ಮಹಿಳೆಯರಿಗಾಗಿ ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮವು (KSWDC) ಹಲವು ಸಾಲ ಮತ್ತು ಸಬ್ಸಿಡಿ ಯೋಜನೆಗಳನ್ನು (Loan and subsidy scheme) ಜಾರಿಗೊಳಿಸಿದೆ. ಈ ಕುರಿತ ಮಾಹಿತಿ ಇಲ್ಲಿದೆ.
ಮಹಿಳೆಯರನ್ನು ಆರ್ಥಿಕವಾಗಿ ಸುಭದ್ರವಾಗಿಸುವ, ಉದ್ಯೋಗ ಮತ್ತು ಉದ್ದಿಮೆ ಕ್ಷೇತ್ರಗಳಿಗೆ ಸೆಳೆದು ಅವರಿಗೆ ಸ್ವತಂತ್ರ ಬದುಕು ಕಟ್ಟಿಕೊಡುವ ನಿಟ್ಟಿನಲ್ಲಿ ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮ (Karnataka State Women’s Development Corporation – KSWDC) ಹಲವು ಸಾಲ ಮತ್ತು ಸಹಾಯಧನ ಯೋಜನೆಗಳನ್ನು ರೂಪಿಸಿ ಜಾರಿಗೆ ತಂದಿದೆ.
ಈ ಯೋಜನೆಗಳು ರಾಜ್ಯದ ವಿವಿಧ ಹಿನ್ನಲೆಗಳಿಂದ ಬಂದ ಮಹಿಳೆಯರಿಗೆ ಆಧಾರವಾಗುತ್ತಿವೆ. ಸಾಮಾನ್ಯ ವರ್ಗದಿಂದ ಹಿಡಿದು ಪರಿಶಿಷ್ಟ ಜಾತಿ/ಪಂಗಡ, ದಮನಿತರು, ಲಿಂಗತ್ವ ಅಲ್ಪಸಂಖ್ಯಾತರು, ಮಾಜಿ ದೇವದಾಸಿಯವರ ವರೆಗೆ ಎಲ್ಲರಿಗೂ ಪ್ರತ್ಯೇಕವಾಗಿ ವಿನ್ಯಾಸಗೊಳಿಸಿರುವ ಯೋಜನೆಗಳಿವೆ.
ಈ ಎಲ್ಲ ಯೋಜನೆಗಳ ಪ್ರಮುಖ ಗುರಿ ಮಹಿಳೆಯರ ಸ್ವಯಂ ಉದ್ಯೋಗಕ್ಕೆ ಪ್ರೋತ್ಸಾಹ ನೀಡುವುದು, ಅವರ ಆರ್ಥಿಕ ಸ್ಥಿರತೆ, ಆತ್ಮವಿಶ್ವಾಸ ಹೆಚ್ಚಿಸುವುದು, ಸ್ವಂತ ಉದ್ಯಮ ಆರಂಭಿಸಲು ಬೇಕಾದ ಮೊತ್ತದಲ್ಲಿ ಸಾಲ ಹಾಗೂ ಉಚಿತ ಸಹಾಯಧನ ನೀಡುವುದು ಹಾಗೂ ಅವರ ಸಾಮಾಜಿಕ ಪುನರ್ವಸತಿಗೆ ನೆರವಾಗುವುದಾಗಿದೆ.
ಉದ್ಯೋಗಿನಿ ಯೋಜನೆ
ಮಹಿಳೆಯರು ಸ್ವಂತ ಉದ್ಯಮ ಆರಂಭಿಸಲು ಬ್ಯಾಂಕುಗಳ ಮೂಲಕ ಸಾಲ ಪಡೆಯಲು ಸಹಾಯ ಮಾಡುವುದು ಮತ್ತು ಸಹಾಯಧನ ನೀಡುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ.
₹1.5 ಲಕ್ಷ ವಾರ್ಷಿಕ ಆದಾಯ ಮಿತಿಯಲ್ಲಿರುವ ಕನಿಷ್ಠ 18 ವರ್ಷ ವಯಸ್ಸಿನ ಮೇಲ್ಪಟ್ಟ ನಗರ ಮತ್ತು ಗ್ರಾಮೀಣ ಪ್ರದೇಶದ ಮಹಿಳೆಯರು ಅರ್ಜಿ ಸಲ್ಲಿಸಬಹುದು. ಸಾಮಾನ್ಯ ವರ್ಗದ ಮಹಿಳೆಯರಿಗೆ ಘಟಕ ವೆಚ್ಚ ಗರಿಷ್ಠ ₹3 ಲಕ್ಷ ಸಾಲ ಸೌಲಭ್ಯ ನೀಡಲಾಗುತ್ತದೆ. ಇದರಲ್ಲಿ ಶೇ.30ರಷ್ಟು ಸಹಾಯಧನ ಸಿಗಲಿದೆ.
