ಜವಾಹರ ನವೋದಯ ವಿದ್ಯಾಲಯದ ಪ್ರವೇಶಕ್ಕೆ ಆಹ್ವಾನ, ಶಾಲೆ ಬಗ್ಗೆ ತಿಳಿಯಿರಿ

ಜವಾಹರ ನವೋದಯ ವಿದ್ಯಾಲಯದ ಪ್ರವೇಶಕ್ಕೆ ಆಹ್ವಾನ, ಶಾಲೆ ಬಗ್ಗೆ ತಿಳಿಯಿರಿ

ಜವಾಹರ ನವೋದಯ ವಿದ್ಯಾಲಯದ ಪ್ರವೇಶಕ್ಕಾಗಿ ಅರ್ಜಿಗಳನ್ನು ಆಹ್ವಾನಿಸಲಾಗುತ್ತದೆ. ನವೋದಯ ವಿದ್ಯಾಲಯವು ತನ್ನದೇ ಆದ ಶೈಕ್ಷಣಿಕ ಉದ್ದೇಶಗಳನ್ನು ಹೊಂದಿದ್ದು, ವಿದ್ಯಾಲಯವು ಗ್ರಾಮೀಣ ಪ್ರದೇಶದ ಪ್ರತಿಭಾವಂತ ಮಕ್ಕಳಿಗೆ ಮೀಸಲಾಗಿರುವ ಶಿಕ್ಷಣ ಸಂಸ್ಥೆಯಾಗಿದೆ. ಹಲವು ವರ್ಷಗಳಿಂದ 10 ಮತ್ತು 12ನೇ ತರಗತಿಯ ಪರೀಕ್ಷೆಗಳಲ್ಲಿ ವಿದ್ಯಾಲಯ ನೂರಕ್ಕೆ ನೂರು ಫಲಿತಾಂಶವನ್ನು ಪಡೆಯುತ್ತಿದೆ. ವಿದ್ಯಾಲಯದಲ್ಲಿ ಓದಿದ ನೂರಾರು ವಿದ್ಯಾರ್ಥಿಗಳು ಹಲವು ಕ್ಷೇತ್ರಗಳಲ್ಲಿ ಉನ್ನತ ಸಾಧನೆಯನ್ನು ಮಾಡಿರುತ್ತಾರೆ.



ಮಕ್ಕಳನ್ನು ಜವಾಹರ ನವೋದಯ ವಿದ್ಯಾಲಯಕ್ಕೆ ಸೇರಿರುವ ಮುನ್ನ ವಿದ್ಯಾಲಯದ ಕುರಿತು ಮಾಹಿತಿಯನ್ನು ತಿಳಿಯಿರಿ. ಜವಾಹರ ನವೋದಯ ವಿದ್ಯಾಲಯದ ಕಿರು ಪರಿಚಯವನ್ನು ವಿದ್ಯಾರ್ಥಿಗಳು, ಪೋಷಕರ ಅನುಕೂಲಕ್ಕಾಗಿ ನೀಡಲಾಗಿದೆ. ಇದು ವಸತಿ ಶಾಲೆಯಾಗಿದ್ದು, ಪರೀಕ್ಷೆ ಮೂಲಕ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ.

ಮಾನವ ಸಂಪನ್ಮೂಲ ಇಲಾಖೆಯ ಅಡಿಯಲ್ಲಿ 1986ರಲ್ಲಿ ಸ್ಥಾಪಿಸಲ್ಪಟ್ಟ ನವೋದಯ ವಿದ್ಯಾಲಯವು ನಮ್ಮ ದೇಶದ ಶಿಕ್ಷಣ ಕ್ಷೇತ್ರದಲ್ಲಿ ಇಂದು ಮಹತ್ವದ ಪಾತ್ರವಹಿಸಿದೆ. ಸುಮಾರು 600ಕ್ಕೂ ಹೆಚ್ಚು ವಿದ್ಯಾಲಯಗಳು ಪ್ರತಿ ಜಿಲ್ಲೆಗೆ ಒಂದರಂತೆ ಸ್ಥಾಪಿಸಲ್ಪಟ್ಟಿದ್ದು, ದಕ್ಷಿಣೋತ್ತರವಾಗಿ ಪೂರ್ವ ಪಶ್ಚಿಮವಾಗಿ ದೇಶದ ತುಂಬೆಲ್ಲ ಹರಡಿಕೊಂಡಿದೆ. ನವೋದಯ ವಿದ್ಯಾಲಯ ಸಮಿತಿಯು ಇಲಾಖೆಯ ಅಡಿಯಲ್ಲಿ ಒಂದು ಸ್ವಾಯತ್ತ ಸಂಸ್ಥೆಯಾಗಿ ಇದ್ದುಕೊಂಡು ಈ ವಿದ್ಯಾಲಯಗಳನ್ನು ಮುನ್ನಡೆಸುತ್ತಿದೆ.

