Bajaj CNG Bike: ಬಜಾಜ್ ಸಿಎನ್‌ಜಿ ಬೈಕ್‌ಗೆ ಫುಲ್ ಡಿಮ್ಯಾಂಡ್: 330 ಕಿ.ಮೀ ಮೈಲೇಜ್

Bajaj CNG Bike: ಬಜಾಜ್ ಕಂಪನಿಯು ವಿಶ್ವದ ಮೊದಲ ಸಿಎನ್‌ಜಿ ಬೈಕ್ ಪರಿಚಯಿಸುವ ಮೂಲಕ ದ್ವಿಚಕ್ರ ವಾಹನ ವಲಯದಲ್ಲಿ ಹೊಸ ಅಲೆ ಎಬ್ಬಿಸಿತ್ತು. ಆರಂಭದಲ್ಲಿ ಭಾರೀ ನಿರೀಕ್ಷೆಗಳೊಂದಿಗೆ ಎಂಟ್ರಿ ಕೊಟ್ಟಿದ ಬಜಾಜ್ ಫ್ರೀಡಂ 125 ಸಿಎನ್‌ಜಿ (Bajaj Freedom 125 CNG) ಬೈಕ್, ನಂತರದ ದಿನಗಳಲ್ಲಿ ನಿಧಾನವಾಗಿ ಬೇಡಿಕೆ ಕಳೆದುಕೊಂಡಿತ್ತು. ಆದರೆ ಈಗ ಅಚ್ಚರಿಗೊಳಿಸುವಂತೆ ಮಾರಾಟದಲ್ಲಿ ಮುನ್ನುಗ್ಗುತ್ತಿದೆ. ಬಜಾಜ್ ಕಂಪನಿಯು ಜುಲೈ 2024 ರಲ್ಲಿ ಫ್ರೀಡಂ 125 ಸಿಎನ್‌ಜಿ ಬೈಕ್ ಬಿಡುಗಡೆ ಮಾಡಿತ್ತು. ಇದೀಗ ಕಳೆದ ಏಪ್ರಿಲ್‌ಗೆ ವಾಹನ ಬಂದು ಒಂಬತ್ತು ತಿಂಗಳು ಪೂರ್ಣಗೊಂಡಿದ್ದು, ಇಲ್ಲಿಯವರೆಗೆ ಬರೋಬ್ಬರಿ 50,000 ಬೈಕ್‌ಗಳು ಮಾರಾಟವಾಗಿವೆ ಎಂದು ವರದಿಯಾಗಿದೆ.

ಫ್ರೀಡಂ 125 ಸಿಎನ್‌ಜಿ ಮೋಟಾರ್ ಸೈಕಲ್ ಎಲ್ಲಾ ರೀತಿಯ ಗ್ರಾಹಕರಿಗಾಗಿ ಅಲ್ಲ, ಬದಲಿಗೆ ನಿರ್ದಿಷ್ಟ ಬಳಕೆದಾರರಿಗಾಗಿ ವಿನ್ಯಾಸಗೊಳಿಸಲಾಗಿದೆ. ಸಿಎನ್‌ಜಿ ಮೂಲಸೌಕರ್ಯ ಹೊಂದಿರುವ ಪ್ರದೇಶಗಳಲ್ಲಿ ಇದಕ್ಕೆ ಬಲವಾದ ಮಾರಾಟ ವ್ಯಕ್ತವಾಗಿದೆ. ಮಹಾರಾಷ್ಟ್ರ, ಗುಜರಾತ್ ಮತ್ತು ದೆಹಲಿಯಂತಹ ಪ್ರದೇಶಗಳಲ್ಲಿ ಈ ಬೈಕ್ ಹೆಚ್ಚು ಮಾರಾಟವಾಗುತ್ತಿದೆ ಎಂದು ತಿಳಿದುಬಂದಿದೆ.

ಫ್ರೀಡಂ 125 ಕಡಿಮೆ ಚಾಲನೆಯ ವೆಚ್ಚವನ್ನು ನೀಡುತ್ತದೆ, ಪೆಟ್ರೋಲ್ ಬೈಕುಗಳಿಗೆ ಹೋಲಿಸಿದರೆ ಇಂಧನ ವೆಚ್ಚವು ಅರ್ಧದಷ್ಟು ಕಡಿಮೆಯಿರುತ್ತದೆ. ಹೆಚ್ಚಿನ ಮೈಲೇಜ್ ಬಯಸುವ ಪ್ರಯಾಣಿಕರಿಗೆ ಇದು ಹೇಳಿಮಾಡಿಸಿದ ಬೈಕ್ ಆಗಿದೆ. ಪ್ರತಿದಿನ 50 ಕಿ.ಮೀ ಪ್ರಯಾಣಿಸುವ ಸವಾರರು ತಿಂಗಳಿಗೆ 1,000 ರೂ.ಗಿಂತ ಹೆಚ್ಚು ಹಣ ಉಳಿಸಬಹುದು ಎಂದು ಕಂಪನಿ ಹೇಳಿದೆ.