ಇನ್ನು ವಾರ್ಷಿಕ ₹2 ಲಕ್ಷ ಆದಾಯ ಮಿತಿಯಲ್ಲಿರುವ ಪರಿಶಿಷ್ಟ ಜಾತಿ / ಪಂಗಡ ಮಹಿಳೆಯರಿಗೆ ಘಟಕ ವೆಚ್ಚವಾಗಿ ₹1 ಲಕ್ಷದಿಂದ ₹3 ಲಕ್ಷದ ವರೆಗೆ ಸಾಲ ಸೌಲಭ್ಯ ನೀಡಲಿದ್ದು; ಇದರಲ್ಲಿ ಶೇ.50ರಷ್ಟು ಸಹಾಯಧನ ಸಿಗಲಿದೆ.
ಸಾಲ ನೀಡುವ ವಿಧಾನ: ಬ್ಯಾಂಕುಗಳ ಮುಖಾಂತರ ಸಾಲ ನೀಡಲಾಗುತ್ತದೆ, ನಿಗಮದ ಮೂಲಕ ಸಹಾಯಧನ ನೇರವಾಗಿ ಬ್ಯಾಂಕ್ ಖಾತೆಗೆ ಜಮೆಯಾಗುತ್ತದೆ.
ಚೇತನ ಯೋಜನೆ
ಇದು ದಮನಿತ ಅಥವಾ ಸಾಮಾಜಿಕವಾಗಿ ಹಿಂದುಳಿದ ಮಹಿಳೆಯರಿಗೆ ಸ್ವಾವಲಂಬಿ ಬದುಕಿಗೆ ಉತ್ತೇಜನ ನೀಡುವ ವಿಶೇಷ ಯೋಜನೆಯಾಗಿದೆ. ಈ ಯೋಜನೆಯಡಿ ಅರ್ಹ ಮಹಿಳೆಯರಿಗೆ ₹30,000 ಪ್ರೋತ್ಸಾಹಧನ ನೇರವಾಗಿ ಲಭ್ಯವಾಗುತ್ತದೆ.
ಯಾವುದೇ ರೀತಿಯ ಉದ್ದಿಮೆ ಅಥವಾ ಉದ್ಯಮ ಆರಂಭಿಸಲು ಬಯಸುವ ಕನಿಷ್ಠ 18 ವರ್ಷ ಮೇಲ್ಪಟ್ಟ ವಯಸ್ಸಿನ ಮಹಿಳೆಯರು ಈ ಯೋಜನೆಯಡಿ ಅರ್ಜಿ ಸಲ್ಲಿಸಬಹುದಾಗಿದೆ.
ಧನಶ್ರೀ ಯೋಜನೆ
ಸಾಮಾನ್ಯ ಮಹಿಳೆಯರಿಗೆ ಉದ್ದಿಮೆ ಪ್ರಾರಂಭಿಸಲು ಪ್ರೋತ್ಸಾಹ ನೀಡುವ ಉದ್ದೇಶದಿಂದ ಕರ್ನಾಟಕ ಸರ್ಕಾರ ಮಹಿಳಾ ನಿಗಮದ ಮೂಲಕ ಧನಶ್ರೀ ಯೋಜನೆ ಅನುಷ್ಠಾನಗೊಳಿಸಿದೆ.
ಸ್ಥಳೀಯವಾಗಿ ಉದ್ದಿಮೆ ಆರಂಭಿಸಬಯಸುವವರಿಗೆ ಈ ಯೋಜನೆಯಡಿ ₹30,000 ರೂ. ಪ್ರೋತ್ಸಾಹಧನ ಸಿಗಲಿದೆ. 18 ರಿಂದ 60 ವರ್ಷ ವಯಸ್ಸಿನ ಮಹಿಳೆಯರು ಅರ್ಜಿ ಸಲ್ಲಿಸಬಹುದಾಗಿದೆ.
