ಕರ್ನಾಟಕದ ಅರಣ್ಯ ಇಲಾಖೆ ಕಲ್ಯಾಣ ಕರ್ನಾಟಕ ಪ್ರದೇಶದ ಸ್ಥಳೀಯ ವೃಂದ ಮತ್ತು ಉಳಿಕೆ ಮೂಲ ವೃಂದದ ಅರಣ್ಯ ವೀಕ್ಷಕ ಗ್ರೂಪ್ 'ಡಿ' ಹುದ್ದೆಗಳ ನೇರ ನೇಮಕಾತಿಗೆ ಆನ್‌ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಿದೆ. ಅರ್ಜಿಗಳನ್ನು ಸಲ್ಲಿಕೆ ಮಾಡಲು 26/10/2023 ಕೊನೆಯ ದಿನವಾಗಿದೆ.
ಕರ್ನಾಟಕ ನಾಗರಿಕ ಸೇವಾ (ನೇರ ನೇಮಕಾತಿ) (ಸಾಮಾನ್ಯ) ನಿಯಮಾವಳಿಗಳು 2021 ಹಾಗೂ ಸರ್ಕಾರದ ಅಧಿಸೂಚನೆ ದಿನಾಂಕ 06/08/2019ರ ಕರ್ನಾಟಕ ಅರಣ್ಯ ಇಲಾಖಾ ಸೇವೆಗಳು (ನೇಮಕಾತಿ) (ತಿದ್ದುಪಡಿ) ನಿಯಮಗಳು, 2019ರನ್ವಯ ಒಟ್ಟು 23 ಅರಣ್ಯ ವೀಕ್ಷಕ ಗ್ರೂಪ್ 'ಡಿ' ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ.
ಆಸಕ್ತ ಅಭ್ಯರ್ಥಿಗಳು ಅರ್ಜಿ ಭರ್ತಿ ಮಾಡುವ ಮೊದಲು ಅಧಿಸೂಚನೆಯಲ್ಲಿನ ಸೂಚನೆ/ ನಿರ್ದೇಶನ ಹಾಗೂ ಷರತ್ತುಗಳನ್ನು ಕೂಲಂಕಷವಾಗಿ ಅರ್ಥೈಸಿಕೊಂಡು ತಮಗೆ ಅನ್ವಯವಾಗುವ ವಿವರಗಳನ್ನು ನಿಗದಿತ ಅಂಕಣದಲ್ಲಿ ಭರ್ತಿ ಮಾಡಬೇಕು. ಒಮ್ಮ ಅರ್ಜಿ ಸಲ್ಲಿಸಿದ ನಂತರ ಅರ್ಜಿಯಲ್ಲಿ ವಿವರಗಳನ್ನು ತಿದ್ದುಪಡಿ/ ಸೇರ್ಪಡೆ ಮಾಡಲು ಅವಕಾಶವಿಲ್ಲ.
ಹುದ್ದೆಗಳ ವಿವರಗಳು;
ಬೀದರ್ ಪ್ರಾದೇಶಿಕ ವಿಭಾಗ 1, ಕಲಬುರಗಿ ಪ್ರಾದೇಶಿಕ ವಿಭಾಗ 11, ಯಾದಗಿರಿ ಪ್ರಾದೇಶಿಕ ವಿಭಾಗ 7, ರಾಯಚೂರು ಪ್ರಾದೇಶಿಕ ವಿಭಾಗ 4 ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ. ಆಯ್ಕೆಯಾದ ಅಭ್ಯರ್ಥಿಗಳಿಗೆ18,600-32,600 ರೂ. ತನಕ ವೇತನವನ್ನು ನಿಗದಿ ಮಾಡಲಾಗಿದೆ.
ಅರ್ಹತೆ
ಅರ್ಜಿ ಸಲ್ಲಿಕೆ ಮಾಡುವ ಅಭ್ಯರ್ಥಿಯು ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯು ನಡೆಸುವ ಎಸ್.ಎಸ್.ಎಲ್.ಸಿ. ಅಥವಾ ಎಸ್.ಎಸ್.ಎಲ್.ಸಿ. ವಿದ್ಯಾರ್ಹತೆಯ ತತ್ಸಮಾನ ವಿದ್ಯಾರ್ಹತೆಯನ್ನು ಅರ್ಜಿ ಸಲ್ಲಿಸಲು ಈ ಮೇಲೆ ನಿಗದಿಪಡಿಸಿದ ಕೊನೆಯ ದಿನಾಂಕಕ್ಕೆ ಹೊಂದಿರಬೇಕು ಎಂದು ಸ್ಪಷ್ಟಪಡಿಸಲಾಗಿದೆ.
