ಡಿಪ್ಲೋಮಾ ಸಿಇಟಿ (DCET 2026)ಗೆ ಸಂಬಂಧಿಸಿದಂತೆ ಎಂಜಿನಿಯರಿಂಗ್ ಎರಡನೇ ವರ್ಷಕ್ಕೆ ಲ್ಯಾಟರಲ್ ಪ್ರವೇಶ ಪಡೆಯುವ ಡಿಪ್ಲೊಮಾ ಅಭ್ಯರ್ಥಿಗಳಿಗೆ ತಮ್ಮ ಅರ್ಜಿಯಲ್ಲಿನ ಮೀಸಲಾತಿ ವಿವರಗಳನ್ನು ತಿದ್ದುಪಡಿ ಮಾಡಿಕೊಳ್ಳಲು ಆಗಸ್ಟ್ 11ರವರೆಗೆ ಅವಕಾಶ ನೀಡಲಾಗಿದೆ. ಅಭ್ಯರ್ಥಿಗಳು ಈ ಅವಕಾಶದ ಸದುಪಯೋಗಪಡಿಸಿಕೊಳ್ಳುವಂತೆ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ಕಾರ್ಯನಿರ್ವಾಹಕ ನಿರ್ದೇಶಕರು ಎಚ್.ಪ್ರಸನ್ನ ಅವರು ತಿಳಿಸಿದ್ದಾರೆ.
- ಪ್ರಾಧಿಕಾರದ ಪ್ರಕಾರ, ಪರಿಶಿಷ್ಟ ಜಾತಿಯ ಒಳ ಮೀಸಲಾತಿ ಪ್ರಕಾರ ಪಡೆದ ಆರ್ ಡಿ ಸಂಖ್ಯೆ ಹಾಗೂ ಪ್ರವರ್ಗ ಗಳ/ಆದಾಯ ಪ್ರಮಾಣ ಪತ್ರದ ಆರ್ ಡಿ ಸಂಖ್ಯೆಯನ್ನು ಕೂಡ ದಾಖಲಿಸಲು ಅವಕಾಶ ನೀಡಲಾಗಿದೆ. ಅಭ್ಯರ್ಥಿಗಳ ಮನವಿಗೆ ಸ್ಪಂದಿಸಿ ಅರ್ಜಿ ತಿದ್ದುಪಡಿಗೆ ಅವಕಾಶ ನೀಡಲಾಗಿದೆ ಎಂದು ಅವರು ತಿಳಿಸಿದ್ದಾರೆ.
- ಡಿಸಿಇಟಿ ಅಭ್ಯರ್ಥಿಗಳು ತಮ್ಮ ಅರ್ಜಿಯಲ್ಲಿ ಡಿಫೆನ್ಸ್, ಕ್ರೀಡೆ ಇತ್ಯಾದಿ ವಿಶೇಷ ಕ್ಯಾಟಗರಿಗಳ ದಾಖಲೆಗಳನ್ನು ಜೂನ್ 25ರಂದು ಮಲ್ಲೇಶ್ವರದ ಕಚೇರಿಗೆ ಸಲ್ಲಿಸಿದ್ದರು. ವಿಶೇಷ ಚೇತನ ಕೋಟಾ ಅಡಿಯಲ್ಲಿ ಸೀಟು ಪಡೆಯಲು ಕ್ಲೇಮ್ ಮಾಡಿರುವ ಅಭ್ಯರ್ಥಿಗಳ ವೈದ್ಯಕೀಯ ತಪಾಸಣೆ ಜೂ.30ರಂದು ನಡೆದಿತ್ತು. ವೃತ್ತಿಪರ ಡಿಪ್ಲೊಮಾ ಪದವೀಧರ ಅಭ್ಯರ್ಥಿಗಳಿಗೆ ಎಂಜಿನಿಯರಿಂಗ್ ಕಾಲೇಜುಗಳಲ್ಲಿ ಲ್ಯಾಟರಲ್ ಪ್ರವೇಶಕ್ಕೆ ಅವಕಾಶ ನೀಡಿದ್ದು, ಜುಲೈ 1ರಂದು ಕೆಇಎ ಕಚೇರಿಯಲ್ಲಿ ದಾಖಲೆ ಪರಿಶೀಲನೆ ನಡೆದಿತ್ತು. ಇದೀಗ ಮುಂದಿನ ಹಂತದಲ್ಲಿ ಎಂಜಿನಿಯರಿಂಗ್ ಎರಡನೇ ವರ್ಷಕ್ಕೆ ಲ್ಯಾಟರಲ್ ಪ್ರವೇಶ ಪಡೆಯುವ ಡಿಪ್ಲೊಮಾ ಅಭ್ಯರ್ಥಿಗಳಿಗೆ ಅರ್ಜಿ ತಿದ್ದುಪಡಿಗೆ ಅವಕಾಶ ನೀಡಲಾಗಿದೆ.
