ಸರ್ಕಾರಿ ಶಾಲೆಗಳತ್ತ ಮಕ್ಕಳನ್ನು ಸೆಳೆಯಲು ರಾಜ್ಯ ಸರ್ಕಾರದ ‘ಶಿಕ್ಷಣ ಗ್ಯಾರಂಟಿ’ ಅಸ್ತ್ರ

2025-26ನೇ ಶೈಕ್ಷಣಿಕ ಸಾಲಿನ ಫಲಿತಾಂಶದ ಬಳಿಕ ಶಿಕ್ಷಣ ಕ್ಷೇತ್ರದಲ್ಲಿ ಪೈಪೋಟಿ ಏರ್ಪಟ್ಟಿದೆ. ಖಾಸಗಿ ಸಂಸ್ಥೆಗಳು ಅಬ್ಬರದ ಪ್ರಚಾರ ನಡೆಸುತ್ತಿದ್ದರೆ, ಇತ್ತ ರಾಜ್ಯ ಸರ್ಕಾರವು ಕೂಡ ಸರ್ಕಾರಿ ಶಾಲಾ-ಕಾಲೇಜುಗಳತ್ತ ಪೋಷಕರನ್ನು ಮತ್ತು ವಿದ್ಯಾರ್ಥಿಗಳನ್ನು ಸೆಳೆಯಲು ಹೊಸ ಆಯಾಮದಲ್ಲಿ ಹೆಜ್ಜೆ ಇಟ್ಟು ಗಮನಸೆಳೆದಿದೆ. ಸರ್ಕಾರಿ ಶಾಲಾ-ಕಾಲೇಜುಗಳಲ್ಲೂ ‘ಶಿಕ್ಷಣ ಗ್ಯಾರಂಟಿ’ ನೀಡುವ ಭರವಸೆ ನೀಡಿದೆ. ಹಾಗಾದರೆ, ಸರ್ಕಾರಿ ಶಾಲಾ ಕಾಲೇಜುಗಳಿಗೆ ಕಾಂಗ್ರೆಸ್ ಸರ್ಕಾರದ ಗ್ಯಾರಂಟಿಗಳು ಏನು? ಸಂಪೂರ್ಣ ಮಾಹಿತಿ ಇಲ್ಲಿದೆ.

2025–26ನೇ ಶೈಕ್ಷಣಿಕ ಸಾಲಿನ ಎಸ್​​​ಎಸ್​​​ಎಲ್​​ಸಿ (SSLC) ಮತ್ತು ದ್ವಿತೀಯ ಪಿಯುಸಿ (2nd PUC) ಪರೀಕ್ಷೆ ಫಲಿತಾಂಶ ಇತ್ತೀಚೆಗೆ ಬಿಡುಗಡೆಗೊಂಡಿದೆ. ಈ ಬೆನ್ನಲ್ಲೇ ವಿದ್ಯಾರ್ಥಿಗಳನ್ನು ಸೆಳೆಯುವ ನಿಟ್ಟಿನಲ್ಲಿ ಖಾಸಗಿ ಶಾಲಾ-ಕಾಲೇಜುಗಳು ನಾನಾ ಕಸರತ್ತು ನಡೆಸುತ್ತಿವೆ. ವಿಶೇಷವೆಂದರೆ, ಕಾಂಗ್ರೆಸ್​ ಸರ್ಕಾರ ಸರ್ಕಾರಿ ಶಾಲಾ-ಕಾಲೇಜುಗಳಲ್ಲಿ ಮಕ್ಕಳ ಸಂಖ್ಯೆ ಹೆಚ್ಚಳಕ್ಕಾಗಿ ಜಾಹೀರಾತು ನೀಡುವ ಮೂಲಕ ಗಮನಸೆಳೆದಿದೆ. ಆ ಮೂಲಕ ರಾಜ್ಯದಲ್ಲಿ ಉತ್ತಮಗುಣಮಟ್ಟದ ಶಿಕ್ಷಣ ಒದಗಿಸುವ ‘ಗ್ಯಾರಂಟಿ’ ನೀಡಿದೆ.