ಸರ್ಕಾರದ ಸುತ್ತೋಲೆ ದಿನಾಂಕ 27/2/2018ರಲ್ಲಿ ಸ್ಪಷ್ಟಪಡಿಸಿರುವ ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯು ನಡೆಸುವ ಎಸ್.ಎಸ್.ಎಲ್.ಸಿ. ವಿದ್ಯಾರ್ಹತೆಯ ತತ್ಸಮಾನ ವಿದ್ಯಾರ್ಹತೆ
- ಸಿ.ಬಿ.ಎಸ್.ಇ. ಮತ್ತು ಐ.ಸಿ.ಎಸ್.ಇ. ಮಂಡಳಿಯು ನಡೆಸುವ ಕ್ಲಾಸ್ 10 ಪರೀಕ್ಷೆ
- ಇತರೆ ರಾಜ್ಯ ಸರ್ಕಾರದ ಪರೀಕ್ಷಾ ಮಂಡಳಿಗಳಿಂದ ನಡೆಸುವ ಕ್ಲಾಸ್ 10 ಪರೀಕ್ಷೆ
- ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯು ನಡೆಸುವ ಪ್ರೌಢ ಶಿಕ್ಷಣ ಮಟ್ಟದ ಕೋರ್ಸ್ (ಕೆ.ಓ.ಎಸ್)
- ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಓಪನ್ ಸ್ಕೂಲಿಂಗ್ (ಎನ್.ಐ.ಓ.ಎಸ್.) ವತಿಯಿಂದ ನಡೆಸುವ ಪ್ರೌಢ ಶಿಕ್ಷಣ ಮಟ್ಟದ ಕೋರ್ಸ್
ಅರ್ಜಿಗಳನ್ನು ಸಲ್ಲಿಕೆ ಮಾಡುವವರು ಅರ್ಜಿ ಶುಲ್ಕವನ್ನು ಪಾವತಿ ಮಾಡಬೇಕು. ಒಮ್ಮೆ ಶುಲ್ಕವನ್ನು ಪಾವತಿಸಿದ ನಂತರ, ಅದನ್ನು ಯಾವುದೇ ಸಂದರ್ಭದಲ್ಲಿ ವಾಪಸ್ ನೀಡಲಾಗುವುದಿಲ್ಲ ಅಥವಾ ಅದನ್ನು ಅರಣ್ಯ ಇಲಾಖೆ ನಡೆಸುವ ಇತರೆ ಪರೀಕ್ಷೆ ಅಥವಾ ನೇಮಕಾತಿಗಳಿಗೆ ಹೊಂದಿಸಿಕೊಳ್ಳಲಾಗುವುದಿಲ್ಲ. ಶುಲ್ಕವನ್ನು ಸಂದಾಯ ಮಾಡದಿದ್ದಲ್ಲಿ ಅಂತಹ ಅರ್ಜಿಗಳನ್ನು ಅಪೂರ್ಣ ಎಂದು ತಿರಸ್ಕರಿಸಲಾಗುತ್ತದೆ.
ಅರ್ಜಿ ಶುಲ್ಕ ಸಲ್ಲಿಸಲು ನಿಗದಿಪಡಿಸಿರುವ ಕೊನೆಯ ದಿನಾಂಕ 31/10/2023. ಸಾಮಾನ್ಯ ಅರ್ಹತೆಯ ಅಭ್ಯರ್ಥಿಗಳು, ಪವರ್ಗ 2ಎ, 2ಬಿ, 3ಎ ಮತ್ತು 3ಬಿಗೆ ಸೇರಿದ ಅಭ್ಯರ್ಥಿಗಳಿಗೆ 200 ರೂ. ಮತ್ತು 20 ರೂ. ಸೇವಾ ಶುಲ್ಕವನ್ನು ಪಾವತಿಸಬೇಕು. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಪ್ರವರ್ಗ-1ಕ್ಕೆ ಸೇರಿದ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕ 100 ರೂ., ಸೇವಾ ಶುಲ್ಕ 20 ರೂ.ಗಳು.
ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಿದ ನಂತರ, ಇಲಾಖಾ ವೆಬ್‌ಸೈಟ್‌ನಿಂದ ಮುದ್ರಿತ ಅರ್ಜಿ ಶುಲ್ಕದ ಚಲನ್ ಪ್ರತಿಯನ್ನು ತೆಗೆದುಕೊಂಡು, ಇ-ಪಾವತಿ ಸೌಲಭ್ಯವಿರುವ ಭಾರತೀಯ ಅಂಚೆ ಕಚೇರಿಯಲ್ಲಿ ಸದರಿ ಪ್ರತಿಯನ್ನು ಹಾಜರುಪಡಿಸಿ, ಪ್ರವರ್ಗವಾರು ನಿಗದಿತ ಅರ್ಜಿ ಶುಲ್ಕ ಮತ್ತು ಸೇವಾ ಶುಲ್ಕವನ್ನು ಕಟ್ಟಿ ಶುಲ್ಕ ಪಾವತಿಸಬೇಕು.
