ಗಣೇಶ ಚತುರ್ಥಿ 2023ರ ದಿನಾಂಕ ಗೊಂದಲಕ್ಕೆ ಕಾರಣವಾಗಿದೆ. ಸೆಪ್ಟೆಂಬರ್ 18ರಂದು ಗೌರಿ-ಗಣೇಶ ಹಬ್ಬ ಎಂದು ಹಲವು ಕಡೆ ತಿಳಿಸಲಾಗಿದೆ. ಆದರೆ ಸೆಪ್ಟೆಂಬರ್ 19ರ ಮಂಗಳವಾರ ನಾವು ಹಬ್ಬ ಆಚರಣೆ ಮಾಡುತ್ತೇವೆ ಎಂದು ಕೆಲವು ಜಿಲ್ಲೆಗಳ ಜನರು ಹೇಳುತ್ತಿದ್ದಾರೆ.
ಕರ್ನಾಟಕ ಸರ್ಕಾರ ಸೆಪ್ಟೆಂಬರ್ 18ರ ಸೋಮವಾರ ಗಣೇಶ ಚತುರ್ಥಿ ರಜೆಯನ್ನು ಘೋಷಣೆ ಮಾಡಿದೆ. ಮಂಗಳೂರು ದಕ್ಷಿಣ ಕ್ಷೇತ್ರದ ಬಿಜೆಪಿ ಶಾಸಕ ವೇದವ್ಯಾಸ ಕಾಮತ್ ಸೆಪ್ಟೆಂಬರ್ 19ರ ಮಂಗಳವಾರ ಗಣೇಶ ಚತುರ್ಥಿ ಹಬ್ಬದ ಸರ್ಕಾರಿ ರಜೆ ನೀಡಲು ಸರ್ಕಾರವನ್ನು ಆಗ್ರಹಿಸಿದ್ದಾರೆ.
(adsbygoogle = window.adsbygoogle || []).push({});
ಮಂಗಳವಾರ ಫೇಸ್‌ಬುಕ್ ಪೋಸ್ಟ್ ಹಾಕಿರುವ ಅವರು, 'ನಾಡಿನ ಹಾಗೂ ಹಿಂದೂಗಳ ಅತ್ಯಂತ ಪ್ರಮುಖ ಹಬ್ಬವಾಗಿರುವ ಗಣೇಶ ಚತುರ್ಥಿಯು ಈ ಬಾರಿ ಸೆ.19ರಂದು ಇರುವುದರಿಂದ ಸರಕಾರಿ ರಜೆಯನ್ನು ಅಂದೇ ನೀಡಬೇಕು' ಎಂದು ಒತ್ತಾಯಿಸಿದ್ದಾರೆ.
'ಈ ವರ್ಷದ ಸರಕಾರಿ ರಜೆಗಳ ಪಟ್ಟಿಯಲ್ಲಿ ಸೆ.18 ರಂದು ಗಣೇಶ ಚತುರ್ಥಿ ಹಬ್ಬದ ರಜೆಯನ್ನು ಪ್ರಕಟಿಸಲಾಗಿದೆ. ಆದರೆ ನಾಡಿನೆಲ್ಲೆಡೆ ಧಾರ್ಮಿಕವಾಗಿ ಸೆ.19 ರಂದು ಹಬ್ಬದ ಆಚರಣೆ ಇರುವುದರಿಂದ ಆ ದಿನವನ್ನು ಕರ್ತವ್ಯದ ದಿನ ಎಂದು ಪರಿಗಣಿಸಿದರೆ ಹಬ್ಬದ ಸಂಭ್ರಮವನ್ನೇ ಕಸಿದುಕೊಂಡಂತಾಗುತ್ತದೆ' ಎಂದು ತಿಳಿಸಿದ್ದಾರೆ.
'ಸದಾ ಹಿಂದೂಗಳ ಹಬ್ಬದ ವಿಷಯದಲ್ಲಿ ಏಕಪಕ್ಷೀಯವಾಗಿ ವರ್ತಿಸುವ ಕಾಂಗ್ರೆಸ್ ತನ್ನ ಹಳೆಯ ಜಾಯಮಾನವನ್ನು ಬಿಟ್ಟು ಗಣೇಶ ಚತುರ್ಥಿ ರಜೆಯನ್ನು ಸೆ.19 ರಂದೇ ನೀಡಿ ಎಲ್ಲರೂ ಕುಟುಂಬದ ಜೊತೆಗೂಡಿ ಸಂಭ್ರಮದಿಂದ ಹಬ್ಬ ಆಚರಿಸಲು ಅನುಕೂಲ ಕಲ್ಪಿಸಿಕೊಡಬೇಕು ಎಂದು ಮುಖ್ಯಮಂತ್ರಿಯವರಲ್ಲಿ ಆಗ್ರಹಿಸಿಸುತ್ತಿದ್ದೇನೆ' ಎಂದು ಶಾಸಕರು ಹೇಳಿದ್ದಾರೆ.
