ಕರ್ನಾಟಕದ ಹೋರಾಟಕ್ಕೆ ಜಯ: ಕೇಂದ್ರದಿಂದ ಕೊನೆಗೂ ಬರ ಪರಿಹಾರ ಬಿಡುಗಡೆ; ರಾಜ್ಯ ಕೇಳಿದ್ದೆಷ್ಟು, ಬಂದಿದ್ದೆಷ್ಟು?

ಕರ್ನಾಟಕದ ಹೋರಾಟಕ್ಕೆ ಜಯ: ಕೇಂದ್ರದಿಂದ ಕೊನೆಗೂ ಬರ ಪರಿಹಾರ ಬಿಡುಗಡೆ; ರಾಜ್ಯ ಕೇಳಿದ್ದೆಷ್ಟು, ಬಂದಿದ್ದೆಷ್ಟು?

Drought Relief Fund Release To Karnataka : ಕರ್ನಾಟಕ ಸರ್ಕಾರದ ಹೋರಾಟಕ್ಕೆ ಕೊನೆಗೂ ಜಯ ಸಿಕ್ಕಿದ್ದು, ಕೇಂದ್ರ ಸರ್ಕಾರ ಕೊನೆಗೂ ಕರ್ನಾಟಕಕ್ಕೆ ಬರ ಪರಿಹಾರವನ್ನು ಬಿಡುಗಡೆ ಮಾಡಿದೆ. 3,454 ಕೋಟಿ ರೂ. ಬರ ಪರಿಹಾರವನ್ನು ಕೇಂದ್ರ ಬಿಡುಗಡೆ ಮಾಡಿದ್ದು, ನೆರೆ ಪರಿಹಾರ ಎಂದು ತಮಿಳುನಾಡಿಗೆ 275 ಕೋಟಿ ರೂ. ಅನ್ನು ಬಿಡುಗಡೆ ಮಾಡಿದೆ. ಸೆಪ್ಟೆಂಬರ್‌ನಲ್ಲಿಯೇ ಬರ ಪರಿಹಾರಕ್ಕಾಗಿ ರಾಜ್ಯ ಸರ್ಕಾರ ಬೇಡಿಕೆ ಇಟ್ಟಿತ್ತು. ಆದರೆ, ಮಾರ್ಚ್‌ ಬಂದರೂ ಬರ ಪರಿಹಾರ ಬಿಡುಗಡೆಯಾಗದ್ದಕ್ಕೆ ಕರ್ನಾಟಕ ಸುಪ್ರೀಂ ಕೋರ್ಟ್‌ ಮೊರೆ ಹೋಗಿತ್ತು. ಸುಪ್ರೀಂ ಸೂಚನೆಯ ಬಳಿಕೆ ಬರ ಪರಿಹಾರ ಬಿಡುಗಡೆಯಾಗಿದೆ.



ಬೆಂಗಳೂರು : ಬರ ಪರಿಹಾರ ವಿಚಾರದಲ್ಲಿ ಕರ್ನಾಟಕ ಸರ್ಕಾರದ ಹೋರಾಟಕ್ಕೆ ಕೊನೆಗೂ ಜಯ ಸಿಕ್ಕಿದೆ. ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣೆ ಬಳಿಕ ಕೇಂದ್ರ ಸರ್ಕಾರ ಕರ್ನಾಟಕಕ್ಕೆ 3,454 ಕೋಟಿ ರೂಪಾಯಿ ಬರ ಪರಿಹಾರವನ್ನು ಬಿಡುಗಡೆ ಮಾಡಿದೆ. ಇದರ ಜೊತೆ ತಮಿಳುನಾಡಿಗೆ 275 ಕೋಟಿ ರೂ. ನೆರೆ ಪರಿಹಾರವನ್ನು ಕೂಡ ಕೇಂದ್ರ ಸರ್ಕಾರ ಬಿಡುಗಡೆ ಮಾಡಿದೆ. ಈ ಮೂಲಕ ಬರ ಪರಿಹಾರ ಬಿಡುಗಡೆ ವಿವಾದ ತಾರ್ಕಿಕ ಅಂತ್ಯ ಕಂಡಂತಾಗಿದೆ.

