ಕೂಸಿನ ಮನೆ ಲಾಂಛನ ಬಿಡುಗಡೆ, ಏನಿದು ಯೋಜನೆ?

Koosina Mane Logo Released Know About Government Project



ಕರ್ನಾಟಕ ಸರ್ಕಾರ ಗ್ರಾಮೀಣ ಭಾಗದ ಕೂಲಿ ಕಾರ್ಮಿಕರ ಮಕ್ಕಳ ಪಾಲನೆಗೆ ತೆರೆಯಲಾಗುತ್ತಿರುವ 'ಕೂಸಿನ ಮನೆ' ಶಿಶುಪಾಲನಾ ಕೇಂದ್ರದ ಲಾಂಛನವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅನಾವರಣಗೊಳಿಸಿದರು.

ಭಾನುವಾರ ಕಲಬುರಗಿ ನಗರದ ಪೊಲೀಸ್ ಪರೇಡ್ ಮೈದಾನದಲ್ಲಿ ನಡೆದ‌ ಕಲ್ಯಾಣ ಕರ್ನಾಟಕ ಉತ್ಸವ ದಿನಾಚರಣೆಯ ಧ್ವಜಾರೋಹಣ ನಂತರ ಮುಖ್ಯಮಂತ್ರಿಗಳು, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್, ಐ.ಟಿ-ಬಿ.ಟಿ ಸಚಿವ ಪ್ರಿಯಾಂಕ್ ಖರ್ಗೆ‌ ಸೇರಿದಂತೆ ಹಲವರು ಲಾಂಛನ ಬಿಡುಗಡೆ ಮಾಡಿದರು.

ರಾಜ್ಯದಾದ್ಯಂತ 4,000 ಗ್ರಾಮ ಪಂಚಾಯಿತಿಗಳಲ್ಲಿ ಗ್ರಾಮೀಣ ಭಾಗದ ಕೂಲಿ ಕಾರ್ಮಿಕರ ಮಕ್ಕಳ ಪಾಲನೆಗೆ 'ಕೂಸಿನ ಮನೆ' ಶಿಶುಪಾಲನಾ ಕೇಂದ್ರಗಳನ್ನು ತೆರೆಯಲಾಗುತ್ತಿದೆ. ಈ ಕೇಂದ್ರದಲ್ಲಿ ಮಕ್ಕಳನ್ನು ನೋಡಿಕೊಳ್ಳಲು ತರಬೇತಿ ಪಡೆದ 'ಕೇರ್ ಟೇಕರ್ಸ್' ಸಹ ನಿಯೋಜನೆ ಮಾಡಲಾಗುತ್ತದೆ.


ಕೂಸಿನ ಮನೆ ಯೋಜನೆ ವಿವರ; 'ಕೂಸಿನ ಮನೆ' ಲಾಂಛನ ಬಿಡುಗಡೆ ಮಾಡಿ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, "ರಾಜ್ಯದಾದ್ಯಂತ 40 ಕೋಟಿ ರೂ. ವೆಚ್ಚದಲ್ಲಿ 4,000 ಗ್ರಾಮ ಪಂಚಾಯಿತಿಗಳಲ್ಲಿ ಗ್ರಾಮೀಣ ಭಾಗದ ಕೂಲಿ ಕಾರ್ಮಿಕರ ಮಕ್ಕಳ ಪಾಲನೆಗೆ ಕೂಸಿನ ಮನೆ ಶಿಶುಪಾಲನಾ ಕೇಂದ್ರಗಳನ್ನು ತೆರೆಯಲಾಗುತ್ತಿದೆ" ಎಂದರು.


ಈ ಯೋಜನೆಗೆ ಸರ್ಕಾರ 40 ಕೋಟಿ ರೂ. ಅನುದಾನ ಬಿಡುಗಡೆ ಮಾಡಿದರೂ ಸಹ ಶಿಶುಪಾಲನಾ ಕೇಂದ್ರ ನಡೆಸಲು ಅಗತ್ಯವಿರುವ ಕಟ್ಟಡ, ಇತರ ಮೂಲ ಸೌಲಭ್ಯಗಳನ್ನು ಹಾಗೂ ಅನುದಾನವನ್ನು ಗ್ರಾಮ ಪಂಚಾಯಿತಿಗಳು ತಮ್ಮ‌ ಸಂಪನ್ಮೂಲದಲ್ಲಿಯೇ ಹೊಂದಿಸಬೇಕಾಗುತ್ತದೆ.


2023-24ರ ಬಜೆಟ್ ಭಾಷಣದಲ್ಲಿ ಘೋಷಣೆ ಮಾಡಿದಂತೆ ಗ್ರಾಮೀಣ ಪ್ರದೇಶದಲ್ಲಿ ನರೇಗಾ ಯೋಜನೆಯಡಿ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಉದ್ಯೋಗದಲ್ಲಿ ಪಾಲ್ಗೊಳ್ಳಲು ಅನುಕೂಲವಾಗುವಂತೆ ಕೂಲಿ ಕಾರ್ಮಿಕರ 3 ವರ್ಷದೊಳಗಿನ ಮಕ್ಕಳನ್ನು ನೋಡಿಕೊಳ್ಳಲು 'ಕೂಸಿನ ಮನೆ' ಶಿಶುವಾಲನಾ ಕೇಂದ್ರಗಳನ್ನು ಸ್ಥಾಪಿಸಲಾಗುತ್ತಿದೆ.


