SSLC Good News: ಮಿಷನ್‌ ವಿದ್ಯಾಕಾಶಿ: ಎಸ್‌ಎಸ್‌ಎಲ್‌ಸಿ & ಪಿಯುಸಿ ವಿದ್ಯಾರ್ಥಿಗಳಿಗೆ ಗುಡ್‌ನ್ಯೂಸ್‌

SSLC Good News: ಮಿಷನ್‌ ವಿದ್ಯಾಕಾಶಿ: ಎಸ್‌ಎಸ್‌ಎಲ್‌ಸಿ & ಪಿಯುಸಿ ವಿದ್ಯಾರ್ಥಿಗಳಿಗೆ ಗುಡ್‌ನ್ಯೂಸ್‌

ಮಿಷನ್‌ ವಿದ್ಯಾಕಾಶಿಯಂತಹ ಯೋಜನೆಯ ಮೂಲಕ ಧಾರವಾಡ ಜಿಲ್ಲಾಡಳಿತವು ಎಸ್ಎಸ್ಎಲ್‌ಸಿ ಹಾಗೂ ಪಿಯುಸಿ ವಿದ್ಯಾರ್ಥಿಗಳಿಗೆ ಗುಡ್‌ನ್ಯೂಸ್‌ ಕೊಡಲಾಗಿದೆ. ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿ ಪರೀಕ್ಷೆಗಳಿಗೆ ಜಿಲ್ಲಾಡಳಿತದಿಂದ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಫಲಿತಾಂಶ ಸುಧಾರಣೆಗೆ ಮಿಷನ್ ವಿದ್ಯಾಕಾಶಿ ಕಾರ್ಯಕ್ರಮದ ಮೂಲಕ ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಈ ಬಾರಿ ಎಸ್‌‌ಎಸ್ಎಲ್‌ಸಿ ಪರೀಕ್ಷೆಯಲ್ಲಿ ಧಾರವಾಡ ಜಿಲ್ಲೆಯು ರಾಜ್ಯಕ್ಕೆ ಮೊದಲ ರ‍್ಯಾಂಕ್ ಗಳಿಸುವ ಗುರಿ ಹೊಂದಲಾಗಿದೆ ಎಂದು ಜಿಲ್ಲಾಧಿಕಾರಿ ದಿವ್ಯಪ್ರಭು ಜಿ.ಆರ್.ಜೆ ಅವರು ಮಾಹಿತಿ ನೀಡಿದ್ದಾರೆ.

ಪ್ರಸಕ್ತ ಸಾಲಿನಲ್ಲಿ 28,666 ವಿದ್ಯಾರ್ಥಿಗಳು ಎಸ್ಎಸ್ಎಲ್‌ಸಿ ಪರೀಕ್ಷೆಗೆ ನೋಂದಣಿ ಮಾಡಿಕೊಂಡಿದ್ದಾರೆ. ಹೊಸದಾಗಿ 511 ವಿದ್ಯಾರ್ಥಿಗಳು ನೋಂದಾಯಿಸಿಕೊಂಡಿದ್ದಾರೆ. 1,437 ವಿದ್ಯಾರ್ಥಿಗಳು ಪುನರಾವರ್ತಿತರಾಗಿದ್ದಾರೆ. ಒಟ್ಟಾರೆಯಾಗಿ 30,749 ವಿದ್ಯಾರ್ಥಿಗಳು ಎಸ್ಎಸ್ಎಲ್‌ಸಿ ಪರೀಕ್ಷೆಗೆ ಹಾಜರಾಗಲಿದ್ದಾರೆ ಎಂದಿದ್ದಾರೆ.

