ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಚಿಕ್ಕೋಡಿ ವಿಭಾಗವು ಚಿಕ್ಕೋಡಿ - ಬೆಂಗಳೂರು ನಡುವೆ ನೂತನ ರಾಜ ರಥ (ಎಸಿ ಸ್ಲೀಪರ್) ಬಸ್ ಸೇವೆ ಆರಂಭಿಸಿದೆ. ಈ ಬಸ್ ನಿಪ್ಪಾಣಿ, ಸಂಕೇಶ್ವರ, ಬೆಳಗಾವಿ, ಧಾರವಾಡ ಹಾಗೂ ಹುಬ್ಬಳ್ಳಿ ಮಾರ್ಗವಾಗಿ ಸಂಚರಿಸಲಿದೆ. ಪ್ರಯಾಣ ದರ 1,357 ರೂ. ಆಗಿದ್ದು, ಚಿಕ್ಕೋಡಿಯಿಂದ ಸಂಜೆ 7:00 ಹಾಗೂ ಬೆಂಗಳೂರಿನಿಂದ ರಾತ್ರಿ 8:55ಕ್ಕೆ ಹೊರಡಲಿದೆ.
| NWKRTC ಹೊಸ ರಾಜ ರಥ ಸ್ಲೀಪರ್ ಬಸ್‌ಗಳ ಸೇವೆಗೆ ಚಾಲನೆ ನೀಡಿದ್ದು, ಉತ್ತರ ಕರ್ನಾಟಕದ 5 ಪ್ರಮುಖ ನಗರಗಳಿಂದ ಬೆಂಗಳೂರಿಗೆ ಆರಾಮದಾಯಕ ರಾತ್ರಿ ಪ್ರಯಾಣಕ್ಕೆ ಹೊಸ ಅವಕಾಶ ಕಲ್ಪಿಸಲಾಗಿದೆ. ಪ್ರಯಾಣಿಕರಿಗಾಗಿ ವೇಳಾಪಟ್ಟಿಯನ್ನೂ ಪ್ರಕಟಿಸಲಾಗಿದೆ. |
ಉತ್ತರ ಕರ್ನಾಟಕ ಭಾಗದ ಪ್ರಯಾಣಿಕರಿಗೆ ಸಿಹಿ ಸುದ್ದಿ; NWKRTC 2 ಐಷಾರಾಮಿ ಬಸ್‌ಗಳ ಸೇವೆ ಆರಂಭ.ನಿಪ್ಪಾಣಿ, ಸಂಕೇಶ್ವರ, ಚಿಕ್ಕೋಡಿ, ಧಾರವಾಡ ಬೆಳಗಾವಿ, ಹುಬ್ಬಳ್ಳಿಯಿಂದ ರಾಜ ರಥ ಬಸ್‌ಗಳ ಸೇವೆ ಲಭ್ಯ.ಚಿಕ್ಕೋಡಿ, ಬೆಳಗಾವಿ ಹಾಗೂ ಹುಬ್ಬಳ್ಳಿ - ಧಾರವಾಡ ಭಾಗದ ಪ್ರಯಾಣಿಕರಿಗೆ ಅನುಕೂಲ.
ರಾಜ ರಥ ಹೊಸ ಬಸ್‌ಗಳ ಸೇವೆ ಆರಂಭ
ಬೆಂಗಳೂರು: ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯು ಉತ್ತರ ಕರ್ನಾಟಕ ಭಾಗದ ಪ್ರಯಾಣಿಕರಿಗೆ ಸಿಹಿ ಸುದ್ದಿ ನೀಡಿದೆ. ನೂತನವಾಗಿ 2 ಐಷಾರಾಮಿ ರಾಜ ರಥ ಬಸ್‌ಗಳ ಸೇವೆ ಆರಂಭಿಸಿದೆ. ಪ್ರಸಕ್ತ ವಾರದಿಂದ ಈ ಬಸ್‌ಗಳ ಸಂಚಾರ ಆರಂಭವಾಗಿದ್ದು, ನಿತ್ಯ ಉತ್ತರ ಕರ್ನಾಟಕದ 5 ಪ್ರಮುಖ ನಗರಗಳು - ಬೆಂಗಳೂರು ನಡುವೆ ಸಂಪರ್ಕ ಕಲ್ಪಿಸಲಿವೆ.
ವಾಯವ್ಯ ಸಾರಿಗೆಯ ಚಿಕ್ಕೋಡಿ ವಿಭಾಗಕ್ಕೆ ಈ ಬಸ್‌ಗಳು ಸೇರಿದ್ದು, ಚಿಕ್ಕೋಡಿ - ಬೆಂಗಳೂರು ನಡುವೆ ಸಂಚಾರ ನಡೆಸುತ್ತವೆ.
