ಕೃಷಿ ಇಲಾಖೆಯು ಕರ್ನಾಟಕ ರೈತ ಸಮೃದ್ಧಿ ಯೋಜನೆಯಡಿ ಕೃಷಿಯನ್ನು ಲಾಭದಾಯಕವಾಗಿಸಲು ಸ್ವಸಹಾಯ ಸಂಘ, ರೈತ ಉತ್ಪಾದಕ ಸಂಸ್ಥೆಗಳು ಮತ್ತು ಕೃಷಿ ನವೋದ್ಯಮಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಕೃಷಿ ಭಾಗ್ಯ ಯೋಜನೆಯ ಫಲಾನುಭವಿಗಳಿಗೆ ಆದ್ಯತೆ ನೀಡಲಾಗುವುದು. ಆಸಕ್ತರು ಅಗತ್ಯ ದಾಖಲೆಗಳೊಂದಿಗೆ ಆಗಸ್ಟ್ 25 ರೊಳಗೆ ಅರ್ಜಿ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಾಗಿ ಕೃಷಿ ಇಲಾಖೆ ಅಥವಾ ಜಿಲ್ಲಾ ಪಂಚಾಯತ್ ಕಚೇರಿಯನ್ನು ಸಂಪರ್ಕಿಸಬಹುದು. ಈ ಯೋಜನೆಯಡಿ ರೈತರಿಗೆ ಹಲವು ರೀತಿಯ ಸಹಾಯಧನಗಳು ಲಭ್ಯವಾಗಲಿವೆ. ಜೊತೆಗೆ ರೈತರ ಆದಾಯ ಹಾಗೂ ಜೀವನಮಟ್ಟವನ್ನು ಹೆಚ್ಚಿಸುವ ಗುರಿಯನ್ನು ಹೊಂದಲಾಗಿದೆ.

ರೈತ ಸಮೃದ್ಧಿ ಯೋಜನೆಯಡಿ ಕೃಷಿಕರಿಗೆ ವಿವಿಧ ಸೌಲಭ್ಯ ಒದಗಿಸಲು ಅರ್ಹರಿಂದ ಅರ್ಜಿ ಆಹ್ವಾನ.ಆ.25ರೊಳಗಾಗಿ ಆಯಾ ತಾಲೂಕು ಸಹಾಯಕ ಕೃಷಿ ನಿರ್ದೇಶಕರ ಕಚೇರಿಗೆ ಅರ್ಜಿಯನ್ನು ಸಲ್ಲಿಸಬೇಕು.ಕೃಷಿಭಾಗ್ಯ ಫಲಾನುಭವಿಗಳು, ಸ್ವಸಹಾಯ ಸಂಘ, ರೈತ ಉತ್ಪಾದಕ ಸಂಸ್ಥೆ, ಕೃಷಿ ನವೋದ್ಯಮಿಗಳು ಅರ್ಹರು
ಕೃಷಿ ಇಲಾಖೆಯು ಜಿಲ್ಲೆಯ ಕೃಷಿ ಕ್ಷೇತ್ರವನ್ನು ಸುಸ್ಥಿರ ಹಾಗೂ ಲಾಭದಾಯಕವಾಗಿಸುವ ನಿಟ್ಟಿನಲ್ಲಿಸಮಗ್ರ ಕೃಷಿ ಪದ್ಧತಿಯನ್ನು ಉತ್ತೇಜಿಸುವ ಸಲುವಾಗಿ ಜಾರಿಗೆ ತಂದಿರುವ ಕರ್ನಾಟಕ ರೈತ ಸಮೃದ್ಧಿ ಯೋಜನೆಯಡಿ ಕೃಷಿಕರಿಗೆ ವಿವಿಧ ಸೌಲಭ್ಯಗಳನ್ನು ಒದಗಿಸಲು ಅರ್ಹರಿಂದ ಅರ್ಜಿ ಆಹ್ವಾನಿಸಿದೆ. ಸೌಲಭ್ಯ ಪಡೆಯಲಿಚ್ಛಿಸುವ ಆಸಕ್ತ ಸ್ವಸಹಾಯ ಸಂಘ /ರೈತ ಉತ್ಪಾದಕ ಸಂಸ್ಥೆ/ ಕೃಷಿ ನವೋದ್ಯಮಿಗಳು ಭರ್ತಿ ಮಾಡಿದ ಅರ್ಜಿಯೊಂದಿಗೆ ನೋಂದಣಿ ಪ್ರಮಾಣ ಪತ್ರ, ಯೋಜನಾ ವರದಿ, ಉತ್ಪನ್ನಗಳ ವಿವರ, 3 ವರ್ಷಗಳ ಉತ್ಪಾದಕ ಸಂಸ್ಥೆ, ಸಂಘಗಳ ಮೂಲ ಮಾಹಿತಿಗಳನ್ನು ಆ.25ರೊಳಗಾಗಿ ಆಯಾ ತಾಲೂಕು ಸಹಾಯಕ ಕೃಷಿ ನಿರ್ದೇಶಕರ ಕಚೇರಿಗೆ ಸಲ್ಲಿಸಲು ಜಂಟಿ ಕೃಷಿ ನಿರ್ದೇಶಕ ರಮೇಶ್ ಪ್ರಕಟಣೆಯಲ್ಲಿತಿಳಿಸಿದ್ದಾರೆ.
ಏನಿದು ರೈತ ಸಮೃದ್ಧಿ ಯೋಜನೆ
ಕರ್ನಾಟಕ ರೈತ ಸಮೃದ್ಧಿ ಯೋಜನೆಯು 2024-25ನೇ ಸಾಲಿನಲ್ಲಿ ಕರ್ನಾಟಕ ಸರ್ಕಾರದಿಂದ ಜಾರಿಗೆ ಬಂದಿರುವ ಯೋಜನೆಯಾಗಿದೆ. ಇದರ ಮುಖ್ಯ ಉದ್ದೇಶ ಕೃಷಿಯನ್ನು ಸುಸ್ಥಿರ ಮತ್ತು ಲಾಭದಾಯಕವನ್ನಾಗಿ ಮಾಡುವುದು. ಈ ಯೋಜನೆ ಈಗಾಗಲೇ ಇರುವ ಕೃಷಿ ಭಾಗ್ಯ ಯೋಜನೆಯ ಫಲಾನುಭವಿಗಳನ್ನು ಆಧಾರವಾಗಿಟ್ಟುಕೊಂಡು, ವಿವಿಧ ಕೃಷಿ ಮತ್ತು ಕೃಷಿ ಸಂಬಂಧಿತ ಇಲಾಖೆಗಳ ಯೋಜನೆಗಳನ್ನು ಸಂಯೋಜಿಸಿ ಸಮಗ್ರ ಕೃಷಿಯನ್ನು ಉತ್ತೇಜಿಸುತ್ತದೆ.
ಕರ್ನಾಟಕ ರೈತ ಸಮೃದ್ಧಿ ಯೋಜನೆಗೆ ಅರ್ಜಿ ಸಲ್ಲಿಸುವುದು ಹೇಗೆ?
ಈ ಯೋಜನೆಗೆ ನೇರವಾಗಿ ಅರ್ಜಿ ಸಲ್ಲಿಸುವ ವಿಧಾನ ಲಭ್ಯವಿಲ್ಲ. ಬದಲಾಗಿ, ಈ ಯೋಜನೆಯು ಈ ಕೆಳಗಿನ ಆಧಾರದ ಮೇಲೆ ಫಲಾನುಭವಿಗಳನ್ನು ಆಯ್ಕೆ ಮಾಡುತ್ತದೆ:
ಕೃಷಿ ಭಾಗ್ಯ ಯೋಜನೆಯ ಫಲಾನುಭವಿಗಳು: ಕೃಷಿ ಭಾಗ್ಯ ಯೋಜನೆಯಡಿ ಈಗಾಗಲೇ ಯಶಸ್ವಿಯಾಗಿ ಘಟಕಗಳನ್ನು ಅಳವಡಿಸಿಕೊಂಡಿರುವ ಆಸಕ್ತ ರೈತರನ್ನು ಈ ಯೋಜನೆಗೆ ಆಯ್ಕೆ ಮಾಡಲಾಗುತ್ತದೆ. 2023-24ನೇ ಸಾಲಿನ ಫಲಾನುಭವಿಗಳಿಗೆ ಆದ್ಯತೆ ನೀಡಲಾಗುತ್ತದೆ ಮತ್ತು ಈ ಆಯ್ಕೆಯನ್ನು ಜಿಲ್ಲಾ ಮಟ್ಟದ ಅನುಷ್ಠಾನ ಸಮಿತಿಯು ಅನುಮೋದಿಸುತ್ತದೆ.
