ಆರ್‌ಸಿ ಕಾರ್ಡ್‌, ಡ್ರೈವಿಂಗ್‌ ಲೈಸೆನ್ಸ್‌ನಲ್ಲಿ ಮಹತ್ವದ ಬದಲಾವಣೆ, ಏನದು?

ವಾಹನ ಮಾಲೀಕರಿಗೆ ರಾಜ್ಯ ಸರ್ಕಾರ ಸಿಹಿ ಸುದ್ದಿ ನೀಡಿದೆ. ಇಲ್ಲಿವರೆಗೆ ಇದ್ದ ಡ್ರೈವಿಂಗ್‌ ಲೈಸೆನ್ಸ್‌ (DL) ಹಾಗೂ ವಾಹನ ನೋಂದಣಿ ಪ್ರಮಾಣ ಪತ್ರಕ್ಕೆ (RC) ಗುಡ್‌ಬೈ ಹೇಳಲು ಸರ್ಕಾರ ಮುಂದಾಗಿದ್ದು, ಹೊಸ ವರ್ಷದಿಂದಲೇ ಈ ಹೊಸ ನಿಯಮ ಜಾರಿಯಾಗಲಿದೆ ಎಂದು ಹೇಳಲಾಗಿದೆ.



ಇನ್ನು ಮುಂದೆ ಸ್ಮಾರ್ಟ್‌ ಡಿಲ್‌ ಹಾಗೂ ಆರ್‌ಸಿ ಕಾರ್ಡ್‌ ವಿತರಿಸುವ ವ್ಯವಸ್ಥೆಯು ಮುಂದಿನ ಜನವರಿಯಿಂದ ರಾಜ್ಯದೆಲ್ಲೆಡೆ ಅನುಷ್ಠಾನಗೊಳಿಸುವ ಮಹತ್ವದ ಬದಲಾವಣೆ ತರಲು ಸರ್ಕಾರ ಮುಂದಾಗಿದೆ. ಈ ಸ್ಮಾರ್ಟ್‌ ಕಾರ್ಡ್ (smart card) ರೂಪದಲ್ಲಿ ಡಿಎಲ್‌ ಹಾಗೂ ಆರ್‌ಸಿ ವಿತರಣೆಯಾಗಲಿದ್ದು, ಇದರಲ್ಲಿ ಕ್ಯೂಆರ್‌ ಕೋಡ್‌ ಮತ್ತು ಚಿಪ್‌ ಕೂಡ ಇರಲಿದೆಯಂತೆ.

ಕೇಂದ್ರ ಸಾರಿಗೆ ಮತ್ತು ರಾಷ್ಟ್ರೀಯ ಹೆದ್ದಾರಿ ಸಚಿವಾಲಯವು 2019ರಲ್ಲಿ ಒಂದು ದೇಶ ಒಂದು ಕಾರ್ಡ್‌ ವ್ಯವಸ್ಥೆ ಜಾರಿ ಮಾಡುವಂತೆ ಎಲ್ಲ ರಾಜ್ಯಗಳಿಗೆ ಸೂಚನೆ ನೀಡಿತ್ತು. ಹಾಗಾಗಿ ಈಗಾಗಲೇ ಈ ಯೋಜನೆಯಡಿ ಛತ್ತೀಸಗಢ, ಹಿಮಾಚಲ ಪ್ರದೇಶ, ತಮಿಳುನಾಡು ಸೇರಿದಂತೆ ಹಲವು ರಾಜ್ಯಗಳಲ್ಲಿ ಈ ಸ್ಮಾರ್ಟ್‌ ಕಾರ್ಡ್‌ ವಿತರಿಸಲಾಗುತ್ತಿದೆ.

ಸಂಚಾರಿ ನಿಯಮ ಪಾಲಿಸದವರ ಲೈಸೆನ್ಸ್ ರದ್ದು: ಸಾರಿಗೆ ಸಚಿವರಿಗೆ ಸಿಎಂ ಸಿದ್ದರಾಮಯ್ಯ ಖಡಕ್ ಸೂಚನೆ 

ಆದರೆ ಕರ್ನಾಟಕದಲ್ಲಿ ಡಿಎಲ್‌, ಆರ್‌ಸಿ ಕಾರ್ಡ್‌ ವಿತರಣೆಗೆ ನೀಡಿದ್ದ ಗುತ್ತಿಗೆ ಅವಧಿಯು ಮುಂದಿನ ಫೆಬ್ರವರಿವರೆಗೆ ಇರುವುದರಿಂದ ಆ ಬಳಿಕ ಈ ಹೊಸ ಯೋಜನೆ ಅನುಷ್ಠಾನಗೊಳಿಸಲು ಸಾರಿಗೆ ಇಲಾಖೆ ಮುಂದಾಗಿತ್ತು. ಸದ್ಯ ಟೆಂಡರ್‌ ಅವಧಿ ಮುಗಿಯುತ್ತಿರುವುದರಿಂದ ಡಿಎಲ್‌, ಆರ್‌ಸಿ ಕಾರ್ಡ್‌ನ್ನು ಸ್ಮಾರ್ಟ್‌ಕಾರ್ಡ್‌ ರೂಪದಲ್ಲಿ ನೀಡಲು ಟೆಂಡರ್‌ ಕರೆಯಲಾಗಿದೆ. ಇನ್ನೆರಡು ವಾರಗಳಲ್ಲಿ ಇದು ಮುಗಿಯಲಿದೆ ಎಂದು ಸಾರಿಗೆ ಇಲಾಖೆ ತಿಳಿಸಿದೆ.