'ಈ ಹಿಂದೆಯೂ ದಸರಾ ಹಬ್ಬದ ರಜೆಯಲ್ಲಿ ವ್ಯತ್ಯಾಸವಾಗಿದ್ದಾಗ ನಾನು ಅವರು ವಿಶೇಷ ಮುತುವರ್ಜಿ ವಹಿಸಿ ರಜೆ ಮಾರ್ಪಾಡುಗೊಳಿಸಿದ್ದೇವೆ' ಎಂದು ಶಾಸಕರು ಫೇಸ್‌ಬುಕ್ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.
ರಜೆಯ ಗೊಂದಲ; ಕರ್ನಾಟಕದ ಕರಾವಳಿ ಭಾಗದಲ್ಲಿ ಗಣೇಶ ಚತುರ್ಥಿ ರಜೆಯ ಬಗ್ಗೆ ಚರ್ಚೆಗಳು ಜೋರಾಗಿವೆ. ಕರಾವಳಿ ಜಿಲ್ಲೆಗಳಲ್ಲಿ ಸೆಪ್ಟೆಂಬರ್ 19ರ ಮಂಗಳವಾರ ಗಣೇಶ ಚತುರ್ಥಿ ಆಚರಣೆ ಮಾಡಲಾಗುತ್ತದೆ. ಆದರೆ ಸರ್ಕಾರಿ ರಜೆ ಸೆಪ್ಟೆಂಬರ್ 18ರಂದು ಇದೆ.
ಗೌರಿ ತದಿಗೆಯ ದಿನ ರಜೆ ತೆಗೆದುಕೊಂಡು ಗಣೇಶ ಚೌತಿಯ ದಿನ ಕೆಲಸ ಮಾಡಬೇಕೆ? ಎಂಬುದು ಜನರ ಪ್ರಶ್ನೆಯಾಗಿದೆ. ಆದರೆ ಮಲೆನಾಡು ಭಾಗದ ಶಿವಮೊಗ್ಗ, ಚಿಕ್ಕಮಗಳೂರು ಜಿಲ್ಲೆಯ ಕೆಲವು ತಾಲೂಕುಗಳಲ್ಲಿ ಸೋಮವಾರವೇ ಗಣೇಶ ಚತುರ್ಥಿ ಆಚರಣೆ ಮಾಡಲಾಗುತ್ತದೆ.
ಮುಖ್ಯಮಂತ್ರಿಗಳಾಗಲಿ ಅಥವ ಯಾವುದೇ ಸಚಿವರಾಗಲಿ ಗಣೇಶ ಚತುರ್ಥಿಯ ರಜೆ ಕುರಿತು ಇನ್ನೂ ಯಾವುದೇ ಹೇಳಿಕೆ ನೀಡಿಲ್ಲ. 2022 ಅಂತ್ಯದಲ್ಲಿ ಸರ್ಕಾರಿ ರಜೆ ಪಟ್ಟಿಯನ್ನು ಪ್ರಕಟಿಸುವಾಗ ಸೆಪ್ಟೆಂಬರ್ 18ರ ಸೋಮವಾರ ಸರ್ಕಾರಿ ರಜೆ ಎಂದು ಘೋಷಣೆ ಮಾಡಲಾಗಿದೆ.
ಸೆಪ್ಟೆಂಬರ್ 16 ಶನಿವಾರ, ಸೆಪ್ಟೆಂಬರ್ 17 ಭಾನುವಾರ, ಸೆಪ್ಟೆಂಬರ್ 18 ಸೋಮವಾರ ಹೀಗೆ ವಾರಾಂತ್ಯದಲ್ಲಿ ಸಾಲು ಸಾಲು ರಜೆ ಬರುತ್ತಿದೆ. ಹಬ್ಬಕ್ಕೆ ಊರಿಗೆ ಹೋಗಲು ಈಗಾಗಲೇ ಜನರು ರೈಲು, ಬಸ್ ಟಿಕೆಟ್‌ಗಳನ್ನು ಬುಕ್ ಮಾಡಿದ್ದಾರೆ.
ವಾರಾಂತ್ಯದ ಸರಣಿ ರಜೆ, ಹಬ್ಬದ ಹೆಚ್ಚುವರಿ ಪ್ರಯಾಣಿಕರ ದಟ್ಟಣೆ ಕಡಿಮೆ ಮಾಡಲು ಕೆಎಸ್ಆರ್‌ಟಿಸಿ ಹೆಚ್ಚುವರಿ ಬಸ್ ಓಡಿಸುವುದಾಗಿ ಘೋಷಣೆ ಮಾಡಿದೆ. ಭಾರತೀಯ ರೈಲ್ವೆ ವಿವಿಧ ಮಾರ್ಗದಲ್ಲಿ ವಿಶೇಷ ರೈಲುಗಳನ್ನು ಓಡಿಸುತ್ತಿದೆ.
