ಈ ಯೋಜನೆಯ ಮೊದಲ ಹಂತದಲ್ಲಿ ಹಲವು ಮನೆಗಳನ್ನು ವಿತರಿಸಲಾಗಿದ್ದು, ಈಗ 2ನೇ ಹಂತದಲ್ಲಿ 42,000ಕ್ಕೂ ಹೆಚ್ಚು ಮನೆಗಳನ್ನು ಹಂಚಿಕೆ ಮಾಡಲಾಗುತ್ತಿದೆ. ವಸತಿ ಸಚಿವ ಜಮೀರ್ ಅಹ್ಮದ್ ಖಾನ್ ಈ ಕುರಿತಂತೆ ಮಾಹಿತಿ ಹಂಚಿಕೊ೦ಡಿದ್ದಾರೆ.
ಏನಿದು ಸರ್ವರಿಗೂ ಸೂರು ಯೋಜನೆ?
ಭಾರತದ ಸರ್ಕಾರದ ವಸತಿ ಮತ್ತು ನಗರ ಬಡತನ ನಿರ್ಮೂಲನ ಮಂತ್ರಾಲಯವು 2015ರಲ್ಲಿ ಪ್ರಧಾನ ಮಂತ್ರಿ ಆವಾಸ್ ಯೋಜನೆ ‘ಸರ್ವರಿಗೂ ಸೂರು’ (Housing for All Mission) ಎಂಬ ನೂತನ ಅಭಿಯಾನವನ್ನು ಆರಂಭಿಸಿದೆ. ಈ ಅಭಿಯಾನದಡಿ ಈಗಾಗಲೇ ಹಲವು ಅರ್ಹರಿಗೆ ಉಚಿತ ಮನೆ ವಿತರಿಸಲಾಗಿದೆ.
ರಾಜ್ಯ ಮತ್ತು ಕೇಂದ್ರ ಸರ್ಕಾರದ ಸಹಭಾಗಿತ್ವದ ‘ಸರ್ವರಿಗೂ ಸೂರು’ ಯೋಜನೆಯಡಿ ಕೊಳೆಗೇರಿಗಳಲ್ಲಿ ವಾಸಿಸುವವರಿಗೆ ಹಾಗೂ ವಸತಿ ರಹಿತರಾಗಿರುವವರಿಗೆ ಉಚಿತ ಮನೆಗಳನ್ನು ಒದಗಿಸಲಾಗುತ್ತಿದೆ. ಇದರಿಂದ ಬಡ ಕುಟುಂಬಗಳು ಸ್ವಂತ ಮನೆಯ ಆಸೆಯನ್ನು ಸಾಕಾರಗೊಳಿಸಿಕೊಳ್ಳಬಹುದಾಗಿದೆ.
ಉಚಿತ ಮನೆ ಪಡೆಯಲು ಅರ್ಹತೆಗಳೇನು?
ಈ ಯೋಜನೆಯಡಿ ಮನೆ ಪಡೆಯು ಫಲಾನುಭವಿಗಳು ಅರ್ಜಿದಾರರು ಕರ್ನಾಟಕ ರಾಜ್ಯದ ಖಾಯಂ ನಿವಾಸಿಯಾಗಿರಬೇಕು. ಕೊಳೆಗೇರಿ ಅಥವಾ ಸ್ಲಂ ಪ್ರದೇಶದಲ್ಲಿ ವಾಸಿಸುತ್ತಿರುವ ವಸತಿ ರಹಿತರಾಗಿರಬೇಕು. ಆರ್ಥಿಕವಾಗಿ ಬಡ ವರ್ಗಕ್ಕೆ ಸೇರಿದವರಾಗಿರಬೇಕು. ಅರ್ಜಿದಾರರ ಹೆಸರಿನಲ್ಲಿ ಯಾವುದೇ ಸ್ವಂತ ಜಾಗ ಅಥವಾ ಮನೆ ಇರಬಾರದು.
ಕರ್ನಾಟಕ ಕೊಳೆಗೇರಿ ಅಭಿವೃದ್ಧಿ ಮಂಡಳಿಯ ‘ಸರ್ವರಿಗೂ ಸೂರು’ ಯೋಜನೆಯಡಿ ಅರ್ಹ ಫಲಾನುಭವಿಗಳಿಗೆ ಉಚಿತವಾಗಿ ಮನೆಗಳನ್ನು ನೀಡಲಾಗುತ್ತಿದೆ.
