ಪ್ರತಿ ತಿಂಗಳು ಸ್ವಲ್ಪ ಹಣ ಉಳಿತಾಯ ಮಾಡಿದ್ರೆ ಭವಿಷ್ಯ ಚೆನ್ನಾಗಿರುತ್ತೆ. ಆದ್ರೆ ಹಣ ಉಳಿಯೋದಿಲ್ಲ ಎನ್ನುವವರೇ ಹೆಚ್ಚು. ಹಣ ಉಳಿಸ್ಬೇಕು ಅಂದ್ರೆ ಏನು ಮಾಡ್ಬೇಕು ಗೊತ್ತಾ
ಸಂಬಳ (salary) ಬಂದ ದಿನವೇ ಕೈ ಖಾಲಿ. ಮನೆ ಬಾಡಿಗೆ, ದಿನಸಿ, ಬ್ಯಾಂಕ್ ಲೋನ್ (Bank Loan) ಅಂತ ಎಲ್ಲ ಸಂಬಳ ಖರ್ಚಾಗಿರುತ್ತೆ. ಉಳಿಯೋ ಅಲ್ಪಸ್ವಲ್ಪ ಹಣ ಹೇಗೆ ಖಾಲಿಯಾಯ್ತು ಅನ್ನೋದೇ ತಿಳಿಯೋದಿಲ್ಲ. ಪ್ರತಿ ತಿಂಗಳು ಸ್ವಲ್ಪ ಸಂಬಳವನ್ನು ಸೇವ್ ಮಾಡ್ಬೇಕು ಎನ್ನುವ ಆಲೋಚನೆ ಇರುತ್ತೇ ವಿನಃ ಅದು ಕಾರ್ಯರೂಪಕ್ಕೆ ಬರೋದಿಲ್ಲ. ಹನಿ – ಹನಿ ಕೂಡಿ ಹಳ್ಳ ಎನ್ನುವ ಮಾತಿದೆ. ನೀವು ಪ್ರತಿ ತಿಂಗಳು ಸ್ವಲ್ಪೇ ಸ್ವಲ್ಪ ಹಣವನ್ನು ಉಳಿತಾಯ ಮಾಡಿದ್ರೂ ವರ್ಷದ ಕೊನೆಗೆ ದೊಡ್ಡ ಮೊತ್ತ ನಿಮ್ಮ ಕೈನಲ್ಲಿರುತ್ತದೆ. ನಾಳೆ ಮಾಡ್ತೇನೆ, ನಾಡಿದ್ದು ಮಾಡ್ತೇನೆ ಅಂತ ಪ್ಲಾನ್ ಮಾಡ್ತಾ ಟೈಂ ಹಾಳು ಮಾಡೋ ಬದಲು ಇಂದೇ ಮೂರು ಬ್ಯಾಂಕ್ ಖಾತೆ ಓಪನ್ ಮಾಡಿ. ಈ ಖಾತೆ ಯಾವ್ದು, ಅದ್ರಿಂದ ಉಳಿತಾಯ ಹೇಗೆ ಆಗುತ್ತೆ ಅನ್ನೋದನ್ನು ನಾವು ಹೇಳ್ತೇವೆ.
ಮೂರು ಬ್ಯಾಂಕ್ ಖಾತೆಗಳು ಏಕೆ ಅಗತ್ಯ? : ಮೊದಲು ಯಾಕೆ ಮೂರು ಬ್ಯಾಂಕ್ ಖಾತೆ ಬೇಕು ಅನ್ನೋದನ್ನು ತಿಳಿದುಕೊಳ್ಳಿ. ಸಾಮಾನ್ಯವಾಗಿ ನಾವೆಲ್ಲ ಒಂದೇ ಬ್ಯಾಂಕ್ ಖಾತೆ ಹೊಂದಿರ್ತೇವೆ. ಅಲ್ಲಿಗೇ ಸಂಬಳ ಬರುತ್ತೆ, ಅದನ್ನೇ ಖರ್ಚು ಮಾಡ್ತೇವೆ, ಅಲ್ಲೇ ಹಣ ಉಳಿಸುವ ಪ್ರಯತ್ನ ನಡೆಸ್ತೇವೆ. ಆದ್ರೆ ಉಳಿತಾಯ ಮಾಡ್ಬೇಕು ಅಂತಿಟ್ಕೊಂಡ ಹಣ ಖಾಲಿಯಾಗಿದ್ದೇ ತಿಳಿಯೋದಿಲ್ಲ. ನೀವು ಕಷ್ಟಪಟ್ಟು ಸಂಪಾದಿಸಿದ ಹಣದಲ್ಲಿ ಸ್ವಲ್ಪವಾದ್ರೂ ಉಳಿಬೇಕು ಅಂದ್ರೆ ನೀವು ವಿಭಿನ್ನ ಬ್ಯಾಂಕ್ ನಲ್ಲಿ ಮೂರು ಖಾತೆ ತೆರೀಲೇಬೇಕು. ಹೀಗೆ ಮಾಡಿದಾಗ ನಿಮ್ಮ ವೆಚ್ಚ ಕಂಟ್ರೋಲ್ ಗೆ ಬರುತ್ತೆ.ಜೊತೆಗೆ ಸ್ವಲ್ಪ ಮೊತ್ತ ಉಳಿಯುತ್ತೆ.
