ಹೋಂಡಾ ಸ್ಕೂಟರ್ & ಮೋಟಾರ್‌ಸೈಕಲ್ ಇಂಡಿಯಾ (Honda Scooter & Motorcycle India), ವಿಶ್ವಾಸಾರ್ಹ ದ್ವಿಚಕ್ರ ವಾಹನ (Two Wheeler) ತಯಾರಕ ಕಂಪನಿಯಾಗಿ, ಹೊರಹೊಮ್ಮಿದೆ. ಆಕ್ಟಿವಾ ಇ (Activa e) ಹಾಗೂ ಕ್ಯೂಸಿ1 (QC1) ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ಮಾರಾಟಗೊಳಿಸುತ್ತಿದೆ. ಇದೀಗ, ಬಹುಬೇಡಿಕೆಯ ಶೈನ್ (Shine) ಮೋಟಾರ್‌ಸೈಕಲ್‌ನ್ನು ಎಲೆಕ್ಟ್ರಿಕ್ ರೂಪದಲ್ಲಿ ಬಿಡುಗಡೆಗೊಳಿಸಲು ಕಂಪನಿಯು ಕೂಡ ತಯಾರಿ ಮಾಡಿಕೊಳ್ಳುತ್ತಿದೆ ಎಂದು ವರದಿಯಾಗಿದೆ. ಬನ್ನಿ, ಆ ಬಗ್ಗೆ ಹೆಚ್ಚಿನ ವಿವರಗಳನ್ನು ತಿಳಿಯೋಣ.
ಹೋಂಡಾ ಹೊಚ್ಚ ಹೊಸ ಎಲೆಕ್ಟ್ರಿಕ್ ಬೈಕ್‌ನ್ನು ಅಭಿವೃದ್ಧಿಪಡಿಸುವ ಕೆಲಸದಲ್ಲಿ ನಿರತವಾಗಿದೆ. ಈಚೆಗೆ ಪೇಟೆಂಟ್‌ನ್ನು ಸಲ್ಲಿಸಿದೆ ಎಂಬ ವಿವರಗಳು ಲಭ್ಯವಾಗಿವೆ. ಇದು 'ಶೈನ್ 100' ಮೋಟಾರ್‌ಸೈಕಲ್‌ನ್ನು ಆಧರಿಸಿರಲಿದೆ ಎನ್ನಲಾಗಿದೆ. ಈ ಪೇಟೆಂಟ್ ಫೋಟೋವನ್ನು ಸೂಕ್ಷ್ಮವಾಗಿ ಗಮನಿಸಿದಾಗ, ನೂತನ ಇ-ಬೈಕ್ ವಿಭಿನ್ನವಾದ ಹೆಡ್‌ಲ್ಯಾಂಪ್, ರೇರ್ ಗ್ರಾಬ್ ಹ್ಯಾಂಡಲ್ ಹಾಗೂ ಸಿಂಗಲ್ ಪೀಸ್ ಸೀಟ್‌ನ್ನು ಒಳಗೊಂಡಿದೆ.
ಸ್ಟ್ಯಾಂಡರ್ಡ್ 'ಶೈನ್ 100' ಮೋಟಾರ್‌ಸೈಕಲ್ ಹೊಂದಿರುವ ಸಿಂಗಲ್-ಸಿಲಿಂಡರ್ ಎಂಜಿನ್ ಜಾಗದಲ್ಲೇ, ನೂತನ ಬೈಕ್‌ನ ಬ್ಯಾಟರಿ ಪ್ಯಾಕ್ ಸಹ ಇರಲಿದೆ. ಜೊತೆಗೆ ಈ ಮೋಟಾರ್‌ಸೈಕಲ್‌ನಲ್ಲಿಯೂ 'ಆಕ್ಟಿವಾ ಇ' ಹೊಂದಿರುವ ಪವರ್‌ಟ್ರೇನ್‌ನ್ನೇ ಬಳಕೆ ಮಾಡಬಹುದು ಎನ್ನಲಾಗಿದೆ. ಪ್ರಸ್ತುತ ಆಕ್ಟಿವಾ ಎಲೆಕ್ಟ್ರಿಕ್ ಸ್ಕೂಟರ್, 1.5 ಕಿಲೋವ್ಯಾಟ್ (ಕೆಡಬ್ಲ್ಯೂಹೆಚ್) ಸಾಮರ್ಥ್ಯದ ಎರಡು ಬ್ಯಾಟರಿ ಪ್ಯಾಕ್‌ನ್ನು ಒಳಗೊಂಡಿದೆ. ಭರ್ತಿ ಚಾರ್ಜ್‌ನಲ್ಲಿ 102 ಕಿಲೋಮೀಟರ್ ಓಡುತ್ತದೆ.
ಹೋಂಡಾ ಶೈನ್ ಇ-ಬೈಕ್ 2027ರ ವೇಳೆಗೆ ದೇಶೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗುವ ಸಾಧ್ಯತೆಯಿದೆ. ಸರಿ ಸುಮಾರು ರೂ.1 ಲಕ್ಷ (ಎಕ್ಸ್-ಶೋರೂಂ) ಬೆಲೆಯಲ್ಲಿ ಬಿಡುಗಡೆಯಾಗಬಹುದು ಎಂದು ಹೇಳಲಾಗಿದೆ. ಈ ಎಲೆಕ್ಟ್ರಿಕ್ ಮೋಟಾರ್‌ಸೈಕಲ್‌ಗೆ ರಿವೋಲ್ಟ್ ಆರ್‌ವಿ, ಒಬೆನ್ ರೋರ್ ಇಝಡ್ ಹಾಗೂ ಓಲಾ ರೋಡ್‌ಸ್ಟರ್ ಎಕ್ಸ್ ಬೈಕ್‌ಗಳು ಪ್ರಬಲವಾದ ಪ್ರತಿಸ್ಪರ್ಧಿಯಾಗಲಿವೆ.