Mission Vidyakashi Good news for SSLC and PUC Students in Dharwad

ಜಿಲ್ಲೆಯಾದ್ಯಂತ ಒಟ್ಟು‌ 447 ಪ್ರೌಢಶಾಲೆಗಳಿವೆ. 106 ಪರೀಕ್ಷಾ ಕೇಂದ್ರಗಳಲ್ಲಿ ಮಾರ್ಚ್ 21 ರಿಂದ ಏಪ್ರಿಲ್ 4 ರವರೆಗೆ ಎಸ್ಎಸ್ಎಲ್‌ಸಿ ಪರೀಕ್ಷೆಗಳು ನಡೆಯಲಿವೆ. ಪರೀಕ್ಷೆ ನಡೆಯುವ ಪರೀಕ್ಷಾ ಕೇಂದ್ರಗಳಲ್ಲಿ ಕಲಂ 144ರ ಅನ್ವಯ ನಿಷೇಧಾಜ್ಞೆ ಘೋಷಣೆ ಮಾಡಲಾಗುವುದು. ಪರೀಕ್ಷಾ ದಿನಗಳಂದು ಪರೀಕ್ಷಾ ಕೇಂದ್ರದ ಸುತ್ತಲಿನ 200 ಮೀಟರ್ ಅಂತರದಲ್ಲಿರುವ ಜೆರಾಕ್ಸ್ ಅಂಗಡಿಗಳನ್ನು ಮುಚ್ಚಿಸಲಾಗುವುದು. ಜಿಲ್ಲಾ ಹಂತದಲ್ಲಿ ಜಾಗೃತ ದಳದ ಅಧಿಕಾರಿಗಳನ್ನು ನೇಮಕ ಮಾಡಿ, ಪರೀಕ್ಷಾ ಕೇಂದ್ರಗಳ ಸುತ್ತಲೂ ಪೊಲೀಸರನ್ನು ನೇಮಕಗೊಳಿಸಲಾಗುತ್ತದೆ ಎಂದು ಅವರು ಹೇಳಿದರು.

SSLC Exam: ಎಸ್‌ಎಸ್‌ಎಲ್‌ಸಿ ಪರೀಕ್ಷೆ, ವಿದ್ಯಾಕಾಶಿ ಧಾರವಾಡದಲ್ಲಿ ವಿಶೇಷ ಕಾರ್ಯಕ್ರಮ

ಸೋಷಿಯಲ್‌ ಮೀಡಿಯಾದಲ್ಲಿ ಸುಳ್ಳು ಸಂದೇಶ, ಮಾಹಿತಿಗಳನ್ನು ಯಾರೂ ಕೂಡ ಪ್ರಕಟಿಸಬಾರದು. ಒಂದು ವೇಳೆ ಪ್ರಕಟಿಸಿದರೆ ಕಾನೂನು ರೀತಿಯಲ್ಲಿ ಕ್ರಮ ಕೈಗೊಳ್ಳಲಾಗುತ್ತದೆ. ಸಾಮಾಜಿಕ ಜಾಲತಾಣಗಳ ಮೇಲೆ ಸೈಬರ್ ಪೊಲೀಸರು ನಿಗಾ ವಹಿಸಲಿದ್ದಾರೆ ಎಂದು ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ತಿಳಿಸಿದ್ದಾರೆ.

ಕಳೆದ ಹತ್ತು ವರ್ಷಗಳಲ್ಲಿ ಧಾರವಾಡ ಜಿಲ್ಲೆಯು ಎಸ್ಎಸ್ಎಲ್‌ಸಿ ಪರೀಕ್ಷೆಯಲ್ಲಿ ಉತ್ತಮ ರ‌್ಯಾಂಕ್ ಪಡೆಯುವಲ್ಲಿ ಪ್ರಯತ್ನಿಸುತ್ತಿದೆ. 2019 ರಲ್ಲಿ 27ನೇ ಸ್ಥಾನ. 2012 ಮತ್ತು 2022 ರಲ್ಲಿ ಬಿ ಗ್ರೇಡ್, 2023ರಲ್ಲಿ 24 ನೇ ಸ್ಥಾನ ಹಾಗೂ 2024 ರಲ್ಲಿ 22ನೇ ಸ್ಥಾನವನ್ನು ಪಡೆದುಕೊಂಡಿದೆ. ಹೀಗಾಗಿ, ಈ ಬಾರಿ ಉತ್ತಮ ಫಲಿತಾಂಶದೊಂದಿಗೆ ಜಿಲ್ಲೆಯನ್ನು ರಾಜ್ಯಕ್ಕೆ ಮೊದಲ ರ‌್ಯಾಂಕ್ ಪಡೆಯುವ ಗುರಿ ಹೊಂದಲಾಗಿದೆ ಎಂದು ಜಿಲ್ಲಾಧಾಕಾರಿ ದಿವ್ಯ ಪ್ರಭು ಅವರು ತಿಳಿಸಿದರು.