ಯುಜಿ ನೀಟ್, ಸಿಇಟಿ ಅಭ್ಯರ್ಥಿಗಳಿಗೆ ಆ.13ರವರೆಗೆ ಅವಕಾಶ
- ಇನ್ನೂ ಯುಜಿ ಸಿಇಟಿ ಮತ್ತು ಯುಜಿ ನೀಟ್ 2026ಕ್ಕೆ ಸಂಬಂಧಿಸಿದಂತೆ ಎರಡನೇ ಸುತ್ತಿನ ಸೀಟು ಹಂಚಿಕೆ ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ. ಅಭ್ಯರ್ಥಿಗಳ ಆಪ್ಷನ್ಸ್ ಎಂಟ್ರಿ ಇಂದಿನಿಂದ ಆರಂಭವಾಗಿದೆ. ಆಗಸ್ಟ್ 13ರವರೆಗೆ ಆಯ್ಕೆ ದಾಖಲಿಸಲು ಅವಕಾಶ ನೀಡಲಾಗಿದೆ. ವೈದ್ಯಕೀಯ, ದಂತ ವೈದ್ಯಕೀಯ ಹಾಗೂ ಫಾರ್ಮಸಿ ಕೋರ್ಸ್ ಪ್ರವೇಶಕ್ಕೆ ಆಪ್ಷನ್ಸ್ ದಾಖಲಿಸಲು ಲಿಂಕ್ ಬಿಡುಗಡೆ ಮಾಡಲಾಗಿದೆ ಎಂದು ಪ್ರಾಧಿಕಾರ ಮಾಹಿತಿ ನೀಡಿದೆ.
- ವೈದ್ಯಕೀಯ ಕೋರ್ಸ್ ಗಳಿಗೆ ಮೊದಲ ಸುತ್ತಿನ ಮತ್ತು ಎಂಜಿನಿಯರಿಂಗ್ ಇತ್ಯಾದಿ ಸಿಇಟಿ ಕೋರ್ಸ್ ಗಳ ಎರಡನೇ ಸುತ್ತಿನ ಸೀಟು ಹಂಚಿಕೆಯನ್ನು ಏಕಕಾಲದಲ್ಲಿ ಮಾಡುತ್ತಿದ್ದು, ತಾತ್ಕಾಲಿಕ ಫಲಿತಾಂಶವನ್ನು ಆ.19ರಂದು ಪ್ರಕಟಿಸಲಾಗುವುದು. ಎಂಜಿನಿಯರಿಂಗ್ ಇತ್ಯಾದಿ ಸಿಇಟಿ ಕೋರ್ಸ್ ಗಳ ಪ್ರವೇಶಕ್ಕೆ ಆಪ್ಷನ್ಸ್ ದಾಖಲಿಸಿದ್ದ ಅಭ್ಯರ್ಥಿಗಳು ಕೂಡ ಈಗ ಹೊಸದಾಗಿ ಆಪ್ಷನ್ಸ್ ದಾಖಲಿಸಲು/ಮಾರ್ಪಡಿಸಲು/ತೆಗೆದು ಹಾಕುವುದಕ್ಕೂ ಇದೇ ಮೊದಲ ಬಾರಿಗೆ ಅವಕಾಶ ನೀಡಲಾಗಿದೆ ಎಂದು ಎಚ್.ಪ್ರಸನ್ನ ಅವರು ಮಾಹಿತಿ ನೀಡಿದ್ದಾರೆ.