ನವೋದಯ ವಿದ್ಯಾಲಯದ ಪರಿಚಯ: 

ನವೋದಯ ವಿದ್ಯಾಲಯವು ತನ್ನದೇ ಆದ ಶೈಕ್ಷಣಿಕ ಉದ್ದೇಶಗಳನ್ನು ಹೊಂದಿದೆ. ಪ್ರತಿ ವರ್ಷ 6ನೇ ತರಗತಿಗೆ ಪ್ರವೇಶ ಪಡೆಯುವ 80 ವಿದ್ಯಾರ್ಥಿಗಳಲ್ಲಿ ಕನಿಷ್ಠ ಪ್ರತಿಶತ 75 ಮಕ್ಕಳು ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಾಗಿರುತ್ತಾರೆ.

ಅಲ್ಲದೇ ನಿಯಮಾನುಸಾರ ಪ್ರತಿಶತ ಶೇ 22.5ರಷ್ಟು ಮಕ್ಕಳು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಾಗಿರುತ್ತಾರೆ. ಇದಲ್ಲದೆ ಕೇಂದ್ರ ಸರ್ಕಾರ ಸೂಚಿಸಿದ ಹಿಂದುಳಿದ ವರ್ಗದ ವಿದ್ಯಾರ್ಥಿಗಳಿಗೂ ಶೇಕಡ ಶೇ 27 ಮೀಸಲಾತಿ ಅನುಕೂಲವಿದೆ. ಆಯ್ಕೆಯಾಗುವ ವಿದ್ಯಾರ್ಥಿಗಳಲ್ಲಿ ಕನಿಷ್ಠ ಶೇ 33 ಪ್ರತಿಶತ ವಿದ್ಯಾರ್ಥಿನಿಯರು ಆಗಿರುತ್ತಾರೆ.

ವಿದ್ಯಾಲಯದಲ್ಲಿ 6 ನೇ ತರಗತಿಯಿಂದ 12ನೇ ತರಗತಿಯವರೆಗೆ ಬೋಧಿಸಲಾಗುತ್ತಿದೆ. ಸಿಬಿಎಸ್‍ಇ ಪಠ್ಯಕ್ರಮಕ್ಕೆ ಅನುಗುಣವಾಗಿ ಪಾಠ ಬೋಧನೆ ಇದ್ದು, ಪಠ್ಯದ ಜೊತೆಗೆ ಪಠ್ಯಪೂರಕ ಚಟುವಟಿಕೆಗಳಿಗೆ ಅವಕಾಶವ್ತಿದೆ. ಪ್ರತಿ ವಿದ್ಯಾಲಯದಲ್ಲಿ ಎಲ್ಲಾ ಬೋಧನಾ ವಿಷಯದ ಶಿಕ್ಷಕರ ಜೊತೆಗೆ ದೈಹಿಕ ಶಿಕ್ಷಕರು, ಸಂಗೀತ ಶಿಕ್ಷಕರೂ, ಕಲಾ ಶಿಕ್ಷಕರೂ ಇದ್ದು ಮಕ್ಕಳ ಸರ್ವಾಂಗೀಣ ಪ್ರಗತಿಗೆ ಶ್ರಮಿಸಲಾಗುತ್ತಿದೆ.

ವಿದ್ಯಾಲಯವು ಪ್ರತಿವರ್ಷ ಆಯಾಯ ಜಿಲ್ಲೆಯ ವಿದ್ಯಾರ್ಥಿಗಳನ್ನು ಪ್ರವೇಶ ಪರೀಕ್ಷೆಯ ಮೂಲಕ 6ನೇ ತರಗತಿಗೆ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಿಕೊಳ್ಳುತ್ತಿದೆ. ಇದು ವಸತಿ ಶಾಲೆಯಾಗಿದ್ದು ವಿದ್ಯಾರ್ಥಿ ಹಾಗೂ ವಿದ್ಯಾರ್ಥಿನಿಯರಿಗೆ ಪ್ರತ್ಯೇಕ ಹಾಸ್ಟೆಲ್‌ಗಳಿರುತ್ತವೆ. ಮಕ್ಕಳ ಅರೋಗ್ಯವನ್ನು ನೋಡಿಕೊಳ್ಳಲು ಪ್ರತಿ ವಿದ್ಯಾಲಯದಲ್ಲಿ ಸ್ಟಾಫ್ ನರ್ಸ್‍ಗಳು ನೇಮಕವಾಗಿದ್ದಾರೆ. ಜೊತೆಗೆ ಮಕ್ಕಳ ಒತ್ತಡ ಮುಂತಾದ ಮಾನಸಿಕ ಸಮಸ್ಯೆಗಳನ್ನು ನಿವಾರಿಸಲು ಇಬ್ಬರು ಆಪ್ತ ಸಮಾಲೋಚಕರು ಇದ್ದಾರೆ. ವಿದ್ಯಾರ್ಥಿಗಳ ಶಿಕ್ಷಣಿಕ ಹಾಗೂ ಊಟ ವಸತಿ, ಪಠ್ಯಪುಸ್ತಕ, ಸಮವಸ್ತ್ರ ಮತ್ತಿತರ ಎಲ್ಲಾ ಖರ್ಚು ವೆಚ್ಚಗಳನ್ನು ಸರ್ಕಾರವೇ ಭರಿಸುತ್ತದೆ.

