ಮಧ್ಯಮ ಮತ್ತು ಕೆಳಮಧ್ಯಮ ವರ್ಗದವರು, ವಿದ್ಯಾರ್ಥಿಗಳು, ಹಿರಿಯ ನಾಗರಿಕರು ಮತ್ತು ಸರಕಾರಿ ನೌಕರರನ್ನು ಗಮನದಲ್ಲಿಟ್ಟುಕೊಂಡು ಸರ್ಕಾರಿ ಸ್ವಾಮ್ಯದ MSIL ಸಂಸ್ಥೆ ವಿವಿಧ ಬಗೆಯ ಆಕರ್ಷಕ ಟೂರ್ ಪ್ಯಾಕೇಜುಗಳನ್ನು ರೂಪಿಸಿದ್ದರು. ಇವುಗಳಿಗೆ ರಾಜ್ಯ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ ಬುಧವಾರ ಚಾಲನೆ ನೀಡಿದರು.
MSIL ಮೊದಲಿನಿಂದಲೂ ಗುಣಮಟ್ಟ ಮತ್ತು ವಿಶ್ವಾಸಾರ್ಹತೆಗೆ ಹೆಸರಾಗಿದೆ. ಈಗ ಟೂರ್ ಪ್ಯಾಕೇಜುಗಳ ಮೂಲಕ ಸಂಸ್ಥೆಯು ಜನರಿಗೆ ಮತ್ತಷ್ಟು ಹತ್ತಿರವಾಗುತ್ತಿದೆ. ಈ ಪ್ಯಾಕೇಜುಗಳ ಅಡಿಯಲ್ಲಿ ಈ ವರ್ಷದ ಸೆಪ್ಟೆಂಬರ್ ತಿಂಗಳಲ್ಲಿ ಆದಿಕೈಲಾಸ ಮತ್ತು ವಾರಣಾಸಿಗೆ ಪ್ರವಾಸ ಆಯೋಜಿಸಲಾಗುವುದು. ಮುಖ್ಯವಾಗಿ ನಾವು ಆಫ್-ಲೈನ್ ಪ್ರವಾಸಿಗರಿಗೆ ಆದ್ಯತೆ ಕೊಡುತ್ತಿದ್ದೇವೆ ಎಂದು ಸಚಿವರು ತಿಳಿಸಿದರು.
18 ದಿನಗಳ ಪ್ರವಾಸ: ಎಷ್ಟು ಮಂದಿಗೆ ಅವಕಾಶ
ಒಟ್ಟು 18 ದಿನಗಳ ಪ್ರವಾಸದ ಪ್ಯಾಕೇಜ್ ಇದಾಗಿದ್ದು, ಇದರಲ್ಲಿ ಸುರಕ್ಷತೆ, ಶುಚಿರುಚಿಯಾದ ಆಹಾರ, ಮನೆ ಬಾಗಿಲಿನಿಂದಲೇ ಕರೆದುಕೊಂಡು ಹೋಗಿ ವಾಪಸ್ ಅಲ್ಲಿಗೇ ಬಿಡಲಾಗುತ್ತದೆ. ಸಹಾಯಕರ ನೆರವು, ಮಾಸಿಕ ಕಂತುಗಳಲ್ಲಿ ಹಣ ಪಾವತಿ (ಇಎಂಐ ಸೌಲಭ್ಯ), ಲಕ್ಕಿ ಡ್ರಾ, ಕೈಗೆಟುಕುವ ವೆಚ್ಚದಲ್ಲಿ ಉತ್ತರ ಭಾರತ ಪ್ರವಾಸ ಮುಂತಾದ ಸೌಲಭ್ಯ ಮತ್ತು ಆಕರ್ಷಣೆಗಳಿವೆ.
ಗುಂಪು ಪ್ರವಾಸ ಮಾಡಲು ಬಯಸುವವರಿಗೆ ಪ್ರತಿ ಬ್ಯಾಚಿನಲ್ಲಿ ಗರಿಷ್ಠ 100 ಮಂದಿಗೆ ಅವಕಾಶ ಇರಲಿದೆ. ಇದಲ್ಲದೆ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆಂದು ʻಸ್ಟಡಿ-ಕಂ-ಪ್ಲೆಷರ್ ಟೂರ್, ಇಕೋ ಟೂರಿಸಂ ಮತ್ತು ಕರಾವಳಿ ಪ್ರದೇಶಗಳ ವೀಕ್ಷಣೆ ಇರುವ ಕೋಸ್ಟಲ್ ಟೂರಿಸಂ ಮುಂತಾದ ಪ್ಯಾಕೇಜುಗಳನ್ನು ರೂಪಿಸಲು MSIL ಚಿಂತನೆ ನಡೆಸಿದೆ.