ಬಜಾಜ್ ಫ್ರೀಡಂ 125 ಸಿಎನ್‌ಜಿ ವಿಶೇಷತೆಗಳು: ಈ ಬೈಕ್ CNG ಹಾಗೂ ಪೆಟ್ರೋಲ್ ಎರಡರಲ್ಲೂ ಚಲಿಸಬಲ್ಲದು, ಇದಕ್ಕಾಗಿ ಕಂಪನಿ ಬೈಕ್‌ನಲ್ಲಿ 2 ಕೆ.ಜಿ CNG ಟ್ಯಾಂಕ್ ಮತ್ತು 2 ಲೀ. ಸಾಮರ್ಥ್ಯದ ಪೆಟ್ರೋಲ್ ಟ್ಯಾಂಕ್ ಅನ್ನು ನೀಡಿದೆ. ಕಂಪನಿಯ ಪ್ರಕಾರ, CNG ಮೋಡ್‌ನಲ್ಲಿ 90 ಕಿ.ಮೀ ವೇಗ ಮತ್ತು ಪೆಟ್ರೋಲ್‌ ಮೋಡ್‌ನಲ್ಲಿ 93.4 ಕಿ.ಮೀ ಗರಿಷ್ಟ ವೇಗದಲ್ಲಿ ಚಲಿಸುವ ಸಾಮರ್ಥ್ಯವನ್ನು ಹೊಂದಿದೆ.

ಕಂಪನಿಯ ಪ್ರಕಾರ ಬಜಾಜ್ ಫ್ರೀಡಂ 125 ಬೈಕ್, ಪ್ರತಿ ಕೆ.ಜಿ ಸಿಎನ್‌ಜಿಗೆ 102 ಕಿ.ಮೀ ಮೈಲೇಜ್ ನೀಡುತ್ತದೆ. ಹಾಗೆಯೇ ಇದರಲ್ಲಿ ಪೆಟ್ರೋಲ್ ಆಯ್ಕೆ ಕೂಡ ಇದ್ದು, ಪ್ರತಿ ಲೀಟರ್ ಪೆಟ್ರೋಲ್‌ನಲ್ಲಿ 65 ಕಿ.ಮೀ ಮೈಲೇಜ್ ನೀಡುತ್ತದೆ. ಒಮ್ಮೆ ಪೆಟ್ರೋಲ್ ಹಾಗೂ ಸಿಎನ್‌ಜಿ ಟ್ಯಾಂಕ್‌ಗಳನ್ನು ಪೂರ್ಣ ತುಂಬಿಸಿದರೆ ಸುಮಾರು 330 ಕಿ.ಮೀ ಮೈಲೇಜ್ ಪಡೆಯಬಹುದು ಎಂದು ಕಂಪನಿ ತಿಳಿಸಿದೆ.

ಬೈಕ್‌ನಲ್ಲಿ ಸಿಎನ್‌ಜಿ ಖಾಲಿಯಾದರೆ ಪೆಟ್ರೋಲ್ ಅನ್ನು ಸಹಾಯಕ ಇಂಧನವಾಗಿ ಬಳಸಬಹುದು. ಅಲ್ಲಿಗೆ ವಾಸ್ತವಿಕವಾಗಿ ಈ ಬೈಕ್ ಸುಮಾರು 200 ಕಿ.ಮೀ ಮಾತ್ರ ಸಿಎನ್‌ಜಿ ಮೂಲಕ ಮೈಲೇಜ್ ಪಡೆಯಬಹುದು. ಹಾಗೆಯೇ 2 ಲೀಟರ್ ಪೆಟ್ರೋಲ್‌ನಿಂದ 130 ಕಿ.ಮೀ ಮೈಲೇಜ್ ಪಡೆಯಬಹುದು.

bajaj-freedom-125-cng-motorcycle-crossed-50000-sales

ಬೈಕ್ ಒಟ್ಟು ಮೂರು ವೇರಿಯೆಂಟ್‌ಗಳನ್ನು ಹೊಂದಿದ್ದು, ಬೇಸ್‌ ವೇರಿಯೆಂಟ್ ಬೆಲೆ ರೂ.95,000 (ಎಕ್ಸ್ ಶೋರೂಂ) ದಿಂದ ಆರಂಭವಾಗುತ್ತದೆ. ಬಜಾಜ್ ಫ್ರೀಡಂ ಡಿಸ್ಕ್ LED ವೇರಿಯೆಂಟ್ ಬೆಲೆಯು 1.10 ಲಕ್ಷ ರೂ. (ಎಕ್ಸ್ ಶೋರೂಂ) ಇದೆ. ಬಜಾಜ್ ಫ್ರೀಡಂ ಡ್ರಮ್ LED ಬೆಲೆಯು 1.05 ಲಕ್ಷ ರೂ. (ಎಕ್ಸ್ ಶೋರೂಂ) ಇದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್‌ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Previous Post Next Post