ಕೇವಲ ₹49,999ಕ್ಕೆ ಓಲಾ ಎಲೆಕ್ಟ್ರಿಕ್ ಸ್ಕೂಟರ್; 9 ದಿನಗಳ ಮುಹೂರ್ತ ಸೇಲ್‌ ಆಫರ್

Ola Muhurat Mahotsav: ಪ್ರಸಿದ್ಧ ಎಲೆಕ್ಟ್ರಿಕ್ ವಾಹನ ತಯಾರಕ ಸಂಸ್ಥೆ ಓಲಾ ಎಲೆಕ್ಟ್ರಿಕ್, ಫೆಸ್ಟಿವಲ್‌ ಸೇಲ್‌ ಆರಂಭಿಸಿದೆ. ಈ ವಿಶೇಷ ಸೇಲ್‌ನಲ್ಲಿ ಓಲಾ ಎಸ್‌1 ಎಕ್ಸ್ ಎಲೆಕ್ಟ್ರಿಕ್ ಸ್ಕೂಟರ್ ಮತ್ತು ರೋಡ್‌ಸ್ಟರ್ ಎಕ್ಸ್ ಬೈಕ್‌ ಅನ್ನು ಕೇವಲ ₹49,999ಕ್ಕೆ ಪಡೆಯುವ ಬಂಪರ್ ಆಫರ್ ಘೋಷಿಸಿದೆ. ಈ 'ಓಲಾ ಮುಹೂರ್ತ ಮಹೋತ್ಸವ' ಹಬ್ಬದ ಅಭಿಯಾನದ ಭಾಗವಾಗಿ, ನವರಾತ್ರಿಯ ಪ್ರತಿ ದಿನವೂ ತಾವು ಘೋಷಿಸಿದ ನಿರ್ದಿಷ್ಟ ಸಮಯದಲ್ಲಿ ಶೋರೂಮ್‌ಗಳಿಗೆ ಮೊದಲು ಬಂದವರಿಗೆ ಕಡಿಮೆ ಬೆಲೆಗೆ ವಾಹನ ಖರೀದಿಸಲು ಅವಕಾಶವಿದೆ ಎಂದು ಓಲಾ ಸ್ಪಷ್ಟಪಡಿಸಿದೆ.

ದಸರಾ ಮತ್ತು ನವರಾತ್ರಿಯ ಹಬ್ಬದ ಸೀಸನ್‌ನಲ್ಲಿ ಓಲಾ ಎಲೆಕ್ಟ್ರಿಕ್ 'ಓಲಾ ಸೆಲೆಬ್ರೇಟ್ಸ್ ಇಂಡಿಯಾ' ಅಭಿಯಾನವನ್ನು ಘೋಷಿಸಿದೆ. ಈ 'ಮುಹೂರ್ತ ಮಹೋತ್ಸವ'ದ ಭಾಗವಾಗಿ, ಸೆಪ್ಟೆಂಬರ್ 23ರಿಂದ ಆರಂಭಗೊಂಡು 9 ದಿನಗಳ ಕಾಲ ತಮ್ಮ ಮಾಡೆಲ್‌ಗಳ ಮೇಲೆ ವಿಶೇಷ ರಿಯಾಯಿತಿ ಪ್ರಕಟಿಸಿದೆ. ಓಲಾ ಕಂಪನಿಯ ಜನಪ್ರಿಯ ಎಲೆಕ್ಟ್ರಿಕ್ ಸ್ಕೂಟರ್‌ಗಳು ಮತ್ತು ಮೋಟಾರ್‌ಸೈಕಲ್‌ಗಳನ್ನು ಕನಿಷ್ಠ ₹49,999ರ ಆರಂಭಿಕ ಬೆಲೆಯಲ್ಲಿ ಪಡೆಯಬಹುದು.

Ola Electric Muhurat Mahotsav

ಇಲ್ಲಿ ಒಂದು ಪ್ರಮುಖ ನಿಯಮವಿದೆ: ₹49,999ರ ಆರಂಭಿಕ ಬೆಲೆಯಲ್ಲಿ ವಾಹನಗಳು ಎಲ್ಲರಿಗೂ ಸಿಗುವುದಿಲ್ಲ. ಈ 'ಮುಹೂರ್ತ ಮಹೋತ್ಸವ'ದಲ್ಲಿ ನಿರ್ದಿಷ್ಟ ಸಮಯದಲ್ಲಿ ಸೀಮಿತ ಸಂಖ್ಯೆಯ ವಾಹನಗಳನ್ನು ಮಾತ್ರ ಮಾರಾಟ ಮಾಡಲಾಗುತ್ತದೆ. ಓಲಾ ಪ್ರತಿ ದಿನವೂ ತಮ್ಮ ಸಾಮಾಜಿಕ ಮಾಧ್ಯಮಗಳಲ್ಲಿ 'ಮುಹೂರ್ತ ಟೈಮ್ ಸ್ಲಾಟ್‌'ಗಳನ್ನು ಪ್ರಕಟಿಸುತ್ತದೆ. ಆ ಸಮಯಗಳಲ್ಲಿ ಶೋರೂಮ್‌ಗಳಿಗೆ ಹೋದವರಿಗೆ, 'ಮೊದಲು ಬಂದವರಿಗೆ ಮೊದಲು' ಎಂಬ ಆಧಾರದ ಮೇಲೆ ಕಡಿಮೆ ಬೆಲೆಗೆ ವಾಹನಗಳು ಲಭಿಸುತ್ತವೆ ಎಂದು ಓಲಾ ತಿಳಿಸಿದೆ.

