Fixed Deposit: FD ಮೇಲಿನ ಬಡ್ಡಿ ದರಗಳು ಕಡಿಮೆಯಾಗಿದ್ದರೂ, ಬುದ್ಧಿವಂತಿಕೆಯಿಂದ ಹೂಡಿಕೆ ಮಾಡಿದರೆ ಈಗಲೂ ನೀವು ಬೇರೆಯವರಿಗಿಂತ ಹೆಚ್ಚು ಲಾಭ ಗಳಿಸಬಹುದು. ಸರಿಯಾದ ಬ್ಯಾಂಕ್ ಮತ್ತು ಸರಿಯಾದ ಅವಧಿಯನ್ನು ಆಯ್ಕೆ ಮಾಡುವುದು ಮುಖ್ಯ.
ನಮ್ಮಲ್ಲಿ ಹೆಚ್ಚಿನವರ ಫೇವರಿಟ್ ಹೂಡಿಕೆ ಅಂದ್ರೆ ಅದು ಫಿಕ್ಸೆಡ್ ಡೆಪಾಸಿಟ್ (FD). ಯಾವುದೇ ರಿಸ್ಕ್ ಇಲ್ಲ, ಗ್ಯಾರಂಟಿ ರಿಟರ್ನ್ಸ್! ಆದರೆ, ಇತ್ತೀಚೆಗೆ ಭಾರತೀಯ ರಿಸರ್ವ್ ಬ್ಯಾಂಕ್ (RBI) ರೆಪೋ ದರವನ್ನು ಕಡಿತಗೊಳಿಸಿದ್ದೇ ತಡ, ಬಹುತೇಕ ಎಲ್ಲಾ ಬ್ಯಾಂಕ್‌ಗಳೂ FD ಮೇಲಿನ ಬಡ್ಡಿ ದರಕ್ಕೆ ಕತ್ತರಿ ಹಾಕಿವೆ. ಇದರಿಂದ, "ಅಯ್ಯೋ, ಇನ್ಮೇಲೆ FD ಮಾಡಿದ್ರೂ ಲಾಭ ಇಲ್ಲ" ಎಂದು ಹಲವರು ಬೇಸರ ಮಾಡಿಕೊಂಡಿದ್ದಾರೆ.
ಆದರೆ ನಿಲ್ಲಿ, ನೀವು ಆತಂಕ ಪಡುವ ಅಗತ್ಯವಿಲ್ಲ. FD ಮೇಲಿನ ಬಡ್ಡಿ ದರಗಳು ಕಡಿಮೆಯಾಗಿದ್ದರೂ, ಬುದ್ಧಿವಂತಿಕೆಯಿಂದ ಹೂಡಿಕೆ ಮಾಡಿದರೆ ಈಗಲೂ ನೀವು ಬೇರೆಯವರಿಗಿಂತ ಹೆಚ್ಚು ಲಾಭ ಗಳಿಸಬಹುದು. ಸರಿಯಾದ ಬ್ಯಾಂಕ್ ಮತ್ತು ಸರಿಯಾದ ಅವಧಿಯನ್ನು ಆಯ್ಕೆ ಮಾಡುವುದು ಮುಖ್ಯ. ಹಾಗಾದರೆ, ಸದ್ಯ ಮಾರುಕಟ್ಟೆಯಲ್ಲಿ ಯಾವ ಬ್ಯಾಂಕ್‌ಗಳು ಗ್ರಾಹಕರಿಗೆ ಅತ್ಯುತ್ತಮ ಬಡ್ಡಿ ದರವನ್ನು ನೀಡುತ್ತಿವೆ? ಇಲ್ಲಿದೆ ನೋಡಿ ಟಾಪ್ 6 ಬ್ಯಾಂಕ್‌ಗಳ ಪಟ್ಟಿ.