ಎಸ್​​ಎಸ್​ಎಲ್​ಸಿ ಮತ್ತು ದ್ವಿತೀಯ ಪಿಯುಸಿ ಪರೀಕ್ಷೆ ವಿದ್ಯಾರ್ಥಿ ಜೀವನದ ಪ್ರಮುಖ ಘಟ್ಟ. ಇತ್ತೀಚೆಗಷ್ಟೆ ಎರಡು ಪರೀಕ್ಷೆಯ ಫಲಿತಾಂಶ ಬಿಡುಗಡೆಗೊಂಡಿದೆ. ಇತಿಹಾಸದಲ್ಲೇ ಮೊದಲ ಬಾರಿಗೆ ತೇರ್ಗಡೆಯಲ್ಲಿ ದಾಖಲೆಯ ರಿಸಲ್ಟ್​ ಬಂದಿದೆ. ಪ್ರಸಕ್ತ ವರ್ಷದಲ್ಲಿ ಸರ್ಕಾರಿ ಶಾಲಾ-ಕಾಲೇಜುಗಳಲ್ಲಿ ಕೂಡ ಉತ್ತಮ ರಿಸಲ್ಟ್​ ದಾಖಲಾಗಿದೆ. ಎಸ್​​ಎಸ್​​ಎಲ್​ಸಿಯಲ್ಲಿ ಶೇ 94. 10 ಮತ್ತು ದ್ವಿತೀಯ ಪಿಯುಸಿಯಲ್ಲಿ ಶೇ 86.48ರಷ್ಟು ಫಲಿತಾಂಶ ಬಂದಿದೆ. ಕಳೆದ ವರ್ಷದ ಫಲಿತಾಂಶಕ್ಕೆ ಹೋಲಿಸಿದರೆ ಕ್ರಮವಾಗಿ ಶೇ. 16.82 ರಷ್ಟು ಮತ್ತು ಶೇ. 16 ರಷ್ಟು ಪ್ರಗತಿ ದಾಖಲಾಗಿದೆ. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಕೂಡ ಸರ್ಕಾರಿ ಶಾಲೆಗಳತ್ತ ಆಸಕ್ತಿ ತೋರಿಸುತ್ತಿದ್ದಾರೆ. ಹೀಗಾಗಿ ಇದೀಗ ಜಾಹೀರಾತು ನೀಡುವ ಮೂಲಕ ಗಮನಸೆಳೆದಿದೆ.

ಸರ್ಕಾರಿ ಶಾಲಾ-ಕಾಲೇಜುಗಳಲ್ಲಿ ಎಸ್​​ಎಸ್​​ಎಲ್​ಸಿ ಮತ್ತು ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ದಾಖಲೆಯ ರಿಸಲ್ಟ್ ಬೆನ್ನಲ್ಲೇ ರಾಜ್ಯ ಸರ್ಕಾರ ಇದೀಗ ಮತ್ತಷ್ಟು ವಿದ್ಯಾರ್ಥಿಗಳನ್ನು ಸರ್ಕಾರಿ ಶಾಲಾ-ಕಾಲೇಜುಗಳತ್ತ ಸೆಳೆಯಲು ಜಾಹಿರಾತು ನೀಡುವ ಮೂಲಕ ಗಮನಸೆಳೆದಿದೆ. ಆ ಮೂಲಕ ರಾಜ್ಯದಲ್ಲಿ ಉತ್ತಮಗುಣಮಟ್ಟ ಶಿಕ್ಷಣ ಒದಗಿಸುವ ನಿಟ್ಟಿನಲ್ಲಿ ‘ಶಿಕ್ಷಣ ಗ್ಯಾರಂಟಿ’ ನೀಡುವ ಭರವಸೆ ನೀಡಿದೆ.

8 ಶಿಕ್ಷಣ ಗ್ಯಾರಂಟಿಗಳು

ಗ್ಯಾರಂಟಿ 1: 

ಶಿಕ್ಷಕರ ಕೊರತೆಗೆ ಮುಕ್ತಿ;  5ನೇ ತರಗತಿಯವರೆಗೆ ಪ್ರತಿ ತರಗತಿಗೆ ಒಬ್ಬರು ಶಿಕ್ಷಕರು ಹಾಗೂ 6ನೇ ತರಗತಿಯಿಂದ ಪ್ರತಿ ವಿಷಯಕ್ಕೂ ಪ್ರತ್ಯೇಕ ವಿಷಯವಾರು ಶಿಕ್ಷಕರ ನೇಮಕಾತಿ.

ಗ್ಯಾರಂಟಿ 2: 

ಪೋಷಕರ ಆಶಯದಂತೆ ಬೋಧನಾ ಮಾಧ್ಯಮ; ಕನ್ನಡದ ಜೊತೆಗೆ ಎಲ್ಲಾ ಶಾಲೆಗಳಲ್ಲೂ ಇಂಗ್ಲಿಷ್ ಮಾಧ್ಯಮ ಲಭ್ಯ. ಇಂಗ್ಲಿಷ್‌ನಲ್ಲಿ ಬೋಧಿಸಲು ಶಿಕ್ಷಕರಿಗೆ ವಿಶೇಷ ತರಬೇತಿ ನೀಡಲಾಗುವುದು.

