ಟೊಮೆಟೊ ಹೋಯ್ತು, ಈರುಳ್ಳಿ ಕಾಟ ಶುರುವಾಯ್ತು. ಹೀಗೆ ಕೆಂಪು ಚಿನ್ನ ಟೊಮೆಟೊ ಜಾಗವನ್ನ ಈರುಳ್ಳಿ ಸರಾಗವಾಗಿ ಆಕ್ರಮಿಸಿಕೊಳ್ಳುತ್ತಿದೆ. ಇದು ಬಡ ಜನರ ನಿದ್ದೆಗೆಡಿಸಿದ್ದು ಮಾತ್ರವಲ್ಲ, ಮುಂದೆ ಈರುಳ್ಳಿ ಖರೀದಿ ಹೆಂಗಪ್ಪ ಅಂತಾ ಜನ ಯೋಚಿಸುತ್ತಿದ್ದಾರೆ. ಇದೇ ಸಂದರ್ಭದಲ್ಲಿ ಕೇಂದ್ರ ಸರ್ಕಾರ ಕಠಿಣ ಕ್ರಮ ಕೈಗೊಂಡಿದ್ದು, ಈರುಳ್ಳಿಯ ಬೆಲೆ ಏರಿಕೆಗೆ ಬ್ರೇಕ್ ಹಾಕಿದೆ. ಅಲ್ಲದೆ ತನ್ನ ಕ್ರಮವನ್ನು ಸಮರ್ಥಿಸಿಕೊಂಡಿದೆ.
ಹೌದು, ಈರುಳ್ಳಿ ಬೆಲೆ ನಿಯಂತ್ರಣಕ್ಕೆ ಕೇಂದ್ರ ಸರ್ಕಾರ ಖಡಕ್ ಕ್ರಮ ಕೈಗೊಂಡಿದೆ. ಆದ್ರೆ ಇದು ಕೆಲವರ ಆಕ್ರೋಶಕ್ಕೂ ಕಾರಣವಾಗಿದೆ. ಈರುಳ್ಳಿ ರಫ್ತಿನ ಮೇಲೆ ಶೇಕಡ 40ರಷ್ಟು ಸುಂಕ ವಿಧಿಸಲಾಗಿದೆ. ಈ ಬಗ್ಗೆ ವರ್ತಕರು ಬೇಸರ ಹೊರಹಾಕಿದ್ದಾರೆ. ಆದರೆ ಆಕ್ರೋಶದ ಕುರಿತು ಕೇಂದ್ರ ಸರ್ಕಾರ ಪ್ರತಿಕ್ರಿಯೆ ನೀಡಿದ್ದು, ಈರುಳ್ಳಿ ರಫ್ತಿನ ಮೇಲೆ ಶೇಕಡ 40ರಷ್ಟು ಸುಂಕವನ್ನ ವಿಧಿಸಿರುವುದು ಆತುರದ ನಿರ್ಧಾರವಲ್ಲ. ದೇಶೀಯ ಪೂರೈಕೆ ಹೆಚ್ಚಿಸುವುದು ಹಾಗೂ ಚಿಲ್ಲರೆ ಬೆಲೆ ನಿಯಂತ್ರಿಸುವ ಸೂಕ್ತ ಕ್ರಮವಾಗಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ.
ಇದು ಸಮಯೋಚಿತ ನಿರ್ಧಾರ...