ಪ್ರತಿವರ್ಷ 9ನೇ ತರಗತಿಯಲ್ಲಿ ಓದುತ್ತಿರುವ ವಿದ್ಯಾರ್ಥಿಗಳಲ್ಲಿ ಶೇಕಡ 30 ರಷ್ಟು ವಿದ್ಯಾರ್ಥಿಗಳನ್ನು ಹಿಂದಿ ಮಾತೃಭಾಷೆ ಹೊಂದಿರುವ ರಾಜ್ಯದ ನಿರ್ದಿಷ್ಟ ವಿದ್ಯಾಲಯಕ್ಕೆ ವಿದ್ಯಾರ್ಥಿಗಳ ವಲಸೆ ಯೋಜನೆಯ ಅಡಿ ಕಳುಹಿಸಿ ಕೊಡಲಾಗುತ್ತಿದೆ. ಅದೇ ರೀತಿ ಈ ವಿದ್ಯಾರ್ಥಿಗಳ ವಲಸೆ ಪದ್ಧತಿಯಿಂದ ವಿದ್ಯಾರ್ಥಿಗಳಿಗೆ ಬಹುಸಂಸ್ಕೃತಿಯ ಅರಿವು ಉಂಟಾಗುತ್ತದೆ.

ನವೋದಯ ವಿದ್ಯಾಲಯವು ಹಲವು ವರ್ಷಗಳಿಂದ 10 ಮತ್ತು 12ನೇ ತರಗತಿಯ ಪರೀಕ್ಷೆಗಳಲ್ಲಿ ನೂರಕ್ಕೆ ನೂರು ಫಲಿತಾಂಶ ಪಡೆಯುತ್ತಿದೆ. ವಿದ್ಯಾಲಯವು ಪ್ರತಿವರ್ಷದಂತೆ ಈ ವರ್ಷವೂ (2025-26 ನೇ ಶೈಕ್ಷಣಿಕ ಸಾಲಿಗಾಗಿ) 6ನೇ ತರಗತಿಗೆ ಪ್ರವೇಶ ಪಡೆಯುವ ವಿದ್ಯಾರ್ಥಿಗಳಿಗೆ ಪ್ರವೇಶ ಪರೀಕ್ಷೆಗಾಗಿ ಆನ್‍ಲೈನ್ ಅರ್ಜಿಯನ್ನು ಆಹ್ವಾನಿಸಲಾಗಿದೆ.

ಈ ಪರೀಕ್ಷೆಯಲ್ಲಿ ಹೆಚ್ಚಿನ ವಿದ್ಯಾರ್ಥಿಗಳು ಭಾಗವಹಿಸಿ ಅತ್ಯುತ್ತಮ ವಿದ್ಯಾರ್ಥಿಗಳು ನಮ್ಮ ವಿದ್ಯಾಲಯಕ್ಕೆ ಆಯ್ಕೆಯಾಗಿ ಬರಬೇಕೆಂಬುದೇ ಆಶಯವಾಗಿದೆ. ಈ ಪರೀಕ್ಷೆಗೆ ಕುಳಿತುಕೊಳ್ಳಲು ಅನುಕೂಲವಾಗಿವಂತೆ ಅಗತ್ಯ ಮಾಹಿತಿಯನ್ನು ವಿದ್ಯಾರ್ಥಿಗಳಿಗೆ ತಲುಪುವಂತೆ ಮಾಡುವುದು ನಮ್ಮೆಲ್ಲರ ಕರ್ತವ್ಯ.

Post a Comment

Previous Post Next Post
CLOSE ADS
CLOSE ADS
×