ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (KSRTC) ಬೆಂಗಳೂರು ಮಾತ್ರವಲ್ಲದೇ ಒಟ್ಟು 6 ಜಿಲ್ಲೆಗಳಿಂದ ಮೈದುಂಬಿ ಹರಿಯುತ್ತಿರುವ ವಿಶ್ವ ವಿಖ್ಯಾತ ಜೋಗ ಜಲಪಾತಕ್ಕೆ ವಿಶೇಷ ಟೂರ್ ಪ್ಯಾಕೇಜ್‌ಗಳನ್ನು ಘೋಷಿಸಿದೆ. ರಾಜ್ಯದ ದಕ್ಷಿಣ ಭಾಗದ ಪ್ರಮುಖ ಜಿಲ್ಲೆಗಳಿಂದ ವಾರಾಂತ್ಯಗಳಲ್ಲಿ ಈ ವಿಶೇಷ ಬಸ್‌ಗಳು ಪ್ರವಾಸಿಗರನ್ನು ಕರೆದೊಯ್ಯಲಿದೆ. ಎಲ್ಲಿಂದ ಬಸ್‌ಗಳು ಯಾವೆಲ್ಲ ಸಮಯಕ್ಕೆ ತೆರಳುತ್ತವೆ, ಟಿಕೆಟ್ ದರ, ವೇಳಾಪಟ್ಟಿ ಇಲ್ಲಿದೆ.
![]() |
ಮಳೆಗಾಲ ಆರಂಭವಾಗುತ್ತಿದ್ದಂತೆ ಮಲೆನಾಡಿನ ಹೆಬ್ಬಾಗಿಲು ಅಂತಲೇ ಕರೆಸಿಕೊಳ್ಳುವ ಶಿವಮೊಗ್ಗ ಚಾರಣಿಗರನ್ನು, ಪ್ರವಾಸಿಗರನ್ನು ಕೈ ಬೀಸಿ ಕರೆಯುತ್ತದೆ. ಹಾಲಿ ನೊರೆಯಂತೆ ಧುಮ್ಮಿಕ್ಕುವ ನೀರನ್ನು ನೋಡಲು ಅಪಾರ ಸಂಖ್ಯೆಯನ್ನು ಜನರು ಆಗಮಿಸುತ್ತಾರೆ. ಇದನ್ನು ಅರಿತ ಸಾರಿಗೆ ನಿಗಮ ಜನರು ಇರುವ ಕಡೆಯಿಂದಲೇ ಸಾರಿಗೆ ಬಸ್ ಬಿಡಲಾಗುತ್ತಿದೆ. ಇದರಲ್ಲಿ ನಾನ್ ಎಸಿ ಸ್ಲೀಪರ್, ಅಶ್ವಮೇಧ ಸೇರಿ ವಿವಿಧ ವರ್ಗದ ಬಸ್‌ಗಳಿವೆ.
ಆರು ಜಿಲ್ಲೆಗಳಿಂದ ಜೋಗ ಫಾಲ್ಸ್‌ಗೆ KSRTC ಬಸ್
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (KSRTC) ಬೆಂಗಳೂರು, ದಾವಣಗೆರೆ, ಚಳ್ಳಕೆರೆ, ಚಿತ್ರದುರ್ಗ, ಹೊಳಲ್ಕೆರೆ, ಹಾಸನ, ಶಿವಮೊಗ್ಗ ಮತ್ತು ತುಮಕೂರು ಭಾಗದ ಬಸ್ ಘಟಕದಿಂದ ಜೋಗಕ್ಕೆ ಆರಂಭಿಸಿದ ಹೊಸ ಪ್ಯಾಕೇಜ್ ಟೂರ್ ಸೇವೆ ಇದಾಗಿದೆ. ಆಗಸ್ಟ್ ತಿಂಗಳಿನಿಂದ ವಾರಾಂತ್ಯ (ಶನಿವಾರ-ರವಿವಾಗ) ಮತ್ತು ರಜಾ ದಿನಗಳಂದು ಟೂರ್ ಬಸ್‌ಗಳು ಕಾರ್ಯಾಚರಣೆ ಮಾಡಲಿವೆ.
