ಎಸ್‌ಎಸ್‌ಎಲ್‌ಸಿ ನಂತರ ಪಿಯುಸಿ ಹಾಗೂ ಪದವಿ ಶಿಕ್ಷಣ ಪಡೆಯಲು ಇಚ್ಛಿಸುವ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಆರ್ಥಿಕ ನೆರವು (Vidyadhan Scholarship 2025) ನೀಡಲು ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಕೆಯ ಮಾಹಿತಿ ಇಲ್ಲಿದೆ
ಶೈಕ್ಷಣಿಕ ಪ್ರತಿಭೆ ಇದ್ದರೂ ಆರ್ಥಿಕ ಸಾಮರ್ಥ್ಯ ಇಲ್ಲದ ಕಾರಣಕ್ಕೆ ತಮ್ಮ ಕಲಿಯುವ ಕನಸುಗಳನ್ನು ಬಲಿ ನೀಡುವ ಸ್ಥಿತಿಯಲ್ಲಿರುವ ವಿದ್ಯಾರ್ಥಿಗಳಿಗೆ ಬೆಳಕು ನೀಡುವ ಸದುದ್ದೇಶದಿಂದ ‘ವಿದ್ಯಾಧನ್ ವಿದ್ಯಾರ್ಥಿವೇತನ ಯೋಜನೆ’ಯನ್ನು ಅನುಷ್ಠಾನಗೊಳಿಸಲಾಗಿದೆ.
2025ನೇ ಸಾಲಿಗೆ ಈ ಯೋಜನೆಯಡಿಯಲ್ಲಿ ಕರ್ನಾಟಕದ ಎಸ್‌ಎಸ್‌ಎಲ್‌ಸಿ ಉತ್ತೀರ್ಣರಾಗಿ ಪಿಯುಸಿ ಶಿಕ್ಷಣಕ್ಕೆ ಪ್ರವೇಶ ಪಡೆದಿರುವ ಪ್ರತಿಭಾವಂತ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ವಿದ್ಯಾಧನ್ ಯೋಜನೆಯ ಹಿನ್ನೆಲೆ
ಇನ್ಫೋಸಿಸ್‌ನ ಸಹಸಂಸ್ಥಾಪಕರಾದ ಎಸ್.ಡಿ. ಶಿಬುಲಾಲ್ ಮತ್ತು ಅವರ ಧರ್ಮಪತ್ನಿ ಕುಮಾರಿ ಶಿಬುಲಾಲ್ ಅವರು 1999ರಲ್ಲಿ ಸ್ಥಾಪಿಸಿದ ಸರೋಜಿನಿ ದಾಮೋದರನ್ ಪ್ರತಿಷ್ಠಾನ (Sarojini Damodaran Foundation – SDF) ಈ ಯೋಜನೆಯ ನೇತೃತ್ವ ವಹಿಸಿದೆ.
ಶೈಕ್ಷಣಿಕ ಸಾಮರ್ಥ್ಯವಿರುವ, ಆದರೆ ಆರ್ಥಿಕವಾಗಿ ಹಿಂದುಳಿದ ಕುಟುಂಬಗಳಿಂದ ಬಂದಿರುವ ಮಕ್ಕಳಿಗೆ ನಿರಂತರ ವಿದ್ಯಾರ್ಥಿವೇತನ ನೀಡುವ ಮೂಲಕ ಉನ್ನತ ಶಿಕ್ಷಣದ ಅವಕಾಶ ಒದಗಿಸುವುದು ಈ ಯೋಜನೆಯ ಆಶಯವಾಗಿದೆ.
2025ನೇ ಸಾಲಿನಲ್ಲಿ 1 ಲಕ್ಷ ವಿದ್ಯಾರ್ಥಿಗಳಿಗೆ ಬೆಂಬಲ
ಇಲ್ಲಿಯ ವರೆಗೆ ಈ ಪ್ರತಿಷ್ಠಾನವು ದೇಶದ 20ಕ್ಕೂ ಹೆಚ್ಚು ರಾಜ್ಯಗಳಲ್ಲಿ 50,000ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ನೀಡಿದ್ದು, ಅದರಲ್ಲೂ ಕರ್ನಾಟಕದಲ್ಲಿ 2014ರಿಂದ ಈವರೆಗೆ 1,500 ವಿದ್ಯಾರ್ಥಿಗಳು ಈ ಯೋಜನೆಯ ಲಾಭ ಪಡೆದಿದ್ದಾರೆ.
