ಹಾವೇರಿ: ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ (ನರೇಗಾ) ಯೋಜನೆಯಡಿ ಪ್ರಸಕ್ತ ವರ್ಷದ ಕಾಮಗಾರಿಗಳಲ್ಲಿ ಮಹಿಳಾ ಉದ್ಯೋಗಿಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗುವುದು. ಜಿಲ್ಲೆಯಲ್ಲಿ ಮಹಿಳಾ ಕೂಲಿಕಾರರ ಭಾಗವಹಿಸುವಿಕೆ ಹೆಚ್ಚಿಸುವ ನಿಟ್ಟಿನಲ್ಲಿ ದುಡಿಯೋಣ ಬಾ, ನರೇಗಾ ಮತ್ತು ಸ್ತ್ರೀ ಚೇತನ ಆಂದೋಲನ ಹಮ್ಮಿಕೊಳ್ಳಲಾಗಿದೆ. ನರೇಗಾ ಕೂಲಿ ಹಣ 7.11 ಕೋಟಿ ಬಾಕಿ ಉಳಿದಿದೆ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಾಹಣಾಧಿಕಾರಿ ರುಚಿ ಬಿಂದಲ್ ತಿಳಿಸಿದರು.
ನಗರದ ಜಿಲ್ಲಾ ಪಂಚಾಯಿತಿ ಕಚೇರಿಯಲ್ಲಿ ಸೋಮವಾರ ಸುದ್ದಿಗೊಷ್ಠಿಯಲ್ಲಿ ಮಾತನಾಡಿದ ಅವರು, ಈ ವರ್ಷ ಮಹಿಳೆಯರನ್ನು ಜಿಲ್ಲೆಯ ವಿವಿಧ ಉದ್ಯೋಗಗಳಲ್ಲಿ ಭಾಗವಹಿಸುವಿಕೆಗೆ ಹೆಚ್ಚಿನ ಆದ್ಯತೆ ನೀಡಲಾಗುವುದು. ಪ್ರತಿಶತ 50ರಿಂದ 60ರಷ್ಟು ಮಹಿಳೆಯರಿಗೆ ಉದ್ಯೋಗಾವಕಾಶ ನೀಡುವ ಗುರಿ ಹೊಂದಲಾಗಿದೆ. ಹಾಗೆಯೇ ಸಕ್ರಿಯ ಮಹಿಳಾ ಒಕ್ಕೂಟಗಳ ಚಟುವಟಿಕೆಗಳಿಗೆ ಅನುಕೂಲವಾಗುವಂತೆ ಸುಮಾರು 175 ಗ್ರಾಮ ಪಂಚಾಯಿತಿಗಳಲ್ಲಿ ಎನ್.ಆರ್.ಎಲ್.ಎಂ ಶೆಡ್ ನಿರ್ಮಾಣ ಮಾಡುವ ಗುರಿ ಹೊಂದಲಾಗಿದೆ. ಇದರಿಂದ ಸಾರ್ವಜನಿಕರು ತ್ವರಿತಗತಿಯಲ್ಲಿ ಸರ್ಕಾರದ ಪ್ರಯೋಜನೆಗಳನ್ನು ಪಡೆದುಕೊಳ್ಳಲು ಸಹಯಕಾರಿಯಾಗಲಿದೆ ಎಂದು ತಿಳಿಸಿದರು.
ಜಿಲ್ಲೆಯಲ್ಲಿ 2024-25ನೇ ಸಾಲಿನಲ್ಲಿ ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿಯಲ್ಲಿ 46 ಲಕ್ಷ ಮಾನವ ದಿನಗಳ ಸೃಜನೆಯ ಗುರಿಗೆ 42.43 ಲಕ್ಷ ಮಾನವ ದಿನಗಳ ಸೃಜನೆ ಮಾಡಿದೆ. ಜಿಲ್ಲೆಯ 162 ಗ್ರಾಮ ಪಂಚಾಯಿತಿಗಳಲ್ಲಿ 162 ಕೂಸಿನ ಮನೆ (ಶಿಶು ಪಾಲನಾ ಕೇಂದ್ರ)ಗಳನ್ನು ಸ್ಥಾಪಿಸಲಾಗಿದ್ದು, ಇದರಿಂದ 3,010 ಮಕ್ಕಳು ಪ್ರಯೋಜನ ಪಡೆದಿದ್ದಾರೆ. ಕೆಲವೆಡೆ ಕೂಸಿನ ಮೆನೆಯ ಮೇಲೆ ಆರೋಪಗಳಿದ್ದು ಪರಿಶೀಲಿಸಲಾಗುವುದು ಎಂದರು.