ಜಿಲ್ಲಾ ಮತ್ತು ತಾಲೂಕು ಮಟ್ಟದಲ್ಲಿ ವೆಬ್‌‌ ಕಾಸ್ಟಿಂಗ್

ಪಾರದರ್ಶಕವಾಗಿ ಮತ್ತು ಸರ್ಕಾರದ ಸೂಚನೆ. ಆದೇಶಗಳಂತೆ ಎಸ್ಎಸ್ಎಲ್‌‌ಸಿ ಪರೀಕ್ಷೆ ನಡೆಸುವಲ್ಲಿ ಜಿಲ್ಲಾಡಳಿತದಿಂದ ಅಗತ್ಯ ಕ್ರಮಕೈಗೊಳ್ಳಲಾಗಿದೆ. ಜಿಲ್ಲಾ ಹಂತದಲ್ಲಿ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳ ನೇತೃತ್ವದಲ್ಲಿ ಉಪನಿರ್ದೇಶಕರ ಕಚೇರಿಯಲ್ಲಿ ಹಾಗೂ ತಾಲ್ಲೂಕು ಮಟ್ಟದಲ್ಲಿ ಶಿಕ್ಷಣಾಧಿಕಾರಿಗಳ ಕಚೇರಿಯಲ್ಲಿ ವೆಬ್ ಕಾಸ್ಟಿಂಗ್ ನಡೆಸಲಾಗುವುದು. ಜಿಲ್ಲೆಯ ಎಲ್ಲ ಪರೀಕ್ಷಾ ಕೇಂದ್ರಗಳಲ್ಲಿ ಸಿಸಿಟಿವಿ ಅಳವಡಿಕೆ, ಮುಖ್ಯ ಅಧೀಕ್ಷಕರು, ಪ್ರಶ್ನೆ ಪತ್ರಿಕೆ ಪಾಲಕರು, ಪರೀಕ್ಷಾ ಕೇಂದ್ರಕ್ಕೆ ಇಬ್ಬರಂತೆ ಸ್ಥಳೀಯ ನಿರೀಕ್ಷಕರನ್ನು ನೇಮಕ ಮಾಡಲಾಗಿದೆ ಎಂದು ಅವರು ಮಾಹಿತಿ ನೀಡಿದರು.

ವಿದ್ಯಾರ್ಥಿಗಳಿಗೆ ರೂಢಿ ಪರೀಕ್ಷೆ, ಪಾಸಿಂಗ್ ಪ್ಯಾಕೇಜ್

ಕಲಿಕೆಯಲ್ಲಿ ಪ್ರಗತಿ ಹೊಂದಿದ ಮತ್ತು‌ ಪ್ರತಿಭಾವಂತ ಮಕ್ಕಳಿಗೆ ಡಿಸೆಂಬರ್ 15 ರಿಂದ ಫೆಬ್ರವರಿ 15 ರವರೆಗೆ ಪ್ರತಿ ದಿನ ಘಟಕಗಳನ್ನು ದೃಢೀಕರಿಸಲು 25 ಅಂಕದ ರೂಢಿ ಪರೀಕ್ಷೆಗಳನ್ನು ನಡೆಸಲಾಗಿದೆ. ಕಲಿಕೆಯಲ್ಲಿ ಹಿಂದುಳಿದ ಬೇಸ್ ಲೈನ್ ನಲ್ಲಿ ಗುರುತಿಸಿದಂತೆ 6,259 ಮಕ್ಕಳಿಗೆ ಪಾಸಿಂಗ್ ಪ್ಯಾಕೇಜ್ ಹಾಗೂ ಅಭ್ಯಾಸ ಹಾಳೆಗಳನ್ನು ಮತ್ತು ವಿಶೇಷ ತರಗತಿಗಳನ್ನು ನಡೆಸಲಾಗುತ್ತಿದೆ. ಜುಲೈ, ಆಗಸ್ಟ್‌ನಲ್ಲಿ 10 ನೇ ತರಗತಿಯಲ್ಲಿ ಕಲಿಕೆಯಲ್ಲಿ (ಓದು ಬರಹದಲ್ಲಿ)ಹಿಂದುಳಿದ 7,273 ವಿದ್ಯಾರ್ಥಿಗಳಿದ್ದರು. ಕಲಿಕೆಯಲ್ಲಿ ಹಿಂದುಳಿದ ವಿದ್ಯಾರ್ಥಿಗಳ ವಿಶೇಷ ತರಗತಿಯಲ್ಲಿ ವಿದ್ಯಾರ್ಥಿಗಳಿಗೆ ಸ್ಪಷ್ಟ ಓದು, ಶುದ್ಧ ಬರಹ, ಸುಲಭ ಲೆಕ್ಕಾಚಾರ ಹಾಗೂ ಅಭ್ಯಾಸ ಹಾಳೆಗಳ ಮೂಲಕ ರೂಢಿ ಮಾಡಿಸಲಾಗಿದೆ. ಜನೇವರಿ ಅಂತ್ಯಕ್ಕೆ ಸಾಕಷ್ಟು ವಿದ್ಯಾರ್ಥಿಗಳು ಕಲಿಕೆಯಲ್ಲಿ ಮುಂದುವರಿದಿದ್ದಾರೆ ಎಂದರು.

