ಸ್ವಯಂಚಾಲಿತ ವಂಚನೆಗೆ ಬಲಿಯಾಗಬೇಡಿ ಆನ್‌ಲೈನ್ ವಂಚನೆಯಲ್ಲಿ ಯುವಕರು 1 ಲಕ್ಷವನ್ನು ಹೇಗೆ ಕಳೆದುಕೊಳ್ಳುತ್ತಾರೆ.ಇದು ಡಿಜಿಟಲ್ ಯುಗ ಎಲ್ಲವನ್ನು ಕುಳಿತಲ್ಲಿಂದಲೇ ಮಾಡಬಹುದಾದ ಸೌಕರ್ಯಗಳಿರುವ ಈ ಕಾಲಘಟದಲ್ಲಿ ಕೆಲ ಅತ್ಯಾಧುನಿಕವಾದ ಸೌಲಭ್ಯಗಳ ದುರ್ಬಳಕೆಯೂ ಹೆಚ್ಚಾಗುತ್ತಿದೆ. ಕೈಯಲ್ಲೊಂದು ಸ್ಮಾರ್ಟ್ ಫೋನ್, ಇಂಟರ್‌ನೆಟ್, ಅಕೌಂಟ್‌ನಲ್ಲಿ ಒಂದಷ್ಟು ಬ್ಯಾಲೆನ್ಸ್ ಇದ್ರೆ, ಕೈ ಬೆರಳ ತುದಿಯೊಂದರಲ್ಲಿ ನಮಗೆ ಬೇಕಾದನ್ನು ನಮ್ಮ ಕಾಲ ಬಳಿ ತರಿಸಬಹುದಾಗಿದೆ. ಆದರೆ ಎಲ್ಲಾ ಸವಲತ್ತುಗಳಿಗೂ ಒಂದೊಂದು ನ್ಯೂನತೆ ಇರುವಂತೆಯೇ ಇದಕ್ಕೂ ಈಗ ಸಾಕಷ್ಟು ಅಡ್ಡಪರಿಣಾಮಗಳಿದ್ದು, ಸ್ವಲ್ಪ ಎಚ್ಚರ ತಪ್ಪಿದರು ನಿಮ್ಮ ಬೆರಳ ತುದಿಯ ಒಂದು ಟಚ್‌ನಿಂದಲೇ ನಿಮ್ಮ ಖಾತೆಯಲ್ಲಿರುವ ಹಣವೆಲ್ಲವೂ ಇನ್ಯಾರದ್ದೋ ದಂಧೆಕೋರರ ಪಾಲಾಗಬಹುದು.
ತಂತ್ರಜ್ಞಾನಗಳು ಬೆಳೆದಂತೆ ಅದರ ಸದ್ಭಳಕೆಯ ಜೊತೆ ದುರ್ಬಳಕೆಯೂ ಆಗುತ್ತಿದ್ದು, ಸೈಬರ್ ಕಳ್ಳರು ತಾವು ಕುಳಿತಲ್ಲಿಂದಲೇ ಇನ್ಯಾವುದೋ ಮೂಲೆಯಲ್ಲಿ ಇರುವ ಕಷ್ಟಪಟ್ಟು ದುಡಿದ ಸಂಗ್ರಹ ಮಾಡಿದ ಹಣಕ್ಕೆ ಕನ್ನ ಹಾಕುತ್ತಿದ್ದು, ಇದರಿಂದ ಜನಸಾಮಾನ್ಯರು ಸಂಕಷ್ಟಕ್ಕೀಡಾಗಿದ್ದು, ಸ್ಮಾರ್ಟ್‌ಫೋನ್ ಬಳಕೆಗೆ ಯೋಚನೆ ಮಾಡುವಂತಾಗಿದೆ. ಅದೇ ರೀತಿ ಇಲ್ಲೊಂದು ಕಡೆ ಸಾಫ್ಟ್‌ವೇರ್ ಡೆವಲರ್ ಆಗಿ ಕೆಲಸ ಮಾಡುತ್ತಿದ್ದ 26 ವರ್ಷದ ಹುಡುಗನೋರ್ವ ತನ್ನ ಖಾತೆಯಲ್ಲಿದ್ದ ಬರೋಬ್ಬರಿ 1 ಲಕ್ಷ ರೂಪಾಯಿಯನ್ನು ಕಳೆದುಕೊಂಡಿದ್ದಾರೆ.