ಫಲಾನುಭವಿಗಳಿಗೆ 42,345 ಮನೆ ಹಂಚಿಕೆ
ಕೊಳೆಗೇರಿ ಅಭಿವೃದ್ಧಿ ಮಂಡಳಿಯು ರಾಜ್ಯದ ವಿವಿಧ ಭಾಗಗಳಲ್ಲಿ ಒಟ್ಟು 1.82 ಲಕ್ಷ ಮನೆಗಳ ನಿರ್ಮಾಣ ಗುರಿ ಹೊಂದಿದ್ದು, ಮೊದಲ ಹಂತದಲ್ಲಿ 36,789 ಮನೆಗಳನ್ನು ವಿತರಿಸಲಾಗಿತ್ತು. ಈಗ 2ನೇ ಹಂತದಲ್ಲಿ 42,345 ಮನೆಗಳನ್ನು ಹಂಚಿಕೆ ಮಾಡಲು ಸರ್ಕಾರ ತೀರ್ಮಾನಿಸಿದೆ.
2ನೇ ಹಂತದ ಮನೆ ವಿತರಣಾ ಸಮಾರಂಭವನ್ನು ಇದೇ ಏಪ್ರಿಲ್ 27 ರಂದು ಹುಬ್ಬಳ್ಳಿಯಲ್ಲಿ ಆಯೋಜಿಸಲಾಗಿದೆ. ಈ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ವಸತಿ ಸಚಿವ ಜಮೀರ್ ಅಹ್ಮದ್ ಖಾನ್ ಹಾಗೂ ಕೊಳೆಗೇರಿ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಪ್ರಸಾದ್ ಅಬ್ಬಯ್ಯ ಸೇರಿದಂತೆ ಅನೇಕ ಗಣ್ಯರು ಭಾಗವಹಿಸಲಿದ್ದಾರೆ.
ಸರ್ಕಾರದಿಂದ ಹೆಚ್ಚುವರಿ ಹಣಕಾಸು ನೆರವು
ಈ ಯೋಜನೆಯಡಿ 2013 ರಿಂದ 2023ರ ವರೆಗೆ ಸ್ಲಂ ಪ್ರದೇಶಗಳಲ್ಲಿ ವಾಸಿಸುವ ವಸತಿ ರಹಿತ ಕುಟುಂಬಗಳಿಗೆ ಶಾಶ್ವತ ಮನೆ ನಿರ್ಮಿಸಲು ಸರ್ಕಾರ ಬದ್ಧವಾಗಿದೆ. ಮನೆ ನಿರ್ಮಾಣದ ವೆಚ್ಚವನ್ನು ಸರ್ಕಾರದ ಅನುದಾನ ಹಾಗೂ ಫಲಾನುಭವಿಗಳ ವಂತಿಕೆಯಿ೦ದ ಪೂರೈಸಲಾಗುತ್ತಿದೆ. ಹಲವರು ವಂತಿಕೆ ಪಾವತಿಸಲು ವಿಫಲರಾದ ಕಾರಣ, ಸರ್ಕಾರವೇ ಹೆಚ್ಚುವರಿ ಹಣ ಪಾವತಿಸಿ ಮನೆ ನಿರ್ಮಾಣವನ್ನು ಪೂರ್ಣಗೊಳಿಸಲು ನಿರ್ಧರಿಸಿದೆ.
ಉಚಿತ ಮನೆಗೆ ಅರ್ಜಿ ಸಲ್ಲಿಸುವ ವಿಧಾನ
‘ಸರ್ವರಿಗೂ ಸೂರು’ ಯೋಜನೆಯಡಿ ಅರ್ಜಿ ಸಲ್ಲಿಸಲು ಅರ್ಹ ಫಲಾನುಭವಿಗಳಿಗೆ ತಮ್ಮ ಹತ್ತಿರದ ಕೊಳೆಗೇರಿ ಅಭಿವೃದ್ಧಿ ಮಂಡಳಿ ಕಚೇರಿಗೆ ಭೇಟಿ ನೀಡಬೇಕು. ಅಗತ್ಯ ದಾಖಲಾತಿಗಳೊಂದಿಗೆ ಅರ್ಜಿ ಸಲ್ಲಿಸಿದರೆ, ಅನುಮೋದನೆ ನಂತರ, ಫಲಾನುಭವಿಗಳ ಪಟ್ಟಿಯನ್ನು ಪ್ರಕಟಿಸಲಾಗುತ್ತದೆ.
ಈ ಯೋಜನೆಯು ಬಡ ಕುಟುಂಬಗಳಿಗೆ ಶಾಶ್ವತ ವಸತಿ ಒದಗಿಸಿ ಅವರ ಜೀವನಮಟ್ಟವನ್ನು ಸುಧಾರಿಸಲು ಮಹತ್ವದ ಪಾತ್ರವಹಿಸಲಿದೆ. ಈ ಸೌಲಭ್ಯವನ್ನು ಬಡ ಕುಟುಂಬಗಳು ಸಮರ್ಪಕವಾಗಿ ಬಳಸಿಕೊಳ್ಳಬಹುದು.