ಹೈನುಗಾರಿಕೆಗೆ ಉತ್ತೇಜನ ನೀಡಲು ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಹಲವು ಸಬ್ಸಿಡಿ ಮತ್ತು ಸಹಾಯಧನ ಯೋಜನೆಗಳನ್ನು ಜಾರಿಗೆ ತಂದಿವೆ. ಹಾಲು ಉತ್ಪಾದನೆಗೆ ಪ್ರೋತ್ಸಾಹಧನ, ಉಚಿತ ಮೇವು ಕಿಟ್, ಲಸಿಕೆ ಕಾರ್ಯಕ್ರಮಗಳ ಜೊತೆಗೆ ಹಸು, ಎಮ್ಮೆ ಶೆಡ್ ನಿರ್ಮಾಣಕ್ಕೆ ಸಹಾಯಧನ ನೀಡುವ ಯೋಜನೆಯೂ ಲಭ್ಯವಿದೆ.
ಹೈನುಗಾರಿಕೆಯಲ್ಲಿ ತೊಡಗಿರುವ ರೈತರು ತಮ್ಮ ಜಾನುವಾರುಗಳಿಗಾಗಿ ಶೆಡ್ ಅಥವಾ ಕೊಟ್ಟಿಗೆ ನಿರ್ಮಾಣ ಮಾಡಿಕೊಳ್ಳಲು ಸರ್ಕಾರದಿಂದ ₹57,000 ಆರ್ಥಿಕ ನೆರವು ಪಡೆಯಬಹುದು. ಈ ಯೋಜನೆಯು ಮಹಾತ್ಮ ಗಾಂಧಿ ನರೇಗಾ ಯೋಜನೆಯ (MGNREGA) ಅಡಿಯಲ್ಲಿ ಜಾರಿಯಲ್ಲಿದೆ.
5 ಲಕ್ಷ ರೂಪಾಯಿ ವರಗೆ ಸಹಾಯಧನ
ಗ್ರಾಮೀಣ ಭಾಗದ ರೈತರು, ಕೂಲಿ ಕಾರ್ಮಿಕರ ಶ್ರೇಯೋಭಿವೃದ್ಧಿಗಾಗಿ ಮಹಾತ್ಮ ಗಾಂಧಿ ನರೇಗಾ ಯೋಜನೆಯ ಮೂಲಕ ಹಲವು ಸೌಲಭ್ಯಗಳನ್ನು ಕಲ್ಪಿಸಲಾಗಿದೆ. ಒಂದು ಕುಟುಂಬವು ಜೀವಿತಾವಧಿಯಲ್ಲಿ ಭರ್ತಿ 5 ಲಕ್ಷ ರೂಪಾಯಿ ವರಗೆ ವೈಯಕ್ತಿಕ ಕಾಮಗಾರಿ ಅಡಿಯಲ್ಲಿ ಸಹಾಯಧನ ಪಡೆಯಬಹುದಾಗಿದೆ.
ರೈತರು ತಮ್ಮ ಹೊಲಗಳಲ್ಲಿ ಕೃಷಿ ಹೊಂಡ, ಕ್ಷೇತ್ರ ಬದು, ತೋಟಗಾರಿಕೆ ಬೆಳೆ, ರೇಷ್ಮೆ ಹಾಗೂ ಅರಣ್ಯ ಬೆಳೆಗಳು ಸೇರಿದಂತೆ ಇತರೆ ವಿವಿಧ ವೈಯಕ್ತಿಕ ಕಾಮಗಾರಿಗೆ ಸಹಾಯಧನ ಸಿಗುತ್ತದೆ. ಅದೇ ರೀತಿ ಹಸು, ಕುರಿ, ಕೋಳಿ, ಹಂದಿ ಸಾಕಾಣಿಕೆ ಶೆಡ್ ನಿರ್ಮಾಣಕ್ಕೂ ಸಹಾಯಧನ ಪಡೆಯಬಹುದಾಗಿದೆ.
ಹಸು-ಎಮ್ಮೆ ಕೊಟ್ಟಿಗೆ ನಿರ್ಮಾಣಕ್ಕೆ ರೈತರಿಗೆ ನರೇಗಾ ಯೋಜನೆಯಡಿ 57,000 ರೂಪಾಯಿ ವರೆಗೂ ಸಹಾಯಧನ ಸಿಗಲಿದೆ. ಈ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ.
ಜಾನುವಾರು ಶೆಡ್ ನಿರ್ಮಾಣಕ್ಕೆ ಸಹಾಯಧನ ಎಷ್ಟು?
ಹಸು, ಕುರಿ, ಕೋಳಿ, ಹಂದಿ ಶೆಡ್ ನಿರ್ಮಾಣಕ್ಕೆ ಒಂದೊAದು ರೀತಿಯ ಸಹಾಯಧನವಿದ್ದು; ಈ ಪೈಕಿ ಹಸು, ಎಮ್ಮೆ ಕೊಟ್ಟಿಗೆ ನಿರ್ಮಾಣಕ್ಕೆ ಎಲ್ಲವರ್ಗದ ರೈತರಿಗೂ 57,000 ರೂಪಾಯಿ ನೀಡಲಾಗುತ್ತದೆ. ಈ ಮೊದಲು ಸಾಮಾನ್ಯ ವರ್ಗದ ರೈತರಿಗೆ 19,500 ಹಾಗೂ ಎಸ್‌ಸಿ/ ಎಸ್‌ಟಿ ವರ್ಗದ ರೈತರಿಗೆ 43,000 ರೂಪಾಯಿ ಸಹಾಯಧನ ಸಿಗುತ್ತಿತ್ತು.
