ಉದ್ಯೋಗಿಗಳ ಭವಿಷ್ಯ ನಿಧಿ ಟ್ರಸ್ಟ್ PF ನಿಯಮಗಳಲ್ಲಿ 4 ಪ್ರಮುಖ ಬದಲಾವಣೆ: ಬಡ್ಡಿ ದರಕ್ಕೆ ಹೊಸ ನಿಯಮ

ಇಪಿಎಫ್‌ಒ ವಿನಾಯಿತಿ ಪಡೆದ ಪಿಎಫ್ ಟ್ರಸ್ಟ್‌ಗಳ ನಿಯಮಗಳಲ್ಲಿ ಮಹತ್ವದ ಬದಲಾವಣೆ ತಂದಿದೆ. ಕಡ್ಡಾಯ ವಾರ್ಷಿಕ ಆಡಿಟ್ ಬದಲಿಗೆ 'ರಿಸ್ಕ್ ಆಧಾರಿತ' ಲೆಕ್ಕಪರಿಶೋಧನೆ ಜಾರಿಗೆ ತರಲಾಗಿದೆ. ಈ ಟ್ರಸ್ಟ್‌ಗಳು ನೀಡುವ ಬಡ್ಡಿ ದರವು ಇಪಿಎಫ್‌ಒ ದರಕ್ಕಿಂತ ಗರಿಷ್ಠ ಶೇ. 2ರಷ್ಟು ಮಾತ್ರ ಹೆಚ್ಚಿರುವಂತೆ ಮಿತಿ ಹೇರಲಾಗಿದೆ. ಕಂಪನಿಗಳ ವಿಲೀನದ ನಂತರವೂ ವಿನಾಯಿತಿ ಸ್ಥಾನಮಾನ ಮುಂದುವರಿಯಲಿದ್ದು, ಆರ್ಥಿಕ ಶಿಸ್ತು ಕಾಪಾಡುವುದು ಇದರ ಪ್ರಮುಖ ಉದ್ದೇಶವಾಗಿದೆ.

ಸ್ವಂತ ಟ್ರಸ್ಟ್‌ಗಳ ಮೂಲಕ ಉದ್ಯೋಗಿಗಳ ಭವಿಷ್ಯ ನಿಧಿ (ಪಿಎಫ್‌) ನಿರ್ವಹಿಸುವ ಕಂಪನಿಗಳ ನಿಯಮಗಳಲ್ಲಿ ಕೇಂದ್ರ ಸರ್ಕಾರ ಭಾರಿ ಬದಲಾವಣೆ.

ಉದ್ಯೋಗಿಗಳ ಜೀವನವನ್ನು ಸುಲಭಗೊಳಿಸುವ ನಿಟ್ಟಿನಲ್ಲಿ ಇಪಿಎಫ್‌ಒ ಕೇಂದ್ರೀಯ ಟ್ರಸ್ಟಿಗಳ ಮಂಡಳಿಯಿಂದ ಹೊಸ ಸರಳೀಕೃತ ಮಾರ್ಗಸೂಚಿ.

ಇಪಿಎಫ್‌ಒ ಘೋಷಿಸುವ ವಾರ್ಷಿಕ ಬಡ್ಡಿ ದರಕ್ಕಿಂತ ಗರಿಷ್ಠ ಶೇ. 2 ರಷ್ಟು ಮಾತ್ರ ಹೆಚ್ಚಿನ ಬಡ್ಡಿ ದರವನ್ನು ನೀಡಬಹುದು.

ಪಿಎಫ್‌ ನಿಯಮದಲ್ಲಿ ಬದಲಾವಣೆ.

ಹೊಸದಿಲ್ಲಿ: ತಮ್ಮದೇ ಆದ ಸ್ವಂತ ಟ್ರಸ್ಟ್‌ಗಳ ಮೂಲಕ ಉದ್ಯೋಗಿಗಳ ಭವಿಷ್ಯ ನಿಧಿ (ಪಿಎಫ್‌) ನಿರ್ವಹಿಸುವ ಕಂಪನಿಗಳ ನಿಯಮಗಳಲ್ಲಿ ಕೇಂದ್ರ ಸರ್ಕಾರ 4 ಪ್ರಮುಖ ಬದಲಾವಣೆ ತಂದಿದೆ. ಕಡ್ಡಾಯ ವಾರ್ಷಿಕ ಲೆಕ್ಕಪರಿಶೋಧನೆಯ ಬದಲಿಗೆ 'ರಿಸ್ಕ್ ಆಧಾರಿತ' ವ್ಯವಸ್ಥೆಯನ್ನು ಜಾರಿಗೆ ತಂದಿದ್ದು, ಈ ಟ್ರಸ್ಟ್‌ಗಳು ಉದ್ಯೋಗಿಗಳಿಗೆ ನೀಡುವ ಗರಿಷ್ಠ ಬಡ್ಡಿ ದರಕ್ಕೂ ಮಿತಿ ಹೇರಿದೆ.