MSIL ಸಂಸ್ಥೆಯು ಸದ್ಯಕ್ಕೆ ರೂಪಿಸಿರುವ ಪ್ಯಾಕೇಜಿನಲ್ಲಿ ಕೇವಲ 20,000 ಸಾವಿರ ರೂಪಾಯಿ ವೆಚ್ಚದಲ್ಲಿ 15ರಿಂದ 18 ದಿನಗಳ ಉತ್ತರ ಭಾರತ ಪ್ರವಾಸ ಮಾಡಿಕೊಂಡು ಬರಬಹುದು ಎಂದು ಅವರು ವಿವರಿಸಿದರು.
ಇಎಂಐ ಸೌಲಭ್ಯ: ಅರ್ಧ ಹಣ ಕಟ್ಟಿದರ ಸಾಕು
ರಾಜ್ಯ ಸರ್ಕಾರಿ ಉದ್ಯೋಗಿಗಳನ್ನು ಗಮನದಲ್ಲಿಟ್ಟುಕೊಂಡು ಮಾಡಿರುವ ಪ್ಯಾಕೇಜಿನಲ್ಲಿ ಮೊದಲು ಶೇ.50ರಷ್ಟು ಹಣ ಪಾವತಿಸಿ, ಪ್ರವಾಸ ಕೈಗೊಳ್ಳಬಹುದು. ಪ್ರವಾಸ ಮುಗಿಸಿಕೊಂಡು ಬಂದ ಬಳಿಕ ಉಳಿದ ಶೇಕಡಾ 50ರಷ್ಟು ಹಣವನ್ನು ಮಾಸಿಕ ಕಂತುಗಳಲ್ಲಿ ಕಟ್ಟಬಹುದು.
ಇನ್ನೂ ಲಕ್ಕಿ ಡ್ರಾದಲ್ಲಿ ವಿಜೇತರಾಗುವ ಅದೃಷ್ಟಶಾಲಿಗಳು ಡ್ರಾ ನಂತರದ ಹಣವನ್ನು ಪಾವತಿಸಬೇಕಾಗಿಲ್ಲ. ಈ ಎಲ್ಲ ಪ್ಯಾಕೇಜುಗಳಲ್ಲೂ ಎಂಎಸ್ ಐಎಲ್ ವತಿಯಿಂದ ಟೂರ್ ಮ್ಯಾನೇಜರ್ ಅಥವಾ ಸಹಾಯಕರೊಬ್ಬರು ಜತೆಗಿರಲಿದ್ದು, ಪ್ರವಾಸಿಗರ ಬೇಕು-ಬೇಡಗಳನ್ನು ಆಲಿಸಿ, ನೆರವು ನೀಡಲಿದ್ದಾರೆ ಎಂದು ಹೇಳಿದರು.
ಪ್ರವಾಸಿಗರಿಗೆ ಆದಷ್ಟು ಕಡಿಮೆ ವೆಚ್ಚದಲ್ಲಿ ಪ್ರೇಕ್ಷಣೀಯ ಸ್ಥಳಗಳ ವೀಕ್ಷಣೆ ಸಾಧ್ಯವಾಗಬೇಕು ಎನ್ನುವ ಆಶಯದೊಂದಿಗೆ ಎಂಎಸ್ ಐಎಲ್ ಮೂಲಕ ಈ ಹೆಜ್ಜೆ ಇಡಲಾಗುತ್ತಿದೆ. ಖಾಸಗಿ ಸಂಸ್ಥೆಗಳ ದರಕ್ಕೆ ಹೋಲಿಸಿದರೆ ನಾವು ನಿಗದಿ ಪಡಿಸಿರುವ ದರ ತುಂಬಾ ಕಡಿಮೆ ಇದೆ. ಹಾಗೆಯೇ ಪ್ರತಿಯೊಂದು ಸೇವೆಯನ್ನೂ ಗುಣಮಟ್ಟದೊಂದಿಗೆ ಒದಗಿಸಲಾಗುವುದು ಎಂದರು.
ಯಾವೆಲ್ಲ ಪ್ರವಾಸಿಗಳ ಸ್ಥಳ ಒಳಗೊಂಡಿರಲಿದೆ?
