ಸೆಪ್ಟೆಂಬರ್ 21 ವಿಶ್ವ ಶಾಂತಿ ದಿನ
ಪ್ರಪಂಚದಾದ್ಯಂತ ಹಿಂಸಾಚಾರಗಳು, ಸಂಘರ್ಷಗಳನ್ನು ನಿಲ್ಲಿಸುವ ಶಾಂತಿ ಕಾಪಾಡುವ ಸಂದೇಶವನ್ನು ಸಾರುವ ಉದ್ದೇಶದಿಂದ ಪ್ರತಿ ಸೆಪ್ಟೆಂಬರ್ 21ರಂದು ವಿಶ್ವ ಶಾಂತಿದಿನವನ್ನು ಆಚರಿಸಲಾಗುತ್ತದೆ. ಈ ದಿನದ 24 ಗಂಟೆಯು ಹಿಂಸೆಯಿಲ್ಲದ ಶಾಂತಿಯುತ ಜಗತ್ತನ್ನು ನೋಡುವುದು ವಿಶ್ವಸಂಸ್ಥೆಯ ಉದ್ದೇಶ.
ವಿಶ್ವದಾದ್ಯಂತ ನಡೆಯುವ ಹಿಂಸಾಚಾರಗಳು, ಸಂಘರ್ಷ, ಯುದ್ಧ, ಜಗಳಗಳನ್ನು ನಿಲ್ಲಿಸುವ ಹಾಗೂ ಶಾಂತಿ ಕಾಪಾಡುವ ಸಂದೇಶವನ್ನು ಸಾರುವ ಉದ್ದೇಶದಿಂದ ಪ್ರತಿ ಸೆಪ್ಟೆಂಬರ್ 21ರಂದು ವಿಶ್ವ ಶಾಂತಿದಿನವನ್ನು ಆಚರಿಸಲಾಗುತ್ತದೆ. ವಿಶ್ವಸಂಸ್ಥೆಯು ಈ ದಿನದ ಆಚರಣೆಗೆ ಕರೆ ಕೊಟ್ಟಿತ್ತು. ಪ್ರತಿವರ್ಷವೂ ಒಂದೊಂದು ಥೀಮ್ ಅನ್ನು ಆಯ್ಕೆ ಮಾಡಲಾಗುತ್ತದೆ. ಈ ಥೀಮ್‌ಗಳನ್ನು ಶಾಂತಿ ನಿರ್ಮಾಣ ಮತ್ತು ಸಂಘರ್ಷ ಪರಿಹಾರದ ನಿರ್ದಿಷ್ಟ ಅಂಶಗಳ ಮೇಲೆ ಕೇಂದ್ರೀಕರಿಸಲಾಗುತ್ತದೆ. ಈ ದಿನದ 24 ಗಂಟೆಯು ಹಿಂಸೆಯಿಲ್ಲದ ಶಾಂತಿಯುತ ಜಗತ್ತನ್ನು ನೋಡುವುದು ವಿಶ್ವಸಂಸ್ಥೆಯ ಉದ್ದೇಶ. ಸಾಮಾನ್ಯವಾಗಿ ವಿಶ್ವ ಶಾಂತಿಯ ದಿನವು ಪಾರಿವಾಳ ಮತ್ತು ಆಲಿವ್ ಘಟಕದ ಸಂಕೇತದೊಂದಿಗೆ ಸಂಬಂಧ ಹೊಂದಿದೆ. ಪಾರಿವಾಳವು ಶಾಂತಿ ಹಾಗೂ ಸ್ವಾತಂತ್ರ್ಯವನ್ನು ಪ್ರತಿನಿಧಿಸುತ್ತದೆ.