ಉದ್ಯಮಗಳಲ್ಲಿ ಸುಗಮ ವ್ಯಾಪಾರ ಮತ್ತು ಉದ್ಯೋಗಿಗಳ ಜೀವನವನ್ನು ಸುಲಭಗೊಳಿಸುವ ನಿಟ್ಟಿನಲ್ಲಿ ಇಪಿಎಫ್‌ಒ ಕೇಂದ್ರೀಯ ಟ್ರಸ್ಟಿಗಳ ಮಂಡಳಿಯು ಹೊಸ ಸರಳೀಕೃತ ಮಾರ್ಗಸೂಚಿಗಳಿಗೆ ಅನುಮೋದನೆ ನೀಡಿದ್ದು, ಶೀಘ್ರದಲ್ಲೇ ಅಧಿಕೃತ ಅಧಿಸೂಚನೆ ಹೊರಬೀಳಲಿದೆ.

ಭಾರತದಲ್ಲಿ ಸುಮಾರು 1,000 ದಿಂದ 1,200 ದೊಡ್ಡ ಕಂಪನಿಗಳು, ಸಾರ್ವಜನಿಕ ವಲಯದ ಉದ್ದಿಮೆಗಳು ಮತ್ತು ಖಾಸಗಿ ಸಂಸ್ಥೆಗಳು ಇಪಿಎಫ್‌ಒ ಅಡಿಯಲ್ಲಿ ವಿನಾಯಿತಿ ಪಡೆದಿವೆ. 1952 ರ ಇಪಿಎಫ್ ಕಾಯ್ದೆಯ ಸೆಕ್ಷನ್ 17 ರ ಅಡಿಯಲ್ಲಿ ತಮ್ಮದೇ ಆದ ಪಿಎಫ್ ಟ್ರಸ್ಟ್‌ಗಳನ್ನು ನಿರ್ವಹಿಸಲು ಇವುಗಳಿಗೆ ಅನುಮತಿ ಇದೆ. ಆದರೆ, ಈ ಸಂಸ್ಥೆಗಳು ಇಪಿಎಫ್‌ಒ ನೀಡುವಷ್ಟೇ ಅಥವಾ ಅದಕ್ಕಿಂತ ಉತ್ತಮ ಸೌಲಭ್ಯಗಳನ್ನು ತಮ್ಮ ಉದ್ಯೋಗಿಗಳಿಗೆ ಒದಗಿಸುವುದು ಕಡ್ಡಾಯವಾಗಿದೆ.

1. ಬಡ್ಡಿ ದರದ ಮೇಲೆ ಮಿತಿ

ಹೊಸ ನಿಯಮದ ಪ್ರಕಾರ, ವಿನಾಯಿತಿ ಪಡೆದ ಸಂಸ್ಥೆಗಳು ಇಪಿಎಫ್‌ಒ ಘೋಷಿಸುವ ವಾರ್ಷಿಕ ಬಡ್ಡಿ ದರಕ್ಕಿಂತ ಗರಿಷ್ಠ ಶೇ. 2 ರಷ್ಟು ಮಾತ್ರ ಹೆಚ್ಚಿನ ಬಡ್ಡಿ ದರವನ್ನು ನೀಡಬಹುದು. ಇದಕ್ಕಿಂತ ಹೆಚ್ಚಿನ ಬಡ್ಡಿಯನ್ನು ಘೋಷಿಸುವಂತಿಲ್ಲ. ಅಂದರೆ, ಇಪಿಎಫ್‌ಒ ಬಡ್ಡಿದರ ಶೇ 8.25 ಇದ್ದರೆ, ಶೇ 10.25 ರಷ್ಟು ನೀಡಬಹುದು. ಕೆಲವು ಟ್ರಸ್ಟ್‌ಗಳು ಸದಸ್ಯರ ಸಂಖ್ಯೆ ತೀರಾ ಕಡಿಮೆಯಾದಾಗ ಶೇ 34 ರಷ್ಟು ಭಾರೀ ಬಡ್ಡಿ ದರವನ್ನು ಅಸಹಜವಾಗಿ ಘೋಷಿಸುತ್ತಿದ್ದವು. ಆರ್ಥಿಕ ಶಿಸ್ತು ಕಾಪಾಡಲು ಮತ್ತು ಈ ಅಸಮಾನತೆಯನ್ನು ತಡೆಯಲು ಈ ಕ್ರಮ ಕೈಗೊಳ್ಳಲಾಗಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