ಈಗಿರುವ ಕಾರ್ಡ್‌ನಲ್ಲಿ ಕೇವಲ ಚಿಪ್‌ ಮಾತ್ರ ಇತ್ತು. ಚಿಪ್‌ನಲ್ಲಿರುವ ಮಾಹಿತಿ ಪರಿಶೀಲಿಸಲು ಆರ್‌ಟಿಒ, ಪೊಲೀಸ್‌ ಠಾಣೆಗಳಿಗೆ ಹೋಗಬೇಕಾಗಿತ್ತು. ಈಗ ಹೊಸ ಕಾರ್ಡ್‌ನಲ್ಲಿ ಕ್ಯೂಆರ್ ಕೋಡ್‌ ಸೌಲಭ್ಯ ಇರುವುದರಿಂದ ಪರದಾಟ ತಪ್ಪಲಿದೆ. ಸಂಪೂರ್ಣ ಮಾಹಿತಿಯು ಈ ಕಾರ್ಡ್‌ನಲ್ಲೇ ಲಭ್ಯವಾಗಲಿದೆ.

ಡ್ರೈವಿಂಗ್‌ ಲೈಸೆನ್ಸ್‌ನಲ್ಲಿ ಮಾಲೀಕರ ಹೆಸರು, ಫೋಟೋ, ಜನ್ಮದಿನಾಂಕ, ರಕ್ತದ ಗುಂಪು, ಕಾರ್ಡ್‌ನ ಅವಧಿ, ಮೊಬೈಲ್‌ ನಂಬರ್‌ ಸೇರಿದಂತೆ ಸಂಪೂರ್ಣ ವಿವರಗಳು ಇದರಲ್ಲೇ ಸಿಗಲಿದೆ. ಆರ್‌.ಸಿ ಕಾರ್ಡ್‌ನ ಮುಂದೆ ರಿಜಿಸ್ಟ್ರೇಷನ್‌ ನಂಬರ್‌, ನೋಂದಣಿ ದಿನಾಂಕ, ವಾಹನ ಚಾಸಿಸ್‌, ಇಂಜಿನ್‌ ನಂಬರ್‌, ವಾಹನ ಮಾಲೀಕರ ವಿಳಾಸ ಇರಲಿದೆ. ಹಿಂಬದಿಯಲ್ಲಿರುವ ಕ್ಯೂಆರ್‌ ಕೋಡ್‌ನೊಂದಿಗೆ ವಾಹನ ತಯಾರಕ ಕಂಪನಿ ಹೆಸರು, ಮಾಡಲ್‌ ನಂಬರ್‌, ಲೋನ್‌ ನೀಡಿರುವ ಸಂಸ್ಥೆಯ ಮಾಹಿತಿಯೂ ಸೇರಿದಂತೆ ಎಲ್ಲ ವಿವರ ಅದರಲ್ಲಿಯೇ ಲಭ್ಯವಾಗಲಿದೆ ಎಂದು ಹೇಳಲಾಗಿದೆ.

ಹಳೆಯ ಕಾರ್ಡ್‌ ಹೇಗಿದೆ?: 

ಸದ್ಯ ಇಲ್ಲಿವರೆಗೆ ನೀಡಲಾಗುತ್ತಿರುವ ಹಳೆಯ ಶೈಲಿಯ ಡ್ರೈವಿಂಗ್‌ ಲೈಸೆನ್ಸ್‌ ಹಾಗೂ ಆರ್‌.ಸಿ.ಕಾರ್ಡ್‌ಗಳು ಪಿವಿಸಿ ಮಾದರಿಯದ್ದು ಎನ್ನಲಾಗಿದೆ. ಕಾರ್ಡ್‌ನಲ್ಲಿ ಮುದ್ರೆಯಾಗುವ ಅಕ್ಷರಗಳು ಅಳಿಸಿ ಹೋಗುವ ಅಥವಾ ಮುರಿಯುವ ಸಾಧ್ಯತೆಯೂ ಹೆಚ್ಚಾಗಿರುತ್ತದೆ. ಆದರೆ, ಹೊಸ ಸ್ಮಾರ್ಟ್‌ಕಾರ್ಡ್‌ ಪಾಲಿ ಕಾರ್ಬೊನೇಟ್‌ ಮಾದರಿಯಲ್ಲಿರುವುದರಿಂದ ಅಕ್ಷರಗಳು ಅಳಿಸಿ ಹೋಗುವ ಚಿಂತೆಯೂ ಇರುವುದಿಲ್ಲ.

ಅಲ್ಲದೆ ಪ್ರತಿ ರಾಜ್ಯದಲ್ಲೂ ವಿಭಿನ್ನವಾದ ಡ್ರೈವಿಂಗ್‌ ಲೈಸೆನ್ಸ್‌ ನೀಡಲಾಗುತ್ತಿದ್ದು, ಇದು ತಪಾಸಣೆ ವೇಳೆ ಗೊಂದಲ ಉಂಟು ಮಾಡುತ್ತಿದ್ದವು. ಈಗ ಬರುವ ಸ್ಮಾರ್ಟ್‌ಕಾರ್ಡ್‌ ಡಿಲ್‌ ಇಡೀ ದೇಶದ ಉದ್ದಗಲಕ್ಕೂ ಎಲ್ಲ ರಾಜ್ಯಗಳಲ್ಲೂ ಒಂದೇ ಮಾದರಿಯಲ್ಲಿರಲಿವೆ. ಪೊಲೀಸರು ಹಾಗೂ ಆರ್‌ಟಿಒ ಅಧಿಕಾರಿಗಳಿಗೂ ಈ ಹೊಸ ನಿಯಮದಿಂದಾಗಿ ತಲೆನೋವು ತಪ್ಪಲಿದೆ ಎಂದು ಹೇಳಲಾಗಿದೆ.

Previous Post Next Post