ಬೂದು ನೀರು ನಿರ್ವಹಣೆ :
ಜಿಲ್ಲೆಯ ಎಲ್ಲ ಗ್ರಾಮ ಪಂಚಾಯಿತಿಗಳಲ್ಲಿ ನರೇಗಾ ಸಹಭಾಗಿತ್ವದೊಂದಿಗೆ ಬೂದು ನೀರು ನಿರ್ವಹಣಾ ಘಟಕಗಳನ್ನು ಆಯಾ ಗ್ರಾಮಗಳ ಪರಿಸ್ಥಿತಿಗೆ ಅನುಗುಣವಾಗಿ ಅನುಷ್ಠಾನಗೊಳಿಸಲಾಗುತ್ತಿದೆ. ಜಿಲ್ಲೆಯ 223 ಗ್ರಾಮ ಪಂಚಾಯಿತಿಗಳಿಂದ 688 ಗ್ರಾಮಗಳಲ್ಲಿ 303 ಬೂದು ನಿರ್ವಹಣಾ ಘಟಕಗಳು ಮುಕ್ತಾಯಗೊಳಿಸಿದ್ದು, ಎಲ್ಲ ಬೂದುಗಳು ಕಾರ್ಯನಿರ್ವಹಿಸುತ್ತಿವೆ. ಬಾಕಿ ಉಳಿದ ಗ್ರಾಮಗಳಲ್ಲಿ ಕಾಮಗಾರಿಗಳನ್ನು ಕೈಗೊಳ್ಳಲು ಎಲ್ಲ ರೀತಿಯ ಕ್ರಮ ವಹಿಸಲಾಗಿದೆ ಎಂದರು.
12 ಸಾವಿರ ವೈಯಕ್ತಿಕ ಶೌಚಗೃಹ ನಿರ್ಮಾಣ
ಸ್ವಚ್ಛ ಭಾರತ ಮಿಷನ್ ಅಡಿಯಲ್ಲಿ ಗ್ರಾಮೀಣ ಪ್ರದೇಶಗಳಲ್ಲಿ ಕಳೆದ ಸಾಲಿನಲ್ಲಿ 17,957 ಶೌಚಗೃಹ ನಿರ್ಮಾಣದ ಗುರಿ ಹೊಂದಲಾಗಿತ್ತು. ಅದರಲ್ಲಿ 12,048 ಫಲಾನುಭವಿಗಳು ವೈಯಕ್ತಿಕ ಶೌಚಗೃಹ ನಿರ್ಮಿಸಿಕೊಂಡಿದ್ದಾರೆ. ಬೇಡಿಕೆಗೆ ಅನುಸಾರವಾಗಿ ಇನ್ನೂ ಹೆಚ್ಚಿನ ಶೌಚಗೃಹಗಳನ್ನು ನಿರ್ಮಿಸಲು ಪ್ರಯತ್ನಿಸಲಾಗುವುದು ಎಂದರು ರುಚಿ ಬಿಂದಲ್.
ಮನೆ ಮನೆಗೆ ಸ್ವಚ್ಛ ವಾಹಿನಿ
ಜಿಲ್ಲೆಯ ಗ್ರಾಮೀಣ ಪ್ರದೇಶಗಳನ್ನು ಸ್ವಚ್ಛ ಸುಂದರ ಮಾಡುವ ನಿಟ್ಟಿನಲ್ಲಿ 223 ಗ್ರಾಮ ಪಂಚಾಯಿತಿಗಳಿಗೆ ಕಸ ಸಂಗ್ರಹಣೆಗಾಗಿ ಸ್ವಚ್ಛ ವಾಹಿನಿಯನ್ನು ಒದಗಿಸಲಾಗಿದೆ. ಪ್ರತಿ ಗ್ರಾಮದಲ್ಲಿಯೂ ಮನೆ ಮನೆಗೆ ತೆರಳಿ ಕಸ ಸಂಗ್ರಹಣೆ ಮಾಡಲಾಗುತ್ತದೆ ಮತ್ತು ಮನೆಯಲ್ಲಿನ ಕಸವನ್ನು ಬೀದಿಗೆ ಎಸೆಯದಂತೆ ಸಾರ್ವಜನಿಕರಲ್ಲಿ ಅರಿವು ಮೂಡಿಸಲಾಗುತ್ತಿದೆ ಹಾಗೂ ಸ್ವಚ್ಛ ವಾಹಿನಿ ವಾಹನ ಚಾಲನೆಗೆ ಸ್ವ ಸಹಾಯ ಸಂಘದ ಮಹಿಳಾ ವಾಹನ ಚಾಲಕರನ್ನು ನೇಮಿಸಿಕೊಳ್ಳಲಾಗಿದೆ. ಈವರೆಗೂ 198 ಮಹಿಳೆಯರಿಗೆ ವಾಹನ ಚಾಲನಾ ತರಬೇತಿ ನೀಡಲಾಗಿದೆ ಎಂದು ಜಿಪಂ ಸಿಇಒ ಹೇಳಿದರು.
