'ಪಾಪಾ ಪಾಂಡು' ಕನ್ನಡ ಕಿರುತೆರೆಯಲ್ಲಿ ಹಾಸ್ಯದ ಹೊಳೆಯನ್ನು ಹರಿಸಿದ ಧಾರಾವಾಹಿ. ಸಂಜೆಯಾಗುತ್ತಿದ್ದಂತೆ ಈ ಧಾರಾವಾಹಿಯನ್ನು ನೋಡುವುದಕ್ಕೆ ಕಿರುತೆರೆ ವೀಕ್ಷಕರು ಕಾದು ಕೂರುತ್ತಿದ್ದರು. ಚಿದಾನಂದ್, ಶಾಲಿನಿ ಜೋಡಿ, ಸಿಹಿ ಕಹಿ ಚಂದ್ರ ನಿರ್ದೇಶನ ಕಿರುತೆರೆ ವೀಕ್ಷಕರನ್ನು ಮನಸ್ಸನ್ನು ಗೆದ್ದಿತ್ತು. ಆದ್ರೀಗ ಇಂತಹ ಕಾಮಿಡಿ ಧಾರಾವಾಹಿಗಳನ್ನು ನೋಡುವುದಕ್ಕೆ ಸಿಗುತ್ತಿಲ್ಲ.
ಕನ್ನಡ ಕಿರುತೆರೆಯಲ್ಲಿ 'ಪಾಪ ಪಾಂಡು' ಹಾಗೂ 'ಸಿಲ್ಲಿ ಲಲ್ಲಿ' ಈ ಎರಡು ಧಾರಾವಾಹಿಗಳು ವೀಕ್ಷಕರಿಗೆ ಸಿಕ್ಕಾಪಟ್ಟೆ ಮನರಂಜನೆಯನ್ನು ನೀಡಿದ್ದವು. ಈ ಎರಡು ಧಾರಾವಾಹಿಗಳು ಅದೆಷ್ಟೋ ಮಂದಿಗೆ ಬದುಕು ನೀಡಿವೆ. ಇಂದು ಆ ಎಲ್ಲಾ ಕಲಾವಿದರೂ ಸಿನಿಮಾ ಹಾಗೂ ಕಿರುತೆರೆಯಲ್ಲಿ ಉತ್ತಮ ಸ್ಥಾನದಲ್ಲಿ ಇದ್ದಾರೆ. ಹಾಗೇ ಮತ್ತೆ ಕೆಲವರು ಕನ್ನಡ ಚಿತ್ರರಂಗದಲ್ಲಿ ಸ್ಟಾರ್ ನಟರಾಗಿದ್ದಾರೆ.
ಸ್ಯಾಂಡಲ್‌ವುಡ್‌ನಲ್ಲಿ ಇಬ್ಬರು ಪ್ರಮುಖ ನಟರಾದ ದುನಿಯಾ ವಿಜಯ್ ಹಾಗೂ ಗೋಲ್ಡನ್ ಸ್ಟಾರ್ ಗಣೇಶ್ ಇಬ್ಬರೂ 'ಪಾಪ ಪಾಂಡು' ಸೀರಿಯಲ್‌ನಲ್ಲಿ ನಟಿಸಿದ್ದರು. ಈ ವಿಷಯವನ್ನು ಬಹುತೇಕ ಮಂದಿಗೆ ಗೊತ್ತಿರಲಿಕ್ಕಿಲ್ಲ. ಇನ್ನು ಕೆಲವರಿಗೆ ಮರೆತಿರಬಹುದು. ಹಾಗಿದ್ರೆ ದುನಿಯಾ ವಿಜಯ್ ಹಾಗೂ ಗೋಲ್ಡನ್ ಸ್ಟಾರ್ ಗಣೇಶ್ ಇಬ್ಬರೂ ಅಂದು ನಟಿಸಿದ ಪಾತ್ರದ ಹೆಸರೇನು? ಈ ಸೀರಿಯಲ್‌ನಲ್ಲಿ ಅವಕಾಶ ಸಿಕ್ಕಿದ್ದು ಹೇಗೆ? ಈ ಇಂಟ್ರೆಸ್ಟಿಂಗ್ ಸ್ಟೋರಿ ನೋಡಲು ಮುಂದೆ ಓದಿ.
