ಬಾಳೆ ಎಲೆ ಊಟದಲ್ಲಿದೆ ಬಾಳಿನ ಆರೋಗ್ಯ; ಒಂದಲ್ಲ, ಎರಡಲ್ಲ ಹಲವಾರು ಪ್ರಯೋಜನ

ಬಾಳೆ ಎಲೆ ಊಟದಲ್ಲಿದೆ ಬಾಳಿನ ಆರೋಗ್ಯ; ಒಂದಲ್ಲ, ಎರಡಲ್ಲ ಹಲವಾರು ಪ್ರಯೋಜನ

ದೀಪಾವಳಿಯನ್ನು ಖುಷಿಯಿಂದ ಆಚರಿಸಿ ಹಬ್ಬದ ಊಟವನ್ನು ನಾವೆಲ್ಲ ಮಾಡಿದ್ದೇವೆ. ಎಷ್ಟೋ ಮನೆಗಳಲ್ಲಿ ಹಬ್ಬದೂಟವನ್ನು ಬಾಳೆ ಎಲೆಯ ಮೇಲೆ ಮಾಡಬೇಕೆಂಬ ಅಲಿಖಿತ ಶಾಸ್ತ್ರವಿದೆ. ಆದರೆ ಹಿಂದೆ ಪ್ರತಿ ದಿನವೂ ಪ್ರತಿ ಊಟದಲ್ಲೂ ತಟ್ಟೆಗಳ ಬದಲಿಗೆ ಬಾಳೆಯ ಎಲೆಯನ್ನೇ ಬಳಸುತ್ತಿದ್ದರು. ನಮ್ಮ ಹಿರಿಯರ ಆರೋಗ್ಯದ ಗುಟ್ಟುಗಳಲ್ಲಿ ಇದು ಕೂಡಾ ಒಂದಾಗಿತ್ತು.



ಇದೇ ನಮಗೆ ಅತ್ಯಂತ ಲಾಭದಾಯಕ

ಬಾಳೆ ಎಲೆ ಅಂತಹ ಒಂದು ವಿಶೇಷವಾದ ಪದಾರ್ಥ. ಬಾಳೆಹಣ್ಣು, ಬಾಳೆಯ ಹೂವು, ಕೊನೆಗೆ ಬಾಳೆ ದಿಂಡನ್ನು ಕೂಡ ನಾವು ತಿನ್ನಲು ಬಳಸಬಹುದು. ಅವೆಲ್ಲವಕ್ಕೂ ವಿಶೇಷವಾದ ಔಷಧಿ ಗುಣಗಳಿವೆ ಮತ್ತು ವಿಶೇಷವಾದ ಪೋಷಕಾಂಶಗಳನ್ನು ಅವು ಹೊಂದಿವೆ. ಬಾಳೆ ಎಲೆ ಕೂಡಾ ಇಂತಹ ಪೋಷಕಾಂಶಗಳನ್ನು ಮತ್ತು ಅತಿ ವಿಶೇಷವಾದ ರೋಗ ನಾಶಕ ಗುಣಗಳನ್ನು ಹೊಂದಿದ್ದರೂ ಅದನ್ನು ನಾವು ತಿನ್ನಲು ಸಾಧ್ಯವಿಲ್ಲ. ಏಕೆಂದರೆ ಇದು ಸೆಲ್ಯುಲೋಸ್ ಮತ್ತು ಹೆಮಿ-ಸೆಲ್ಯುಲೋಸ್ ಅನ್ನು ಒಳಗೊಂಡಿದೆ. ಹಾಗಾಗಿ ಇದನ್ನು ನಾವು ಊಟ ಮಾಡುವ ತಟ್ಟೆಯ ರೀತಿಯಲ್ಲಿ ಮಾತ್ರ ಬಳಸುತ್ತೇವೆ. ಆದರೆ ಆಶ್ಚರ್ಯವೆಂದರೆ ಇದೇ ನಮಗೆ ಅತ್ಯಂತ ಲಾಭದಾಯಕವಾಗಿದೆ.

