ಬಡತನ ರೇಖೆಗಿಂತ ಕೆಳಗಿಲ್ಲದಿದ್ದರೂ ಬಿಪಿಎಲ್ ಕಾರ್ಡ್ ಹೊಂದಿದವರಿಗೆ ಬಿಸಿ ಮುಟ್ಟಿಸಲು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಮುಂದಾಗಿದೆ. ಆರ್ಥಿಕವಾಗಿ ಸಬಲರಾಗಿದ್ದರೂ ಬಿಪಿಎಲ್ ಸೇವೆ ಪಡೆಯುತ್ತಿರುವವರನ್ನು ಈಗ ಟಾರ್ಗೆಟ್ ಮಾಡಿ ಕಾರ್ಯಾಚರಣೆ ನಡೆಸಲು ಮುಂದಾಗಿದೆ. ಈಗಾಗಲೇ ಮಹತ್ವದ ನಿರ್ಧಾರದ ಮೂಲಕ ಲಕ್ಷಾಂತರ ಬಿಪಿಎಲ್ ಕಾರ್ಡ್ ಡಿಲೀಟ್ ಆಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ..
ಕಳೆದ 15 ದಿನಗಳಲ್ಲಿ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯು ಸುಮಾರು 4.59 ಲಕ್ಷ ಮೃತ ಫಲಾನುಭವಿಗಳ ಹೆಸರಿನಲ್ಲಿರುವ ಬಿಪಿಎಲ್ ಕಾರ್ಡ್ ಡಿಲೀಟ್ ಮಾಡಲಾಗಿದೆ. ಅವರು ಕಳೆದ ತಿಂಗಳವರೆಗೆ ಬಡತನ ರೇಖೆಗಿಂತ ಕೆಳಗಿನ (ಬಿಪಿಎಲ್) ಕಾರ್ಡ್‌ಗಳ ಅಡಿಯಲ್ಲಿ ಪಡಿತರವನ್ನು ಪಡೆಯುತ್ತಿದ್ದರು. ಈ ನಿಟ್ಟಿನಲ್ಲಿ ಸೂಕ್ತ ದಾಖಲೆಗಳನ್ನು ಪಡೆದು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಈಗ ಒಟ್ಟು 4.59 ಲಕ್ಷ ಬಿಪಿಎಲ್ ಕಾರ್ಡ್ ಡಿಲೀಟ್ ಮಾಡಿದೆ.
ರಾಜ್ಯದಲ್ಲಿ 1.27 ಕೋಟಿ ಬಿಪಿಎಲ್ ಕಾರ್ಡ್‌ಗಳಿದ್ದು, 4.36 ಕೋಟಿ ಜನರಿಗೆ ಅನುಕೂಲವಾಗಿದೆ. ಆದರೆ, ಬಿಪಿಎಲ್‌ಗೆ ಅರ್ಹರಲ್ಲದ ಫಲಾನುಭವಿಗಳು ಉಚಿತ ಆಹಾರ ಧಾನ್ಯ ಪಡೆಯುತ್ತಿದ್ದಾರೆ ಎಂಬ ದೂರುಗಳು ಕೇಳಿಬಂದಿದ್ದರು. ಈ ನಿಟ್ಟಿನಲ್ಲಿ ಸೂಕ್ತ ಕಾರ್ಯಾಚರಣೆ ಮೂಲಕ ಮೃತರ ಹೆಸರಿನಲ್ಲಿರುವ 4.59 ಲಕ್ಷ ಬಿಪಿಎಲ್ ಕಾರ್ಡ್ ಡಿಲೀಟ್ ಮಾಡಲಾಗಿದೆ ಎಂದು ಆಹಾರ ಮತ್ತು ನಾಗರಿಕ ಇಲಾಖೆಯ ಜಂಟಿ ನಿರ್ದೇಶಕ ಗ್ಯಾನೇಂದ್ರಕುಮಾರ್ ಗೋನ್ವಾರ್ ಮಾಹಿತಿ ನೀಡಿದ್ದಾರೆ.
ಇನ್ನು ಮೃತ ಫಲಾನುಭವಿಗಳ ಮಾಹಿತಿ ಕಲೆ ಹಾಕಲು, ಅಂತಹ ಹೆಸರುಗಳನ್ನು ಗುರುತಿಸಲು ಮತ್ತು ಅವುಗಳನ್ನು ದಾಖಲೆಗಳಿಂದ ಅಳಿಸಲು ಸರ್ಕಾರವು ಇಲಾಖೆಗೆ ಸೂಚನೆ ನೀಡಿತ್ತು. ಈ ನಿಟ್ಟಿನಲ್ಲಿ ಇಲಾಖೆ ಈಗ ಮಹತ್ವದ ಕಾರ್ಯವನ್ನು ಮಾಡಿದೆ. ಅಲ್ಲದೇ ಬಹುತೇಕ ಕುಟುಂಬಗಳು ಬಿಪಿಎಲ್ ಮಾನದಂಡಕ್ಕಿಂತ ಹೆಚ್ಚಿನ ಆದಾಯ ಹಾಗೂ ಆರ್ಥಿಕ ಸ್ಥಿತಿ ಹೊಂದಿದ್ದರೂ ಕೂಡ ಬಿಪಿಎಲ್ ಸೇವೆ ಪಡೆಯುತ್ತಿವೆ.
ಸೂಕ್ತ ಕಾರ್ಯಾಚರಣೆ ನಡೆಸಿ ಬಿಪಿಎಲ್ ಕಾರ್ಡ್‌ಗಳನ್ನು ದುರುಪಯೋಗಪಡಿಸಿಕೊಂಡವರ ಬಳಿ ದಂಡ ವಸೂಲಿ ಮಾಡುವ ಭರವಸೆ ನೀಡಿದ್ದಾರೆ. ಕಳೆದ ವರ್ಷ ಕೂಡ ನಾಲ್ಕು ಲಕ್ಷ ರೇಷನ್ ಕಾರ್ಡ್ ಡಿಲೀಟ್ ಮಾಡಿ 13 ಕೋಟಿ ರೂಪಾಯಿ ದಂಡವನ್ನು ವಸೂಲಿ ಕೂಡ ಮಾಡಲಾಗಿದೆ. ಇನ್ನು ಈ ವರ್ಷವೂ ಚುರುಕು ಕಾರ್ಯಾಚರಣೆ ನಡೆಸುವ ಭರವಸೆ ನೀಡಿದರು.
ಒಟ್ಟಿನಲ್ಲಿ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಸೂಕ್ತ ಕಾರ್ಯಾಚರಣೆ ನಡೆಸಿ ಬಿಪಿಎಲ್‌ಗೆ ಅರ್ಹರಿಲ್ಲದ ರೇಷನ್ ಕಾರ್ಡ್ ಡಿಲೀಟ್ ಮಾಡುವ ಮೂಲಕ ಅರ್ಹ ಫಲಾನುಭವಿಗಳಿಗೆ ಲಾಭ ದೊರೆಯುವಂತೆ ಮಾಡಬೇಕಿದೆ. ಅಲ್ಲದೇ ಸರ್ಕಾರಿ ನೌಕರಿಯಲ್ಲಿದ್ದು, ಬಿಪಿಎಲ್ ಬಳಕೆ ಮಾಡುತ್ತಿರುವವರಿಗೆ ಬಿಸಿ ಮುಟ್ಟಿಸುವ ಕಾರ್ಯವನ್ನು ಮಾಡಬೇಕಿದೆ.