ಅಕ್ಟೋಬರ್- ಡಿಸೆಂಬರ್ ಅವಧಿಯ ಮೂರನೇ ತ್ರೈಮಾಸಿಕದಲ್ಲಿ ಭಾರತದ ಆರ್ಥಿಕತೆ (Indian Economy) ನಿರೀಕ್ಷೆಗೂ ಮೀರಿ ವೃದ್ಧಿಯಾಗಿದೆ.
ಈ ಅವಧಿಯಲ್ಲಿ ಹಲವು ಸಂಸ್ಥೆಗಳು ಜಿಡಿಪಿ (GDP) 6.6% ರಷ್ಟು ಪ್ರಗತಿ ಸಾಧಿಸಬಹುದು ಎಂದು ಅಂದಾಜು ಮಾಡಿದ್ದವು. ಆದರೆ ಈ ನಿರೀಕ್ಷೆಗೂ ಮೀರಿ ಜಿಡಿಪಿ 8.4% ರಷ್ಟು ಪ್ರಗತಿ ಸಾಧಿಸಿದೆ.
ಕಳೆದ ಹಣಕಾಸು ವರ್ಷದ ಈ ಅವಧಿಯಲ್ಲಿ 4.3% ಜಿಡಿಪಿ ಪ್ರಗತಿ ಸಾಧಿಸಿತ್ತು. ನಿರ್ಮಾಣ ವಲಯದ (10.7%), ಉತ್ಪಾದನಾ ವಲಯ (8.5%), ಫೈನಾನ್ಸ್, ರಿಯಲ್ ಎಸ್ಟೇಟ್ ಇತ್ಯಾದಿ ಕ್ಷೇತ್ರ(8.2%) ಬೆಳವಣಿಗೆ ಸಾಧಿಸಿದೆ. ಆದರೆ ದೇಶದಲ್ಲಿ ಬರದಿಂದಾಗಿ ಕೃಷಿ ಕ್ಷೇತ್ರದಲ್ಲಿ ಮಾತ್ರ 0.7% ಬೆಳವಣಿಗೆಯಾಗಿರುವುದು ಕಳವಳಕ್ಕೆ ಕಾರಣವಾಗಿದೆ.
2023-24ರ ಮೂರನೇ ತ್ರೈಮಾಸಿಕದಲ್ಲಿ ಸ್ಥಿರ (2011-12) ದರಗಳಲ್ಲಿ ಜಿಡಿಪಿ 43.72 ಲಕ್ಷ ಕೋಟಿ ರೂ. ಎಂದು ಅಂದಾಜಿಸಲಾಗಿದೆ. ಇದು 2022-23 ರ ಮೂರನೇ ತ್ರೈಮಾಸಿಕದಲ್ಲಿ 40.35 ಲಕ್ಷ ಕೋಟಿ ರೂ ಆಗಿತ್ತು.
ಮೂರನೇ ತ್ರೈಮಾಸಿಕದಲ್ಲಿ 8.4% ಜಿಡಿಪಿ ಬೆಳವಣಿಗೆಯು ದೃಢವಾದ ಭಾರತೀಯ ಆರ್ಥಿಕತೆಯ ಶಕ್ತಿ ಮತ್ತು ಅದರ ಸಾಮರ್ಥ್ಯವನ್ನು ತೋರಿಸುತ್ತದೆ. ವೇಗದ ಆರ್ಥಿಕ ಬೆಳವಣಿಗೆಯನ್ನು ಕಾಣಲು ನಮ್ಮ ಪ್ರಯತ್ನಗಳು ಮುಂದುವರಿಯಲಿದೆ. ಇದು 140 ಕೋಟಿ ಭಾರತೀಯರಿಗೆ ಉತ್ತಮ ಜೀವನವನ್ನು ನಡೆಸಲು ಮತ್ತು ವಿಕಸಿತ್ ಭಾರತವನ್ನು ರಚಿಸಲು ಸಹಾಯ ಮಾಡುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ (PM NarendraModi) ಹೇಳಿದ್ದಾರೆ.
ಜಿಡಿಪಿ ಎಂದರೇನು?
ಜಿಡಿಪಿ ಅಂದರೆ ಗ್ರಾಸ್ ಡೊಮೆಸ್ಟಿಕ್ ಪ್ರೊಡಕ್ಷನ್ ಅಥವಾ ಒಟ್ಟು ರಾಷ್ಟ್ರೀಯ ಉತ್ಪನ್ನ ಅಂತ ಅರ್ಥ. ಅಂದರೆ ಒಂದು ದೇಶದ ಅರ್ಥವ್ಯವಸ್ಥೆಯಲ್ಲಿ ಒಂದು ನಿರ್ದಿಷ್ಟ ಅವಧಿಯಲ್ಲಿ ಉತ್ಪದನೆಯಾಗುವ ಎಲ್ಲಾ ಸರಕು ಮತ್ತು ಸೇವೆಗಳ ಒಟ್ಟು ಮೌಲ್ಯ. ಕೃಷಿ ಉತ್ಪನ್ನ, ಕೈಗಾರಿಕಾ ಉತ್ಪನ್ನ, ಬ್ಯಾಂಕಿಂಗ್ ಮತ್ತು ಹಣಕಾಸು ವಲಯದಲ್ಲಿನ ವಹಿವಾಟು, ಜನರ ಸಂಬಳ, ಗಣಿಗಾರಿಕೆ, ರಿಯಲ್ ಎಸ್ಟೇಟ್, ಆಮದು ರಫ್ತು ಎಲ್ಲವೂ ಸೇರಿ ಲೆಕ್ಕ ಹಾಕಿದಾಗ ಜಿಡಿಪಿ ಎಷ್ಟು ಎಂದು ಲೆಕ್ಕ ಹಾಕಲಾಗುತ್ತದೆ.