2025ನೇ ಸಾಲಿನಲ್ಲಿ ದೇಶದಾದ್ಯಂತ 1 ಲಕ್ಷ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ನೀಡುವ ಗುರಿ ಹೊಂದಿರುವ ಈ ಯೋಜನೆಯು ಸ್ಪರ್ಧಾತ್ಮಕ ಅರ್ಜಿ ಪ್ರಕ್ರಿಯೆಯ ಮೂಲಕ ಅರ್ಹರನ್ನು ಆಯ್ಕೆಮಾಡಿ, ಅವರ ವಿದ್ಯಾಭ್ಯಾಸವನ್ನು ಪಿಯುಸಿ ಹಂತದಿoದ ಪದವಿ ಹಂತದ ವರೆಗೆ ಬೆಂಬಲಿಸುತ್ತದೆ.
ಪಿಯುಸಿ ಹಾಗೂ ಪದವಿ ಶಿಕ್ಷಣ ಪಡೆಯಲು ಇಚ್ಛಿಸುವ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಆರ್ಥಿಕ ನೆರವು ನೀಡಲು ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಕೆಯ ಮಾಹಿತಿ ಇಲ್ಲಿದೆ..
ಅರ್ಹತಾ ಮಾನದಂಡಗಳೇನು?
SSLC ಪಾಸು (2025): ಅರ್ಜಿ ಸಲ್ಲಿಸುವ ವಿದ್ಯಾರ್ಥಿಗಳು 2025ನೇ ಸಾಲಿನಲ್ಲಿ ಕರ್ನಾಟಕ ಸರ್ಕಾರದ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು.
ಅಂಕಗಳ ಪ್ರಮಾಣ: ಸಾಮಾನ್ಯ ಅಭ್ಯರ್ಥಿಗಳು ಎಲ್ಲಾ ವಿಷಯಗಳಲ್ಲಿ ಕನಿಷ್ಠ 90% ಅಂಕ ಅಥವಾ ಎ+ ಗ್ರೇಡ್ ಪಡೆದಿರಬೇಕು. ಅಂಗವೈಕಲ್ಯ ಹೊಂದಿರುವ ಅಭ್ಯರ್ಥಿಗಳಿಗೆ 75% ಅಂಕ ಸಾಕು.
ಆರ್ಥಿಕ ಹಿನ್ನಲೆ: ವಿದ್ಯಾರ್ಥಿಯ ಕುಟುಂಬದ ವಾರ್ಷಿಕ ಆದಾಯ ರೂ. 2 ಲಕ್ಷಕ್ಕಿಂತ ಕಡಿಮೆಯಾಗಿರಬೇಕು. ಅಭ್ಯರ್ಥಿಗಳು ಕರ್ನಾಟಕದ ನಿವಾಸಿಗಳಾಗಿರಬೇಕು.
ವಿದ್ಯಾರ್ಥಿವೇತನದ ವಿವರ
‘ಕರ್ನಾಟಕ ವಿದ್ಯಾಧನ್ ವಿದ್ಯಾರ್ಥಿವೇತನ ಯೋಜನೆ’ಯಡಿ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಈ ಕೆಳಗಿನಂತೆ ಪ್ಯಾಕೇಜು ಲಭ್ಯವಿರುತ್ತದೆ:
ಪಿಯುಸಿ ಅಧ್ಯಯನದ ಅವಧಿಗೆ: ವರ್ಷಕ್ಕೆ ರೂ.10,000 ವಿದ್ಯಾರ್ಥಿವೇತನ.
ಪದವಿ ಶಿಕ್ಷಣಕ್ಕೆ (Degree Level): ಆಯ್ಕೆಯಾದ ಕೋರ್ಸ್ ಅನ್ವಯವಾಗಿ ವರ್ಷಕ್ಕೆ ರೂ.15,000 ರಿಂದ ರೂ.75,000ರ ವರೆಗೆ ಆರ್ಥಿಕ ನೆರವು.
ವಿದ್ಯಾರ್ಥಿಯ ವಿದ್ಯಾಭ್ಯಾಸದ ಮುಂದಿನ ಹಂತಗಳಲ್ಲಿಯೂ ಉತ್ತೀರ್ಣತೆಯನ್ನು ಆಧಾರವಾಗಿಟ್ಟುಕೊಂಡು ಈ ನೆರವು ಮುಂದುವರೆಯುತ್ತದೆ.