ಮಿಷನ್ ವಿದ್ಯಾಕಾಶಿ ಯೋಜನೆಯಡಿ ಹಲವು ಕಾರ್ಯಕ್ರಮಗಳು

ಎಸ್ಎಸ್ಎಲ್‌ಸಿ ಪರೀಕ್ಷೆ ಫಲಿತಾಂಶ ಸುಧಾರಣೆಗೆ ಮಿಷನ್ ವಿದ್ಯಾಕಾಶಿ ಯೋಜನೆಯಡಿ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. 2024 ರ ಆಗಸ್ಟ್ ತಿಂಗಳಲ್ಲಿ ಬೇಸ್ ಲೈನ್ ಪರೀಕ್ಷೆ ಮಾಡಿ ಮಕ್ಕಳ ಕಲಿಕೆಯಲ್ಲಿ ಇರುವ ಕೊರತೆಗಳನ್ನು ಗುರುತಿಸಿ, ಕಲಿಕೆಯನ್ನು ಹೆಚ್ಚಿಸುವ ಚಟುವಟಿಕೆಗಳನ್ನು ನೀಡಲಾಗಿತ್ತು. ಅಕ್ಟೋಬರ್ ತಿಂಗಳಲ್ಲಿ 40 ಅಂಕದ ಪಾಸಿಂಗ್ ಪ್ಯಾಕೇಜ್ ಕನ್ನಡ, ಇಂಗ್ಲೀಷ್ ಮತ್ತು ಉರ್ದು ಮಾಧ್ಯಮದಲ್ಲಿ ಒದಗಿಸಲಾಗಿತ್ತು. 2025 ರ ಜನವರಿಯಲ್ಲಿ ಪ್ರತಿ ದಿನ 10 ಅಂಕಕ್ಕೆ ಅಭ್ಯಾಸ ಹಾಳೆಗಳನ್ನು ನೀಡಿ ಕಲಿಕೆಯನ್ನು ಗಟ್ಟಿಗೊಳಿಸಲು ಪ್ರಯತ್ನಿಸಲಾಗುತ್ತಿದೆ. ಪ್ರತಿಭಾವಂತ ಮಕ್ಕಳಿಗೆ ಸೂಕ್ತ ಮಾರ್ಗದರ್ಶನಕ್ಕಾಗಿ ಜಿಲ್ಲಾ ಹಂತ ಹಾಗೂ ತಾಲೂಕು ಹಂತದಲ್ಲಿ ನುರಿತ ಅನುಭವಿ ಶಿಕ್ಷಕರು ಮತ್ತು ವಿಶೇಷ ಸಂಪನ್ಮೂಲ ಶಿಕ್ಷಕರ ಮೂಲಕ ಕಾರ್ಯಾಗಾರಗಳು ಮತ್ತು ಪರೀಕ್ಷೆಗಳನ್ನು ನಿರ್ವಹಿಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ತಿಳಿಸಿದರು.

ಪ್ರತಿ ಭಾನುವಾರ ಪ್ರತಿ ತಾಲೂಕಿನಲ್ಲಿ ಕನಿಷ್ಠ 30 ರಿಂದ 50 ಮಕ್ಕಳಿಗೆ ವಿಶೇಷ ಮಾರ್ಗದರ್ಶನ ಮಾಡಲಾಗಿದೆ. ಜಿಲ್ಲಾ ಹಂತದಲ್ಲಿ ಪ್ರತಿ ತಾಲೂಕಿನಿಂದ ವಿವಿಧ ಪರೀಕ್ಷೆಗಳ ಸಾಧನೆಯ ಮಟ್ಟವನ್ನು ಗುರುತಿಸಿ ಶೇ. 100 ರಷ್ಟು ಫಲಿತಾಂಶ ಪಡೆಯುವ ಸಾಮರ್ಥ್ಯವನ್ನು ಹೊಂದಿದ 20 ಮಕ್ಕಳಿಗೆ ಸಂವಾದ ಕಾರ್ಯಾಗಾರವನ್ನು ಆಯೋಜಿಸಿದೆ. ನಿರಂತರ ಗೈರು ಮತ್ತು ಅನಿಯಮಿತ ಹಾಜರಾತಿ ಹೊಂದಿದ ವಿದ್ಯಾರ್ಥಿಗಳು ಮತ್ತು ಪಾಲಕರ ಮನವೊಲಿಸಿ ಮುಖ್ಯವಾಹಿನಿಗೆ ತರಲು ಪೋಷಕರ ಸಭೆಗಳು ಮತ್ತು ಹಾಜರಾತಿ ಆಂದೋಲನ ಮಾಡಲಾಗಿದೆ. ಶಾಲೆಗೆ ನಿರಂತರ ಗೈರಾಗಿದ್ದ ಮಕ್ಕಳ ಪೈಕಿ, ವಿಶೇಷ ಹಾಜರಾತಿಯ ಆಂದೋಲನ ಮೂಲಕ 429 ಮಕ್ಕಳು ಮುಖ್ಯವಾಹಿನಿಗೆ ಬಂದಿದ್ದಾರೆ.