ಈ ಕೇಂದ್ರಗಳು ಸ್ಥಳೀಯ ಕಾರ್ಮಿಕರ ಅನುಕೂಲಕ್ಕೆ ತಕ್ಕಂತೆ ದಿನದಲ್ಲಿ 6 ಗಂಟೆ 30 ನಿಮಿಷಗಳ ಕಾಲ ಕಾರ್ಯನಿರ್ವಹಿಸುತ್ತವೆ. ಸ್ಥಳೀಯ ಗ್ರಾಮ ಪಂಚಾಯಿತಿಗಳೇ ಕೇಂದ್ರದ ಕಾರ್ಯನಿರ್ವಹಿಸುವ ಸಮಯವನ್ನು ನಿರ್ಧರಿಸಲಿದೆ.


4000 ಶಿಶು ಪಾಲನಾ ಕೇಂದ್ರಗಳಿಗೆ ಪ್ರತಿ ಕೇಂದ್ರಕ್ಕೆ ನರೇಗಾ ಕ್ರಿಯಾಶೀಲ ಉದ್ಯೋಗ ಕಾರ್ಡ್ ಹೊಂದಿರುವ 10 ಜನ ಕೇರ್ ಟೇಕರ್ಸ್‌ಗಳನ್ನು (ಮಕ್ಕಳ ಆರೈಕೆದಾರರು) ಇರಲಿದ್ದಾರೆ. ಇವರಿಗೆ ಮೊಬೈಲ್ ಕ್ರಶ್ ದೆಹಲಿ ಸಂಸ್ಥೆಯ ಸಹಕಾರದಿಂದ ತರಬೇತಿ ನೀಡಲಾಗುತ್ತದೆ. ಇದರಿಂದ 40,000 ನರೇಗಾ ಕ್ರಿಯಾಶೀಲ ಉದ್ಯೋಗ ಕಾರ್ಡ್ ಹೊಂದಿರುವ ಮಹಿಳೆಯರಿಗೆ ಮಕ್ಕಳ ಆರೈಕೆಯ ಕೆಲಸ ನಿರ್ವಹಿಸಲು ಅವಕಾಶ ಕಲ್ಪಿಸಲಾಗುತ್ತಿದೆ.


25 ಮಕ್ಕಳಿಗೆ ಅವಕಾಶ; ಯೋಜನೆಯ ವಿವರದಂತೆ ಪ್ರತಿ 'ಕೂಸಿನ ಮನೆ' ಕೇಂದ್ರದಲ್ಲಿ ನರೇಗಾ ಕ್ರಿಯಾಶೀಲ ಉದ್ಯೋಗ ಕಾರ್ಡ್ ಹೊಂದಿರುವ ಕುಟುಂಬದ 3 ವರ್ಷದೊಳಗಿನ ಗರಿಷ್ಠ 25 ಮಕ್ಕಳನ್ನು ದಾಖಲೆ ಮಾಡಿಕೊಳ್ಳಲು ಅವಕಾಶ ನೀಡಲಾಗುತ್ತದೆ.

ಈ ಯೋಜನೆ ಕುರಿತು ಮಾತನಾಡಿದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಸಚಿವ ಪ್ರಿಯಾಂಕ್ ಖರ್ಗೆ, "ಶಿಶುಪಾಲನಾ ಕೇಂದ್ರಗಳನ್ನು ನಡೆಸಲು ಅಗತ್ಯವಿರುವ ಕಟ್ಟಡ ಇತರ ಮೂಲ ಸೌಲಭ್ಯಗಳನ್ನು ಹಾಗೂ ಅನುದಾನವನ್ನು ಗ್ರಾಮ ಪಂಚಾಯಿತಿಯಿಂದ ಒದಗಿಸಲು ಸೂಚನೆ ನೀಡಲಾಗಿದೆ" ಎಂದರು.‌


ನರೇಗಾ ಯೋಜನೆಯಡಿ ಜಾಬ್ ಕಾರ್ಡ್‌ ಪಡೆದುಕೊಂಡು ಕೆಲಸ ನಿರ್ವಹಣೆ ಮಾಡುತ್ತಿರುವ 22 ರಿಂದ 45 ವರ್ಷ ವಯೋಮಿತಿಯ ಕನಿಷ್ಠ 10ನೇ ತರಗತಿ ವ್ಯಾಸಂಗ ಮಾಡಿರುವ 10 ಜನ ಮಹಿಳಾ ಕೂಲಿ ಕಾರ್ಮಿಕರು 'ಕೂಸಿನ ಮನೆ' ಕೇರ್ ಟೇಕರ್ಸ್ ಆಗಿ ನೇಮಕಗೊಳ್ಳಲಿದ್ದಾರೆ.


ಇವರಿಗೆ ಪ್ರತ್ಯೇಕವಾದ ಗೌರವಧನವನ್ನು ನೀಡಲಾಗುವುದಿಲ್ಲ. ನರೇಗಾ ಯೋಜನೆಯಡಿ ಎನ್. ಎಂ. ಆರ್. ಸೃಜನೆ ಮಾಡಿ ದಿನಕ್ಕೆ 316 ರೂ. ನಂತೆ ನೂರು ದಿನಗಳ ತನಕ ಕೆಲಸ ನೀಡಲಾಗುತ್ತದೆ. ಒಂದು ವೇಳೆ ಕೆಲಸ ನಿರ್ವಹಣೆ ಮಾಡುತ್ತಿರುವ ಮಹಿಳೆ 100 ದಿನದ ಕೆಲಸ ನಿರ್ವಹಣೆ ಮಾಡಿದರೆ ಮತ್ತೊಬ್ಬರಿಗೆ ಅವಕಾಶ ನೀಡಲಾಗುತ್ತದೆ.



Previous Post Next Post