Ration Card: ಹೊಸ ಪಡಿತರ ಚೀಟಿಗೆ ಕಾದಿವೆ 3.22 ಲಕ್ಷ ಕುಟುಂಬ

Ration Card: ಹೊಸ ಪಡಿತರ ಚೀಟಿಗೆ ಕಾದಿವೆ 3.22 ಲಕ್ಷ ಕುಟುಂಬ!

ಕಳೆದ 4 ವರ್ಷದಿಂದ ಹೊಸ ಪಡಿತರ ಚೀಟಿಗಳ ವಿತರಿಸದ ಸರಕಾರ , ಅರ್ಹರಾದರೂ 3.21,921 ಮಂದಿಗೆ ಸಿಕ್ಕಿಲ್ಲ ರೇಷನ್‌ ಕಾರ್ಡ್‌


Team Udayavani, Jul 17, 2025, 7:10 AM IST


ರಾಜ್ಯ ಕಾಂಗ್ರೆಸ್‌ ಸರಕಾರ ರಾಜ್ಯದ ಅನರ್ಹ ಬಿಪಿಎಲ್‌ ಕಾರ್ಡು ದಾರರ ರದ್ದತಿಗೆ ತೋರುತ್ತಿರುವ ಆಸಕ್ತಿಯನ್ನು ಅರ್ಹ ಕುಟುಂಬಗಳಿಗೆ ಹೊಸ ಪಡಿತರ ಚೀಟಿ ವಿತರಣೆಗೆ ತೋರುತ್ತಿಲ್ಲ.

ಆಹಾರ, ನಾಗರಿಕರ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಇಲಾಖೆಗೆ ಹೊಸ ಪಡಿತರ ಚೀಟಿಗಾಗಿ ಅರ್ಜಿ ಸಲ್ಲಿಸಿರುವ 3,21,921 ಕುಟುಂಬಗಳು ಹೊಸ ಪಡಿತರ ಚೀಟಿ ಪಡೆಯಲು 4 ವರ್ಷಗಳಿಂದ ಚಾತಕಪಕ್ಷಿಗಳಂತೆ ಎದುರು ನೋಡುವ ಪರಿಸ್ಥಿತಿ ಇದ್ದರೂ ಸರಕಾರ ಮಾತ್ರ ಹೊಸ ಪಡಿತರ ಚೀಟಿಗಳ ವಿತರಣೆಗೆ ಮುಂದಾಗಿಲ್ಲ.

ರಾಜ್ಯ ಸರಕಾರ ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನಕ್ಕೆ ಕಸರತ್ತು ನಡೆಸು ತ್ತಿದೆ. ಇದರಿಂದ ಸರಕಾರದ ಮೇಲೆ ಆರ್ಥಿಕ ಹೊರೆ ತಗ್ಗಿಸಲು “ಅನರ್ಹತೆ’ ಹೆಸರಲ್ಲಿ ಬಿಪಿಎಲ್‌ ಪಡಿತರ ಚೀಟಿಗಳನ್ನು ರದ್ದು ಮಾಡುವ ಅಭಿಯಾನವನ್ನೂ ಸದ್ದಿಲ್ಲದೆ ಮಾಡಿದೆ. ಆದರೆ 2021ರಲ್ಲಿ ಹೊಸ ಪಡಿತರ ಚೀಟಿಗಳನ್ನು ವಿತರಿಸಿದ್ದ ಸರಕಾರ ಬಳಿಕ ಕೈ ಬಿಟ್ಟಿದ್ದು ಇಲ್ಲಿವರೆಗೂ ಹೊಸ ಕಾರ್ಡ್‌ಗಳ ವಿತರಣೆ ಆಗದ ಪರಿಣಾಮ ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಿರುವ “ಪಡಿತರ ಚೀಟಿ ಭಾಗ್ಯ’ದ ನಿರೀಕ್ಷೆಯಲ್ಲಿ ಕಾಲ ತಳ್ಳುತ್ತಿದ್ದಾರೆ.