ಎನ್‌ಆರ್‌ಎಂಎಲ್ ಸಂಜೀವಿನಿ
2024-25ನೇ ಸಾಲಿನ ಸಮುದಾಯ ಬಂಡವಾಳ ನಿಧಿ (ಎನ್‌ಆರ್‌ಎಂಎಲ್) 35 ಕೋಟಿ ರೂ. ಮೊತ್ತವನ್ನು 2,334 ಸ್ವ-ಸಹಾಯ ಗುಂಪುಗಳಿಗೆ ಬಿಡುಗಡೆ ಮಾಡಲಾಗಿದೆ. ವಿವಿಧ ಜೀವನೋಪಾಯ ಆರ್ಥಿಕ ಚಟುವಟಿಕೆಗಳನ್ನು ಕೈಗೊಳ್ಳಲು 5,850 ಸಂಜೀವಿನಿ ಸ್ವ-ಸಹಾಯ ಸಂಘಗಳಿಗೆ ಸಮುದಾಯ ಬಂಡವಾಳ ನಿಧಿ ಒಟ್ಟು 8.7 ಕೋಟಿ ನೀಡಲಾಗಿದೆ. ಜಿಲ್ಲೆಯಲ್ಲಿ 325 ಸಂಜೀವಿನಿ ಸ್ವಸಹಾಯ ಸಂಘಗಳ ಸದಸ್ಯರಿಗೆ ಪ್ರಧಾನಮಂತ್ರಿ ಕಿರು ಆಹಾರ ಸಂಸ್ಕರಣಾ ಉದ್ದಿಮೆಗಳ ಔಪಚಾರೀಕರಣ ಯೋಜನೆಯಡಿಯಲ್ಲಿ ತಲಾ 40,000 ರೂ,ನಂತೆ ಒಟ್ಟು 13 ಕೋಟಿ. ನೀಡಲಾಗಿದೆ ಎಂದರು ಸಿಇಒ.
ವಸತಿ ಯೋಜನೆ ಸಮೀಕ್ಷೆ
ಜಿಲ್ಲೆಯಲ್ಲಿ ಪ್ರಧಾನ ಮಂತ್ರಿ ಆವಾಸ ಯೋಜಯಡಿ ಗ್ರಾಮೀಣ ಪ್ರದೇಶದಲ್ಲಿ ವಸತಿ ಹಾಗೂ ನಿವೇಶನ ರಹಿತರಿಗೆ ವಸತಿ ಸೌಲಭ್ಯ ಒದಗಿಸುವ ಉದ್ದೇಶ ಹೊಂದಲಾಗಿದೆ. ಈ ನಿಟ್ಟಿನಲ್ಲಿ ಗ್ರಾಮ ಪಂಚಾಯಿತಿ ಹಂತದಲ್ಲಿ ವ್ಯಾಪಕವಾಗಿ ಪ್ರಚಾರ ನಡೆಸಿ, ವೈಜ್ಞಾನಿಕವಾಗಿ ಸಮೀಕ್ಷೆ ನಡೆಸಲು ಪ್ರತಿ ಗ್ರಾಮ ಪಂಚಾಯಿತಿಗೆ ಮೂರು ಜನ ಸಮೀಕ್ಷೆದಾರರನ್ನು ನೇಮಿಸಲಾಗಿದೆ. ಈವರೆಗೆ 50,809 ಕುಟುಂಬಗಳ ಸಮೀಕ್ಷೆ ನಡೆಸಲಾಗಿದೆ. ಸಮೀಕ್ಷೆ ಪೂರ್ಣಗೊಂಡ ಬಳಿಕ ಹೊಸ ಹೆಸರು ಸೇರ್ಪಡೆಗಾಗಲೀ, ತೆಗೆದುಹಾಕಲು ಅವಕಾಶ ಇರುವುದಿಲ್ಲ. ಮೇ 15ರಂದು ಸಮೀಕ್ಷೆ ಅಂತಿಮಗೊಳ್ಳಲಿದೆ ಎಂದು ಸಿಇಒ ರುಚಿ ಬಿಂದಲ್ ತಿಳಿಸಿದರು.
32 ಕೋಟಿ ತೆರಿಗೆ ವಸೂಲಾತಿ
2024-25ನೇ ಸಾಲಿನಲ್ಲಿ ತೆರಿಗೆ ವಸೂಲಾತಿಯ ಪ್ರಸ್ತುತ ಬೇಡಿಕೆ 37.49 ಕೋಟಿ ರೂ. ಇದೆ. ಮಾರ್ಚ್ 2025ರ ಅಂತ್ಯಕ್ಕೆ 32.22 ಕೋಟಿ ರೂ. ತೆರಿಗೆ ವಸೂಲಾತಿ ಆಗಿದ್ದು, ಶೇ.85.93ರಷ್ಟು ಪ್ರಗತಿ ಸಾಧಿಸಲಾಗಿದೆ. ಮುಂದಿನ ದಿನಗಳಲ್ಲಿ ತೆರಿಗೆ ವಸೂಲಾತಿಗೆ ಹೆಚ್ಚು ಒತ್ತು ನೀಡಲಾಗುವುದು ಎಂದರು ರುಚಿ ಬಿಂದಲ್.