ಇದೀಗ ಎಲ್ಲಾ ವರ್ಗದವರಿಗೂ 57,000 ರೂಪಾಯಿ ನಿಗದಿಯಾಗಿದ್ದು; ಈ ಮೊತ್ತದಲ್ಲಿ ಸುಮಾರು 10,556 ರೂಪಾಯಿ ಕೂಲಿಯಾಗಿ, ಉಳಿದ 46,644 ರೂಪಾಯಿ ಸಹಾಯಧನವಾಗಿ ಸಿಗುತ್ತದೆ. ಈ ಸಹಾಯಧನದ ಹಣವನ್ನು ಬಳಸಿಕೊಂಡು ಶೆಡ್ ನಿರ್ಮಾಣ ಮಾಡಿಕೊಳ್ಳಬಹುದು.
ಅರ್ಜಿ ಸಲ್ಲಿಸುವ ವಿಧಾನ
ಜಾಬ್ ಕಾರ್ಡ್ ಪಡೆಯುವುದು: ನೀವು ಮಹಾತ್ಮ ಗಾಂಧಿ ನರೇಗಾ ಯೋಜನೆಯ ಲಾಭ ಪಡೆಯಲು ಮೊದಲು ಜಾಬ್ ಕಾರ್ಡ್ ಹೊಂದಿರಬೇಕು. ಇಲ್ಲದಿದ್ದರೆ, ಗ್ರಾಮ ಪಂಚಾಯತಿಗೆ ಭೇಟಿ ನೀಡಿ. ಜಾಬ್ ಕಾರ್ಡ್ ಫಾರ್ಮ್ ಭರ್ತಿ ಮಾಡಿ. ಆಧಾರ್ ಕಾರ್ಡ್, ಪಾಸ್‌ಪೋರ್ಟ್ ಫೋಟೋ, ವಿಳಾಸ ದಾಖಲೆ ಸಲ್ಲಿಸಿ.
ಅರ್ಜಿಗೆ ಅಗತ್ಯ ದಾಖಲೆಗಳು: ಅರ್ಜಿಯೊಂದಿಗೆ ಕೆಳಗಿನ ದಾಖಲೆಗಳನ್ನು ನೀಡಬೇಕು:
ಜಾಬ್ ಕಾರ್ಡ್ ಪ್ರತಿಗೆ
ಆಧಾರ್ ಕಾರ್ಡ್
ಭೂಮಿಯ ದಾಖಲಾತಿ (ಪಹಣಿ/RTC)
ಬ್ಯಾಂಕ್ ಖಾತೆಯ ವಿವರಗಳು
ಪಶು ವೈದ್ಯಾಧಿಕಾರಿಗಳ ದೃಢೀಕರಣ ಪತ್ರ
ಪಶು ವೈದ್ಯರ ದೃಢೀಕರಣ : ನೀವು ಜಾನುವಾರು ಸಾಕುತ್ತಿದ್ದೀರಿ ಎಂಬುದನ್ನು ದೃಢೀಕರಿಸಲು ಸ್ಥಳೀಯ ಪಶು ಚಿಕಿತ್ಸಾಲಯಕ್ಕೆ ಹೋಗಿ, ನಿಮ್ಮ ಹಸು, ಎಮ್ಮೆಗಳ ಮಾಹಿತಿಯನ್ನು ನೀಡಿ. ಶೆಡ್ ಅಗತ್ಯವಿದೆ ಎಂಬ ದೃಢೀಕರಣ ಪತ್ರ ಪಡೆಯಿರಿ.
ಅರ್ಜಿ ಸಲ್ಲಿಕೆ: ಗ್ರಾಮ ಪಂಚಾಯತಿಗೆ ಭೇಟಿ ನೀಡಿ ಎಲ್ಲಾ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಬೇಕು. ಅರ್ಜಿ ಪರಿಶೀಲನೆಯ ನಂತರ ಸ್ಥಳದ ಪರಿಶೀಲನೆ ನಡೆದು ನಿರ್ಮಾಣ ಕಾರ್ಯ ಆರಂಭಕ್ಕೆ ಅನುಮತಿ ಸಿಗುತ್ತದೆ.
ಹೀಗೆ ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ಹಸು, ಎಮ್ಮೆ ಶೆಡ್ ನಿರ್ಮಾಣಕ್ಕೆ ₹57,000 ಸಹಾಯಧನ ಲಭ್ಯವಿದ್ದು, ಇದು ರೈತರಿಗೆ ಹಾಗೂ ಹೈನುಗಾರಿಕೆಗೆ ದೊಡ್ಡ ನೆರವಾಗುತ್ತದೆ. ಸರಳ ಅರ್ಜಿ ಪ್ರಕ್ರಿಯೆ, ಕಡಿಮೆ ದಾಖಲೆಗಳೊಂದಿಗೆ ಈ ಯೋಜನೆಯಿಂದ ರೈತರು ಹೈನುಗಾರಿಕೆಯಲ್ಲಿ ಹೆಚ್ಚಿನ ಲಾಭ ಗಳಿಸಬಹುದಾಗಿದೆ.