PM Internship scheme gets great response: ಪ್ರಧಾನಮಂತ್ರಿ ಇಂಟರ್ನ್ಶಿಪ್ ಯೋಜನೆಯಲ್ಲಿ ಒಂದೇ ದಿನದಲ್ಲಿ 1.55 ಲಕ್ಷಕ್ಕೂ ಅಧಿಕ ಅಭ್ಯರ್ಥಿಗಳು ನೊಂದಾಯಿಸಿಕೊಂಡಿದ್ದಾರೆ. 193 ಕಂಪನಿಗಳು ಇಂಟರ್ನ್ಶಿಪ್ ಅವಕಾಶ ನೀಡಿವೆ. ಒಂದು ಕೋಟಿ ಯುವಕ ಮತ್ತು ಯುವತಿಯರಿಗೆ ಉದ್ಯೋಗಾವಕಾಶ ಹೆಚ್ಚಿಸುವ ಸಲುವಾಗಿ ಆರಂಭವಾದ ಈ ಯೋಜನೆ ನಿರೀಕ್ಷಿತ ರೀತಿಯಲ್ಲಿ ಒಳ್ಳೆಯ ಸ್ಪಂದನೆ ಪಡೆದಿದೆ.
ಒಂದು ಕೋಟಿ ಯುವಕ ಮತ್ತು ಯುವತಿಯರಿಗೆ ನೈಜ ಉದ್ಯೋಗ ತರಬೇತಿ ಕಲ್ಪಿಸುವ ಉದ್ದೇಶದಿಂದ ಆರಂಭಿಸಲಾದ ಪಿಎಂ ಇಂಟರ್ನ್ಶಿಪ್ ಯೋಜನೆಗೆ ಉತ್ತಮ ಸ್ಪಂದನೆ ಸಿಕ್ಕಿದೆ. ಈ ಸ್ಕೀಮ್ನ ಪೋರ್ಟಲ್ ಆರಂಭವಾದ ಒಂದೇ ದಿನಕ್ಕೆ ಒಂದೂವರೆ ಲಕ್ಷಕ್ಕೂ ಅಧಿಕ ಅಭ್ಯರ್ಥಿಗಳು ನೊಂದಾಯಿಸಿಕೊಂಡಿದ್ದಾರೆ. ಸರ್ಕಾರ ಮೂಲಗಳನ್ನು ಉಲ್ಲೇಖಿಸಿ ಇಂಡಿಯಾ ಟುಡೆ ಮಾಡಿರುವ ವರದಿ ಪ್ರಕಾರ ಪೋರ್ಟಲ್ನಲ್ಲಿ ಒಂದು ದಿನದಲ್ಲಿ ನೊಂದಾಯಿಸಿಕೊಂಡವರ ಸಂಖ್ಯೆ 1,55,109 ಇದೆ. ಎಲ್ ಅಂಡ್ ಟಿ, ರಿಲಾಯನ್ಸ್ ಸೇರಿದಂತೆ 193 ಕಂಪನಿಗಳು ಇದೇ ಪ್ಲಾಟ್ಫಾರ್ಮ್ನಲ್ಲಿ ಇಂಟರ್ನ್ಶಿಪ್ ಅವಕಾಶವನ್ನು ಒದಗಿಸಿವೆ.
ಮಾರುತಿ ಸುಜುಕಿ, ಎಲ್ ಅಂಡ್ ಟಿ, ರಿಲಾಯನ್ಸ್ ಇಂಡಸ್ಟ್ರೀಸ್, ಮುತ್ತೂಟ್ ಫೈನಾನ್ಸ್, ಜುಬಿಲೆಂಟ್ ಫೂಡ್ವರ್ಕ್ಸ್ ಇತ್ಯಾದಿ ಪ್ರಮುಖ ಖಾಸಗಿ ಸಂಸ್ಥೆಗಳು ಈ ಪಟ್ಟಿಯಲ್ಲಿವೆ. ತೈಲ ಅನಿಲ, ಹೋಟೆಲ್, ವಾಹನ, ಬ್ಯಾಂಕಿಂಗ್ ಮೊದಲಾದ ವಿವಿಧ ವಲಯಗಳ ಕಂಪನಿಗಳು ಈ ಯೋಜನೆಯಲ್ಲಿ ಕೈಜೋಡಿಸಿವೆ.
ಇಂಟರ್ನ್ಶಿಪ್ ಸ್ಕೀಮ್ನಿಂದ ಏನು ಉಪಯೋಗ?
ವಿದ್ಯಾಭ್ಯಾಸ ಮುಗಿಸಿ ಇನ್ನೂ ಕೆಲಸಕ್ಕೆ ಸೇರದ, ಮತ್ತು ಕೌಶಲ್ಯ ಕೊರತೆಯಿಂದ ಕೆಲಸ ದೊರಕದ ಯುವಕ ಮತ್ತು ಯುವತಿಯರಿಗೆ ಉದ್ಯೋಗಾವಕಾಶ ಹೆಚ್ಚಿಸಲು ಸರ್ಕಾರ ಇಂಟರ್ನ್ಶಿಪ್ ಯೋಜನೆ ಜಾರಿಗೊಳಿಸಿದೆ. ಇಂಟರ್ನ್ಗಳಾಗುವ ಮೂಲಕ ಒಂದು ವರ್ಷ ಕೆಲಸದ ಅನುಭವ ಗಿಟ್ಟಿಸಿ, ಉದ್ಯೋಗಾವಕಾಶ ಹೆಚ್ಚಿಸಿಕೊಳ್ಳಬಹುದು. ಟಾಪ್ 500 ಕಂಪನಿಗಳಲ್ಲಿ ಸಿಕ್ಕ ಕೆಲಸ ಅನುಭವವು ಅಭ್ಯರ್ಥಿಗಳಿಗೆ ಅಗತ್ಯ ಕೌಶಲ್ಯ ಮತ್ತು ಆತ್ಮವಿಶ್ವಾಸ ತಂದುಕೊಡುವ ನಿರೀಕ್ಷೆ ಇದೆ. ಇದೇ ಉದ್ದೇಶದಿಂದ ಸರ್ಕಾರ ಪಿಎಂ ಇಂಟರ್ನ್ಶಿಪ್ ಸ್ಕೀಮ್ ಆರಂಭಿಸಿದೆ.