2. ರಿಸ್ಕ್ ಆಧಾರಿತ ಆಡಿಟ್ ವ್ಯವಸ್ಥೆ

ಇನ್ನು ಮುಂದೆ ಇಪಿಎಫ್‌ಒ, ಕೇವಲ ನಿಯಮಗಳನ್ನು ಉಲ್ಲಂಘಿಸುವ ಮತ್ತು ಹೆಚ್ಚು ಅಪಾಯದಲ್ಲಿರುವ ಸಂಸ್ಥೆಗಳನ್ನು ಮಾತ್ರ ಲೆಕ್ಕಪರಿಶೋಧನೆಗೆ ಒಳಪಡಿಸಲಿದೆ. ನಿಯಮಗಳನ್ನು ಸರಿಯಾಗಿ ಪಾಲಿಸುವ ಸಂಸ್ಥೆಗಳು ಪ್ರತಿ ವರ್ಷ ಕಡ್ಡಾಯವಾಗಿ ಆಡಿಟ್ ಮಾಡಿಸಿಕೊಳ್ಳುವ ಅಗತ್ಯವಿರುವುದಿಲ್ಲ.

3. ವಿಲೀನದ ನಂತರವೂ ಸ್ಥಾನಮಾನ ಮುಂದುವರಿಕೆ

ಕಂಪನಿಗಳ ವಿಲೀನ ಮತ್ತು ಸ್ವಾಧೀನದ ಪ್ರಕ್ರಿಯೆಗಳ ನಂತರವೂ, ವಿನಾಯಿತಿ ಪಡೆದ ಸಂಸ್ಥೆಗಳು ಇಪಿಎಫ್‌ಒ ಅಡಿಯಲ್ಲಿ ತಮ್ಮ ಸ್ಥಾನಮಾನವನ್ನು ಉಳಿಸಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ.

4. ವಿನಾಯಿತಿ ರದ್ದು ಮತ್ತು ಸಾರ್ವಜನಿಕ ಪ್ರಕಟಣೆ

ಯಾವುದೇ ಸಂಸ್ಥೆಯು ಸ್ವಯಂಪ್ರೇರಿತವಾಗಿ ಅಥವಾ ನ್ಯಾಯಾಲಯದ ನಿರ್ದೇಶನದ ಮೇರೆಗೆ ಮಾತ್ರ ತನ್ನ ವಿನಾಯಿತಿ ಸ್ಥಾನಮಾನವನ್ನು ರದ್ದುಗೊಳಿಸಬಹುದು. ವಿನಾಯಿತಿಯನ್ನು ರದ್ದುಪಡಿಸುವಾಗ ಉದ್ಯೋಗಿಗಳ ಹಿತರಕ್ಷಣೆಗಾಗಿ ವೃತ್ತಪತ್ರಿಕೆಗಳಲ್ಲಿ 'ಸಾರ್ವಜನಿಕ ಪ್ರಕಟಣೆ' ಹೊರಡಿಸುವುದು ಕಡ್ಡಾಯ. ಅಲ್ಲದೆ, ಯಾವುದೇ ದುರ್ಬಳಕೆಯಾಗದಂತೆ ತಡೆಯಲು ಎಲ್ಲಾ ಸದಸ್ಯರ ಖಾತೆಗಳಿಗೆ ಹಣ ಜಮಾ ಆಗಿರುವುದನ್ನು ಖಚಿತಪಡಿಸಿಕೊಳ್ಳಬೇಕು ಮತ್ತು ಕೆವೈಸಿ ಇಲ್ಲದ ಹಾಗೂ ನಿಷ್ಕ್ರಿಯ ಖಾತೆಗಳನ್ನು ಸುರಕ್ಷಿತವಾಗಿ ಇಪಿಎಫ್‌ಒಗೆ ವರ್ಗಾಯಿಸಬೇಕು ಎಂದು ಸ್ಪಷ್ಟಪಡಿಸಲಾಗಿದೆ.

 

Previous Post Next Post