ಇತಿಹಾಸ
ವಿಶ್ವಸಂಸ್ಥೆಯ ಸಾಮಾನ್ಯಸಭೆಯು ಸೆಪ್ಟೆಂಬರ್ 30, 1981ರಂದು 36/67 ನಿರ್ಣಯವನ್ನು ಅಂಗೀಕರಿಸಿತು. ಅದು ಜಾಗತಿಕ ಕದನ ವಿರಾಮ ಹಾಗೂ ಆ ದಿನದಂದು ಎಲ್ಲಾ ಯುದ್ಧಗಳನ್ನು ನಿಲ್ಲಸಬೇಕು ಎಂದು ಕರೆಕೊಟ್ಟಿತು. ಆ ಮೂಲಕ ಸೆಪ್ಟೆಂಬರ್ ತಿಂಗಳ ಮೂರನೇ ವಾರವನ್ನು ಅಂತರರಾಷ್ಟ್ರೀಯ ಶಾಂತಿ ದಿನವೆಂದು ಘೋಷಿಸಿತು. ಆ ಪ್ರಕಾರ ಮೊದಲ ಅಂತರರಾಷ್ಟ್ರೀಯ ಶಾಂತಿ ದಿನವನ್ನು 1982ರ ಸೆಪ್ಟೆಂಬರ್ 21 ರಂದು ಆಚರಿಸಲಾಯಿತು. ಅಂದು ಶಾಂತಿಯನ್ನು ಉತ್ತೇಜಿಸುವ ಮತ್ತು ಪ್ರಪಂಚದಾದ್ಯಂತ ಶಾಂತಿಪಾಲನಾ ಪ್ರಯತ್ನಗಳ ಮಹತ್ವದ ಬಗ್ಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯನ್ನು ಇಡಲಾಯಿತು. ಆ ನಂತರ 2001ರಲ್ಲಿ ಸೆಪ್ಟೆಂಬರ್ 21 ರಂದು ಅಧಿಕೃತವಾಗಿ ಈ ದಿನವನ್ನು ಸೆಪ್ಟೆಂಬರ್ 21 ರಂದೇ ಆಚರಿಸಲು ನಿರ್ಧಾರ ತೆಗೆದುಕೊಳ್ಳಲಾಯಿತು. ಅಲ್ಲಿಯವರೆಗೆ ಸೆಪ್ಟೆಂಬರ್ ಮೂರನೇ ಮಂಗಳವಾರ ಈ ದಿನವನ್ನು ಆಚರಿಸಲಾಗುತ್ತಿತ್ತು.
ಮಹತ್ವ
ಶಾಂತಿ ಮತ್ತು ಸಂಘರ್ಷ ಪರಿಹಾರಕ್ಕೆ ವಿಶ್ವಸಂಸ್ಥೆಯ ಬದ್ಧತೆಯನ್ನು ನೆನಪಿಸುವ ಗುರಿಯನ್ನು ವಿಶ್ವ ಶಾಂತಿ ದಿನ ಹೊಂದಿದೆ. ಈ ದಿನ ಯಾವುದೇ ಸಂಘರ್ಷಗಳು ನಡೆಯದೇ ಶಾಂತಿಯುತವಾಗಿ, ನ್ಯಾಯಯುತವಾಗಿ ನಡೆದುಕೊಳ್ಳುವಂತೆ ವ್ಯಕ್ತಿಗಳು, ಸಮುದಾಯಗಳು ಹಾಗೂ ರಾಷ್ಟ್ರಗಳನ್ನು ಪ್ರೋತ್ಸಾಹಿಸುತ್ತದೆ. ಜನರು ಹಾಗೂ ದೇಶಗಳ ನಡುವೆ ಸಂಭಾಷಣೆ, ತಿಳುವಳಿಕೆ ಮತ್ತು ಸಹಕಾರವನ್ನು ಉತ್ತೇಜಿಸಲು ಇದು ಪ್ರಮುಖ ದಿನವಾಗಿದೆ.
ಆಚರಣೆ
1986ರಲ್ಲಿ ಯುನೈಟೆಡ್ ನೇಷನ್ಸ್ ಪೀಸ್ ಬೆಲ್ ಅನ್ನು ನ್ಯೂಯಾರ್ಕ್‌ನಲ್ಲಿರುವ ವಿಶ್ವಸಂಸ್ಥೆಯ ಪ್ರಧಾನ ಕಚೇರಿಯಲ್ಲಿ ಉದ್ಘಾಟಿಸಲಾಯಿತು. ಅಂದಿನಿಂದ ಪ್ರತಿವರ್ಷ ವಿಶ್ವ ಶಾಂತಿದಿನದಿಂದ ವಿಶೇಷ ಸಮಾರಂಭವನ್ನು ಅಲ್ಲಿ ಆಚರಿಸಲಾಗುತ್ತದೆ. ಜಾಗತಿಕ ಮಟ್ಟದಲ್ಲಿ ಶಾಂತಿ ಕರೆಯನ್ನು ಸೂಚಿಸುವ ಜೊತೆ ಜೊತೆಗೆ ಶಾಂತಿ ಗಂಟೆಯನ್ನು ಬಾರಿಸಲಾಗುತ್ತದೆ.
