆಯಡಿ ಸಾಲ ಪಡೆದು ಗೃಹ ಉದ್ಯಮವನ್ನು ಮಾಡಬಹುದು. ಬುಕ್‌ ಬೈಂಡಿಗ್‌, ನೋಟ್‌ಬುಕ್‌ ತಯಾರಿಕೆ, ಸೀಮೆಸುಣ್ಣ ತಯಾರಿಕೆ, ಜಾಮ್, ಜೆಲ್ಲಿ, ಉಪ್ಪಿನಕಾಯಿ ತಯಾರಿಕೆ, ಸೀರೆ ಮತ್ತು ಕಸೂತಿ ಕೆಲಸ ಮತ್ತು ಉಣ್ಣೆಯ ಬಟ್ಟೆ ತಯಾರಿಕೆ ಮಾಡುವ ಮಹಿಳೆಯರಿಗೆ ಈ ಯೋಜನೆ ಸಹಕಾರಿಯಾಗಲಿದೆ ಎಂದು ಇಲಾಖೆಯು ತನ್ನ ಅಂತರ್ಜಾಲ ತಾಣದಲ್ಲಿ ತಿಳಿಸಿದೆ. 

ಉದ್ಯೋಗಿನಿ ಯೋಜನೆಯ ಪ್ರಯೋಜನಗಳೇನು?

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಸೇರಿದ ಮಹಿಳೆಯರಿಗೆ, ಕನಿಷ್ಠ ₹1 ಲಕ್ಷದಿಂದ ಗರಿಷ್ಠ ₹3 ಲಕ್ಷದ ವರೆಗೂ ಸಾಲ ಸಿಗಲಿದೆ. ಸಾಲದಲ್ಲಿ ಶೇ 50 ರಷ್ಟು ಸಹಾಯಧನವಿದ್ದು, ಇದನ್ನು ಪಡೆಯಲು ಕುಟುಂಬದ ವಾರ್ಷಿಕ ಆದಾಯ ₹2 ಲಕ್ಷಕ್ಕಿಂತ ಕಡಿಮೆ ಇರಬೇಕು.

ವಿಶೇಷ ವರ್ಗ ಮತ್ತು ಸಾಮಾನ್ಯ ವರ್ಗಕ್ಕೆ ಸೇರಿದ ಮಹಿಳೆಯರಿಗೆ ₹3 ಲಕ್ಷದ ವರೆಗೂ ಸಾಲ ದೊರೆಯಲಿದೆ. ಸರ್ಕಾರದಿಂದ ಶೇ 30 ರಷ್ಟು ಅಥವಾ ₹90 ಸಾವಿರದ ವರೆಗೆ ಸಹಾಯಧನ ಸಿಗಲಿದೆ.

ಯೋಜನೆಯನ್ನು ಪಡೆಯಲು ಇರಬೇಕಾದ ಅರ್ಹತೆಗಳೇನು?

ಮಹಿಳೆಯರು ಮಾತ್ರ ಅರ್ಜಿಯನ್ನು ಸಲ್ಲಿಸಬಹುದು.

ಸಾಮಾನ್ಯ ಅಥವಾ ವಿಶೇಷ ವರ್ಗಗಳಿಗೆ ಸೇರಿದ ಕುಟುಂಬದ ಆದಾಯ ₹ 1.5 ಲಕ್ಷಕ್ಕಿಂತ ಕಡಿಮೆ ಇರಬೇಕು. ವಿಧವೆ ಅಥವಾ ಅಂಗವಿಕಲ ಮಹಿಳೆಯರಿಗೆ ಕುಟುಂಬದ ಆದಾಯದ ಮೇಲೆ ಯಾವುದೇ ಮಿತಿಯಿಲ್ಲ.

ಅರ್ಜಿದಾರರ ವಯಸ್ಸು 18 ರಿಂದ 55 ವರ್ಷಗಳ ನಡುವೆ ಇರಬೇಕು.

ಕರ್ನಾಟಕದ ಖಾಯಂ ನಿವಾಸಿಯಾಗಿರಬೇಕು.

ಯೋಜನೆಯಲ್ಲಿ ಸಿಗುವ ಆದ್ಯತೆಗಳೇನು?

ಅತ್ಯಂತ ಬಡವರು, ನಿರ್ಗತಿಕರು, ವಿಧವೆಯರು ಮತ್ತು ದೈಹಿಕವಾಗಿ ಅಶಕ್ತರಿಗೆ ಮೊದಲ ಆದ್ಯತೆ.

