IPL 2025: 120 ಕೋಟಿ, 90 ಕೋಟಿ, 50 ಕೋಟಿ: ಐಪಿಎಲ್ ಮೆಗಾ ಹರಾಜಿಗೆ ಸಿದ್ಧತೆ ಶುರು

IPL 2025: 120 ಕೋಟಿ, 90 ಕೋಟಿ, 50 ಕೋಟಿ: ಐಪಿಎಲ್ ಮೆಗಾ ಹರಾಜಿಗೆ ಸಿದ್ಧತೆ ಶುರು

IPL 2025: IPL 2025: ಐಪಿಎಲ್ 2025 ಕ್ಕೂ ಮುನ್ನ ಮೆಗಾ ಹರಾಜು ನಡೆಯಲಿದ್ದು, ಈ ಹರಾಜಿಗೂ ಮುನ್ನ ಪ್ರತಿ ಫ್ರಾಂಚೈಸಿಗಳು ಕೆಲವೇ ಕೆಲವು ಆಟಗಾರರನ್ನು ಮಾತ್ರ ಉಳಿಸಿಕೊಳ್ಳಬಹುದು. ಅಲ್ಲದೆ ಉಳಿದೆಲ್ಲಾ ಆಟಗಾರರನ್ನು ರಿಲೀಸ್ ಮಾಡಬೇಕಾಗುತ್ತದೆ. ಹೀಗೆ ಬಿಡುಗಡೆಯಾದ ಆಟಗಾರರು ಮೆಗಾ ಹರಾಜಿನಲ್ಲಿ ಕಾಣಿಸಿಕೊಳ್ಳಲಿದ್ದಾರೆ.




IPL 2025: ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್-18 ಮೆಗಾ ಹರಾಜಿಗಾಗಿ ಸಿದ್ಧತೆಗಳು ಶುರುವಾಗಿದೆ. ಅದರ ಮೊದಲ ಹೆಜ್ಜೆ ಎಂಬಂತೆ ಇದೀಗ ಹರಾಜು ಮೊತ್ತವನ್ನು 120 ಕೋಟಿ ರೂ.ಗೆ ಏರಿಸಲು ಬಿಸಿಸಿಐ ಮುಂದಾಗಿದೆ. ಕಳೆದ ಸೀಸನ್ ಹರಾಜಿನಲ್ಲಿ ಪ್ರತಿ ಫ್ರಾಂಚೈಸಿಗಳಿಗೆ 100 ಕೋಟಿ ರೂ. ಹರಾಜು ಮೊತ್ತ ನಿಗದಿ ಮಾಡಲಾಗಿತ್ತು.

ಆದರೆ ಈ ಬಾರಿ ಮೆಗಾ ಹರಾಜು ನಡೆಯುವುದರಿಂದ ಈ ಮೊತ್ತವನ್ನು ಹೆಚ್ಚಿಸಬೇಕೆಂದು ಕೆಲ ಫ್ರಾಂಚೈಸಿಗಳು ಬಿಸಿಸಿಐಗೆ ಮನವಿ ಮಾಡಿದ್ದರು. ಅದರಂತೆ ಮೆಗಾ ಹರಾಜು ಮೊತ್ತವನ್ನು 120 ಕೋಟಿ ರೂ.ಗೆ ಏರಿಕೆ ಮಾಡಲು ಬಿಸಿಸಿಐ ನಿರ್ಧರಿಸಿದೆ ಎಂದು ಬಲ್ಲ ಮೂಲಗಳಿಂದ ತಿಳಿದು ಬಂದಿದೆ


ಇನ್ನು ಈ ಹರಾಜು ಮೊತ್ತದಲ್ಲಿ ಶೇ.75 ರಷ್ಟು ಬಿಡ್ಡಿಂಗ್ ವೇಳೆ ಬಳಸಿಕೊಳ್ಳುವುದು ಕಡ್ಡಾಯ. ಅಂದರೆ ಪ್ರತಿ ಫ್ರಾಂಚೈಸಿಗಳು ಹರಾಜಿನ ವೇಳೆ ಒಟ್ಟು ಮೊತ್ತ 120 ಕೋಟಿಯಲ್ಲಿ 90 ಕೋಟಿಯನ್ನು ವ್ಯಯಿಸಲೇಬೇಕು. ಅದಕ್ಕಿಂತ ಕಡಿಮೆ ಮೊತ್ತದಲ್ಲಿ ಯಾವುದೇ ಫ್ರಾಂಚೈಸಿ 25 ಸದಸ್ಯರ ತಂಡವನ್ನು ರೂಪಿಸಿಕೊಳ್ಳುವಂತಿಲ್ಲ.

