ಕರ್ನಾಟಕದಲ್ಲಿ ಜಾರಿಯಾಗಬೇಕಿದ್ದ ಒಪಿಎಸ್ ಸ್ಕೀಮ್ ಏನಾಯಿತು?

ಕರ್ನಾಟಕದಲ್ಲಿ ಜಾರಿಯಾಗಬೇಕಿದ್ದ ಒಪಿಎಸ್ ಸ್ಕೀಮ್ ಏನಾಯಿತು?

Karnataka state employees association president CS Shadakshari speaks: ಏಕೀಕೃತ ಪಿಂಚಣಿ ಯೋಜನೆ ಬಗ್ಗೆ ತಮಗೆ ಸಮಾಧಾನ ಇಲ್ಲ. ಹಳೆಯ ಒಪಿಎಸ್ ಸ್ಕೀಮ್ ಅನ್ನೇ ಜಾರಿಗೆ ತರಬೇಕು ಎಂದು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್. ಷಡಾಕ್ಷರಿ ಒತ್ತಾಯಿಸಿದ್ದಾರೆ. ಈ ಯೂನಿಫೈಡ್ ಪೆನ್ಷನ್ ಸ್ಕೀಮ್ ಮೂಲಕ ಎನ್ಪಿಎಸ್ನಲ್ಲಿ ಸುಧಾರಣೆ ತರಲಾಗಿದೆ ಅಷ್ಟೇ. ಒಪಿಎಸ್ ಕಡೆಗೆ ಶೇ. 60ರಷ್ಟು ಬಂದಿದ್ದಾರೆ. ಇನ್ನೂ ಶೇ. 40ರಷ್ಟು ಬರಬೇಕಿದೆ ಎಂದು ಷಡಾಕ್ಷರಿ ಟಿವಿ9 ಡಿಜಿಟಲ್ಗೆ ತಿಳಿಸಿದ್ದಾರೆ.



ಕರ್ನಾಟಕ ಸರ್ಕಾರ ಭರವಸೆ ಕೊಟ್ಟ ಹಳೆಯ ಪಿಂಚಣಿ ಯೋಜನೆ ಏನಾಯಿತು? ಯಾವಾಗ ಜಾರಿಯಾಗುತ್ತೆ?

ನ್ಯಾಷನಲ್ ಪೆನ್ಷನ್ ಸಿಸ್ಟಂ ಬದಲು ಹಿಂದಿನ ಓಲ್ಡ್ ಪೆನ್ಷನ್ ಸ್ಕೀಮ್ ಅನ್ನು ಜಾರಿಗೆ ತರುವುದಾಗಿ ಹೇಳಿದ್ದ ಕರ್ನಾಟಕ ಸರ್ಕಾರದ ಭರವಸೆ ಇನ್ನೂ ಈಡೇರಿಲ್ಲ. ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ರಾಜ್ಯ ಸರ್ಕಾರಿ ನೌಕರರ ಒತ್ತಾಯದ ಮೇರೆಗೆ ಓಲ್ಡ್ ಪೆನ್ಷನ್ ಸ್ಕೀಮ್ ಜಾರಿಗೆ ತರಲು ಐವರು ಸದಸ್ಯರ ಸಮಿತಿ ರಚಿಸಿತ್ತು. ಅದಿನ್ನೂ ಮುಂದುವರಿದಿಲ್ಲ. ಇನ್ನು ಈ ಬಗ್ಗೆ ಕರ್ನಾಟಕ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್. ಷಡಾಕ್ಷರಿ ಅವರು ಟಿವಿ9 ಕನ್ನಡ ಡಿಜಿಟಲ್ ಜೊತೆ ಮಾತನಾಡಿ, ಹಳೆಯ ಪಿಂಚಣಿ ಜಾರಿ ಆಗಲೇಬೇಕು ಎಂದು ಆಗ್ರಹಿಸಿದ್ದಾರೆ.