ಲಿಂಗತ್ವ ಅಲ್ಪಸಂಖ್ಯಾತರ ಪುನರ್ವಸತಿ ಯೋಜನೆ
ಲಿಂಗತ್ವ ಅಲ್ಪಸಂಖ್ಯಾತರು ಅಂದೆ ಮಂಗಳಮುಖಿಯರಿಗೆ ಆದಾಯೋತ್ಪನ್ನ ಚಟುವಟಿಕೆ ಆರಂಭಿಸಲು ಆರ್ಥಿಕ ನೆರವು ನೀಡುವುದು ಈ ಯೋಜನೆಯ ಉದ್ದೇಶ. ₹30,000 ಉಚಿತ ಧನಸಹಾಯ ಸಿಗಲಿದ್ದು; ಸ್ವಾವಲಂಬಿ ಉದ್ಯಮಕ್ಕೆ ಇಚ್ಛಾಶಕ್ತಿ ಇರುವ ಲಿಂಗತ್ವ ಅಲ್ಪಸಂಖ್ಯಾತರು (Transgender individuals) ಇದರ ಪ್ರಯೋಜನ ಪಡೆಯಬಹುದು.
ಮಾಜಿ ದೇವದಾಸಿ ಪುನರ್ವಸತಿ ಯೋಜನೆ
1993-94 ಮತ್ತು 2007-08ರ ಸರ್ವೇನಲ್ಲಿ ಗುರುತಿಸಲಾದ ಮಾಜಿ ದೇವದಾಸಿ ಮಹಿಳೆಯರಿಗೆ ಪುನರ್ವಸತಿ ಮೂಲಕ ಗೌರವಯುತ ಬದುಕು ನೀಡುವ ಉದ್ದೇಶದಿಂದ ಮಾಜಿ ದೇವದಾಸಿ ಪುನರ್ವಸತಿ ಯೋಜನೆ ಜಾರಿಗೊಳಿಸಲಾಗಿದೆ.
ಆದಾಯೋತ್ಪನ್ನ ಚಟುವಟಿಕೆ ಕೈಗೊಳ್ಳಲು ಇಚ್ಛಿಸುವ, ಸರ್ಕಾರದ ದಾಖಲೆಗಳಲ್ಲಿ ಮಾಜಿ ದೇವದಾಸಿ ಎಂದು ಗುರುತಿಸಲಾದ ಮಹಿಳೆಯರು ಈ ಯೋಜನೆಯಡಿ ₹30,000 ರೂ. ಉಚಿತ ಸಹಾಯಧನ ಪಡೆಯಬಹುದಾಗಿದೆ.
ಅರ್ಜಿಯ ಪ್ರಕ್ರಿಯೆ ಹೇಗೆ?
ಮೇಲ್ಕಾಣಿಸಿದ ಎಲ್ಲಾ ಯೋಜನೆಗಳಿಗೆ ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮವು ಪ್ರತಿವರ್ಷ ನವೆಂಬರ್-ಡಿಸೆAಬರ್ ತಿಂಗಳಲ್ಲಿ ಅರ್ಜಿ ಆಹ್ವಾನಿಸಲಾಗುತ್ತದೆ. ಸರ್ಕಾರಿ ಸೇವಾ ಸಿಂಧು ಪೋರ್ಟಲ್ ಬಳಸಿಕೊಂಡು ಆನ್‌ಲೈನ್ ಮೂಲಕ ಅರ್ಜಿಸಲ್ಲಿಸಲು ಅವಕಾಶವಿರುತ್ತದೆ. ಹತ್ತಿರ ಬಾಪೂಜಿ ಸೇವಾ ಕೇಂದ್ರ, ಗ್ರಾಮ ಒನ್, ಕರ್ನಾಟಕ ಒನ್, ಬೆಂಗಳೂರು ಒನ್ ಕೇಂದ್ರಗಳಲ್ಲಿ ಅರ್ಜಿ ಸಲ್ಲಿಸಬಹುದು.
ಈ ಯೋಜನೆಗಳು ಮಹಿಳೆಯರ ಜೀವನವನ್ನು ಬದಲಾಯಿಸಬಲ್ಲ ಶಕ್ತಿ ಹೊಂದಿವೆ. ನಿಮಗೆ ತಕ್ಕ ಯೋಜನೆ ಆಯ್ಕೆ ಮಾಡಿ, ಅಗತ್ಯ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಿ. ಸರ್ಕಾರದ ಸಹಾಯದಿಂದ ನಿಮ್ಮ ಕನಸಿನ ಉದ್ಯಮ ಪ್ರಾರಂಭಿಸಿ, ಆತ್ಮವಿಶ್ವಾಸದಿಂದ ಮುನ್ನಡೆದುಕೊಳ್ಳಿ. ಅರ್ಜಿ ಸಲ್ಲಿಕೆ ಕುರಿತ ಅಪ್ಡೇಟ್’ಗಳಿಗೆ ಮಾಹಿತಿ ಮನೆ ಅನುಸರಿಸಿ.
ನಿಗಮದ ವೆಬ್‌ಸೈಟ್: kswdc.karnataka.gov.in