ಇ ಇದೇಸೆಪ್ಟೆಂಬರ್ 9ರಿಂದ 12ರ ತನಕ ನಡೆಯಲಿರುವ ಧಾರವಾಡ ಕೃಷಿ ಮೇಳದಲ್ಲಿ ಏನೇನಿರಲಿದೆ? ಈ ಮೇಳ ವೀಕ್ಷಣೆಯಿಂದ ರೈತರಿಗೆ ಆಗುವ ಲಾಭವೇನು? ರೈತಜಾತ್ರೆಯ ಸಮಗ್ರ ಮಾಹಿತಿ…
Dharwad Krishi Mela 2023:
ರಾಜ್ಯದ ಅತಿ ದೊಡ್ಡ ಕೃಷಿಮೇಳವೆಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಧಾರವಾಡ ಕೃಷಿ ವಿಶ್ವವಿದ್ಯಾನಿಲಯದ ವಾರ್ಷಿಕ ಕೃಷಿ ಮೇಳವು ಇದೇ ಸೆಪ್ಟೆಂಬರ್ 9ರಿಂದ 12ರ ತನಕ ನಾಲ್ಕು ದಿನಗಳ ಕಾಲ ನಡೆಯಲಿದೆ. ಈ ವರ್ಷದ ಮೇಳವು ‘ಸುಸ್ಥಿರ ಕೃಷಿಗಾಗಿ ಸಿರಿಧಾನ್ಯಗಳು’ ಶೀರ್ಷಿಕೆಯಡಿ ನಡೆಯಲಿದ್ದು; ಮಳೆ ಕೊರತೆ, ಬರದ ಛಾಯೆಯಿಂದ ತತ್ತರಿಸಿರುವ ರೈತರಿಗೆ ಇದು ಬಹುಉಪಯುಕ್ತ ಮೇಳ ಎಂದೇ ಹೇಳಲಾಗುತ್ತಿದೆ.
ಯಾವ್ಯಾವ ದಿನ ಏನೇನು ನಡೆಯಲಿದೆ?
ಮೊದಲ ದಿನ ಸೆಪ್ಟೆಂಬರ್ 9ರಂದು ಬೆಳಿಗ್ಗೆ 11.30ಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮೇಳ ಉದ್ಘಾಟಿಸುವರು.
ಸೆಪ್ಟೆಂಬರ್ 10ರಂದು ಬೀಜ ಮೇಳ ಉದ್ಘಾಟನೆ
ಸೆಪ್ಟೆಂಬರ್ 11ರಂದು ಪೌಷ್ಟಿಕತೆ ಮತ್ತು ಆರ್ಥಿಕ ಭದ್ರತೆಗೆ ಸಿರಿಧಾನ್ಯಗಳು ವಿಚಾರ ಸಂಕಿರಣ
ಸೆಪ್ಟೆಂಬರ್ 12ರಂದು ಚರ್ಚಾ ಗೋಷ್ಠಿ, ಮಧ್ಯಾಹ್ನ 4 ಗಂಟೆಗೆ ಸಮಾರೋಪ ಸಮಾರಂಭ ಜರುಗಲಿದೆ.
ಮೇಳದಲ್ಲಿ ಏನೆಲ್ಲ ಇರಲಿದೆ?
ಮೇಳದಲ್ಲಿ ಕೃಷಿ ಮತ್ತು ಕೃಷಿ ಪೂರಕ ತಂತ್ರಜ್ಞಾನ, ಹೈಟೆಕ್ ತೋಟಗಾರಿಕೆ, ಫಲಪುಷ್ಪ ಪ್ರದರ್ಶನ, ವಿಸ್ಮಯಕಾರಿ ಕೀಟ ಪ್ರಪಂಚ ಹಾಗೂ ಜಾನುವಾರು ಪ್ರದರ್ಶನ ಆಯೋಜಿಸಲಾಗಿದೆ.
ಸಿರಿಧಾನ್ಯ ಮಾರುಕಟ್ಟೆ, ನೈಸರ್ಗಿಕ ಮತ್ತು ಸಾವಯವ ಕೃಷಿ, ಮಣ್ಣಿನ ಫಲವತ್ತತೆ ರಕ್ಷಣೆ, ಮಳೆ ನೀರು ಸಂಗ್ರಹ ಮತ್ತು ಅಂತರ್ಜಲ ಮರುಪೂರಣ, ಕಿಸಾನ್ ಡ್ರೋನ್ ಬಳಕೆ, ರೈತರ ಆವಿಷ್ಕಾರಗಳು, ಸಾಧಕ ರೈತ ಹಾಗೂ ರೈತ ಮಹಿಳೆಯರೊಂದಿಗೆ ಸಂವಾದ ಮೊದಲಾದ ಕಾರ್ಯಕ್ರಮಗಳು ನಡೆಯಲಿವೆ.
