ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾನ ಭರದಿಂದ ಸಾಗುತ್ತಿದೆ. ಇದೇ ವೇಳೆ ರಾಜ್ಯದಲ್ಲಿ ಹನುಮಂತನ ಜನ್ಮಸ್ಥಳ ಅಂಜನಾದ್ರಿ ಬೆಟ್ಟವನ್ನು ಬೃಹತ್ ಧಾರ್ಮಿಕ ಪ್ರವಾಸೋದ್ಯಮ ತಾಣವನ್ನಾಗಿ ಮಾಡುವ ಯೋಜನೆ ಆರಂಭವಾಗಿದೆ. ಹೀಗಾಗಿ ಇಲ್ಲಿನ ಭೂಮಿ ಬೆಲೆಯಲ್ಲಿ ಗಗನಕ್ಕೆ ಏರಿಕೆಯಾಗಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಂಜನಾದ್ರಿ ಬೆಟ್ಟದ ದೇಗುಲ ಮತ್ತು ಸುತ್ತಮುತ್ತಲಿನ ಅಭಿವೃದ್ಧಿಗೆ 100 ಕೋಟಿ ರೂಪಾಯಿ ಘೋಷಣೆ ಮಾಡುವ ಮುನ್ನವೇ ತುಂಗಭದ್ರಾ ನದಿ ದಂಡೆಯ ಈ ಪುಟ್ಟ ಗ್ರಾಮದಲ್ಲಿ ರಿಯಲ್ ಎಸ್ಟೇಟ್ ಉದ್ಯಮ ಶುರುವಾಗಿತ್ತು. ಈಗ ರಾಜ್ಯ ಸರ್ಕಾರದ ಜೊತೆಗೆ ಕೇಂದ್ರ ಸರ್ಕಾರ ಕೂಡ ಬೆಟ್ಟವನ್ನು ಧಾರ್ಮಿಕ ಕ್ಷೇತ್ರವನ್ನಾಗಿ ಅಭಿವೃದ್ಧಿಪಡಿಸಲು ಆಸಕ್ತಿ ತೋರಿಸಿದೆ.
ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಅಂಜನಾದ್ರಿ ಬೆಟ್ಟಕ್ಕೆ ಭೇಟಿ ನೀಡಿದಾಗ, ಅವರು ಅಂಜನಾದ್ರಿ ಮತ್ತು ಅಯೋಧ್ಯೆ ನಡುವೆ ನೇರ ರೈಲು ಸಂಪರ್ಕ ಮಾಡುವ ಯೋಜನೆಯನ್ನು ಪ್ರಸ್ತಾಪಿಸಿದ್ದರು. ದೇಗುಲವನ್ನು ನಿರ್ವಹಿಸುವ ಸ್ಥಳೀಯ ಟ್ರಸ್ಟ್ ಅಯೋಧ್ಯೆಯ ಮಾದರಿಯಲ್ಲಿ ಈ ಪ್ರದೇಶವನ್ನು ಅಭಿವೃದ್ಧಿಪಡಿಸುವ ಯೋಜನೆಯನ್ನು ಹೊಂದಿದೆ.
ಈ ಚಟುವಟಿಕೆಗಳು ದೊಡ್ಡ ಪ್ರಮಾಣದ ಅಭಿವೃದ್ಧಿ ಮತ್ತು ಉದ್ಯೋಗಾವಕಾಶಗಳನ್ನು ತರುವ ನಿರೀಕ್ಷೆಯಿದೆ. ಇದನ್ನು ಗ್ರಹಿಸಿದ ಅನೇಕ ಭೂಮಾಲೀಕರು ಭೂಮಿಯ ಬೆಲೆಯನ್ನು 70% ವರೆಗೆ ಏರಿಸಿದ್ದಾರೆ ಎಂದು ಸ್ಥಳೀಯ ನಿವಾಸಿಗಳು ತಿಳಿಸಿದ್ದಾರೆ.