ಮಳೆಗಾಲದಲ್ಲಿ ಸುಂದರ ಜಲಪಾತ ಹಾಗೂ ಸುತ್ತಮುತ್ತಲಿನ ಧಾರ್ಮಿಕ ಮತ್ತು ಐತಿಹಾಸಿಕ ತಾಣಗಳನ್ನು ವೀಕ್ಷಿಸಲು ಬಯಸುವ ಸಾರ್ವಜನಿಕರು ಹಾಗೂ ಪ್ರವಾಸಿಗರು ಈ ವಿಶೇಷ ಪ್ಯಾಕೇಜ್ ಸಾರಿಗೆಯ ಸೌಲಭ್ಯ/ಪ್ರಯೋಜನವನ್ನು ಪಡೆದುಕೊಳ್ಳಬಹುದು. ಟೂರ್ ಸಾರಿಗೆ ಸೌಲಭ್ಯ ಪಡೆಯಲು, ಮುಂಗಡ ಟಿಕೇಟ್ ಪಡೆಯಲು ಅಧಿಕೃತ ವೆಬ್ ಸೈಟ್: www.ksrtc.in ಮತ್ತು www.ksrtc.karnataka.gov.in ಭೇಟಿ ನೀಡಬಹುದು. ಹೆಚ್ಚಿನ ಮಾಹಿತಿಗೆ ನೀವು ದೂರವಾಣಿ 080-26252625ಗೆ ಕರೆ ಮಾಡಬಹುದು ಎಂದು ಸಂಸ್ಥೆ ಅಧಿಕಾರಿಗಳು ತಿಳಿಸಿದ್ದಾರೆ.
ಟೂರ್ ಪ್ಯಾಕೇಜ್ ವಿವರ
* ಬೆಂಗಳೂರಿನಿಂದ ನಾನ್ ಎಸಿ ಸ್ಲೀಪರ್ ಬಸ್ ಶುಕ್ರವಾರ ಮತ್ತು ಶನಿವಾರ ರಾತ್ರಿ 22:30 ಗಂಟೆಗೆ ಹೊರಡಲಿದ್ದು, ಒಬ್ಬರಿಗೆ ಟಿಕೆಟ್ ದರ 3,300 ರೂಪಾಯಿ ನಿಗದಿಪಡಿಸಲಾಗಿದೆ. ಬೆಂಗಳೂರು-ವರದಹಳ್ಳಿ-ವರದಮೂಲ-ಇಕ್ಕೇರಿ-ಕೆಳದಿ-ಸಾಗರ-ಜೋಗ್ ಫಾಲ್ಸ್ ಮಾರ್ಗವಾಗಿ ಸಾಗಲಿದೆ. ಟಿಕೆಟ್ ದರ ವಸತಿ ಒಳಗೊಂಡಿದೆ.
* ದಾವಣಗೆರೆ ನಿಲ್ದಾಣದಿಂದ ಅಶ್ವಮೇಧ ಬಸ್ ಶುಕ್ರವಾರ ಮತ್ತು ಶನಿವಾರ ಬಳಗ್ಗೆ 6:00 ಗಂಟೆಗೆ ಹೊರಡಲಾಗುತ್ತದೆ. ದಾವಣಗೆರೆ-ಸಿಗಂದೂರು-ಇಕ್ಕೇರಿ ಕೋಟೆ-ವರದಮೂಲ ಮಾರ್ಗವಾಗಿ ಜೋಗ್ ಫಾಲ್ಸ್ ತಲುಪಲಾಗುತ್ತದೆ. ಟಿಕೆಟ್ ದರ 600 ರೂಪಾಯಿ.
* ಚಳ್ಳಕೆರೆಯಿಂದ ಕನಾಟಕ ಸಾರಿಗೆ ಬಸ್ ಶನಿವಾರ ಮತ್ತು ಭಾನುವಾರ ಬೆಳಗ್ಗೆ 05:15 ಗಂಟೆಗೆ ಹೊರಡುತ್ತದೆ. ಚಳ್ಳಕೆರೆ-ಚಿತ್ರದುರ್ಗ-ಹೊಳಲ್ಕೆರೆ-ಇಕ್ಕೇರಿ-ಜೋಗಫಾಲ್ಸ್ ಗೆ ಸಾಗಲಿದ್ದು, ಒಬ್ಬರಿಗೆ ಟಿಕೆಟ್ ದರ 600 ರೂಪಾಯಿ.