ಕ್ಯಾನ್ಸರ್ ನಿರೋಧಕ

ನಾವು ಬಿಸಿ ಆಹಾರವನ್ನು ಬಾಳೆ ಎಲೆಯ ಮೇಲೆ ಹಾಕಿದಾಗ ಅಥವಾ ಇಡ್ಲಿ, ಕಡುಬು ಮುಂತಾದವುಗಳನ್ನು ಬಾಳೆ ಎಲೆ ಬಳಸಿ ಬೇಯಿಸಿದಾಗ, ಎಲೆಯ ಮೇಲೆ ಇರುವ ಒಂದು ರೀತಿಯ ಮೇಣ (ಎಪಿಕ್ಯೂಟಿಕುಲಾರ್ ವ್ಯಾಕ್ಸ್) ಕರಗುತ್ತದೆ. ಇದರಿಂದಾಗಿ ಆ ಮೇಣದ ಹಿಂದೆ ಇರುವ ಪಾಲಿಫಿನಾಲ್ಸ್ ನಮಗೆ ದೊರೆಯುತ್ತದೆ. ಇದು ಅತ್ಯಂತ ಅದ್ಭುತವಾದ ಕ್ಯಾನ್ಸರ್ ನಿರೋಧಕವಾಗಿದೆ. ಸೋರಿಯಾಸಿಸ್ನಂತಹ ಕಾಯಿಲೆಗಳಲ್ಲಿ ಕೂಡ ಇದು ಲಾಭದಾಯಕ ಎಂದು ವಿಜ್ಞಾನ ಹೇಳುತ್ತದೆ. ಹಿಂದೆ ಮಕ್ಕಳಾಗದೇ ಇರುವವರಿಗೆ ಬಾಳೆ ಎಲೆಯ ಮೇಲೆ ಬಿಸಿ ಅನ್ನ ಮತ್ತು ತುಪ್ಪವನ್ನು ಹಾಕಿ ಊಟ ಮಾಡಬೇಕು ಎಂದು ಹೇಳುತ್ತಿದ್ದರಂತೆ. ಇದನ್ನು ಗಮನಿಸಿದರೆ ಇದು ಸಂತಾನಕ್ಕೆ ಕೂಡಾ ಅನುಕೂಲಕರ ಆಗಿರಬೇಕು.

ಇದರಲ್ಲಿರುವ ಪಾಲಿಫಿನಾಲ್ಸ್ ನಮ್ಮ ದೇಹದಲ್ಲಿರುವ ಫ್ರೀ ರ್ಯಾಡಿಕಲ್ಸ್ ವಿರುದ್ಧ ಹೋರಾಡುವ ಕಾರಣ ಇದು ದೀರ್ಘಕಾಲೀನ ಕಾಯಿಲೆಗಳಲ್ಲಿ ಅನುಕೂಲಕರವಾಗಿದೆ. ಇದೇ ಕಾರಣದಿಂದ ಇದು ಹೃದಯಕ್ಕೆ ಸಂಬಂಧಪಟ್ಟ ಸಮಸ್ಯೆಗಳು, ಡಯಾಬಿಟಿಸ್ ಅಥವಾ ಕ್ಯಾನ್ಸರ್ನಂತಹ ಕಾಯಿಲೆಗಳಲ್ಲಿ ಹೆಚ್ಚು ಪ್ರಯೋಜಕ. ಬ್ಯಾಕ್ಟೀರಿಯಾ ನಿರೋಧಕ ಗುಣ ಕೂಡಾ ಬಾಳೆ ಎಲೆಯಲ್ಲಿ ಇದೆ ಎಂದು ಸಂಶೋಧನೆಗಳು ಹೇಳುತ್ತವೆ. ಇದರಿಂದಾಗಿ ಆಹಾರದಲ್ಲಿರುವ ಕೆಟ್ಟ ಬ್ಯಾಕ್ಟೀರಿಯಾಗಳಿಂದ ನಮ್ಮ ದೇಹದ ಮೇಲೆ ಆಗುವ ಕೆಟ್ಟ ಪರಿಣಾಮಗಳು ತಡೆಯಲ್ಪಡುತ್ತವೆ. ಬಾಳೆ ಎಲೆಯ ಮೇಲೆ ಊಟ ಮಾಡುವುದು ಜೀರ್ಣಕ್ರಿಯೆಗೆ ಕೂಡ ಅನುಕೂಲಕರ. ಕೆಲವು ಸಂಶೋಧನೆಗಳ ಪ್ರಕಾರ ಬಾಳೆ ಎಲೆಯ ಮೇಲೆ ಬಿಸಿ ಊಟ ಮಾಡುವುದು ರೋಗನಿರೋಧಕ ಶಕ್ತಿಯನ್ನು ಕೂಡ ಹೆಚ್ಚಿಸುತ್ತದೆ.