ಕೆಎಸ್‌ಡಬ್ಲ್ಯೂಡಿಸಿ,ಇಲಾಖೆಯಿಂದ ನಡೆಸಲಾದ ಪೂರ್ವ ಕೌಶಲ ಅಭಿವೃದ್ಧಿ ತರಬೇತಿ ಅಥವಾ ವೃತ್ತಿಪರ ತರಬೇತಿಯನ್ನು ಪಡೆದ ಅಭ್ಯರ್ಥಿಗಳಿಗೆ ಆದ್ಯತೆ ಹೆಚ್ಚು.

ಅಗತ್ಯವಿರುವ ದಾಖಲೆಗಳೇನು?

ಮೂರು ಪಾಸ್‌ಪೋರ್ಟ್ ಫೋಟೋ.

ಸಾಲ ಪಡೆಯಲು ಬಯಸುವ ಉದ್ಯಮದ ಕುರಿತ ತರಬೇತಿ ಅಥವಾ ಅನುಭವದ ಪ್ರಮಾಣಪತ್ರ.

ನಿಮ್ಮ ಉದ್ಯಮದ ಕುರಿತ ಕಿರು ಪ್ರಸ್ತಾವನೆ.

ಪಡಿತರ ಚೀಟಿ ಅಥವಾ ಮತದಾರರ ಗುರುತಿನ ಚೀಟಿ.

ಆದಾಯ ಪ್ರಮಾಣಪತ್ರ.

ಜಾತಿ ಪ್ರಮಾಣಪತ್ರ (SC/ST ಅರ್ಜಿದಾರರಾಗಿದ್ದರೆ).

ಉದ್ಯಮಕ್ಕೆ ಅಗತ್ಯ ಯಂತ್ರೋಪಕರಣಗಳು, ಸಲಕರಣೆಗಳು ಹಾಗೂ ಇತರ ವೆಚ್ಚಗಳ ಉಲ್ಲೇಖವುಳ್ಳ ಪ್ರಸ್ತಾವನೆ

ಅರ್ಜಿಸಲ್ಲಿಸುವುದು ಹೇಗೆ? 

ಅರ್ಜಿ ಸಲ್ಲಿಸಲು ಮೇಲೆ ತಿಳಿಸಲಾದ ದಾಖಲೆಗಳೊಂದಿಗೆ ಹತ್ತಿರದ ಬ್ಯಾಂಕ್‌ಗೆ ಭೇಟಿ ನೀಡುವುದು. ಅಲ್ಲಿ ನೀಡಲಾಗುವ ಅರ್ಜಿಯ ನಮೂನೆಯನ್ನು ಭರ್ತಿ ಮಾಡಬೇಕು. 

ಭರ್ತಿ ಮಾಡಿದ ಅರ್ಜಿಯನ್ನು ಬ್ಯಾಂಕ್ ಅಥವಾ ಕೆಎಸ್‌ಎಫ್‌ಸಿ ಶಾಖೆಗೆ ಸಲ್ಲಿಸಬೇಕು. ಕೆಎಸ್‌ಎಫ್‌ಸಿ ಅಧಿಕಾರಿಗಳು ನೀವು ಸಲ್ಲಿಕೆ ಮಾಡಿದ ಅರ್ಜಿಯನ್ನು ಪರಿಶೀಲಿಸಿ ಸಾಲದ ನೀಡಲು ಅನುಮೋದನೆ ಮಾಡುತ್ತಾರೆ. 

ನಂತರ ಬ್ಯಾಂಕ್‌ಗಳು ನಿಗಮಕ್ಕೆ ಸಹಾಯಧನವನ್ನು ಕೋರಿ ಅರ್ಜಿ ಸಲ್ಲಿಸಿ, ನಿಮ್ಮ ಖಾತೆಗೆ ಹಣವನ್ನು ಜಮಾ ಮಾಡುತ್ತವೆ.  

ಈ ಯೋಜನೆಯ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಸರ್ಕಾರದ ಅಧಿಕೃತ ಅಂತರ್ಜಾಲ ತಾಣಕ್ಕೆ ಭೇಟಿ ನೀಡಿ ಅಥವಾ ಸ್ಥಳೀಯ ಬ್ಯಾಂಕ್‌ಗಳಿಗೆ ಭೇಟಿ ನೀಡಿ ಮಾಹಿತಿ ಪಡೆಯಬಹುದು. 

Previous Post Next Post