ಮೊದಲ ಖಾತೆ ಯಾವುದು? : ಮೊದಲೇಯದು ಸಂಬಳ ಖಾತೆ. ನೀವು ಕೆಲ್ಸ ಮಾಡ್ತಿದ್ದರೆ ಇಲ್ಲ ಬ್ಯುಸಿನೆಸ್ ಮಾಡ್ತಿದ್ದರೆ ನಿಮ್ಮ ಸಂಬಳ ಅಥವ ಲಾಭ ಈ ಖಾತೆಗೆ ಬರುವಂತೆ ಮಾಡ್ಕೊಳ್ಳಿ. ಈ ಖಾತೆ ಕೆಲಸ ಬರೀ ಸಂಬಳವನ್ನು ಸ್ವೀಕರಿಸುವುದು ಮಾತ್ರ. ಈ ಖಾತೆಗೆ ಸಂಬಳ ಬರ್ತಿದ್ದಂತೆ ಅದನ್ನು ಅಗತ್ಯಕ್ಕೆ ಅನುಗುಣವಾಗಿ ಇತರ ಎರಡು ಖಾತೆಗಳಿಗೆ ವರ್ಗಾಯಿಸಿ. ಇದು ನಿಮ್ಮ ಖರ್ಚು, ಉಳಿತಾಯಕ್ಕೆ ಸರಿಯಾದ ಲೆಕ್ಕ ನೀಡುತ್ತದೆ.
ಉಳಿತಾಯ ಖಾತೆ (Savings Account) : ಎರಡನೇಯದು ಉಳಿತಾಯ ಖಾತೆ. ಸಂಬಳ ಖಾತೆ ಜೊತೆ ನೀವು ಉಳಿತಾಐ ಖಾತೆಯನ್ನು ತೆರೆಯಬೇಕು. ಸಂಬಳದಿಂದ ನಿಗದಿತ ಮೊತ್ತವನ್ನು ಈ ಖಾತೆಗೆ ಸಂಬಳ ಬಂದ ತಕ್ಷಣ ವರ್ಗಾಯಿಸಬೇಕು. ಉದಾಹರಣೆಗೆ ನಿಮ್ಮ ಸಂಬಳದ ಶೇಕಡಾ 20 ರಷ್ಟನ್ನು ಈ ಖಾತೆಗೆ ವರ್ಗಾಯಿಸಿ. ನೀವು ಈ ಹಣವನ್ನು SIP, FD ಸೇರಿದಂತೆ ಯಾವುದೇ ಪ್ಲಾನ್ ನಲ್ಲಿ ಹೂಡಿಕೆ ಮಾಡ್ಬಹುದು. ಈ ಖಾತೆಯಿಂದ ಹಣ ವಿತ್ ಡ್ರಾ ಮಾಡಿ, ನಿಮ್ಮ ಖರ್ಚಿಗೆ ಬಳಸ್ಬೇಡಿ.
ಖರ್ಚಿನ ಖಾತೆ : ಈ ಖಾತೆಗೆ ಎಷ್ಟು ಹಣ ಹಾಕ್ಬೇಕು ಅನ್ನೋದು ನಿಮ್ಮ ಬಜೆಟ್ ಆಧರಿಸಿದೆ. ಪ್ರತಿ ತಿಂಗಳು ನೀವು ಎಷ್ಟು ಖರ್ಚು ಮಾಡ್ಬೇಕು, ಬಾಡಿಗೆ, ದಿನಸಿ, ಬಿಲ್ಗಳು, ಪ್ರಯಾಣ, ಮೊಬೈಲ್ ರೀಚಾರ್ಜ್ ಎಲ್ಲ ಸೇರಿ ಎಷ್ಟು ಹಣ ಬೇಕು ಎಂಬುದನ್ನು ಮೊದಲು ಬಜೆಟ್ ಮಾಡಿ. ಅದ್ರ ಆಧಾರದ ಮೇಲೆ ನೀವು ಖರ್ಚಿನ ಖಾತೆಗೆ ಹಣವನ್ನು ವರ್ಗಾವಣೆ ಮಾಡಿ. ಇದು ನಿಮ್ಮ ಅನಗತ್ಯ ಖರ್ಚಿಗೆ ತಡೆಯಾಗುತ್ತದೆ.
ಇದ್ರಿಂದ ಪ್ರಯೋಜನ ಏನು? : ಪ್ರತಿ ತಿಂಗಳು ಈ ವಿಧಾನ ಪಾಲಿಸಿದ್ರೆ ನಿಮಗೆ ಖರ್ಚು ಹಾಗೂ ಉಳಿತಾಯದ ಬಗ್ಗೆ ಸ್ಪಷ್ಟ ಕಲ್ಪನೆ ಬರುತ್ತದೆ. ಸಂಬಳದಲ್ಲಿ ಒಂದಿಷ್ಟು ಹಣ ಉಳಿತಾಯ ಮಾಡೋದ್ರಿಂದ ವ್ಯರ್ಥ ವೆಚ್ಚ ಕಡಿಮೆಯಾಗುತ್ತದೆ. ಉಳಿತಾಯ ಖಾತೆಯಲ್ಲಿ ಒಂದಿಷ್ಟು ಹಣ ಇರೋದ್ರಿಂದ ತುರ್ತು ಸಂದರ್ಭದಲ್ಲಿ ನಿಮ್ಮ ನೆರವಿಗೆ ಬರುತ್ತದೆ. ನಮ್ಮ ಸಂಬಳ ಕಡಿಮೆ, ಉಳಿತಾಯ ಕಷ್ಟ ಎನ್ನುವವರು ಕೂಡ ಇದನ್ನು ಪಾಲಿಸಬಹುದು. ನೀವು ಸಣ್ಣ ಮೊತ್ತವನ್ನು ಉಳಿತಾಯ ಮಾಡಲು ಶುರು ಮಾಡಿ. 500 ರೂಪಾಯಿ ಆಗಿದ್ರೂ ಸರಿ, ಮೊದಲು ಉಳಿತಾಯದ ಅಭ್ಯಾಸ ರೂಢಿಸಿಕೊಳ್ಳಿ.