ಮಳಿಗೆಗಳು ಮತ್ತು ಮಾರಾಟ ಜಾಲ
ಕೃಷಿ ವಸ್ತು ಪ್ರದರ್ಶನದಲ್ಲಿ 199 ಹೈಟೆಕ್ ಮಳಿಗೆ, 351 ಸಾಮಾನ್ಯ ಮಳಿಗೆ, 24 ಯಂತ್ರೋಪಕರಣ ಮಳಿಗೆ, 40 ಆಹಾರ ಮಳಿಗೆ, 50 ಜಾನುವಾರು ಪ್ರದರ್ಶನ ಮಳಿಗೆ ಹಾಗೂ 10 ಕ್ಷೇತ್ರ ಮಳಿಗೆ ವ್ಯವಸ್ಥೆ ಮಾಡಲಾಗಿದೆ. ಧಾರವಾಡ ಕೃಷಿ ವಿಶ್ವವಿದ್ಯಾಲಯ ಸಂಶೋಧಿಸಿರುವ 24 ಹೊಸ ತಳಿಗಳು ಹಾಗೂ 33 ಕೃಷಿ ತಾಂತ್ರಿಕತೆಗಳು ಬಿಡುಗಡೆಯಾಗಲಿವೆ.
ಕೃಷಿ ವಿಶ್ವವಿದ್ಯಾಲಯಕ್ಕೆ ಪ್ರಥಮ ಬಾರಿಗೆ ಉತ್ಪನ್ನ ಹಾಗೂ ಮಾರಾಟಕ್ಕೆ ಪರವಾನಗಿ ಪತ್ರ ದೊರೆತಿದೆ. 25 ಕ್ವಿಂಟಲ್ ವಿವಿಧ ಜೈವಿಕ ಗೊಬ್ಬರಗಳ ಪುಡಿ ಹಾಗೂ 2.6 ಸಾವಿರ ಲೀಟರ್ ವಿವಿಧ ಜೈವಿಕ ಗೊಬ್ಬರ ದ್ರವಗಳು, 16 ಕ್ವಿಂಟಲ್ ಜೈವಿಕ ಪೀಡೆನಾಶಕಗಳು ಸದರಿ ಕೃಷಿ ಮೇಳದಲ್ಲಿ ಮಾರಾಟಕ್ಕೆ ಇಡಲಾಗುತ್ತದೆ. ಬಿತ್ತನೆ ಬೀಜಗಳ ಮಾರಾಟ ಕೂಡ ಇರಲಿದೆ.
ಸಿರಿಧಾನ್ಯಗಳ ವರ್ಷ, ಕೃಷಿಕರಿಗೆ ಮಾಹಿತಿ ಸಾಗರ
ಪ್ರಸ್ತುತ ವರ್ಷ ಅಂತರರಾಷ್ಟ್ರೀಯ ಸಿರಿಧಾನ್ಯಗಳ ವರ್ಷ ಆಚರಿಸಲಾಗುತ್ತಿದೆ. ಸಾವಯವ ಕೃಷಿಯಲ್ಲಿ ಸಿರಿ ಧಾನ್ಯಗಳ ಉತ್ಪಾದನೆ, ಅವುಗಳ ಮೌಲ್ಯವರ್ಧನೆಗೆ ಮೇಳದಲ್ಲಿ ಒತ್ತು ನೀಡಲಾಗುವುದು ಎಂದು ಕೃಷಿ ವಿಶ್ವವಿದ್ಯಾಲಯದ ಕುಲಪತಿ ಪಿ.ಎಲ್.ಪಾಟೀಲ ತಿಳಿಸಿದ್ದಾರೆ. ಕೃಷಿ ಕ್ಷೇತ್ರದಲ್ಲಿ ಸಾಧನೆ ಮಾಡಿದ 7 ಪುರುಷರು ಮತ್ತು 7 ಮಹಿಳೆಯರು ಸೇರಿ ಒಟ್ಟು 14 ಕೃಷಿಕರನ್ನು 2023ನೇ ಸಾಲಿನ ಶ್ರೇಷ್ಠ ಕೃಷಿಕ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.