- ಅತ್ಯಾಧುನಿಕ ಹಾಗೂ ಐಷಾರಾಮಿ ಸೌಲಭ್ಯಗಳನ್ನು ಹೊಂದಿರುವ ಈ ಎಸಿ ಸ್ಲೀಪರ್ ಬಸ್‌ಗಳು ಚಿಕ್ಕೋಡಿ ಮತ್ತು ಸುತ್ತಮುತ್ತಲಿನ ಸಾರ್ವಜನಿಕರಿಗೆ ಬೆಂಗಳೂರಿಗೆ ಸುಖಕರ ಹಾಗೂ ಸುರಕ್ಷಿತ ಪ್ರಯಾಣದ ಅನುಭವ ನೀಡಲಿದೆ.
- ಚಿಕ್ಕೋಡಿ, ಬೆಳಗಾವಿ ಹಾಗೂ ಹುಬ್ಬಳ್ಳಿ - ಧಾರವಾಡ ಭಾಗದ ಸಾರ್ವಜನಿಕರು, ಉದ್ಯೋಗಿಗಳು ಮತ್ತು ವಿದ್ಯಾರ್ಥಿಗಳು ಈ ಐಷಾರಾಮಿ ರಾಜ ರಥ ಸೇವೆಯ ಸೌಲಭ್ಯವನ್ನು ಪಡೆದುಕೊಳ್ಳುವಂತೆ ಸಂಸ್ಥೆಯ ಚಿಕ್ಕೋಡಿ ವಿಭಾಗ ಮನವಿ ಮಾಡಿದೆ.
ಚಿಕ್ಕೋಡಿ - ಬೆಂಗಳೂರು ರಾಜ ರಥ ಬಸ್ ವೇಳಾಪಟ್ಟಿ ಏನು?
- ಚಿಕ್ಕೋಡಿಯಿಂದ ಹೊರಡುವ ಸಮಯ: ಸಂಜೆ 7:00 ಗಂಟೆಗೆ
- ಬೆಂಗಳೂರು ತಲುಪುವ ಸಮಯ: ಬೆಳಿಗ್ಗೆ 06:45 ಗಂಟೆಗೆ
- ಎಲ್ಲೆಲ್ಲಿ ನಿಲುಗಡೆ: ನಿಪ್ಪಾಣಿ, ಸಂಕೇಶ್ವರ, ಬೆಳಗಾವಿ, ಧಾರವಾಡ ಮತ್ತು ಹುಬ್ಬಳ್ಳಿ ಪ್ರಮುಖ ನಗರಗಳ ಮಾರ್ಗವಾಗಿ ಬೆಂಗಳೂರನ್ನು ತಲುಪಲಿದೆ.
ಬೆಂಗಳೂರು - ಚಿಕ್ಕೋಡಿ ರಾಜ ರಥ ಬಸ್ ವೇಳಾಪಟ್ಟಿ ಏನು?
- ಬೆಂಗಳೂರಿನಿಂದ ಹೊರಡುವ ಸಮಯ: ರಾತ್ರಿ 8:55 ಗಂಟೆಗೆ
- ಚಿಕ್ಕೋಡಿ ತಲುಪುವ ಸಮಯ: ಬೆಳಿಗ್ಗೆ 7:45 ಗಂಟೆಗೆ
- ಎಲ್ಲೆಲ್ಲಿ ನಿಲುಗಡೆ: ಹುಬ್ಬಳ್ಳಿ, ಧಾರವಾಡ, ಬೆಳಗಾವಿ, ಸಂಕೇಶ್ವರ, ನಿಪ್ಪಾಣಿ ಮತ್ತು ಪ್ರಮುಖ ನಗರಗಳ ಮಾರ್ಗವಾಗಿ ಚಿಕ್ಕೋಡಿಯನ್ನು ತಲುಪಲಿದೆ.
ಟಿಕೆಟ್ ದರ ಎಷ್ಟು?
ಎರಡೂ ಮಾರ್ಗದಲ್ಲಿಯೂ ಪ್ರತಿ ಪ್ರಯಾಣಿಕರಿಗೆ ಪ್ರಯಾಣ ದರ: 1,357 ರೂ.
ಟಿಕೆಟ್ ಬುಕಿಂಗ್ ಹೇಗೆ?
- ಪ್ರಯಾಣಿಕರು ಮುಂಗಡ ಟಿಕೆಟ್ ಕಾಯ್ದಿರಿಸಲು ಸಂಸ್ಥೆಯ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಬಹುದು.
- ಆನ್‌ಲೈನ್ ಬುಕಿಂಗ್ ವೆಬ್‌ಸೈಟ್: www.ksrtc.in
- ಮಾಹಿತಿಗಾಗಿ ಸಂಪರ್ಕ ಸಂಖ್ಯೆಗಳು: 9481006515 / 7760991875 / 77609 91555