ಕಳೆದ ವರ್ಷ ಮುಂಗಾರು ವಿಫಲವಾಗಿ ರಾಜ್ಯದಲ್ಲಿ ಭೀಕರ ಬರಗಾಲ ಬಂದಿತ್ತು. ಈ ಹಿನ್ನೆಲೆ ಎನ್‌ಡಿಆರ್‌ಎಫ್‌ನಿಂದ ಬರ ಪರಿಹಾರ ಬಿಡುಗಡೆ ಮಾಡುವಂತೆ ಕೇಂದ್ರ ಸರ್ಕಾರದ ಮುಂದೆ ಬೇಡಿಕೆ ಇಟ್ಟಿತ್ತು. ಸೆಪ್ಟೆಂಬರ್‌ನಲ್ಲಿಯೇ ಕೇಂದ್ರದ ಮುಂದೆ 18,174 ಕೋಟಿ ರೂ. ಬರ ಪರಿಹಾರಕ್ಕಾಗಿ ಬೇಡಿಕೆ ಇಟ್ಟಿತ್ತು. ಇದಾದ ಬಳಿಕ ಕೇಂದ್ರದ ತಂಡವೂ ಬಂದು ಬರ ಅಧ್ಯಯನ ನಡೆಸಿ ತೆರಳಿತ್ತು. ಆದರೆ, ಪರಿಹಾರ ಮಾತ್ರ ಬಿಡುಗಡೆಯಾಗಿದ್ದಿಲ್ಲ.

ಬರ ಪರಿಹಾರ ವಿಳಂಬದ ಕಾರಣ ಕರ್ನಾಟಕ ಸರ್ಕಾರ ಕೇಂದ್ರ ಸರ್ಕಾರದ ವಿರುದ್ಧ ಸುಪ್ರೀಂ ಕೋರ್ಟ್‌ ಮೊರೆ ಹೋಗಿತ್ತು. ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣೆಯಲ್ಲಿ ಬರ ಪರಿಹಾರ ಬಿಡುಗಡೆಯ ಕುರಿತು ಒಂದು ವಾರದೊಳಗೆ ನಿರ್ಧರಿಸುತ್ತೇವೆ ಎಂದು ಕೇಂದ್ರ ಸರ್ಕಾರ ಹೇಳಿತ್ತು. ಅದರಂತೆ ಶನಿವಾರ 3,454 ಕೋಟಿ ರೂ. ಬರ ಪರಿಹಾರವನ್ನು ಕರ್ನಾಟಕಕ್ಕೆ ಕೇಂದ್ರ ಸರ್ಕಾರ ಬಿಡುಗಡೆ ಮಾಡಿದ್ದು, ತಾರ್ಕಿಕವಾಗಿ ರಾಜ್ಯ ಸರ್ಕಾರದ ಹೋರಾಟಕ್ಕೆ ಜಯ ಸಿಕ್ಕಂತಾಗಿದೆ.