ಗ್ಯಾರಂಟಿ 3: 

ಉಚಿತ ಸಾರಿಗೆ ಸೌಲಭ್ಯ; ಕರ್ನಾಟಕ ಪಬ್ಲಿಕ್ ಶಾಲೆ (KPS) ವಿದ್ಯಾರ್ಥಿಗಳಿಗೆ ಉಚಿತ ಸಾರಿಗೆ ವ್ಯವಸ್ಥೆ ಕಲ್ಪಿಸಲಾಗುವುದು.

ಗ್ಯಾರಂಟಿ 4: 

ಡಿಜಿಟಲ್ ಶಿಕ್ಷಣ; 1ನೇ ತರಗತಿಯಿಂದ ಕಂಪ್ಯೂಟರ್ ಶಿಕ್ಷಣ ಹಾಗೂ 3ನೇ ತರಗತಿಯಿಂದ ಕೃತಕ ಬುದ್ಧಿಮತ್ತೆ (AI) ಕಲಿಕೆ, ಮುಂದಿನ 3 ವರ್ಷಗಳಲ್ಲಿ ಎಲ್ಲಾ ಕೆ.ಪಿ.ಎಸ್ ಶಾಲೆಗಳಲ್ಲಿ ಕಂಪ್ಯೂಟರ್ ಶಿಕ್ಷಕರ ನೇಮಕ ಮಾಡಲಾಗುವುದು.

ಗ್ಯಾರಂಟಿ 5: 

ಕಲೆ ಮತ್ತು ದೈಹಿಕ ಶಿಕ್ಷಣ; ಸಂಗೀತ, ಕಲೆ ಮತ್ತು ದೈಹಿಕ ಶಿಕ್ಷಣಕ್ಕಾಗಿ ಶಿಕ್ಷಕರ ನೇಮಕ, ಈ ವರ್ಷದಿಂದಲೇ ದೈಹಿಕ ಶಿಕ್ಷಣ ಶಿಕ್ಷಕರ ನೇಮಕಾತಿ ಪ್ರಕ್ರಿಯೆ ಆರಂಭಿಸಲಾಗುವುದು.

ಗ್ಯಾರಂಟಿ 6: 

ಶೈಕ್ಷಣಿಕೇತರ ಕೆಲಸಗಳಿಂದ ಮುಕ್ತಿ; ಶೈಕ್ಷಣಿಕೇತರ ಕೆಲಸಗಳ ನಿರ್ವಹಣೆಗೆ ಪ್ರತ್ಯೇಕ ಸಿಬ್ಬಂದಿ ನೇಮಕ ಮಾಡಲಾಗುವುದು. ಇದರೊಂದಿಗೆ ಶಿಕ್ಷಕರು ಕೇವಲ ಬೋಧನೆಯ ಮೇಲೆ ಮಾತ್ರ ಗಮನಹರಿಸಲು ಅವಕಾಶ.

ಗ್ಯಾರಂಟಿ 7: 

ಕಲಿಕೆಯ ಗುಣಮಟ್ಟದ ಮೇಲ್ವಿಚಾರಣೆ; ಪ್ರತಿ ಮಗುವಿನ ಪ್ರಗತಿಗಾಗಿ ‘ಪಾಠ ಆಧಾರಿತ ಮೌಲ್ಯಮಾಪನ’ (Lesson Based Assessment) ವ್ಯವಸ್ಥೆ, ಪ್ರತಿ ಎರಡು ತಿಂಗಳಿಗೊಮ್ಮೆ ಪೋಷಕರು ಮತ್ತು ಶಿಕ್ಷಕರ ಕಡ್ಡಾಯ ಸಭೆ ಮಾಡುವುದು.

ಗ್ಯಾರಂಟಿ 8: 

ಕೌಶಲ ಶಿಕ್ಷಣ ಮತ್ತು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ; 6ನೇ ತರಗತಿಯಿಂದಲೇ ಕೌಶಲ ಶಿಕ್ಷಣ ಪ್ರಾರಂಭಿಸಲಾಗುವುದು ಹಾಗೂ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಲು ವಿಶೇಷ ತರಬೇತಿ ಸೌಲಭ್ಯ ಒದಗಿಸಲಾಗುವುದು. ಹೀಗೆ 8 ಶಿಕ್ಷಣ ಗ್ಯಾರಂಟಿಗಳನ್ನು ರಾಜ್ಯ ಸರ್ಕಾರ ನೀಡಿದೆ.


Previous Post Next Post