ಟೊಮೆಟೊ ರೀತಿಯೇ ಈರುಳ್ಳಿ ಕೂಡ ಬೆಲೆ ಏರಿಕೆ ಬಿಸಿ ಅನುಭವಿಸುತ್ತಿತ್ತು. ಹೀಗಾಗಿಯೇ ಕೇಂದ್ರ ಸರ್ಕಾರ ತುರ್ತಾಗಿ ಕ್ರಮ ಕೈಗೊಂಡು, ಬೆಲೆ ನಿಯಂತ್ರಣಕ್ಕೆ ಮುಂದಾಗಿದೆ. ಆದರೆ ಹೀಗೆ ಈರುಳ್ಳಿ ರಫ್ತಿನ ಮೇಲೆ ವಿಧಿಸಲಾದ ಶೇಕಡಾ 40ರಷ್ಟು ಸುಂಕದ ವಿರುದ್ಧ ಮಹಾರಾಷ್ಟ್ರ ರೈತರು ನಾಸಿಕ್ ಜಿಲ್ಲೆಯ ಹಲವು ಸ್ಥಳಗಳಲ್ಲಿ ಪ್ರತಿಭಟಿಸಿದ್ದಾರೆ. ಅತ್ತ ಸುಂಕ ವಿಧಿಸಿರುವುದಕ್ಕೆ ವ್ಯಾಪಾರಿಗಳು ಕೂಡ ವಿರೋಧ ವ್ಯಕ್ತಪಡಿಸಿದ್ದಾರೆ. ಇದೀಗ ಕೇಂದ್ರದ ಗ್ರಾಹಕ ವ್ಯವಹಾರಗಳ ಸಚಿವಾಲಯದ ಕಾರ್ಯದರ್ಶಿ ರೋಹಿತ್ ಕುಮಾರ್ ಸಿಂಗ್ ಸರ್ಕಾರದ ಕ್ರಮದ ಬಗ್ಗೆ ಹೇಳಿಕೆ ನೀಡಿದ್ದಾರೆ. ಈರುಳ್ಳಿ ಮೇಲೆ ರಫ್ತು ಸುಂಕ ವಿಧಿಸಿರುವುದು ಆತುರದ ನಿರ್ಧಾರವಲ್ಲ. ಬೆಲೆಯ ನಿಯಂತ್ರಣಕ್ಕೆ ಇದು ಸಮಯೋಚಿತ ನಿರ್ಧಾರ ಎಂದಿದ್ದಾರೆ.
ರಿಯಾಯಿ ದರದಲ್ಲಿ ಈರುಳ್ಳಿ ಸೇಲ್
ಅಷ್ಟಕ್ಕೂ ಇನ್ನುಮುಂದೆ ಸಾಲು ಸಾಲು ಹಬ್ಬಗಳು ದೇಶದಲ್ಲಿ ಬರಲಿವೆ. ಹೀಗಾಗಿ ಕೇಂದ್ರ ಸರ್ಕಾರಕ್ಕೆ ಟೊಮೆಟೊ ರೀತಿ ಈರುಳ್ಳಿ ಕೂಡ ದೊಡ್ಡ ಸವಾಲಾಗುವ ಸೂಚನೆ ನೀಡಿತ್ತು. ಹೀಗಾಗಿ ಇದೇ ಮೊದಲ ಬಾರಿ ಈರುಳ್ಳಿ ಮೇಲಿನ ರಫ್ತು ಸುಂಕ ಏರಿಸುವ ನಿರ್ಧಾರ ಕೈಗೊಂಡ ಕೇಂದ್ರ, ರಿಯಾಯಿತಿ ದರದಲ್ಲಿ ಈರುಳ್ಳಿ ಕೊಡುತ್ತಿದೆ. 2 ದಿನದಲ್ಲಿ ದೆಹಲಿ-ಎನ್‌ಸಿಆರ್‌ನಲ್ಲಿ 2,500 ಟನ್ ಈರುಳ್ಳಿಯನ್ನ ರಿಯಾಯಿತಿ ದರದಲ್ಲಿ ಕೆಜಿಗೆ ₹25ರಂತೆ ಮಾರಾಟ ಮಾಡಲಾಗಿದೆ ಎಂದು ರೋಹಿತ್ ಕುಮಾರ್ ಸಿಂಗ್ ತಿಳಿಸಿದ್ದಾರೆ.
ಈರುಳ್ಳಿ ರೇಟ್ ಹೆಚ್ಚಲು ಕಾರಣ ಏನು?