ಪಾಲಕರ ಮತ್ತು ಎಸ್.ಡಿ.ಎಮ್.ಸಿ ಸಭೆಗಳು ಹಾಗೂ ಕಾರ್ಯಾಗಾರಗಳಲ್ಲಿ ಎಸ್.ಎಸ್.ಎಲ್.ಸಿ ಪರೀಕ್ಷೆಯ ಮಹತ್ವ ಮತ್ತು ಮಕ್ಕಳ ಕಲಿಕೆಗೆ ಅವರು ನೀಡಬೇಕಾದ ಬೆಂಬಲ ಹಾಗೂ ಜಿಲ್ಲಾಡಳಿತ ನೀಡುವ ಬೆಂಬಲ ಬಗ್ಗೆ ಮಾಹಿತಿ ಒದಗಿಸಲಾಗಿದೆ. 10 ನೇ ತರಗತಿ ಬೋಧನೆ ಮಾಡುತ್ತಿರುವ ಜಿಲ್ಲೆಯ ಎಲ್ಲ ಸರಕಾರಿ ಅನುದಾನಿತ ಮತ್ತು ಅನುದಾನರಹಿತ ಶಾಲೆಗಳಿಗೆ ಫಲಿತಾಂಶ ಸುಧಾರಣೆಗೆ ಜಿಲ್ಲಾಡಳಿತ ಮತ್ತು ಶಾಲಾ ಶಿಕ್ಷಣ ಇಲಾಖೆ ಸಹಭಾಗಿತ್ವದಲ್ಲಿ ಹಾಕಿಕೊಂಡ ಕಾರ್ಯಕ್ರಮಗಳ ಬಗ್ಗೆ ತರಗತಿ ನಿರ್ವಹಣೆ ಮತ್ತು ಕಲಿಕೆಯಲ್ಲಿ ಹಿಂದುಳಿದ ಮಕ್ಕಳ ಮೇಲಿನ ಕಾಳಜಿಯ ಕುರಿತು 2100 ಶಿಕ್ಷಕರಿಗೆ ತರಬೇತಿ ನೀಡಲಾಗಿದೆ ಜಿಲ್ಲಾಧಿಕಾರಿಗಳು ತಿಳಿಸಿದರು.

ಮಿಷನ್ ವಿದ್ಯಾ ಕಾಶಿಗೆ ವಿವಿಧ ಸಂಸ್ಥೆಗಳು, ಇಲಾಖೆಗಳು, ಶಿಕ್ಷಣ ತಜ್ಞರು, ಸಂಪನ್ಮೂಲ ಶಿಕ್ಷಕರು ಸಹಕರಿಸಿದ್ದಾರೆ‌. ಮುಂದಿನ ವರ್ಷಗಳಲ್ಲಿ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಲ್ಲಿ ಶೈಕ್ಷಣಿಕ ಗುಣಮಟ್ಟ ಸುಧಾರಣೆಗೆ ಅಗತ್ಯ ಕಾರ್ಯ ಚಟುವಟಿಕೆಗಳನ್ನು ಮಿಷನ್ ವಿದ್ಯಾಕಾಶಿ-2 ಯೋಜನೆಯನ್ನು ಆರಂಭಿಸಲಾಗುವುದು ಎಂದು ತಿಳಿಸಿದರು.

Post a Comment

Previous Post Next Post

Top Post Ad

CLOSE ADS
CLOSE ADS
×