ರಾಜ್ಯ ಕಾಂಗ್ರೆಸ್ ಸರಕಾರದ ಮಹತ್ವಾಕಾಂಕ್ಷಿ 5 ಗ್ಯಾರಂಟಿಗಳಲ್ಲಿ ಕೊನೆಯದಾದ ಯುವನಿಧಿಗೆ ನಿರುದ್ಯೋಗಿಗಳ ನೋಂದಣಿ ಆರಂಭವಾಗಿದೆ. ಈ ಯೋಜನೆಯಡಿ ಪದವಿ ಮುಗಿಸಿದವರಿಗೆ ಮಾಸಿಕ 3,000 ರೂ,., ಡಿಪ್ಲೊಮಾ ಮಾಡಿದವರಿಗೆ ಮಾಸಿಕ 1,500 ರೂ. ನೀಡಲಾಗುತ್ತದೆ. ಆದರೆ ಯುವನಿಧಿ ಯೋಜನೆಗೆ ಸರಕಾರದ ಉಳಿದ 4 ಗ್ಯಾರಂಟಿ ಯೋಜನೆಗಳಿಗೆ ಹೋಲಿಸಿದರೆ ನೋಂದಣಿಗೆ ಕೊಂಚ ಉತ್ಸಾಹ ಕಡಿಮೆ ಕಾಣುತ್ತಿದೆ.
ಬೆಂಗಳೂರು ಗ್ರಾಮಾಂತರ: ರಾಜ್ಯ ಕಾಂಗ್ರೆಸ್ ಸರಕಾರದ ಮಹತ್ವಾಕಾಂಕ್ಷಿ 5 ಗ್ಯಾರಂಟಿಗಳಲ್ಲಿ ಕೊನೆಯದಾದ ಯುವನಿಧಿಗೆ ನಿರುದ್ಯೋಗಿಗಳ ನೋಂದಣಿ ಆರಂಭವಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಡಿ. 26 ರಂದು ಯೋಜನೆಗೆ ಚಾಲನೆ ನೀಡಿದ್ದಾರೆ. ಜಿಲ್ಲೆಯಲ್ಲೂ ಕಳೆದ 12 ದಿನಗಳಿಂದ ನೋಂದಣಿ ಕಾರ್ಯ ನಡೆಯುತ್ತಿದೆ. ಜ.8ರ ವರೆಗೂ ಜಿಲ್ಲೆಯಲ್ಲಿ 743 ನಿರುದ್ಯೋಗಿಗಳು ಯೋಜನೆಯಡಿ ನೋಂದಾಯಿಸಿಕೊಂಡಿದ್ದಾರೆ.
ಜಿಲ್ಲೆಯಲ್ಲಿ 2023 ರಲ್ಲಿ ಪದವಿ ಅಥವಾ ಡಿಪ್ಲೊಮಾ ತೇರ್ಗಡೆಯಾದ ಇನ್ನೂ ಕೆಲಸಕ್ಕೆ ಸೇರದ, ಸ್ವಯಂ-ಉದ್ಯೋಗವಿಲ್ಲದ ಅಥವಾ ಬೇರೆ ಕೋರ್ಸ್‌ಗಳಿಗೆ ದಾಖಲಾಗದ ನಿರುದ್ಯೋಗಿಗಳು ಯೋಜನೆಯ ಸೌಲಭ್ಯ ಪಡೆದುಕೊಳ್ಳಬಹುದಾಗಿದೆ.
743 ಮಂದಿ:
ಬೆಂಗಳೂರು ಗ್ರಾಮಾಂತರ ಜಿಲ್ಲೆಯ 4 ತಾಲೂಕುಗಳಲ್ಲಿ ಸರಕಾರಿ, ಖಾಸಗಿ ಸೇರಿದಂತೆ ಅನೇಕ ಪದವಿ ಹಾಗೂ ಡಿಪ್ಲೊಮಾ ಕಾಲೇಜುಗಳಿವೆ. ಪ್ರತಿ ವರ್ಷ ಸಾವಿರಾರು ವಿದ್ಯಾರ್ಥಿಗಳು ಕಾಲೇಜುಗಳಿಂದ ತೇರ್ಗಡೆ ಹೊಂದುತ್ತಾರೆ. 2023ರಲ್ಲೂಅನೇಕ ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದಾರೆ. ಇವರಲ್ಲಿಅನೇಕರಿಗೆ ಯುವನಿಧಿ ಸೌಲಭ್ಯ ಪಡೆಯಲು ಅವಕಾಶವಿದೆ. ಡಿ.26 ರಿಂದ ಜ. 8 ರ ವರೆಗೆ ಒಟ್ಟು 743 ಮಂದಿ ನೋಂದಣಿ ಮಾಡಿಕೊಂಡಿದ್ದಾರೆ.