ತರಕಾರಿ ಬೆಲೆ ಏರಿಕೆ ಕುಟುಂಬ ನಿರ್ವಹಣೆಗೆ ಸಮಸ್ಯೆ ಮಾಡುತ್ತಿದೆ. ಅದ್ರಲ್ಲೂ ನಿತ್ಯ ಬಳಸುವ ಈರುಳ್ಳಿ ಹಾಗೂ ಟೊಮೆಟೊ ಬೆಲೆ ಏರಿಕೆ ಅಲ್ಲೋಲ ಕಲ್ಲೋಲ ಸೃಷ್ಟಿಸಿ, ಭಾರಿ ಆಕ್ರೋಶಕ್ಕೂ ಕಾರಣವಾಗಿದೆ. ಕರ್ನಾಟಕ ಸೇರಿ ಈರುಳ್ಳಿ ಬೆಳೆಯುವ ರಾಜ್ಯಗಳಲ್ಲಿ ಈರುಳ್ಳಿ ಬೆಲೆ ಆಕಾಶದತ್ತ ಮುಖಮಾಡಿದೆ. ಟೊಮೆಟೊ ಇನ್ನೇನು ಹಿಡಿತಕ್ಕೆ ಸಿಕ್ಕಿದೆ ಅಂತಾ ಖುಷಿಯಾಗುವ ಸಂದರ್ಭಕ್ಕೆ, ಈರುಳ್ಳಿ ಬೆಲೆ ಗಗನಮುಖಿ ಆಗಿದೆ. ಸಗಟು ಮಾರುಕಟ್ಟೆಗೆ ಬರುತ್ತಿರುವ ಈರುಳ್ಳಿ ಪ್ರಮಾಣ ಭಾರಿ ಕುಸಿತ ಕಂಡಿದ್ದು, ಹೀಗಾಗಿ ಸಹಜವಾಗಿ ಬೆಲೆ ಏರಿಕೆ ಕಾಣುತ್ತಿದೆ. ಚಂಡಮಾರುತದ ಎಫೆಕ್ಟ್ ಹಾಗೂ ಅಕಾಲಿಕ ಮಳೆ ಈರುಳ್ಳಿ ಬೆಲೆ ಮೇಲೆ ಪರಿಣಾಮ ಬೀರಿದೆ ಎನ್ನಲಾಗುತ್ತಿದೆ.
ಬೆಲೆ ಏರಿಕೆ ಬಿಸಿಗೆ ತಡೆ
ದೇಶದ ವಿವಿಧೆಡೆ ಈರುಳ್ಳಿ ಶಾಕ್ ಕೊಟ್ಟಿದ್ದು, ಪ್ರಮುಖ ನಗರಗಳಲ್ಲಿ ಈರುಳ್ಳಿ ಬೆಲೆ ಈಗಾಗಲೇ ಶೇ.60ರಷ್ಟು ಏರಿಕೆ ಕಂಡಿದೆ. 30 ರೂಪಾಯಿ ಆಸುಪಾಸಿನಲ್ಲಿ ಸಿಗುತ್ತಿದ್ದ ಉತ್ತಮ ಗುಣಮಟ್ಟ ಈರುಳ್ಳಿ ಅರ್ಧ ಶತಕ ಭಾರಿಸಿದೆ. ಹೀಗೆ ದೇಶದ ಜನ ಟೊಮೆಟೊ ಬಳಿಕ ಮತ್ತೊಂದು ತರಕಾರಿ ಬೆಲೆಗೆ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಇದೆಲ್ಲಾ ನೋಡುತ್ತಿದ್ರೆ ಅಡುಗೆ ಮನೆಯಲ್ಲಿ ಟೆನ್ಷನ್ ಶುರುವಾಗಿದೆ, ಹಂಗೋ ಹಿಂಗೋ ಟೊಮೆಟೊ ಹಿಡಿತಕ್ಕೆ ಸಿಕ್ಕಿದೆ. ಆದ್ರೆ ಈಗ ಈರುಳ್ಳಿ ಮಧ್ಯಮ ಮತ್ತು ಬಡ ವರ್ಗದ ಬಿಪಿ ಹೆಚ್ಚಿಸುತ್ತಿದೆ. ಇದೇ ಸಮಯಕ್ಕೆ ಕೇಂದ್ರ ಸರ್ಕಾರವೂ ಸೂಕ್ತ ನಿರ್ಧಾರ ಕೈಗೊಂಡಿದೆ. ಆದರೆ ಕೇಂದ್ರ ಸರ್ಕಾರದ ಈ ನಿರ್ಧಾರಕ್ಕೆ ರೈತರು ಮತ್ತು ವ್ಯಾಪಾರಿಗಳು ಭಾರಿ ಆಕ್ರೋಶ ಹೊರಹಾಕಿದ್ದಾರೆ.