ಗುಜರಾತ್‌ನ ಅಹ್ಮದಾಬಾದ್‌ನ ಈ ಯುವಕ ಸಾಫ್ಟ್‌ವೇರ್ ಡೆವಲಪರ್ ಆಗಿ ಕೆಲಸ ಮಾಡುತ್ತಿದ್ದು, ಸಿಂಧು ಭವನ್ ರಸ್ತೆಯಲ್ಲಿರುವ ಖಾಸಗಿ ಸಂಸ್ಥೆಯೊಂದರಲ್ಲಿ ಕೆಲಸ ಮಾಡುತ್ತಿದ್ದು, ಘಟ್ಲೊಡಿಯಾದಲ್ಲಿ ವಾಸ ಮಾಡುತ್ತಿದ್ದರು. ಅವರು ತಮಗಾದ ಈ ಡಿಜಿಟಲ್ ಹಗರಣದ ಅನುಭವವನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ.
ಇವರು ಏನನ್ನೂ ಕೂಡ ಆನ್‌ಲೈನ್‌ನಲ್ಲಿ ಆರ್ಡರ್ ಮಾಡದಿದ್ದರೂ ಕೂಡ ಇವರಿಗೆ ಐವಿಆರ್ (Interactive voice response) ವ್ಯವಸ್ಥೆಯನ್ನು ಆಧರಿಸಿರುವ ಸ್ವಯಂಚಾಲಿತ ಡೆಲಿವರಿಯ ಕರೆಯೊಂದು ಬಂದಿದೆ. ಅದರಲ್ಲಿ ಹೇಳುತ್ತಿದ್ದಂತೆ ಇವರು ತಮ್ಮ ಮೊಬೈಲ್ ಫೋನ್‌ನಲ್ಲಿ ಒಂದು ನಂಬರ್ ಅನ್ನು ಒತ್ತಿದ್ದಾರೆ. ಅಲ್ಲದೇ ಚೆನ್ನೈನಿಂದ ಮುಂಬೈಗೆ ಕಳುಹಿಸಲಾದ ಪಾರ್ಸೆಲ್ ಬಗ್ಗೆ ವಿವರ ಹೊಂದಿರುವ ವ್ಯಕ್ತಿಯೊಬ್ಬರಿಗೆ ಅವರ ಫೋನ್ ಕರೆ ಕನೆಕ್ಟ್ ಮಾಡಲಾಗುತ್ತಿದೆ ಎಂದು ಹೇಳಿ ಫೋನ್ ಕನೆಕ್ಟ್ ಮಾಡಿದ್ದಾರೆ.
ಅಲ್ಲದೇ ಈ ಡಿಜಿಟಲ್ ವಂಚಕರು, ಮೋಸಕ್ಕೊಳಗಾದ ಯುವಕ ಆಧಾರ್ ಬಗ್ಗೆ ಸ್ಪಷ್ಟ ವಿವರ ನೀಡಿದ್ದು, ಆತ ಈ ಸ್ಕ್ಯಾಮ್ ಕರೆ ನಂಬುವರಂತೆ ಮಾಡಿ ಮೋಸ ಮಾಡಿದ್ದಾರೆ. ನಂತರ ಕರೆಯೂ ಮುಂಬೈ ಕ್ರೈಂ ಬ್ರಾಂಚ್‌ನಿಂದ ಸುನೀಲ್ ದತ್ ಎಂದು ಪೋಸ್ ಕೊಡುತ್ತಿರುವವರಿಗೆ ರವಾನೆಯಾಗಿದೆ. ಇದು ಪಾರ್ಸೆಲ್ ಎಂದು ಈ ನಕಲಿ ಅಧಿಕಾರಿ ಮೋಸಕ್ಕೊಳಗಾದ ಯುವಕನಿಗೆ ಮಾಹಿತಿ ನೀಡಿದ್ದಾರೆ. ಅಲ್ಲದೇ ತಾವು ಆರು ಬ್ಯಾಂಕ್ ಕಾರ್ಡ್‌ಗಳನ್ನು ಹೊಂದಿದ್ದು, ಆಪಾದಿತ ಆರ್ಥಿಕ ಅಪರಾಧಗಳಿಗಾಗಿ ಡಿಜಿಟಲ್ ಬಂಧನದಲ್ಲಿರುವುದಾಗಿ ಆತನಿಗೆ ಹೇಳಿದ್ದಾರೆ.