'ಪಾಪ ಪಾಂಡು' ಧಾರಾವಾಹಿ ಮಾಡುವಾಗ ಸಿಹಿ ಕಹಿ ಚಂದ್ರು ಸಣ್ಣಪುಟ್ಟ ಪಾತ್ರಗಳಿಗೆ ಆಡಿಷನ್ ಮಾಡಿತ್ತಿರಲಿಲ್ಲ. ಯಾರು ಚೆನ್ನಾಗಿ ಪಾತ್ರ ಮಾಡುತ್ತಾರೋ ಅವರನ್ನು ಇನ್ನೊಮ್ಮೆ ಕರೆದು ಅವಕಾಶ ನೀಡುತ್ತಿದ್ದರು. ಹಾಗೆ ಸಿಕ್ಕವರೇ ದುನಿಯಾ ವಿಜಯ್. "ಚೆನ್ನಾಗಿ ನಟನೆ ಮಾಡಲಿಲ್ಲ ಅಂದರೆ, ನಿನ್ನಿಂದ ನಟನೆ ಮಾಡುವುದಕ್ಕೆ ಆಗುವುದಿಲ್ಲ ಕಂದ ಬೇರೆ ಏನಾದರೂ ಕೆಲಸ ಮಾಡು ಅಂತ ನೇರವಾಗಿ ಹೇಳುತ್ತಿದ್ದೆ. ಚೆನ್ನಾಗಿ ನಟನೆ ಮಾಡಿದವರನ್ನು ಮತ್ತೆ ಕರೆಯುತ್ತಿದ್ದೆ. ಹಾಗೇ ಬಂದಿದ್ದು ದುನಿಯಾ ವಿಜಯ್. ದುನಿಯಾ ವಿಜಯ್ ಮೊದಲು ನನ್ನ ಧಾರಾವಾಹಿಯಲ್ಲಿ ಕಳ್ಳನ ಪಾತ್ರ ಮಾಡಿದ್ದ." ಎಂದು ಸಿಹಿ ಕಹಿ ಚಂದ್ರು ಸಂಭ್ರಮ ಸೌರಭ ಯೂಟ್ಯೂಬ್ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ ರಿವೀಲ್ ಮಾಡಿದ್ದಾರೆ.
"ಅವನನ್ನು ನೋಡಿದ ತಕ್ಷಣ ನನಗೆ ಯಾಕೋ ಅವನು ರೋಲ್ ಮಾಡಬಲ್ಲ ಅಂತ ಅನಿಸಿತ್ತು. ಕಳ್ಳನ ರೋಲ್ ಏನು ಅಂದರೆ, ಹಗ್ಗ ಹಾಕೊಂಡು ಮಹಡಿ ಮೇಲಿಂದ ಇಳಿಯಬೇಕು. ಇದನ್ನು ಹೇಗೆ ಮಾಡಿಸೋದು ಅಂತಿರುವಾಗ, ದುನಿಯಾ ವಿಜಯ್ ಮಾಡುತ್ತೇನೆ ಬಿಡಿ ಸರ್ ನಾನು ಜಿಮ್ನಾಸ್ಟು ಅಂತ ಹೇಳಿದ್ದರು. ಫಸ್ಟ್ ಶಾಟ್ ದುನಿಯಾ ವಿಜಯ್ ಅವರದ್ದೇ ಹಗ್ಗ ಹಾಕಿಕೊಂಡು ಇಳಿಯುವ ಶಾಟ್. ರಪ ರಪ ಅಂತ ಇಳಿದ. ಆಕ್ಟ್ ಮಾಡಿದರೆ ಫಸ್ಟ್ ಕ್ಲಾಸ್ ಆಗಿ ಆಕ್ಟ್ ಮಾಡಿದ. " ಎಂದು ಸಿಹಿಕಹಿ ಚಂದ್ರು ಹೇಳಿದ್ದಾರೆ.