MSIL ಸಂಸ್ಥೆಯ ಟೂರ್ಸ್ ಅಂಡ್ ಟ್ರಾವೆಲ್ಸ್ ವಿಭಾಗವು ಈ ಟೂರ್ ಪ್ಯಾಕೇಜುಗಳನ್ನು ನಿರ್ವಹಿಸಲಿದೆ. ಇದರಡಿಯಲ್ಲಿ ಕಾಶಿ, ಅಯೋಧ್ಯೆ, ಪುರಿ, ಆದಿ ಕೈಲಾಸ ಮುಂತಾದ ಧಾರ್ಮಿಕ ಮತ್ತು ಐತಿಹಾಸಿಕ ತಾಣಗಗಳನ್ನು ನೀವು ಈ ಪ್ಯಾಕೇಜ್‌ನಲ್ಲಿ ವೀಕ್ಷಿಸಬಹುದು. ಜೊತೆಗೆ ದುಬೈ, ಸಿಂಗಪುರ್, ವಿಯಟ್ನಾಂ, ಶ್ರೀಲಂಕಾ, ನೇಪಾಳ, ಥಾಯ್ಲೆಂಡ್ ಮತ್ತು ಯೂರೋಪಿನ ಹಲವು ದೇಶಗಳಿಗೂ ಎಂಎಸ್ ಐಎಲ್ ಟೂರ್ ಪ್ಯಾಕೇಜುಗಳನ್ನು ರೂಪಿಸಿದೆ. ಈ ಪ್ರವಾಸಗಳಿಗೆ ಈಗಾಗಲೇ ದಿನಾಂಕ ನಿಗದಿ ಆಗಿದೆ.
ಪ್ರವಾಸಿಗರಿಗಾಗಿ 24/7 ಸಹಾಯವಾಣಿ ಸೌಲಭ್ಯ
ಪ್ರವಾಸಿಗರ ಅನುಕೂಲಕ್ಕೆ ಎಂಎಸ್ ಐಎಲ್ 24/7 ಸಹಾಯವಾಣಿ ಮತ್ತು ವಾಟ್ಸ್ಯಾಪ್ ಸೌಲಭ್ಯವನ್ನೂ (080-45888882, 9353645921) ಹೊಂದಿದೆ. ಇದರ ನಿರ್ವಹಣೆಗಾಗಿ ಪ್ರತ್ಯೇಕ ತಂಡವೇ ಇದೆ. ಒಂದು ನಂಬರಿನಲ್ಲಿ ಯಾರಾದರೂ ಮಾತನಾಡುತ್ತಿದ್ದರೆ, ಅದು ತಾನಾಗಿಯೇ ಮತ್ತೊಂದು ಸಂಖ್ಯೆಗೆ ಸಂಪರ್ಕ ಕಲ್ಪಿಸುವ ಕ್ಲೌಡ್ ಬೇಸ್ಡ್ ಟೆಲಿಕಾಂ ಸಿಸ್ಟಮ್ ಅಳವಡಿಸಿಕೊಳ್ಳಲಾಗಿದೆ.
ಎಂಎಸ್ಐಎಲ್ ಚಿಟ್ ಫಂಡ್ ಕುರಿತು
ರಾಜ್ಯ ಸರ್ಕಾರ MSIL, ಮೈಸೂರು ಪೇಂಟ್ಸ್ & ವಾರ್ನಿಶ್, ಎನ್.ಜಿ.ಇ.ಎಫ್ ಮುಂತಾದವುಗಳನ್ನು ಲಾಭದಾಯಕವನ್ನಾಗಿ ಮಾಡುತ್ತಿದೆ. ಎಂಎಸ್ಐಎಲ್ ಸದ್ಯಕ್ಕೆ ವಾರ್ಷಿಕ 250 ಕೋಟಿ ರೂ.ಗಳ ಚಿಟ್ ಫಂಡ್ ನಡೆಸುತ್ತಿದೆ. ಇದನ್ನು ಮುಂದಿನ 5 ವರ್ಷಗಳಲ್ಲಿ ವರ್ಷಕ್ಕೆ 5,000 ಕೋಟಿ ರೂ. ಮಟ್ಟಕ್ಕೆ ಕೊಂಡೊಯ್ಯುವ ಯೋಜನೆ ರೂಪಿಸಲಾಗಿದೆ. ಇದಕ್ಕೆ ಸಿಎಂ ಸಿದ್ದರಾಮಯ್ಯ ಸದ್ಯದಲ್ಲೇ ಚಾಲನೆ ನೀಡಲಿದ್ದಾರೆ.
MSIL ವ್ಯಾಪ್ತಿಯ 200 ಮದ್ಯದ ಅಂಗಡಿಗಳನ್ನು ಮೇಲ್ದರ್ಜೆಗೆ ಏರಿಸುವ ಯೋಜನೆಯಡಿ 63 ಮಳಿಗೆಗಳ ಕೆಲಸ ಮುಗಿದಿವೆ. ಇಲ್ಲೆಲ್ಲ ವಹಿವಾಟು ಮೂರು ಪಟ್ಟು ಹೆಚ್ಚಾಗಿದೆ. ಮೈಸೂರು ಪೇಂಟ್ಸ್ ಮತ್ತು ವಾರ್ನಿಶ್ ಮೂಲಕ ಗೃಹ ಬಳಕೆಯ ಪೇಂಟ್ ತಯಾರಿಕೆಗೂ ಗಮನ ಹರಿಸಲಾಗಿದೆ ಎಂದು ಸಚಿವರು ಮಾಹಿತಿ ನೀಡಿದರು.