ಕೇಂದ್ರ ಸರ್ಕಾರ ಜಾರಿಗೆ ತರಲು ಹೊರಟಿರುವ ಏಕೀಕೃತ ಪಿಂಚಣಿ ಯೋಜನೆ ಬಗ್ಗೆ ಸಿಎಸ್ ಷಡಾಕ್ಷರಿ ಅತೃಪ್ತಿ ವ್ಯಕ್ತಪಡಿಸಿದ್ದಾರೆ. ಟಿವಿ9 ಡಿಜಿಟಲ್ ಜೊತೆ ಮಾತನಾಡಿದ ಅವರು, ಹಳೆಯ ಪೆನ್ಷನ್ ಸಿಸ್ಟಂ ಅನ್ನೇ ಜಾರಿ ತರಬೇಕೆಂದು ಆಗ್ರಹಿಸಿದ್ದಾರೆ. ಎನ್ಪಿಎಸ್ ಸ್ಕೀಮ್ನಲ್ಲಿ ಸುಧಾರಣೆ ತರಲಾಗಿದೆಯಾದರೂ ಓಲ್ಡ್ ಪೆನ್ಷನ್ ಸಿಸ್ಟಂನ ಮಟ್ಟಕ್ಕೆ ಇದು ಶೇ. 60ರಷ್ಟು ಮುಟ್ಟಿದೆ ಎಂಬುದು ಅವರ ಅನಿಸಿಕೆ.

ಷೇರು ಮಾರುಕಟ್ಟೆಗೆ ದುಡ್ಡು ಹಾಕ್ತಾರೆ, ಲಕ್ಷಾಂತರ ಸಿಗುತ್ತೆ ಅಂತ ನಂಬಿ ಮೋಸ ಹೋದ್ವಿ

ಈಗ ಚಾಲನೆಯಲ್ಲಿರುವ ನ್ಯಾಷನಲ್ ಪೆನ್ಷನ್ ಸಿಸ್ಟಂ ಬಗ್ಗೆ ವ್ಯಗ್ರರಾದ ಷಡಾಕ್ಷರಿ, ‘ಎನ್ಪಿಎಸ್ ಜಾರಿಗೆ ಬಂದಾಗ, ಷೇರು ಮಾರುಕಟ್ಟೆಯಿಂದ ಹಣ ಭಾರೀ ಬೆಳೆಯುತ್ತದೆ. 60-70 ಲಕ್ಷ ರೂ ಸಿಗುತ್ತೆ ಎಂದೆಲ್ಲಾ ಅಂದುಕೊಂಡಿದ್ವಿ. ಅದು ಜಾರಿಗೆ ಬಂದು ಎಂಟು ಹತ್ತು ವರ್ಷದಲ್ಲಿ ಗೊತ್ತಾಯಿತು, ರಿಟೈರ್ ಆದವರಿಗೆ ಎರಡು ಸಾವಿರ, ಮೂರು ಸಾವಿರ ರೂ ಪಿಂಚಣಿ ಸಿಗುತ್ತೆ ಅಂತ. ಆಗ ನಾವು ಇದನ್ನು ವಿರೋಧ ಮಾಡೋಕೆ ಪ್ರಾರಂಭಿಸಿದ್ವಿ’ ಎಂದು ಹೇಳಿದ್ದಾರೆ.

ಕುಮಾರಸ್ವಾಮಿ ಸಿಎಂ ಆಗಿದ್ದಾಗ ಕಮಿಟಿ ರಚನೆ ಆಗಿತ್ತು

ಹೊಸ ಪೆನ್ಷನ್ ಸಿಸ್ಟಂ ವಿರುದ್ಧ ರಾಜ್ಯದಲ್ಲಿ ಹೋರಾಟಗಳು ನಡೆದಿವೆ. ಮೈತ್ರಿ ಸರ್ಕಾರದಲ್ಲಿ ಕುಮಾರಸ್ವಾಮಿ ಸಿಎಂ ಆಗಿದ್ದಾಗ ಪಿಂಚಣಿ ಸ್ಕೀಮ್ ಅನ್ನು ಪರಿಶೀಲಿಸಿಸಲು ಕಮಿಟಿ ರಚಿನೆಯಾಗಿತ್ತು. ಬಳಿಕ ಸರ್ಕಾರ ಬಿದ್ದು ಹೋಯಿತು. ಬೊಮ್ಮಾಯಿ ಮುಖ್ಯಮಂತ್ರಿಯಾಗಿದ್ದಾಗಲೂ ಕಮಿಟಿ ರಚಿಸಲಾಗಿತ್ತು. ಆದರೆ, ಅದೇ ಸಂದರ್ಭದಲ್ಲಿ ಚುನಾವಣೆ ಘೋಷಣೆ ಆದ್ದರಿಂದ ಅದು ಮುಂದುವರಿಯಲಿಲ್ಲ ಎಂದು ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಷಡಾಕ್ಷರಿ ಅವರು ಮಾಹಿತಿ ನೀಡಿದರು.