ಜಿಲ್ಲೆಯಲ್ಲಿ ಜಿಲ್ಲಾಧಿಕಾರಿ ಮೂಲಕ ಪ್ರತಿ ಕಾಲೇಜು, ಗ್ರಾಮಗಳಲ್ಲೂ ಯುವನಿಧಿ ಯೋಜನೆಯ ನೋಂದಣಿ, ಅದರ ಉಪಯೋಗದ ಬಗ್ಗೆ ಪ್ರಚಾರ ಮಾಡಲಾಗುತ್ತಿದೆ. ಈ ಮೂಲಕ ನೋಂದಣಿ ಹೆಚ್ಚಿಸುವ ಪ್ರಯತ್ನ ಮಾಡಲಾಗುತ್ತಿದೆ. ಆದರೆ ಕೆಲವರು ದಾಖಲೆಗಳ ಕೊರತೆಯಿಂದ ನೋಂದಣಿಯಿಂದ ದೂರು ಉಳಿಯುತ್ತಿದ್ದು, ನೋಂದಣಿ ಹೆಚ್ಚಿಸುವ ಸಾಕಷ್ಟು ಕ್ರಮವನ್ನು ಗ್ರಾಮ, ತಾಲೂಕು ಮಟ್ಟದಲ್ಲಿ ಮಾಡಲಾಗಿದೆ.
ಯುವ ನಿಧಿಗೆ ಯಾರು ಅರ್ಹರು?
ಕಾಂಗ್ರೆಸ್ ಸರಕಾರದ 5ನೇ ಮತ್ತು ಕೊನೆಯ ಗ್ಯಾರಂಟಿ ಯುವನಿಧಿಯಾಗಿದೆ. 2022-23ನೇ ಸಾಲಿನಲ್ಲಿಪದವಿ ಅಥವಾ ಡಿಪ್ಲೊಮಾ ಉತ್ತೀರ್ಣರಾದವರು ಪದವಿ ಪಡೆದು 6 ತಿಂಗಳು ಕಳೆದರೂ ಉದ್ಯೋಗ ಲಭಿಸದಿದ್ದರೆ ಮಾಸಿಕ ಭತ್ಯೆ ಪಡೆಯಲು ಅರ್ಹರಾಗುತ್ತಾರೆ. ಇವರು ಯುವನಿಧಿ ಯೋಜನೆಗೆ ನೋಂದಾಯಿಸಿಕೊಂಡು, ಯೋಜನೆಯ ಅನುಕೂಲ ಪಡೆಯಬಹುದು.
ಜ.12 ರಂದು ಚಾಲನೆ:
ಜನವರಿ 12 ಸ್ವಾಮಿ ವಿವೇಕಾನಂದ ಜಯಂತಿ. ಅಂದು ಶಿವಮೊಗ್ಗದಲ್ಲಿಈ ಯೋಜನೆಗೆ ಚಾಲನೆ ದೊರಕಲಿದೆ. ಪದವೀಧರರಿಗೆ ಮಾಸಿಕ 3,000 ರೂ. ಮತ್ತು ಡಿಪ್ಲೊಮಾ ಪಡೆದವರಿಗೆ ಮಾಸಿಕ 1,500 ರೂ. ಮಾಸಿಕ ಭತ್ಯೆ ಲಭ್ಯವಾಗಲಿದೆ. ಪದವಿ ಪಡೆದು 180 ದಿನಗಳು ಕಳೆದರೂ ಉದ್ಯೋಗ ಲಭಿಸದಿದ್ದರೆ ಈ ಮಾಸಿಕ ಭತ್ಯೆಯನ್ನು ಪಡೆಯಲು ಅರ್ಹರಾಗಿರುತ್ತಾರೆ. ಉದ್ಯೋಗ ಲಭಿಸದಿದ್ದರೆ 2 ವರ್ಷಗಳ ತನಕ ಈ ಭತ್ಯೆ ಪಡೆಯಬಹುದು. ಒಂದು ವೇಳೆ ಮುಂಚಿತವಾಗಿಯೇ ಉದ್ಯೋಗ ಲಭಿಸಿದರೆ ಮಾಸಿಕ ಭತ್ಯೆ ನಿಂತು ಹೋಗುತ್ತದೆ.
ಯಾರು ಅರ್ಹರಲ್ಲ?
ಎಲ್ಲ ಪದವೀಧರರಿಗೂ ಮಾಸಿಕ ಭತ್ಯೆ ಲಭ್ಯವಾಗುವುದಿಲ್ಲ. ಸ್ವಯಂ-ಉದ್ಯೋಗಕ್ಕೆ ಕೇಂದ್ರ ಅಥವಾ ರಾಜ್ಯ ಸರಕಾರದಿಂದ ಆರ್ಥಿಕ ಸಹಾಯ ಪಡೆದವರು, ತರಬೇತಿ ಭತ್ಯೆ ಪಡೆಯುತ್ತಿರುವವರು, ಸರಕಾರಿ ಅಥವಾ ಖಾಸಗಿ ಉದ್ಯೋಗ ನಿರ್ವಹಿಸುತ್ತಿರುವವರು ಮತ್ತು ಉನ್ನತ ಶಿಕ್ಷಣಕ್ಕೆ ದಾಖಲಾದವರು ಯುವನಿಧಿಗೆ ಅರ್ಹರಲ್ಲ.