ನವದೆಹಲಿ, ಜನವರಿ, 23: ಬರೀ ದೇಶ ಅಲ್ಲದೆ ಇಡೀ ವಿಶ್ವವೇ (ಜನವರಿ 22) ರಂದು ನಡೆದ ಅಯೋಧ್ಯೆಯ ರಾಮ ಮಂದಿರ ಪ್ರತಿಷ್ಠಾನದ ಕ್ಷಣವನ್ನು ಕಣ್ತುಂಬಿಕೊಂಡಿದೆ. ಅಲ್ಲದೆ ಪ್ರಧಾನಿ ನರೇಂದ್ರ ಮೋದಿ ಅವರು ರಾಮ ಮಂದಿರವನ್ನು ಉದ್ಘಾಟಿಸಿದ ನಂತರ ಹಲವು ಯೋಜನೆಗಳನ್ನು ಘೋಷಣೆ ಮಾಡಿದರು. ಹಾಗಾದರೆ ಯಾವೆಲ್ಲ ಯೋಜನೆಗಳನ್ನು ಘೋಷಣೆ ಮಾಡಿದ್ದಾರೆ ಎನ್ನುವ ಮಾಹಿತಿಯನ್ನು ಇಲ್ಲಿ ತಿಳಿಯಿರಿ.
ಅಯೋಧ್ಯೆಯ ರಾಮಮಂದಿರ ಪ್ರಾಣ ಪ್ರತಿಷ್ಠಾನದ ನಂತರ ಪ್ರಧಾನಿ ನರೇಂದ್ರ ಮೋದಿ ಅವರು "ಸೂರ್ಯೋದಯ ಯೋಜನೆ"ಯನ್ನು ಘೋಷಣೆ ಮಾಡಿದರು. ಇದೇ ವೇಳೆ ಪ್ರತಿಕ್ರಿಯಿಸಿದ ಅವರು, ದೇಶದ ಜನರು ತಮ್ಮ ಮನೆಗಳ ಮೇಲ್ಛಾವಣಿಯ ಮೇಲೆ ಸೌರ ವ್ಯವಸ್ಥೆಯನ್ನು ಹೊಂದಬೇಕು ಎನ್ನುವ ಸಂಕಲ್ಪವನ್ನು ಮತ್ತಷ್ಟು ಬಲಪಡಿಸಲಾಗಿದೆ ಎಂದು ಹೇಳಿದ್ದಾರೆ.
ಈ ಯೋಜನೆಯಡಿಯಲ್ಲಿ ಒಂದು ಕೋಟಿ ಮನೆಗಳಿಗೆ ಸೌರಫಲಕಗಳನ್ನು ಅಳವಡಿಸಲಾಗುವುದು. ಪ್ರಪಂಚದ ಎಲ್ಲಾ ಭಕ್ತರು ಸೂರ್ಯವಂಶಿ ಭಗವಾನ್ ಶ್ರೀರಾಮನ ಬೆಳಕಿನಿಂದ ಯಾವಾಗಲೂ ಶಕ್ತಿಯನ್ನು ಪಡೆಯುತ್ತಾರೆ. ಅಯೋಧ್ಯೆಯಲ್ಲಿ ರಾಮಲಲ್ಲಾ ಪ್ರತಿಷ್ಠಾಪನೆ ಸಂದರ್ಭದಲ್ಲಿ ಭಾರತದ ಜನರು ತಮ್ಮ ಮನೆಗಳ ಮೇಲ್ಛಾವಣಿಯ ಮೇಲೆ ತಮ್ಮದೇ ಆದ ಸೋಲಾರ್ ಫಲಕಗಳ ವ್ಯವಸ್ಥೆಯನ್ನು ಹೊಂದಿರಬೇಕೆಂಬ ನನ್ನ ಸಂಕಲ್ಪ ಮತ್ತಷ್ಟು ಬಲಗೊಂಡಿದೆ ಎಂದು ತಮ್ಮ ಟ್ವಿಟರ್ ಖಾತೆಯಲ್ಲಿ ಪ್ರಧಾನಿ ಮೋದಿ ಹಂಚಿಕೊಂಡಿದ್ದಾರೆ.
ಅಯೋಧ್ಯೆಯಿಂದ ಹಿಂದಿರುಗಿದ ನಂತರ ನಾನು ತೆಗೆದುಕೊಂಡ ಮೊದಲ ನಿರ್ಧಾರವೆಂದರೆ ನಮ್ಮ ಸರ್ಕಾರವು 1 ಕೋಟಿ ಮನೆಗಳಿಗೆ ಮೇಲ್ಛಾವಣಿಯ ಸೋಲಾರ್ ಅನ್ನು ಸ್ಥಾಪಿಸುವ ಗುರಿಯೊಂದಿಗೆ "ಪ್ರಧಾನಮಂತ್ರಿ ಸೂರ್ಯೋದಯ ಯೋಜನೆ" ಅನ್ನು ಆರಂಭಿಸುತ್ತದೆ. ಇದು ಬಡ ಮತ್ತು ಮಧ್ಯಮ ವರ್ಗದವರ ವಿದ್ಯುತ್ ಬಿಲ್ ಅನ್ನು ಕಡಿಮೆ ಮಾಡುತ್ತದೆ. ಅಲ್ಲದೆ, ಇಂಧನ ಕ್ಷೇತ್ರದಲ್ಲಿ ಭಾರತವನ್ನು ಸ್ವಾವಲಂಬಿಯನ್ನಾಗಿ ಮಾಡುತ್ತದೆ ಎಂದು ತಿಳಿಸಿದ್ದಾರೆ.
ಇನ್ನು ಪ್ರಧಾನಿ ನರೇಂದ್ರ ಮೋದಿ ಅವರು ಅಯೋಧ್ಯೆಯಿಂದ ಹಿಂದಿರುಗಿದ ನಂತರ ಇಲ್ಲಿ ಅಧಿಕಾರಿಗಳೊಂದಿಗೆ ಯೋಜನೆಯ ಕುರಿತು ಚರ್ಚಿಸುತ್ತಿರುವ ಚಿತ್ರಗಳನ್ನು ತಮ್ಮ ಟ್ವಿಟರ್ ಖಾತೆಯಲ್ಲಿ ಪೋಸ್ಟ್ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.