ಸೆಪ್ಟೆಂಬರ್ 23ರಂದು ಶುಭ ಮುಹೂರ್ತವನ್ನು ರಾತ್ರಿ 7.46ರಿಂದ 9.15ರವರೆಗೆ ನಿಗದಿಪಡಿಸಲಾಗಿತ್ತು. ಮೊದಲ ದಿನದ ಆಫರ್ ಕೇವಲ 5 ನಿಮಿಷಗಳಲ್ಲಿಯೇ ಮುಕ್ತಾಯವಾಗಿದೆ ಎಂದು ಓಲಾ ಸಾಮಾಜಿಕ ಮಾಧ್ಯಮದಲ್ಲಿ ಘೋಷಿಸಿದೆ. ಬುಧವಾರದ ಶುಭ ಮುಹೂರ್ತದ ಸಮಯವನ್ನು ಓಲಾ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳ ಮೂಲಕ ತಿಳಿದುಕೊಳ್ಳಬಹುದು.

ರಿಯಾಯಿತಿ ವಿವರಗಳು

ಓಲಾ ಎಸ್‌1ಎಕ್ಸ್ 2KWH: ಇದರ ಸಾಮಾನ್ಯ ಬೆಲೆ ₹81,999. ಆದರೆ ಹಬ್ಬದ ಆಫರ್‌ನಲ್ಲಿ ಇದನ್ನು ₹49,999ಕ್ಕೆ ಖರೀದಿಸಬಹುದು. ಅಂದರೆ, ಸುಮಾರು ₹32,000 ರಿಯಾಯಿತಿ ಸಿಗಲಿದೆ.

ರೋಡ್‌ಸ್ಟರ್ ಎಕ್ಸ್ 2.5 kWh ಬೈಕ್: ಇದರ ಸಾಮಾನ್ಯ ಬೆಲೆ ₹99,999.ನಿಮಗೆ ಅದೃಷ್ಟವಿದ್ದರೆ ಇದು ಹಬ್ಬದ ಆಫರ್‌ನಲ್ಲಿ ₹49,999ಕ್ಕೆ ಸಿಗಲಿದೆ.

ಎಸ್‌1 ಪ್ರೋ ಪ್ಲಸ್ (4680 ಭಾರತ್ ಸೆಲ್ ಬ್ಯಾಟರಿ): ಈ 5.2 kWh ವೇರಿಯಂಟ್‌ನ ಸಾಮಾನ್ಯ ಬೆಲೆ ₹1,69,999. ಆಫರ್ ಅಡಿಯಲ್ಲಿ ಇದನ್ನು ₹99,999ಕ್ಕೆ ಪಡೆಯಬಹುದು.

ರೋಡ್‌ಸ್ಟರ್ ಎಕ್ಸ್ ಪ್ಲಸ್ (4680 ಭಾರತ್ ಸೆಲ್ ಬ್ಯಾಟರಿ): 9.1 kWh ಸಾಮರ್ಥ್ಯದ ಈ ಬೈಕಿನ ಸಾಮಾನ್ಯ ಬೆಲೆ ₹1,89,999. ಈಗ ಇದು ₹99,999ಕ್ಕೆ ಲಭ್ಯವಿದೆ.

ಈ ಆಫರ್‌ನ ಹಿನ್ನೆಲೆಯಲ್ಲಿ, ಮಂಗಳವಾರ ಓಲಾ ಎಲೆಕ್ಟ್ರಿಕ್ ಮೊಬಿಲಿಟಿಯ ಷೇರು ಬೆಲೆ ಲಾಭದಲ್ಲಿ ಕೊನೆಗೊಂಡಿತು. ಪ್ರಸ್ತುತ ₹58.10ರಲ್ಲಿ ಸ್ಥಿರವಾಗಿದೆ. ಕಂಪನಿಯ ಮಾರುಕಟ್ಟೆ ಮೌಲ್ಯ ₹24.39 ಸಾವಿರ ಕೋಟಿಯಷ್ಟಿದೆ. ಷೇರಿನ 52 ವಾರಗಳ ಗರಿಷ್ಠ ಬೆಲೆ ₹112.40 ಇದ್ದರೆ, 52 ವಾರಗಳ ಕನಿಷ್ಠ ಬೆಲೆ ₹39.60 ರಷ್ಟಿದೆ. ಕಳೆದ ಒಂದು ತಿಂಗಳಿನಲ್ಲಿ ಈ ಷೇರು ಬೆಲೆ ಸುಮಾರು ಶೇ.20ರಷ್ಟು ಏರಿಕೆ ಕಂಡಿದೆ.



Previous Post Next Post