ಹೋಂಡಾ ಶೈನ್ 100 (Honda Shine 100) ವಿಶೇಷತೆಗಳೇನು:
ಇದು ಅತಿ ಕಡಿಮೆ ಬೆಲೆಯಲ್ಲಿ ಖರೀದಿಗೆ ಲಭ್ಯವಿದ್ದು, ಬಡ ಹಾಗೂ ಮಧ್ಯಮ ವರ್ಗದ ಗ್ರಾಹಕರು ಸುಲಭವಾಗಿ ಕೊಂಡುಕೊಳ್ಳಬಹುದು. ಅದಕ್ಕೆ ತಕ್ಕಂತೆ ರೂ.68,000 (ಎಕ್ಸ್-ಶೋರೂಂ) ದರವನ್ನು ಪಡೆದಿದೆ. ಬ್ಲ್ಯಾಕ್ ವಿತ್ ರೆಡ್, ಬ್ಲ್ಯಾಕ್ ವಿತ್ ಬ್ಲೂ, ಬ್ಲ್ಯಾಕ್ ವಿತ್ ಆರೆಂಜ್, ಬ್ಲ್ಯಾಕ್ ವಿತ್ ಗ್ರೇ ಮತ್ತು ಬ್ಲ್ಯಾಕ್ ವಿತ್ ಗ್ರೀನ್ ಎಂಬ ಬಣ್ಣಗಳೊಂದಿಗೂ ದೊರೆಯುತ್ತದೆ.
ಈ ಬೈಕ್ 98.98 ಸಿಸಿ ಪೆಟ್ರೋಲ್ ಎಂಜಿನ್ & 4-ಸ್ಪೀಡ್ ಗೇರ್‌ಬಾಕ್ಸ್‌ನ್ನು ಪಡೆದಿದೆ. 65 ಕಿ.ಮೀವರೆಗೂ ಮೈಲೇಜ್ ಕೊಡುತ್ತದೆ. ಟ್ವಿನ್ ಪಾಡ್ ಇನ್ಸ್ಟ್ರುಮೆಂಟ್ ಕನ್ಸೋಲ್, ಸೈಡ್ ಸ್ಟ್ಯಾಂಡ್ ಸೆನ್ಸರ್ ಮತ್ತು ಸಿಂಗಲ್ ಪೀಸ್ ಸೀಟ್ ಸೇರಿದಂತೆ ಹಲವು ವೈಶಿಷ್ಟ್ಯಗಳನ್ನು ಪಡೆದಿದೆ. ಸುರಕ್ಷತೆಯ ದೃಷ್ಟಿಯಿಂದ ಡ್ರಮ್ ಬ್ರೇಕ್‌ಗಳನ್ನು ಒಳಗೊಂಡಿದೆ.
ಹೋಂಡಾ ಶೈನ್ 125 (Honda Shine 125): ಕೂಡ ಖರೀದಿಗೆ ಲಭ್ಯ:
ಇದು ಅಗ್ಗದ ದರದಲ್ಲೂ ಲಭ್ಯವಿದ್ದು, ರೂ.84,000 (ಎಕ್ಸ್-ಶೋರೂಂ) ಬೆಲೆಯನ್ನು ಒಳಗೊಂಡಿದೆ. ಡ್ರಮ್ ಬ್ರೇಕ್ & ಡಿಸ್ಕ್ ಬ್ರೇಕ್ ಎಂಬ ರೂಪಾಂತರಗಳನ್ನು (ವೇರಿಯೆಂಟ್) ಪಡೆದಿದೆ. ಈ ಬೈಕ್ ನೋಡಲು ತುಂಬಾ ಚೆನ್ನಾಗಿದೆ. ಪರ್ಲ್ ಇಗ್ನಿಯಸ್ ಬ್ಲ್ಯಾಕ್, ಜೆನಿ ಗ್ರೇ ಮೆಟಾಲಿಕ್, ಮ್ಯಾಟ್ ಆಕ್ಸಿಸ್ ಗ್ರೇ ಮೆಟಾಲಿಕ್ ಮತ್ತು ರೆಬೆಲ್ ರೆಡ್ ಮೆಟಾಲಿಕ್ ಎಂಬ ಬಣ್ಣಗಳ ಆಯ್ಕೆಯಲ್ಲಿಯೂ ಸಿಗುತ್ತದೆ.
ನೂತನ ಮೋಟಾರ್‌ಸೈಕಲ್ 123.94 ಸಿಸಿ ಸಾಮರ್ಥ್ಯದ ಪೆಟ್ರೋಲ್ ಎಂಜಿನ್ ಹಾಗೂ 5-ಸ್ಪೀಡ್ ಗೇರ್‌ಬಾಕ್ಸ್‌ನ್ನು ಒಳಗೊಂಡಿದೆ. 55 ಕಿ.ಮೀವರೆಗೂ ಮೈಲೇಜ್ ನೀಡುತ್ತದೆ. ಬರೋಬ್ಬರಿ 113 ಕೆಜಿ ತೂಕವಿದ್ದು, ಫುಲ್ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಮತ್ತು ಯುಎಸ್‌ಬಿ ಟೈಪ್-ಸಿ ಚಾರ್ಜಿಂಗ್ ಪೋರ್ಟ್ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಪಡೆದಿದೆ. ಡ್ರಮ್/ ಡಿಸ್ಕ್ ಬ್ರೇಕ್‌ಗಳನ್ನು ಪಡೆದಿದೆ.