1. ಫೆಡರಲ್ ಬ್ಯಾಂಕ್ (Federal Bank): ಈ ಖಾಸಗಿ ಬ್ಯಾಂಕ್ ಸದ್ಯ ಅತ್ಯುತ್ತಮ ಬಡ್ಡಿ ದರವನ್ನು ನೀಡುತ್ತಿದೆ. 444 ದಿನಗಳ ವಿಶೇಷ FD ಮೇಲೆ ಬರೋಬ್ಬರಿ ಶೇಕಡಾ 6.7 ರಷ್ಟು ಬಡ್ಡಿಯನ್ನು ನೀಡುತ್ತಿದೆ. ಹಿರಿಯ ನಾಗರಿಕರಾಗಿದ್ದರೆ, ನಿಮಗೆ ಇನ್ನೂ ಹೆಚ್ಚು, ಅಂದರೆ ಶೇಕಡಾ 0.50ರಷ್ಟು ಹೆಚ್ಚುವರಿ ಬಡ್ಡಿ ಸಿಗಲಿದೆ.
2. HDFC ಬ್ಯಾಂಕ್ (HDFC Bank): ದೇಶದ ಪ್ರಮುಖ ಖಾಸಗಿ ಬ್ಯಾಂಕ್ HDFC, 18 ರಿಂದ 21 ತಿಂಗಳ ಅವಧಿಯ ಠೇವಣಿಗಳ ಮೇಲೆ ಶೇಕಡಾ 6.6 ರಷ್ಟು ಬಡ್ಡಿ ನೀಡುತ್ತಿದೆ. ಇದೇ ಅವಧಿಗೆ ಹಿರಿಯ ನಾಗರಿಕರು ಶೇಕಡಾ 7.10 ರಷ್ಟು ಆಕರ್ಷಕ ಬಡ್ಡಿದರವನ್ನು ಪಡೆಯಬಹುದು.
3. ಐಸಿಐಸಿಐ ಬ್ಯಾಂಕ್ (ICICI Bank): ಮತ್ತೊಂದು ದೈತ್ಯ ಖಾಸಗಿ ಬ್ಯಾಂಕ್ ಐಸಿಐಸಿಐ ಕೂಡ ಹಿಂದೆ ಬಿದ್ದಿಲ್ಲ. 2 ವರ್ಷದಿಂದ 10 ವರ್ಷಗಳವರೆಗಿನ ದೀರ್ಘಾವಧಿ ಠೇವಣಿಗಳ ಮೇಲೆ ಶೇಕಡಾ 6.6 ರಷ್ಟು ಬಡ್ಡಿಯನ್ನು ನೀಡುತ್ತಿದೆ. ಹಿರಿಯ ನಾಗರಿಕರಿಗೆ ಇಲ್ಲಿಯೂ ಶೇಕಡಾ 7.10 ರಷ್ಟು ಬಡ್ಡಿ ದೊರೆಯಲಿದೆ.
4. ಕೋಟಕ್ ಮಹೀಂದ್ರಾ ಬ್ಯಾಂಕ್ (Kotak Mahindra Bank): ಕೋಟಕ್ ಮಹೀಂದ್ರಾ ಬ್ಯಾಂಕ್ ತನ್ನ 444 ದಿನಗಳ ವಿಶೇಷ FD ಯೋಜನೆಗೆ ಶೇಕಡಾ 6.6 ರಷ್ಟು ಬಡ್ಡಿದರವನ್ನು ನಿಗದಿಪಡಿಸಿದೆ. ಹಿರಿಯ ನಾಗರಿಕರಿಗೆ ನಿಯಮದಂತೆ ಶೇಕಡಾ 0.50ರಷ್ಟು ಹೆಚ್ಚಿನ ಬಡ್ಡಿ ಇಲ್ಲಿಯೂ ಲಭ್ಯ.