ವಿಶ್ವದ 60ಕ್ಕೂ ಹೆಚ್ಚು ವಿವಿಧ ದೇಶದ ಮಕ್ಕಳು ಸೇರಿದಂತೆ ಇತರರು ನೀಡಿದ ನಾಣ್ಯಗಳು, ಮೆಡಲ್‌ಗಳಿಂದ ಈ ಗಂಟೆಯನ್ನು ಮಾಡಲಾಗಿರುವುದು ವಿಶೇಷ.
ಬುದ್ಧನ ಜನ್ಮಸ್ಥಳವನ್ನು ಸಂಕೇತಿಸುವ ಹನಮಿಡೊ (ಹೂವುಗಳಿಂದ ಅಲಂಕರಿಸಲ್ಪಟ್ಟ ಸಣ್ಣ ದೇವಾಲಯ) ಮಾದರಿಯಲ್ಲಿ ಗಂಟೆ ಗೋಪುರವನ್ನು ನಿರ್ಮಾಣ ಮಾಡಲಾಗಿದೆ. ಇಲ್ಲಿರುವ ಶಾಂತಿ ಗಂಟೆಯನ್ನು ವರ್ಷದಲ್ಲಿ ಎರಡು ಬಾರಿ ಬಾರಿಸಲಾಗುತ್ತದೆ. ವಸಂತಕಾಲದ ಮೊದಲ ದಿನ ಹಾಗೂ ಸೆಪ್ಟೆಂಬರ್ 21 ರಂದು ಗಂಟೆ ಬಾರಿಸಲಾಗುತ್ತದೆ.
ವಿಶ್ವಸಂಸ್ಥೆಯ ಶಾಂತಿಪಾಲನಾ ಪಡೆ
1948ರಲ್ಲಿ ವಿಶ್ವಸಂಸ್ಥೆಯ ಶಾಂತಿಪಾಲನಾ ಪಡೆಯನ್ನು ಸ್ಥಾಪಿಸಲಾಯಿತು. ಸಂಘರ್ಷ ಪೀಡಿತ ಪ್ರದೇಶಗಳಲ್ಲಿ ಶಾಂತಿ ಮತ್ತು ಸುವ್ಯವಸ್ಥೆಯನ್ನು ಕಾಪಾಡಲು ವಿಶ್ವಸಂಸ್ಥೆಯು ಶಾಂತಿಪಾಲನಾ ಪಡೆಯನ್ನು ನಿಯೋಜಿಸುತ್ತದೆ. ಸಂಘರ್ಷಪೀಡಿತ ಪ್ರದೇಶಗಳಲ್ಲಿ ಎರಡೂ ಕಡೆಯ ಮುಖ್ಯಸ್ಥರು ಶಾಂತಿಪಾಲನಾ ಪಡೆಯ ನಿಯೋಜನೆಗೆ ತಮ್ಮ ಒಪ್ಪಿಗೆ ಇದೆ ಎಂದು ತಿಳಿಸಿದ ನಂತರವಷ್ಟೇ ವಿಶ್ವಸಂಸ್ಥೆಯು ತನ್ನ ಪಡೆಯನ್ನು ನಿಯೋಜಿಸುತ್ತದೆ. ಶಾಂತಿಪಾಲನಾ ಪಡೆಯ ಮೇಲ್ವಿಚಾರಣೆಯನ್ನು ವಿಶ್ವಸಂಸ್ಥೆಯ ಭದ್ರತಾ ಮಂಡಳಿ ನೋಡಿಕೊಳ್ಳುತ್ತದೆ. ಸಾಮಾನ್ಯವಾಗಿ ಭದ್ರತಾ ಮಂಡಳಿಯ ನಿರ್ಧಾರದ ಮೇರೆಗೆ ಶಾಂತಿಪಾಲನಾ ಪಡೆಯನ್ನು ನಿಯೋಜಿಸಲಾಗುತ್ತದೆ.