ಸಿದ್ದರಾಮಯ್ಯ ಸರ್ಕಾರದ ಒಪಿಎಸ್ ಭರವಸೆ ಏನಾಯಿತು?

ಎನ್ಪಿಎಸ್ ಬದಲಾಗಿ ಹಿಂದಿನ ಒಪಿಎಸ್ ಯೋಜನೆಯನ್ನೇ ಕೆಲ ರಾಜ್ಯಗಳು ಅಳವಡಿಸಿವೆ. ಹಿಮಾಚಲಪ್ರದೇಶ, ರಾಜಸ್ಥಾನ, ಛತ್ತೀರಸ್ಗಡ, ಪಂಜಾಬ್ ಮೊದಲಾದ ರಾಜ್ಯಗಳು ಒಪಿಎಸ್ ತಂದಿವೆ. ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಒಪಿಎಸ್ ಜಾರಿಗೊಳಿಸಲು ಐದು ಜನರ ಕಮಿಟಿ ರಚಿಸಿದೆ. ಒಪಿಎಸ್ ಅಳವಡಿಸಿರುವ ರಾಜ್ಯಗಳನ್ನು ಅಧ್ಯಯನ ಮಾಡಿ ವರದಿ ಸಲ್ಲಿಸುವುದು ಈ ಸಮಿತಿ ಜವಾಬ್ದಾರಿ. ಇದಿನ್ನೂ ವರದಿ ಸಲ್ಲಿಕೆ ಆಗಿಲ್ಲ.

ಏಕೀಕೃತ ಪಿಂಚಣಿ ಬಗ್ಗೆ ಏನು ಅಸಮಾಧಾನ?

ಏಕೀಕರತ ಪಿಂಚಣಿ ಯೋಜನೆಯು ಎನ್ಪಿಎಸ್ನಲ್ಲಿ ಸುಧಾರಣೆ ತಂದಿದೆಯೇ ಹೊರತು ಒಪಿಎಸ್ ಅನ್ನು ಅಳವಡಿಸಿಲ್ಲ. ಇದನ್ನು ನಾವು ಸ್ವಾಗತಿಸಲ್ಲ. ಎನ್ಪಿಎಸ್ನಿಂದ ಒಪಿಎಸ್ಗೆ ಬರೋಕೆ ಶೇ. 60ರಷ್ಟು ಮಾತ್ರವೇ ಗುರಿ ಮುಟ್ಟಿದೆ. ಇನ್ನೂ 40 ಪರ್ಸಂಟ್ ಟಾರ್ಗೆಟ್ ರೀಚ್ ಆಗಬೇಕಿದೆ. ಎನ್ಪಿಎಸ್ ಅನ್ನೋದು ಒಪಿಎಸ್ ಆಗಬೇಕು. ನೌಕರರ ವೇತನದಿಂದ ಶೇ. 10ರಷ್ಟು ಹಣ ಮುರಿದುಕೊಳ್ಳುವುದನ್ನು ನಿಲ್ಲಿಸಬೇಕು ಎಂಬುದು ನಮ್ಮ ಬೇಡಿಕೆ. ಅದರಲ್ಲಿ ಯಾವ ರಾಜಿಯೂ ಇಲ್ಲ ಎಂದು ಸಿ.ಎಸ್. ಷಡಾಕ್ಷರಿ ಟಿವಿ ಡಿಜಿಟಲ್ಗೆ ತಿಳಿಸಿದ್ದಾರೆ.

Post a Comment

Previous Post Next Post
CLOSE ADS
CLOSE ADS
×