ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಭಾಗ್ಯಗಳು ಘೋಷಣೆ, ಜನಪ್ರಿಯವಾಗುತ್ತಿದ್ದಂತೆಯೇ ಈಗ ಜನರು ಗ್ಯಾರಂಟಿ ಹಾಗೂ ಭಾಗ್ಯಗಳ ಬಗ್ಗೆ ಹೆಚ್ಚು ಆಸಕ್ತಿ ತೋರುತ್ತಿದ್ದಾರೆ. ಪ್ರಸ್ತುತ ತಮ್ಮ ಸಿನಿಮಾ ಟೀಸರ್ ಮೂಲಕ ಐದು ಗ್ಯಾರಂಟಿಗಳನ್ನು (Guarantee) ನೀಡಲಿದೆ ‘ಈ ಪಟ್ಟಣಕ್ಕೆ ಏನಾಗಿದೆ ?’ (Ee Pattanakke Yenagide) ಚಿತ್ರತಂಡ.
ನೀವು ಯಾವುದೇ ಚಿತ್ರಮಂದಿರಕ್ಕೆ ಹೋದರೂ, ಚಿತ್ರ ಪ್ರಾರಂಭಕ್ಕೆ ಮೊದಲು ಬರುವ ಜಾಹೀರಾತಿನಲ್ಲಿ ಕೇಳುವ ಪದವೇ ಈ ಪಟ್ಟಣಕ್ಕೆ ಏನಾಗಿದೆ?. ಈಗ ಇದೇ ಪದ ಚಿತ್ರದ ಶೀರ್ಷಿಕೆಯಾಗಿದೆ. ಶೀರ್ಷಿಕೆಯ ಮೂಲಕವೇ ಸಾಕಷ್ಟು ಕತೂಹಲ ಮೂಡಿಸಿರುವ ಈ ಚಿತ್ರ ರವಿತೇಜೊ ಸ್ಟುಡಿಯೋಸ್ ಮೂಲಕ ನಿರ್ಮಾಣವಾಗಿದೆ. ಬಿಡುಗಡೆಗೂ ಸಿದ್ದವಾಗಿದೆ. ಸದ್ಯದಲ್ಲೇ ಚಿತ್ರದ ಟೀಸರ್ ಬಿಡುಗಡೆಯಾಗಲಿದ್ದು, ಟೀಸರ್ ಮೂಲಕ ಚಿತ್ರದ ಕುರಿತು ಐದು ಗ್ಯಾರಂಟಿಗಳನ್ನು ಪ್ರೇಕ್ಷಕರಿಗೆ ನೀಡುವುದಾಗಿ ನಿರ್ದೇಶಕ ರವಿ ಸುಬ್ಬರಾವ್ ತಿಳಿಸಿದ್ದಾರೆ.
ಜೂಜು ಮತ್ತು ಬೆಟ್ಟಿಂಗ್ ಮಾಫಿಯಾದ ಸುತ್ತ ಹೆಣೆಯಲಾಗಿರುವ ಈ ಚಿತ್ರದಲ್ಲಿ ನಾಯಕ ತನ್ನ ವಿಲಾಸ ಜೀವನಕ್ಕಾಗಿ ಹೇಗೆ ಅನೇಕರನ್ನು ತನ್ನ ಮೋಸದ ಜಾಲಕ್ಕೆ ಬೀಳಿಸಿಕೊಂಡು ಉನ್ನತ ಸ್ಥಾನಕ್ಕೆ ಏರುತ್ತಾನೆ ಎನ್ನುವದರೊಂದಿಗೆ ಕ್ರಿಕೆಟ್ ಬೆಟ್ಟಿಂಗ್ ಜಾಲವನ್ನು ಕೂಡ ಕುತೂಹಲ ಭರಿತವಾಗಿ ತೋರಿಸಲಾಗಿದೆ
ಪ್ಯಾನ್ ಇಂಡಿಯಾ ಚಿತ್ರವಾಗುವ ಎಲ್ಲ ಸಾಧ್ಯತೆಗಳನ್ನೊಳಗೊಂಡ ಯೂನಿವರ್ಸಲ್ ಅಂಶಗಳಿರುವ ಈ ಚಿತ್ರಕ್ಕೆ ರವಿ ಸುಬ್ಬ ರಾವ್ (Ravi Subbarao) ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ಮಾಣ ಹಾಗೂ ನಿರ್ದೇಶನ ಮಾಡಿರುವುದಲ್ಲದೆ, ನಾಯಕನಾಗೂ ಅಭಿನಯಿಸಿದ್ದಾರೆ. ರಾಧಿಕಾರಾಮ್ ಈ ಚಿತ್ರದ ನಾಯಕಿ. ರಿತೇಶ್ ಜೋಶಿ, ಶ್ರೀನಿಧಿ (Srinidhi), ಸತೀಶ್ ಶೆಟ್ಟಿ , ಸೋನಾ , ದಿಶಾ , ಸಂಧ್ಯಾ ವೇಣು , ಶ್ರೀ ಕ್ರೇಜಿಮೈಂಡ್, ಬಲರಾಮ್, ಸುಕನ್ಯಾ, ಗೋಪಾಲ್ ಮುಂತಾದವರು ಈ ಚಿತ್ರದಲ್ಲಿ ನಟಿಸಿದ್ದಾರೆ.
ರಿತೇಶ್ ಜೋಶಿ ಮತ್ತು ರವಿ ಸುಬ್ಬ ರಾವ್ ನಿರ್ಮಿಸಿರುವ ಈ ಚಿತ್ರಕ್ಕೆ ಅನಿಲ್ ಸಿ ಜೆ ಸಂಗೀತ ನೀಡಿದ್ದಾರೆ. ನೆಲ್ಸನ್ ಮೆಂಡಿಸ್ ಸಂಕಲನ ಹಾಗೂ ವಿನೋದ್ ಮತ್ತು ಶ್ರೀ ಕ್ರೇಜಿಮೈಂಡ್ಸ್ ಛಾಯಾಗ್ರಹಣ ಚಿತ್ರಕ್ಕಿದೆ. ಈ ಪಟ್ಟಣಕ್ಕೆ ಏನಾಗಿದೆ? ಚಿತ್ರ ಎರಡು ಭಾಗಗಳಲ್ಲಿ ಬರುತ್ತಿದ್ದು, ಮೊದಲನೇ ಭಾಗ ತೆರೆಗೆ ಬರಲು ಸಿದ್ದವಾಗಿದೆ. ಎರಡನೇ ಭಾಗದ ಚಿತ್ರೀಕರಣ ಸದ್ಯದಲ್ಲೇ ಶುರುವಾಗಲಿದೆ.