ಬರ ಪರಿಹಾರ ಬಿಡುಗಡೆ ಮಾಡುವಂತೆ ಕೋರಿ ರಾಜ್ಯ ಸರ್ಕಾರ ಹಲವು ಬಾರಿ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಿತ್ತು. ಆದರೆ, ಸಕಾರಾತ್ಮಕ ಸ್ಪಂದನೆ ಸಿಗದೇ ಇದ್ದುದರಿಂದ, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ತಾರತಮ್ಯ ಮಾಡುತ್ತಿದ್ದು, ರಾಜ್ಯಕ್ಕೆ ದ್ರೋಹ ಎಸಗಿದೆ ಎಂದು ಕರ್ನಾಟಕದಲ್ಲಿನ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಆಕ್ರೋಶ ವ್ಯಕ್ತಪಡಿಸಿತ್ತು. ಬರ ಪರಿಹಾರ, ತೆರಿಗೆ ನ್ಯಾಯಕ್ಕಾಗಿ ದಿಲ್ಲಿಯಲ್ಲಿ ಪ್ರತಿಭಟನೆಯನ್ನು ಕೂಡ ಸರ್ಕಾರ ನಡೆಸಿತ್ತು. ವಿಳಂಬವಾಗಿ ಮನವಿ ಸಲ್ಲಿಸಿದ್ದಕ್ಕೆ ಪರಿಹಾರ ನೀಡಲು ಸಾಧ್ಯವಾಗಿಲ್ಲ, ಇದರ ಹಿಂದೆ ಯಾವುದೇ ದುರುದ್ದೇಶವಿಲ್ಲ ಎಂದು ಕೇಂದ್ರ ಸರ್ಕಾರ ಹಲವು ಬಾರಿ ಹೇಳಿತ್ತು.

ಕೇಂದ್ರದ ಕ್ರಮ ಸ್ವಾಗತಿಸಿದ ಬೊಮ್ಮಾಯಿ!

ಇನ್ನು, ಈ ಬಗ್ಗೆ ಎಕ್ಸ್‌ ಪೋಸ್ಟ್‌ ಮಾಡಿ ಕೇಂದ್ರದ ಕ್ರಮವನ್ನು ಸ್ವಾಗತಿಸಿರುವ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ, ರಾಜ್ಯದಲ್ಲಿ ತೀವ್ರ ಬರ ಇದ್ದರೂ ರಾಜ್ಯ ಸರ್ಕಾರ ನಿರ್ಲಕ್ಷ್ಯ ಮಾಡಿ ತಡವಾಗಿ ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಿದರೂ ಕೇಂದ್ರ ಸರ್ಕಾರ ಚುನಾವಣಾ ಆಯೋಗದ ಅನುಮತಿ ಪಡೆದು ಸಂಕಷ್ಡ ಕಾಲದಲ್ಲೂ ಕರ್ನಾಟಕದ ಜನರ ಪರವಾಗಿ ತೀರ್ಮಾನ ತೆಗೆದುಕೊಂಡಿರುವುದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಹಾಗೂ ಕೇಂದ್ರ ಸರ್ಕಾರದ ಕಳಕಳಿ ತೋರಿಸುತ್ತದೆ. ರಾಜ್ಯ ಸರ್ಕಾರ ನಿರಂತರವಾಗಿ ಈ ಬಗ್ಗೆ ಅಪಪ್ರಚಾರ ಮಾಡದೇ ಆರು ತಿಗಳ ಹಿಂದೆಯೇ ರೈತರಿಗೆ ಪರಿಹಾರ ಒದಗಿಸಿದ್ದರೆ ರೈತರ ಬದುಕು ಸ್ವಲ್ಪನಾದರು ಸುಧಾರಿಸುತ್ತಿತ್ತು. ಆದರೆ, ಅದನ್ನು ರಾಜ್ಯ ಸರ್ಕಾರ ಮಾಡದಿರುವುದು ವಿಷಾದನೀಯ. ಈ ಸಂಕಷ್ಟದ ಕಾಲದಲ್ಲಿ ಕೇಂದ್ರ ಸರ್ಕಾರ ಬರ ಪರಿಹಾರ ಬಿಡುಗಡೆ ಮಾಡುವ ತೀರ್ಮಾನ ತೆಗೆದುಕೊಂಡಿವುದು ಅತ್ಯಂತ ಸ್ವಾಗತಾರ್ಹ ಎಂದಿದ್ದಾರೆ.

Post a Comment

Previous Post Next Post
CLOSE ADS
CLOSE ADS
×