ಸ್ಥಳೀಯ ಉದ್ಯಮಿಯೊಬ್ಬರು ಮಾತನಾಡಿ, "ಆನೆಗುಂದಿ ಗ್ರಾಮದಲ್ಲಿ ಕೆಲ ತಿಂಗಳ ಹಿಂದಿನವರೆಗೆ 12 ಲಕ್ಷ ರೂಪಾಯಿಗೆ ಎಕರೆ ಜಮೀನು ಲಭ್ಯವಿತ್ತು. ಆದರೆ, ಅಯೋಧ್ಯೆ ದೇವಾಲಯ ಉದ್ಘಾಟನೆ ಮತ್ತು ಅಂಜನಾದ್ರಿಯಲ್ಲಿ ಅಭಿವೃದ್ಧಿ ಚಟುವಟಿಕೆಗಳು ಪ್ರಾರಂಭವಾದ ನಂತರ, ಜಮೀನು ಮಾಲೀಕರು ಎಕರೆಗೆ 20 ರಿಂದ 25 ಲಕ್ಷ ರೂಪಾಯಿ ಹೆಚ್ಚಿಗೆ ಕೇಳುತ್ತಿದ್ದಾರೆ. ಆನೆಗುಂದಿಯ ಹೆಚ್ಚಿನ ಭಾಗವು ಸಮೃದ್ಧ ಫಲವತ್ತಾದ ಭೂಮಿಯನ್ನು ಹೊಂದಿದ್ದು, ಕೃಷಿ ಮತ್ತು ತೋಟಗಾರಿಕೆಗೆ ಸೂಕ್ತವಾಗಿದೆ" ಎಂದು ತಿಳಿಸಿದ್ದಾರೆ.
ಅಂಜನಾದ್ರಿ ಬೆಟ್ಟ ಕೂಡ ದೊಡ್ಡ ಪ್ರವಾಸಿ ತಾಣವಾಗಿ ಬದಲಾಗಲಿದ್ದು, ಇದೆ ಕಾರಣಕ್ಕೆ ಮುಂಬೈ ಮತ್ತು ದೇಶದ ಇತರ ಭಾಗಗಳಿಂದ ಹಲವಾರು ಜನರು ಇತ್ತೀಚೆಗೆ ಅಂಜನಾದ್ರಿಗೆ ಭೇಟಿ ನೀಡಿ ಭೂಮಿಯ ಬೆಲೆಗಳನ್ನು ಪರಿಶೀಲಿಸಿದ್ದಾರೆ ಎಂದು ಪಂಚಾಯತ್ ಅಧಿಕಾರಿಗಳು ತಿಳಿಸಿದ್ದಾರೆ.
"ಹೊರಗಿನವರು ದೊಡ್ಡ ಪ್ರಮಾಣದ ಭೂಮಿಯನ್ನು ಖರೀದಿಸಲು ಆಸಕ್ತಿ ತೋರಿಸಲು ಪ್ರಾರಂಭಿಸಿದಾಗ, ಸ್ಥಳೀಯ ನಿವಾಸಿಗಳು ಬೆಲೆಯನ್ನು ಹೆಚ್ಚಿಸಲು ಯೋಚಿಸುತ್ತಾರೆ. ಉತ್ತರ ಭಾರತದ ರಾಜ್ಯಗಳಿಂದ ಪ್ರತಿ ವಾರ ಸಾವಿರಾರು ಪ್ರವಾಸಿಗರು ಬೆಟ್ಟದ ದೇಗುಲಕ್ಕೆ ಬರುತ್ತಾರೆ" ಎಂದು ಪಂಚಾಯತ್ ಸದಸ್ಯರೊಬ್ಬರನ್ನು ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್ ಉಲ್ಲೇಖಿಸಿದೆ.
ಮೊದಲ ಹಂತದ ಅಭಿವೃದ್ಧಿ ಕಾಮಗಾರಿಗಳಲ್ಲಿ ಭಕ್ತರಿಗೆ ತಂಗುದಾಣ ನಿರ್ಮಿಸಲಾಗುವುದು. ದೊಡ್ಡ ಪಾರ್ಕಿಂಗ್ ಸ್ಥಳಗಳು, ಸಾರ್ವಜನಿಕ ಶೌಚಾಲಯಗಳು, ಶೇಡ್ ಪಾಯಿಂಟ್‌ಗಳು ಮತ್ತು ಗಡಿ ಬೇಲಿಗಳನ್ನು ಹಾಕಲಾಗುವುದು. ಎರಡನೇ ಹಂತದಲ್ಲಿ ಹನುಮಂತನ ಎತ್ತರದ ಪ್ರತಿಮೆ ಮತ್ತು ಮಂದಿರ ನಿರ್ಮಾಣವಾಗಲಿದೆ.