ಹಾಗೆಯೇ 120 ಕೊಟಿಯಿಂದ ರಿಟೈನ್ ಆಟಗಾರರ ಸಂಭಾವನೆ ಮೊತ್ತವನ್ನು ಕಳೆಯಲಾಗುತ್ತದೆ. ಅಂದರೆ ಪ್ರತಿ ಫ್ರಾಂಚೈಸಿಗಳಿಗೆ ನಿರ್ದಿಷ್ಟ ಮೊತ್ತದೊಳಗೆ ನಾಲ್ವರು ಆಟಗಾರರನ್ನು ಉಳಿಸಿಕೊಳ್ಳುವ ಆಯ್ಕೆ ನೀಡುವ ಸಾಧ್ಯತೆಯಿದೆ. ಹೀಗೆ ರಿಟೈನ್ ಮಾಡಿಕೊಳ್ಳುವ ಆಟಗಾರರಿಗೆ ಇಂತಿಷ್ಟು ಮೊತ್ತವನ್ನು ನಿಗದಿ ಮಾಡಲಾಗುತ್ತದೆ.




ಇಲ್ಲಿ ರಿಟೈನ್ ಆಗುವ ಮೊದಲ ಆಟಗಾರನಿಗೆ 20 ಕೋಟಿ ರೂ, 2ನೇ ಆಟಗಾರನಿಗೆ 15 ಕೋಟಿ ರೂ, 3ನೇ ಆಟಗಾರನಿಗೆ 8 ಕೋಟಿ ರೂ , 4ನೇ ಆಟಗಾರನಿಗೆ 7 ಕೋಟಿ ರೂ. ನಿಗದಿ ಮಾಡುವ ಸಾಧ್ಯತೆಯಿದೆ. ಅದರಂತೆ ಒಂದು ಫ್ರಾಂಚೈಸಿಯು ನಾಲ್ವರನ್ನು ತಂಡದಲ್ಲೇ ಉಳಿಸಿಕೊಳ್ಳಲು ಒಟ್ಟು ಹರಾಜು ಮೊತ್ತದಿಂದ 50 ಕೋಟಿ ರೂ. ಅನ್ನು ವ್ಯಯಿಸಬೇಕಾಗುತ್ತದೆ.


ಈ 50 ಕೋಟಿ ರೂ. ಅನ್ನು ಒಟ್ಟು ಹರಾಜು ಮೊತ್ತ 120 ಕೋಟಿಯಿಂದ ಮೈನಸ್ ಮಾಡಲಾಗುತ್ತದೆ. ಅಂದರೆ 120-50= 70 ಕೋಟಿ ರೂ. ಬಾಕಿ. ಅದರಂತೆ ನಾಲ್ವರು ಆಟಗಾರರನ್ನು ಉಳಿಸಿಕೊಂಡ ಫ್ರಾಂಚೈಸಿಯು 70 ಕೋಟಿ ರೂ.ನೊಂದಿಗೆ ಹರಾಜಿನಲ್ಲಿ ಕಾಣಿಸಿಕೊಳ್ಳಲಿದೆ.

ಈ ಬಗ್ಗೆ ಚರ್ಚಿಸಲೆಂದೇ ಈ ತಿಂಗಳಾಂತ್ಯದಲ್ಲಿ ಬಿಸಿಸಿಐ ಐಪಿಎಲ್ ಮಾಲೀಕರೊಂದಿಗೆ ಸಭೆ ಕರೆದಿದೆ. ಈ ಸಭೆಯಲ್ಲಿ ಐಪಿಎಲ್ ಮೆಗಾ ಹರಾಜಿನ ರೂಪುರೇಷೆಗಳ ಬಗ್ಗೆ ಚರ್ಚಿಸಲಾಗುತ್ತದೆ. ಅಲ್ಲದೆ ಹೊಸ ನಿಯಮಗಳ ಬಗ್ಗೆ ಅಂತಿಮ ನಿರ್ಧಾರ ತೆಗೆದುಕೊಳ್ಳಲಿದೆ. ಹೀಗಾಗಿ ಈ ಸಭೆಯ ಬಳಿಕ ಮೆಗಾ ಹರಾಜಿನ ಹೊಸ ನಿಯಮಗಳ ಸ್ಪಷ್ಟ ಚಿತ್ರಣ ಹೊರಬೀಳಲಿದೆ.

Post a Comment

Previous Post Next Post
CLOSE ADS
CLOSE ADS
×