* ಚಿತ್ರದುರ್ಗದಿಂದ ಕರ್ನಾಟಕ ಸಾರಿಗೆ ಬಸ್ ಬೆಳಗ್ಗೆ 6:15ಕ್ಕೆ ಪ್ರಯಾಣ ಆರಂಭಿಸುತ್ತದೆ. ಒಬ್ಬರಿಗೆ ಟಿಕೆಟ್ ಬೆಲೆ 500 ರೂಪಾಯಿ ಇದ್ದು, ಚಿತ್ರದುರ್ಗ-ಹೊಳಲ್ಕೆರೆ-ಇಕ್ಕೇರಿ-ಜೋಗ್ ಫಾಲ್ಸ್ ಮೂಲಕ ಬಸ್ ಸಂಚರಿಸುತ್ತದೆ.
* ಹೊಳಲ್ಕೆರೆಯಿಂದ ಸಾರಿಗೆ ಬಸ್ 7:15ಕ್ಕೆ ಸಂಚಾರ ಆರಂಭಿಸುತ್ತದೆ. ಒಬ್ಬರಿಗೆ ತಲಾ 450 ರೂ. ಟಿಕೆಟ್ ಬೆಲೆ ನಿಗದಿಪಡಿಸಲಾಗಿದೆ. ಹೊಳಲ್ಕೆರೆ-ಇಕ್ಕೇರಿ-ಜೋಗಫಾಲ್ಸ್ ಮಾರ್ಗದಲ್ಲಿ ಸಂಚರಿಸಲಿದೆ.
* ಹಾಸನ ನಿಲ್ದಾಣದಿಂದ ಅಶ್ವಮೇಧ ಬಸ್ ಬೆಳಗ್ಗೆ 05:35ಕ್ಕ ಹೊರಡುತ್ತದೆ. ಒಬ್ಬರಿಗೆ ತಲಾ 700 ರೂಪಾಯಿ ಟಿಕೆಟ್ ದರ ಇದ್ದು, ಈ ಬಸ್ ಹಾಸನದಿಂದ ಜೋಗ್ ಫಾಲ್ಸ್‌ಗೆ ತೆರಳಲಿದೆ.
* ಶಿವಮೊಗ್ಗದಿಂದ ಕರ್ನಾಟಕ ಸಾರಿಗೆ ಬಸ್ ಬೆಳಗ್ಗೆ 08:00ಕ್ಕೆ ಹೊರಡುತ್ತದೆ. ಒಬ್ಬರಿಗೆ ಟಕೆಟ್ ದರ 450 ರೂಪಾಯಿ. ಶಿವಮೊಗ್ಗ-ಸಿಗಂದೂರು-ವರದಮೂಲ-ಇಕ್ಕೇರಿ-ಕೆಳದಿ-ಜೋಗಫಾಲ್ಸ್ ತಲುಪಲಿದೆ.
* ತುಮಕೂರು ಬಸ್ ನಿಲ್ದಾಣದಿಂದ ಕರ್ನಾಟಕ ಸಾರಿಗೆ ಬಸ್ ರಾತ್ರಿ 21:30 ಸಂಚಾರ ಆರಂಭಿಸುತ್ತದೆ. ಮಾರನೇ ದಿನ ಬೆಳಗ್ಗೆ ಜೋಗ ತಲುಪುತ್ತದೆ. ಈ ಬಸ್‌ನಲ್ಲಿ ಒಬ್ಬರಿಗೆ 1000 ರೂಪಾಯಿ ಟಿಕೆಟ್ ದರ ನಿಗದಿಪಡಿಸಲಾಗಿದೆ ಎಂದು KSRTC ಪ್ರಕಟಣೆಯಲ್ಲಿ ತಿಳಿಸಿದೆ.