ಈ ಧಾರಾವಾಹಿಯಲ್ಲಿ ದುನಿಯಾ ವಿಜ ಒಬ್ಬ ಕಳ್ಳ. ಅವರನ್ನು ಹಿಡಿಯುವುದಕ್ಕೆ ಪೊಲೀಸ್ ಹರಸಾಹಸ ಪಡುತ್ತಿದ್ದಾನೆ. ಇಂತಹದ್ದೊಂದು ಕಾನ್ಸೆಪ್ಟ್ ಕ್ರಿಯೇಟ್ ಆಗಿತ್ತು. ಪ್ರತಿ ಬಾರಿ ಕಳ್ಳನ ಪಾತ್ರ ಬಂದಾಗೆಲ್ಲ ಸಿಹಿ ಕಹಿ ಚಂದ್ರು ತಕ್ಷಣವೇ ದುನಿಯಾ ವಿಜಯ್ ಅವರಿಗೆ ಕರೆ ಮಾಡುತ್ತಿದ್ದರು. ಅವರು ಬಂದು ಸಿನಿಮಾ ಮಾಡಿಕೊಂಡು ಹೋಗುತ್ತಿದ್ದರು. ಹಾಗೇ ಗಣೇಶ್ ಕೂಡ 'ಪಾಪ ಪಾಂಡು' ಸೀರಿಯಲ್‌ನಲ್ಲಿ ಡೌಟೇಶ ಅನ್ನುವ ಪಾತ್ರ ಮಾಡಿದ್ದರು.
'ಮುಂಗಾರು ಮಳೆ' ಬಾಕ್ಲಾಬಸ್ಟರ್.. 'ಗಾಳಿಪಟ' ಸಿನಿಮಾಗಾಗಿ ಗೋಲ್ಡನ್ ಸ್ಟಾರ್ ಗಣೇಶ್‌ಗೆ ಕೊಟ್ಟ ಸಂಭಾವನೆ ಎಷ್ಟು?
"ನಾನು ನಮ್ಮ ಗಣೇಶ ಒಂದು ಸಿನಿಮಾ ಮಾಡಿದ್ವಿ. ನನ್ನ ಜೊತೆ ನಟನೆ ಮಾಡಿದ್ದ. ನನ್ನ ಸೀರಿಯಲ್‌ನಲ್ಲಿ ಒಂದು ರೋಲ್ ಕ್ರಿಯೇಟ್ ಮಾಡುತ್ತೇನೆ. ಬಂದು ಆಕ್ಟ್ ಮಾಡುತ್ತೀಯಾ ಅಂತ ಕೇಳಿದೆ. ಖಂಡಿತಾ ಮಾಡುತ್ತೇನೆ ಅಂತ ಹೇಳಿದರು. ಶ್ರೀಮತಿ ಕಸಿನ್ ರೋಲ್ ಒಂದನ್ನು ಕ್ರಿಯೇಟ್ ಮಾಡಿದೆ. ಅವನ ಹೆಸರು ಡೌಟೇಶ ಅಂತ. ಅವನಿಗೆ ಎಲ್ಲದರಲ್ಲೂ ಡೌಟ್." ಎಂದು ಸಿಹಿ ಕಹಿ ಚಂದ್ರು ಸಂದರ್ಶನದ ವೇಳೆ ಗಣೇಶ್ ಪಾತ್ರದ ಬಗ್ಗೆ ರಿವೀಲ್ ಮಾಡಿದ್ದರು.
'ಪಾಪ ಪಾಂಡು'ವಿನಲ್ಲಿ ಗಣೇಶ್ ಪಾತ್ರ ಹಾಸ್ಯಮಯವಾಗಿತ್ತು. ಡೌಟೇಶ ಪಾತ್ರದ ವಿಶೇಷತೆ ಅಂದರೆ, 'ಡ' ಉಚ್ಚಾರಣೆ ಮಾಡುವುದಕ್ಕೆ ಬರುತ್ತಿರಲಿಲ್ಲ. 'ಡ' ಅಕ್ಷರದ ಬದಲು 'ದ' ಹೇಳುತ್ತಾನೆ. ಗೋಲ್ಡನ್ ಸ್ಟಾರ್ ಗಣೇಶ್ ಈ ಪಾತ್ರದಲ್ಲಿ ಕಾಣಿಸಿಕೊಂಡಾಗಲೆಲ್ಲ ಕಿರುತೆರೆ ವೀಕ್ಷಕರು ಸಿಕ್ಕಾಪಟ್ಟೆ ಎಂಜಾಯ್ ಮಾಡಿದ್ದರು. ಈ ಧಾರಾವಾಹಿ ಸುಮಾರು 1200ಕ್ಕೂ ಅಧಿಕ ಎಪಿಸೋಡ್‌ಗಳು ಪ್ರಸಾರವಾಗಿತ್ತು.