ಅರ್ಜಿ ಸಲ್ಲಿಕೆಗೆ ಅಗತ್ಯವಿರುವ ದಾಖಲೆಗಳು
2025ರ SSLC ಅಂಕಪಟ್ಟಿ
ಕುಟುಂಬದ ವಾರ್ಷಿಕ ಆದಾಯ ಪ್ರಮಾಣಪತ್ರ
ಪಾಸ್‌ಪೋರ್ಟ್ ಗಾತ್ರದ ಫೋಟೋ
ಅಂಗವೈಕಲ್ಯ ಪ್ರಮಾಣಪತ್ರ (ಅವಶ್ಯಕವಿದ್ದರೆ ಮಾತ್ರ)
ಇ-ಮೇಲ್ ವಿಳಾಸ ಮತ್ತು ಫೋನ್ ನಂಬರ್
ಬ್ಯಾಂಕ್ ಖಾತೆ ವಿವರಗಳು (ಖಾತೆ ವಿದ್ಯಾರ್ಥಿ ಹೆಸರಲ್ಲಿ ಇರಬೇಕು)
ಆಯ್ಕೆ ಪ್ರಕ್ರಿಯೆಯ ಹಂತಗಳು
ಆನ್‌ಲೈನ್ ಅರ್ಜಿ ಪರಿಶೀಲನೆ: ಅರ್ಜಿ ಸಲ್ಲಿಕೆಯು ಅರ್ಹತಾ ಮಾನದಂಡಗಳ ಆಧಾರದ ಮೇಲೆ ಪರಿಶೀಲನೆಗೊಳಪಡುತ್ತದೆ.
ಆನ್‌ಲೈನ್ ಪರೀಕ್ಷೆ: ಆಯ್ಕೆಯಾದ ಅಭ್ಯರ್ಥಿಗಳಿಗೆ ಸಾಮಾನ್ಯ ಜ್ಞಾನ, ಗಣಿತ, ಭಾಷಾ ಸಾಮರ್ಥ್ಯ ಮತ್ತು ಲೆಕ್ಕಶಾಸ್ತ್ರದ ಆಧಾರದ ಮೇಲೆ ಆನ್‌ಲೈನ್ ಪರೀಕ್ಷೆ ನಡೆಸಲಾಗುತ್ತದೆ.
ಸ್ಥಳ ಪರಿಶೀಲನೆ: ಪ್ರತಿಷ್ಠಾನದ ಸ್ವಯಂಸೇವಕರು ವಿದ್ಯಾರ್ಥಿಯ ಮನೆಗೆ ಭೇಟಿ ನೀಡಿ ಎಲ್ಲ ದಾಖಲೆಗಳು, ಜೀವನ ಪರಿಸ್ಥಿತಿ ಇತ್ಯಾದಿಗಳನ್ನು ಪರಿಶೀಲಿಸುತ್ತಾರೆ.
ಅಂತಿಮ ಆಯ್ಕೆ: ಮೇಲಿನ ಎಲ್ಲ ಹಂತಗಳಲ್ಲಿ ಉತ್ತಮ ಸಾಧನೆ ಮಾಡಿದ ವಿದ್ಯಾರ್ಥಿಗಳು ಅಂತಿಮ ಆಯ್ಕೆಗೊಳಪಡುತ್ತಾರೆ.
ಹೇಗೆ ಅರ್ಜಿ ಸಲ್ಲಿಸಬಹುದು?
‘ಕರ್ನಾಟಕ ವಿದ್ಯಾಧನ್ ವಿದ್ಯಾರ್ಥಿವೇತನ ಯೋಜನೆ’ಯಡಿ ವಿದ್ಯಾರ್ಥಿ ವೇತನ ಪಡೆಯಲು ಬಯಸುವ ವಿದ್ಯಾರ್ಥಿಗಳು ಸಂಸ್ಥೆಯ ಅಧಿಕೃತ ವೆಬ್‌ಸೈಟ್: vidyadhan.org ಮೂಲಕ ಆನ್‌ಲೈನ್ ಅರ್ಜಿ ಸಲ್ಲಿಸಬಹುದು. ಅಥವಾ Google Play Store ನಿಂದ ‘SDF Vidya’ ಮೊಬೈಲ್ ಆಪ್ ಡೌನ್‌ಲೋಡ್ ಮಾಡಿ ಅರ್ಜಿ ಸಲ್ಲಿಸಬಹುದು.