ಪರಿಸರ ಸ್ನೇಹಿ

ನಾವು ಸಾಮಾನ್ಯವಾಗಿ ತಟ್ಟೆಗಳನ್ನು ರಾಸಾಯನಿಕಗಳಿಂದ ತೊಳೆಯುತ್ತೇವೆ. ಎಷ್ಟು ಸ್ವಚ್ಛವಾಗಿ ತೊಳೆದಿದ್ದೇವೆ ಎಂದುಕೊಂಡರೂ ಅದು ನಮಗೆ ಹಾನಿಕಾರಕವೇ. ಜೊತೆಗೆ ಪರಿಸರಕ್ಕೆ ಕೂಡ ಅವುಗಳಿಂದಾಗಿ ತುಂಬಾ ಹಾನಿಯಾಗುತ್ತದೆ. ಆದರೆ ಬಾಳೆ ಎಲೆಯನ್ನು ನಾವು ಬಳಕೆ ಮಾಡಿ ನಂತರ ದನ, ಕುರಿಗಳಂತಹ ಪ್ರಾಣಿಗಳಿಗೆ ಆಹಾರವಾಗಿ ನೀಡಬಹುದು. ಇದರಿಂದಾಗಿ ಪರಿಸರದ ಮೇಲೆ ತುಂಬಾ ಒಳ್ಳೆಯ ಪರಿಣಾಮ ಆಗುತ್ತದೆ. ಸಾಧ್ಯವಾದಷ್ಟು ನಮ್ಮ ಊಟವನ್ನು ಬಾಳೆ ಎಲೆಯಲ್ಲಿ ಮಾಡಲು ಪ್ರಯತ್ನಿಸಬೇಕು. ಆದರೆ ಅದರ ಸಂಪೂರ್ಣ ಪ್ರಯೋಜನ ಸಿಗಬೇಕು ಎಂದಾದರೆ ಒಂದೋ ಆಹಾರವನ್ನು ಬಾಳೆ ಎಲೆಯಲ್ಲಿ ಸುತ್ತಿ ಉಗಿಯಲ್ಲಿ ಬೇಯಿಸಬೇಕು ಅಥವಾ ಬಿಸಿ ಪದಾರ್ಥಗಳನ್ನು ಎಲೆಯ ಮೇಲೆ ಹಾಕಿ ಊಟ ಮಾಡಬೇಕು. ಇದರಿಂದ ಆಹಾರದ ರುಚಿ ಮತ್ತು ಪರಿಮಳ ಎರಡೂ ಹೆಚ್ಚಿ ಹಬ್ಬದೂಟಕ್ಕೆ ವಿಶೇಷ ಮೆರುಗನ್ನು ಕೊಡುತ್ತದೆ.

Post a Comment

Previous Post Next Post
CLOSE ADS
CLOSE ADS
×