ಸೀಟು ಹಂಚಿಕೆ: ಆಯ್ಕೆ ದಾಖಲಾತಿಗೆ ಅವಕಾಶ
- ವೈದ್ಯಕೀಯ, ದಂತ ವೈದ್ಯಕೀಯ ಮತ್ತು ಫಾರ್ಮಸಿ ಕೋರ್ಸ್ ಗಳ ಸೀಟ್ ಮ್ಯಾಟ್ರಿಕ್ಸ್ ಮತ್ತು ಶುಲ್ಕದ ವಿವರಗಳನ್ನು ವೆಬ್ ಸೈಟ್ ನಲ್ಲಿ ಪ್ರಕಟಿಸಿದೆ. ಅದನ್ನು ನೋಡಿಯೇ ಎಚ್ಚರಿಕೆಯಿಂದ ಆಪ್ಷನ್ಸ್ ದಾಖಲಿಸಬೇಕು. ಯುಜಿ ನೀಟ್ ಕೋರ್ಸ್ ಗಳಿಗೆ ಮೊದಲನೇ ಸುತ್ತಿನ ಸೀಟು ಹಂಚಿಕೆಯಾಗಿರುವ ಕಾರಣ ನಾಲ್ಕು ಚಾಯ್ಸ್ ಗಳು ಇರುತ್ತವೆ. ಆದರೆ ಎಂಜಿನಿಯರಿಂಗ್, ಕೃಷಿ ವಿಜ್ಞಾನ, ಫಾರ್ಮಸಿ ಇತ್ಯಾದಿ ಯುಜಿಸಿಇಟಿ ಕೋರ್ಸ್ ಗಳಿಗೆ ಎರಡನೇ ಸುತ್ತಿನ ಸೀಟು ಹಂಚಿಕೆಯ ಫಲಿತಾಂಶದ ನಂತರ ಚಾಯ್ಸ್ - 1 ಮತ್ತು ಚಾಯ್ಸ್- 4 ಮಾತ್ರ ಆಯ್ಕೆಗೆ ಅವಕಾಶ ಇರುತ್ತದೆ.
- ಆಯುಷ್ ಕೋರ್ಸ್ ಗಳಿಗೆ ಸೀಟ್ ಮ್ಯಾಟ್ರಿಕ್ಸ್ ಬಂದಿಲ್ಲ. ಹೀಗಾಗಿ ಆಪ್ಷನ್ಸ್ ದಾಖಲಿಸಲು ಅವಕಾಶ ನೀಡಿಲ್ಲ. ಇದುವರೆಗೂ ದಾಖಲೆಗಳನ್ನು ಪರಿಶೀಲನೆ ಮಾಡಿಸಿಕೊಳ್ಳದಿರುವ ಅಭ್ಯರ್ಥಿಗಳು ಶನಿವಾರ ಕೂಡ ಕೆಇಎ ಕಚೇರಿಗೆ ಬಂದ ಮಾಡಿಸಿಕೊಳ್ಳಬಹುದು. ಅದರ ನಂತರವೇ ವೆರಿಫಿಕೇಷನ್ ಸ್ಲಿಪ್ ಡೌನ್‌ಲೋಡ್ ಮಾಡಿಕೊಂಡು ಆಪ್ಷನ್ಸ್ ದಾಖಲಿಸಿಕೊಳ್ಳಬಹುದು.
- ಚಾಯ್ಸ್-4 ದಾಖಲಿಸಿ ಪ್ರಕ್ರಿಯೆಯಿಂದ ಹೊರ ನಡೆದಿರುವ ಹಾಗೂ ಮೊದಲ ಸುತ್ತಿನಲ್ಲಿ ಸೀಟು ಹಂಚಿಕೆಯಾದ ಮೇಲೂ ಚಾಯ್ಸ್ ದಾಖಲಿಸದೆ ಸುಮ್ಮನಿರುವ ಅಭ್ಯರ್ಥಿಗಳು ಕೂಡ 750 ರೂಪಾಯಿ ಪಾವತಿಸಿ ಪುನಃ ಕೌನ್ಸೆಲಿಂಗ್ ನಲ್ಲಿ ಭಾಗವಹಿಸುವಂತೆ ಕೆಇಎ ಪ್ರಕಟಣೆಯಲ್ಲಿ ತಿಳಿಸಿದೆ.