5. ಬ್ಯಾಂಕ್ ಆಫ್ ಬರೋಡಾ (Bank of Baroda): ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳ ಪೈಕಿ ಬ್ಯಾಂಕ್ ಆಫ್ ಬರೋಡಾ ಉತ್ತಮ ಬಡ್ಡಿ ನೀಡುತ್ತಿದೆ. ಈ ಬ್ಯಾಂಕ್ ಕೂಡ ತನ್ನ 444 ದಿನಗಳ ಸ್ಥಿರ ಠೇವಣಿಗೆ ಶೇಕಡಾ 6.6 ರಷ್ಟು ಬಡ್ಡಿಯನ್ನು ನೀಡುತ್ತಿದೆ.
6. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI): ದೇಶದ ಅತಿದೊಡ್ಡ ಸರ್ಕಾರಿ ಬ್ಯಾಂಕ್ ಎಸ್‌ಬಿಐ, 2 ರಿಂದ 3 ವರ್ಷಗಳ ಅವಧಿಯ FD ಗಳ ಮೇಲೆ ಶೇಕಡಾ 6.45 ರಷ್ಟು ಬಡ್ಡಿ ನೀಡುತ್ತಿದೆ. ಹಿರಿಯ ನಾಗರಿಕರಿಗೆ ಶೇಕಡಾ 0.50 ರಷ್ಟು ಹೆಚ್ಚುವರಿ ಬಡ್ಡಿ ಸಿಗಲಿದೆ.
ಹಣಕಾಸು ತಜ್ಞರ ಸೂಪರ್ ಟಿಪ್ಸ್: ಹೀಗೆ ಮಾಡಿದರೆ ಲಾಭ ಜಾಸ್ತಿ: ಹಣಕಾಸು ತಜ್ಞರ ಪ್ರಕಾರ, ನಿಮ್ಮ ಬಳಿ 5 ಲಕ್ಷ ರೂಪಾಯಿ ಇದ್ದರೆ, ಅದನ್ನು ಒಂದೇ FD ಯಲ್ಲಿ, ಒಂದೇ ಬ್ಯಾಂಕ್‌ನಲ್ಲಿ ಇಡುವುದು ಬುದ್ಧಿವಂತಿಕೆಯಲ್ಲ. ಬದಲಾಗಿ, ಆ ಹಣವನ್ನು 2 ಅಥವಾ 3 ಭಾಗಗಳಾಗಿ ವಿಂಗಡಿಸಿ, ಬೇರೆ ಬೇರೆ ಬ್ಯಾಂಕ್‌ಗಳಲ್ಲಿ ಅಥವಾ ಬೇರೆ ಬೇರೆ ಅವಧಿಗಳಿಗೆ ಹೂಡಿಕೆ ಮಾಡಿ.
ಇದರಿಂದ ಏನು ಲಾಭ? ಹೀಗೆ ಮಾಡುವುದರಿಂದ ಎರಡು ಮುಖ್ಯ ಲಾಭಗಳಿವೆ. ಒಂದು, ನಿಮಗೆ ತುರ್ತಾಗಿ ಹಣ ಬೇಕಾದರೆ, ಪೂರ್ತಿ FD ಮುರಿಯುವ ಬದಲು, ಬೇಕಾದಷ್ಟು ಮೊತ್ತದ ಒಂದು FDಯನ್ನು ಮಾತ್ರ ವಿತ್‌ಡ್ರಾ ಮಾಡಬಹುದು. ಇದರಿಂದ ದಂಡ ಬೀಳುವುದು ತಪ್ಪುತ್ತದೆ. ಎರಡನೆಯದಾಗಿ, ಬೇರೆ ಬೇರೆ ಅವಧಿಗಳಿಗೆ ಹೂಡಿಕೆ ಮಾಡುವುದರಿಂದ, ಬಡ್ಡಿ ದರಗಳು ಬದಲಾದಾಗ ಅದರ ಲಾಭವನ್ನು ಪಡೆಯಲು ನಿಮಗೆ ಅವಕಾಶ ಸಿಗುತ್ತದೆ.