ಅರ್ಜಿಗಳನ್ನು ಅಭ್ಯರ್ಥಿಗಳು ಆನ್‌ಲೈನ್ ಮುಖಾಂತರವೇ ಕಡ್ಡಾಯವಾಗಿ ಸಲ್ಲಿಸತಕ್ಕದ್ದು. ಇದನ್ನು ಹೊರತುಪಡಿಸಿ ನೇರವಾಗಿ/ ಕೊರಿಯರ್/ ನೋಂದಾಯಿತ ಅಂಚೆ/ ಸಾಧಾರಣ ಅಂಚೆ/ ಇ-ಮೇಲ್/ ಮುದ್ದಾಂ/ ಇತ್ಯಾದಿ ಯಾವುದೇ ಇತರ ವಿಧಾನಗಳ ಮುಖಾಂತರ ಕಳುಹಿಸಿದ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ.
ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಅಧಿಸೂಚನೆ ಹೊರಡಿಸಿದ ದಿನಾಂಕಕ್ಕೆ ಕನಿಷ್ಠ 18 ವರ್ಷ ವಯಸ್ಸನ್ನು ಪೂರೈಸಿರತಕ್ಕದ್ದು ಹಾಗೂ ಗರಿಷ್ಠ ವಯೋಮಿತಿ ಸಾಮಾನ್ಯ ಅಭ್ಯರ್ಥಿ ಗರಿಷ್ಠ ವಯೋಮಿತಿ 30 ವರ್ಷ. ಪವರ್ಗ 2ಎ, 2ಬಿ, 3ಎ, 3ಬಿ ಹಿಂದುಳಿದ ಪ್ರವರ್ಗಗಳು 32 ವರ್ಷ. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಪ್ರವರ್ಗ 1 ಗರಿಷ್ಠ ವಯೋಮಿತಿ 33 ವರ್ಷಗಳು.
ಮಾಜಿ ಸೈನಿಕರಿಗೆ ಸಶಸ್ತ್ರ ಪಡೆಗಳಲ್ಲಿ ಸೇವೆ ಸಲ್ಲಿಸಿ ನಿಯಮಾನುಸಾರ ನಿವೃತ್ತಿ/ ಡಿಮೊಬಿಲೈಸೇಷನ್ (Demobilisation) ಅಥವಾ ರಿಟ್ರೆಂಚ್‌ಮೆಂಟ್ (Retrenchment) ಹೊಂದಿದ ಮಾಜಿ ಸೈನಿಕ ಅಭ್ಯರ್ಥಿಗಳಿಗೆ ಅವರು ಯಾವ ಪ್ರವರ್ಗಕ್ಕೆ ಸೇರಿರುತ್ತಾರೆಯೊ ಈ ಮೇಲಿನ ಪ್ರವರ್ಗಕ್ಕೆ ನಿಗದಿಪಡಿಸಿದ ಗರಿಷ್ಠ ವಯೋಮಿತಿಗೆ ಅವರು ಎಷ್ಟು ವರ್ಷ ಸಶಸ್ತ್ರ ಪಡೆಗಳಲ್ಲಿ ಸೇವೆ ಸಲ್ಲಿಸಿರುವರೋ ಅಷ್ಟು ವರ್ಷಗಳಿಗೆ ಮೂರು ವರ್ಷ ಸೇರಿಸಿದರೆ ಎಷ್ಟು ವರ್ಷಗಳಾಗುವುದೋ ಅಷ್ಟು ವರ್ಷಗಳ ಸಡಿಲಿಕೆಯನ್ನು ನೀಡಲಾಗುವುದು.
ನೇಮಕಾತಿ ಅಧಿಸೂಚನೆಯನ್ನು ಕರ್ನಾಟಕ ಅರಣ್ಯ ಇಲಾಖೆಯ ಅಧಿಕೃತ ವೆಬ್‌ಸೈಟ್ https://aranya.gov.in/ ಮುಖ ಪುಟದ ಕೆಳಭಾಗದಲ್ಲಿ ಇರುವ 'ನೇಮಕಾತಿ' ಶೀರ್ಷಿಕೆಯಡಿ ಪ್ರಕಟಿಸಲಾಗಿದೆ.