ರೈತ ಉತ್ಪಾದಕ ಸಂಸ್ಥೆಗಳು (FPO) ಮತ್ತು ಸ್ವಸಹಾಯ ಸಂಘಗಳು (SHG): ಪ್ರತಿ ಜಿಲ್ಲೆಯಲ್ಲಿ ಕೃಷಿ ಮತ್ತು ಸಂಬಂಧಿತ ಕ್ಷೇತ್ರಗಳಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿರುವ 2-3 ಸಂಸ್ಥೆಗಳನ್ನು ಸಾಮರ್ಥ್ಯಾಭಿವೃದ್ಧಿ ಕಾರ್ಯಕ್ರಮಕ್ಕಾಗಿ ಆಯ್ಕೆ ಮಾಡಲಾಗುತ್ತದೆ. ಈ ಆಯ್ಕೆಯನ್ನು ಜಿಲ್ಲಾ ಮಟ್ಟದ ಸಮಿತಿಯು ಅನುಮೋದಿಸುತ್ತದೆ.
ಮಣ್ಣು ಪರೀಕ್ಷೆ ಮತ್ತು ಹೊಸ ತಂತ್ರಜ್ಞಾನಗಳು: ರಾಜ್ಯದ ಕಡಿಮೆ ಉತ್ಪಾದಕತೆ ಇರುವ 398 ಗ್ರಾಮ ಪಂಚಾಯತಿಗಳಲ್ಲಿ ಮಣ್ಣು ಪರೀಕ್ಷೆ ಮತ್ತು ಹೊಸ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳಲು ಫಲಾನುಭವಿಗಳನ್ನು ಆಯ್ಕೆ ಮಾಡಲಾಗುತ್ತದೆ. ಕೃಷಿ ಭಾಗ್ಯ ಯೋಜನೆ ಅಳವಡಿಸಿದ ಕ್ಷೇತ್ರಗಳಿಗೆ ಆದ್ಯತೆ ನೀಡಲಾಗುತ್ತದೆ.
ಯಾರನ್ನು ಸಂಪರ್ಕಿಸಬೇಕು?
ಯೋಜನೆಯ ಅನುಷ್ಠಾನವನ್ನು ಜಿಲ್ಲಾ ಮಟ್ಟದ ಸಮಿತಿಯು ಮೇಲ್ವಿಚಾರಣೆ ಮಾಡುವುದರಿಂದ ರೈತರು ಹೆಚ್ಚಿನ ಮಾಹಿತಿಗಾಗಿ ಜಿಲ್ಲೆಯ ಕೃಷಿ ಇಲಾಖೆ
ಅಥವಾ ಜಿಲ್ಲಾ ಪಂಚಾಯತ್ ಕಚೇರಿಯನ್ನು ಸಂಪರ್ಕಿಸಬಹುದು. ಯೋಜನಾ ಸಮಿತಿಯ ಅಧ್ಯಕ್ಷರು ಜಿಲ್ಲಾ ಪಂಚಾಯತ್ ಮುಖ್ಯ
ಕಾರ್ಯನಿರ್ವಹಣಾಧಿಕಾರಿಗಳು ಮತ್ತು ಸದಸ್ಯ ಕಾರ್ಯದರ್ಶಿಗಳು ಜಂಟಿ ಕೃಷಿ ನಿರ್ದೇಶಕರು ಆಗಿರುತ್ತಾರೆ.