ಅಲ್ಲದೇ ಜಾರಿ ನಿರ್ದೇಶನಾಲಯ ಹೊರಡಿಸಿದ ನಕಲಿ ಬಂಧನ ವಾರಂಟ್ ಅನ್ನು ತೋರಿಸಿ ಅವರನ್ನು ಮತ್ತಷ್ಟು ಭಯಪಡಿಸಿದ್ದಾರೆ. ಅಲ್ಲದೇ ವಕೀಲನ ರೂಪದಲ್ಲಿದ್ದ ಖಲೀಮ್ ಅನ್ಸಾರಿ ಎಂಬ ಮತ್ತೊಬ್ಬನಿಗೆ ಈ ಯುವಕನ ಕರೆಯನ್ನು ಕನೆಕ್ಟ್ ಮಾಡಿದ್ದು, ಆತನ ಸೂಚನೆಯಂತೆ ಈ ಯುವ ಸಾಫ್ಟ್‌ವೇರ್ ಡೆವಲಪರ್ ತಮ್ಮ ಖಾತೆಯಲ್ಲಿದ್ದ 1 ಲಕ್ಷ ರೂಪಾಯಿ ಉಳಿತಾಯವನ್ನು ಸಂಪೂರ್ಣವಾಗಿ ದಂಧೆಕೋರರಿಗೆ ಟ್ರಾನ್ಸ್‌ಫಾರ್ ಮಾಡಿದ್ದಾರೆ. ಹೀಗೆ ಒಮ್ಮೆ ಖಾತೆಯಿಂದ ಹಣ ಕಟ್ ಆದ ನಂತರ ದೂರವಾಣಿ ಕರೆ ಕಡಿತಗೊಂಡಿದ್ದು, ಮತ್ತೆ ಮೋಸಕ್ಕೊಳಗಾದ ಯುವಕನಿಗೆ ಈ ಡಿಜಿಟಲ್ ದಂಧೆಕೋರರನ್ನು ಸಂಪರ್ಕಿಸಲು ಸಾಧ್ಯವಾಗಿಲ್ಲ,
ಈ ಆನ್‌ಲೈನ್ ದಂಧೆಯಿಂದ ಪಾರಾಗೋದು ಹೇಗೆ?
- ಅಪರಿಚಿತ ದೂರವಾಣಿ ಕರೆಯನ್ನು ರಿಸೀವ್ ಮಾಡಬೇಡಿ
- ಮೊದಲು ಕರೆ ಮಾಡುವವರ ಗುರುತು ಪತ್ತೆ ಮಾಡಿ
- ಹೀಗೆ ಸ್ವಯಂಚಾಲಿತ ಕರೆ ಬಂದಾಗ ಫೋನ್‌ನಲ್ಲಿ ಹೇಳುವ ಆಯ್ಕೆಗಾಗಿ ನಂಬರ್ ಪ್ರೆಸ್ ಮಾಡಲು ಹೋಗಬೇಡಿ.
- ಏನೋ ಎಡವಟ್ಟಾಗಿದೆ, ಹಣ ಕಟ್ಟಾಗಿದೆ ಎಂಬುದು ನಿಮ್ಮ ಗಮನಕ್ಕೆ ಬಂದಲ್ಲಿ ಕೂಡಲೇ ಸೀದಾ ಸೈಬರ್ ಕ್ರೈಂ ಸಹಾಯವಾಣಿಯನ್ನು ಸಂಪರ್ಕಿಸಿ