ಸರಕಾರ ಪಡಿತರ ಚೀಟಿಗಳನ್ನು ಪ್ರಮುಖ ಮಾನದಂಡವಾಗಿ ಇಟ್ಟುಕೊಂಡು ಮನೆ ಯಾಜಮಾನಿಗೆ ಗೃಹಲಕ್ಷ್ಮಿ ಯೋಜನೆ ಯಡಿ ಮಾಸಿಕ 2 ಸಾ. ರೂ. ಕೊಡುತ್ತಿದೆ. ಇದರಿಂದ ಸರಕಾರದ ಯೋಜನೆ ಲಾಭಕ್ಕಾಗಿ ಕೆಲ ಮಹಿಳೆಯರು, ಅವಿಭಕ್ತ ಕುಟುಂಬ ದಿಂದ ಪ್ರತ್ಯೇಕಗೊಂಡವರು ಹೊಸ ಪಡಿತರ ಚೀಟಿಗಾಗಿ ಅರ್ಜಿ ಸಲ್ಲಿಸಿದ್ದಾರೆ. ಆದರೆ ಸರಕಾರ ಹೊಸ ಕಾರ್ಡ್‌ಗಳ ವಿತರಣೆಯನ್ನೇ ಮರೆತಿರುವ ಪರಿಣಾಮ “ಗೃಹಲಕ್ಷ್ಮಿ’ ಯಿಂದ ಲಕ್ಷಾಂತರ ಮಹಿಳೆಯರು ವಂಚಿತರಾಗುವ ಪರಿಸ್ಥಿತಿ ನಿರ್ಮಾಣವಾಗಿದೆ.

ಯಾವ ಜಿಲ್ಲೆಯಲ್ಲಿ ಎಷ್ಟು ಮಂದಿ ಅರ್ಜಿದಾರರು?

ಆಹಾರ, ನಾಗರಿಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಇಲಾಖೆಗೆ ಹೊಸ ಪಡಿತರ ಚೀಟಿಗಾಗಿ ರಾಜ್ಯಾದ್ಯಂತ ಅರ್ಜಿ ಸಲ್ಲಿಸಿರುವ ಒಟ್ಟು 3.21,921 ಮಂದಿ ಅರ್ಜಿದಾರರಿಗೆ ಪಡಿತರ ಚೀಟಿ ವಿತರಿಸಲು ಅರ್ಹತೆ ಇದೆ. ಆ ಪೈಕಿ ದಕ್ಷಿಣ ಕನ್ನಡ 827, ಉಡುಪಿ 507, ಬಾಗಲಕೋಟೆ 13,482, ಬೆಂಗಳೂರು 18,589, ಬೆಂಗಳೂರು ಗ್ರಾಮಾಂತರ 6,071, ಬೆಳಗಾವಿ-39,487, ಬಳ್ಳಾರಿ-10,253, ಬೀದರ್‌-17,719, ವಿಜಯಪುರ-24,651, ಚಾಮರಾಜನಗರ 3,105, ಚಿಕ್ಕಮಗಳೂರು 3,362, ಚಿತ್ರದುರ್ಗ 6.950, ದಾವಣಗೆರೆ 2,777, ಧಾರವಾಡ 12.109, ಗದಗ 6,572, ಕಲಬುರಗಿ 35,808, ಹಾಸನ 5008, ಹಾವೇರಿ 8,949, ಕೊಡುಗು 1,613, ಕೋಲಾರ 3160, ಕೊಪ್ಪಳ 11,499, ಮಂಡ್ಯ 3,433,ಮೈಸೂರು 7,195, ರಾಯಚೂರು 18,452, ಶಿವಮೊಗ್ಗ 3,582, ತುಮಕೂರು 9,501, ಉತ್ತರ ಕನ್ನಡ 1,692, ರಾಮನಗರ 3,624, ಯಾದಗಿರಿ 8,379. ಬೆಂಗಳೂರು ಪೂರ್ವ 4,540, ಬೆಂಗಳೂರು ಉತ್ತರ 4,642, ಬೆಂಗಳೂರು ಪಶ್ಚಿಮ 10,412, ವಿಜಯನಗರದಲ್ಲಿ 5,121 ಮಂದಿಗೆ ಹೊಸ ಪಡಿತರ ಚೀಟಿ ವಿತರಿಸಬೇಕಿದೆ.

ಕಳೆದ 2021ರಿಂದ ಹೊಸ ಪಡಿತರ ಚೀಟಿ ವಿತರಣೆಗೆ ಸರಕಾರ ಅನುಮತಿ ಕೊಟ್ಟಿಲ್ಲ. ರಾಜ್ಯ ಸರಕಾರ ಅನುಮತಿ ಕೊಟ್ಟ ಕೂಡಲೇ ಹೊಸ ಪಡಿತರ ಚೀಟಿಗಳ ವಿತರಣೆಗೆ ಕ್ರಮ ಕೈಗೊಳ್ಳಲಾಗುವುದು.


Previous Post Next Post