ಇದರಲ್ಲಿ ಅಭ್ಯರ್ಥಿಗಳಿಗೆ ಆರಂಭದಲ್ಲಿ ಲಂಪ್ಸಮ್ ಆಗಿ 6,000 ರೂ ನೀಡಲಾಗುತ್ತದೆ. ಆ ಬಳಿಕ ಸರ್ಕಾರ ಪ್ರತೀ ತಿಂಗಳು 4,500 ರೂ ಸಹಾಯಧನ ಒದಗಿಸುತ್ತದೆ. ಕಂಪನಿ ವತಿಯಿಂದ ಮಾಸಿಕ 500 ರೂವರೆಗೆ ಹಣವನ್ನು ನೀಡಬಹುದು. ಈ ತರಬೇತಿ ಸ್ಕೀಮ್ ಒಂದು ವರ್ಷದ ಅವಧಿ ಇರಲಿದ್ದು, ಒಬ್ಬ ಅಭ್ಯರ್ಥಿಗೆ 66,000 ರೂ ಧನಸಹಾಯ ಸಿಕ್ಕಂತಾಗುತ್ತದೆ.
ಈ ಯೋಜನೆಗೆಂದು ನಿರ್ದಿಷ್ಟವಾದ ಪೋರ್ಟಲ್ ಅನ್ನು ಆರಂಭಿಸಲಾಗಿದೆ. ಇದರಲ್ಲಿ ಆಸಕ್ತ ಅಭ್ಯರ್ಥಿಗಳು ನೊಂದಾಯಿಸಿಕೊಳ್ಳಬಹುದು. ತಮ್ಮ ವಿದ್ಯಾಭ್ಯಾಸ ಹಾಗೂ ಕೆಲಸ ಮಾಡಲು ಇಚ್ಛಿಸುವ ಕ್ಷೇತ್ರಗಳನ್ನು ಆಯ್ದುಕೊಳ್ಳಬಹುದು. ಅದೇ ವೇಳೆ ಪ್ರಮುಖ ಕಂಪನಿಗಳು ತಮ್ಮಲ್ಲಿ ಇಂಟರ್ನ್ಶಿಪ್ ಅವಕಾಶ ಇದ್ದರೆ ಅದನ್ನು ನಮೂದಿಸಬಹುದು. ಯಾವ ಇಂಟರ್ನ್ಶಿಪ್ ಹುದ್ದೆಗಳಿಗೆ ಯಾವ ಅಭ್ಯರ್ಥಿಗಳು ಸೂಕ್ತ ಎಂಬುದನ್ನು ಪೋರ್ಟಲ್ನಲ್ಲೇ ನಿರ್ಧರಿಸಿ, ಶಾರ್ಟ್ಲಿಸ್ಟ್ ಮಾಡಲಾಗುತ್ತದೆ. ಕಂಪನಿಗಳು ತಮಗೆ ಬೇಕಾದ ಅಭ್ಯರ್ಥಿಗಳನ್ನು ಆಯ್ದುಕೊಳ್ಳಬಹುದು.
ದೇಶಾದ್ಯಂತ 737 ಜಿಲ್ಲೆಗಳಲ್ಲಿ ಇಂಟರ್ನ್ಶಿಪ್ ಸ್ಕೀಮ್ ಅಡಿಯಲ್ಲಿ ತರಬೇತಿ ಅವಕಾಶ ಇರಲಿದೆ. ಈ ಸ್ಕೀಮ್ಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳ ವಯಸ್ಸು 21ರಿಂದ 24 ವರ್ಷದೊಳಗಿರಬೇಕು. ಕನಿಷ್ಠ ವಿದ್ಯಾರ್ಹತೆ ಎಸ್ಸೆಸ್ಸೆಲ್ಸಿ ಇದೆ. ಬಿಎ, ಬಿಎಸ್ಸಿ, ಬಿಕಾಂ ಇತ್ಯಾದಿ ಪದವೀಧರರೂ ಅರ್ಜಿ ಸಲ್ಲಿಸಬಹುದು. ಯಾವುದೇ ಕಂಪನಿಯಲ್ಲಿ ಪೂರ್ಣಾವಧಿ ಕೆಲಸ ಮಾಡಿರಕೂಡದು. ಇವೇ ಮುಂತಾದ ಕೆಲ ಷರತ್ತುಗಳಿವೆ. ಈ ಸ್ಕೀಮ್ನ ಪೋರ್ಟಲ್ನ ವಿಳಾಸ ಇಂತಿದೆ: pminternship.mca.gov.in