ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ 3.0 ಹೊಸ ಸೌಲಭ್ಯಕ್ಕೆ ಮುಂದಾಗಿದೆ. ಉದ್ಯೋಗಿಗಳು ಪಿಎಫ್ ಹಣವನ್ನು ತ್ವರಿತವಾಗಿ ಪಡೆಯುವ ನಿಟ್ಟಿನಲ್ಲಿ ಕ್ರಮವಹಿಸಲಾಗಿದೆ. ATM ಮತ್ತು UPI ಮೂಲಕ ನೇರವಾಗಿ ಪಿಎಫ್ ಹಣವನ್ನು ಡ್ರಾ ಮಾಡಬಹುದು. ಮೇ ಅಂತ್ಯದ ವೇಳೆಗೆ ಈ ವ್ಯವಸ್ಥೆ ಜಾರಿಗೆ ಬರುವ ಸಾಧ್ಯತೆ ಇದೆ. ಏನೆಲ್ಲಾ ನಿಯಮ? ಜಾರಿ ಹೇಗೆ?
ತುರ್ತು ಸಂದರ್ಭಗಳಲ್ಲಿ ಪಿಎಫ್ ಹಣವನ್ನು ಹಿಂಪಡೆಯಲು ಕಚೇರಿಗಳಿಗೆ ಅಲೆಯುವ ಅಥವಾ ದೀರ್ಘಕಾಲ ಕಾಯುವ ಅಗತ್ಯವಿಲ್ಲ.ಮೇ ತಿಂಗಳ ಅಂತ್ಯದ ವೇಳೆಗೆ ಎಟಿಎಂ ಮತ್ತು ಯುಪಿಐ ಮೂಲಕ ನೇರವಾಗಿ ಪಿಎಫ್ ಹಣವನ್ನು ಡ್ರಾ ಮಾಡುವ ಸೌಲಭ್ಯ ಜಾರಿ.ಕಾಗದಪತ್ರಗಳ ಜಂಜಾಟವಿಲ್ಲದೆ, ಕಚೇರಿಗಳಿಗೆ ಭೇಟಿ ನೀಡದೆ ಕೇವಲ ಒಂದೇ ನಿಮಿಷದಲ್ಲಿ ಪಿಎಫ್ ಖಾತೆಯಿಂದ ಹಣ ಕೈಗೆ.ಪಿಎಫ್ ಹಣ ಎಟಿಎಂಯಿಂದ ಡ್ರಾ ಮಾಡಿಕೊಳ್ಳುವ ವ್ಯವಸ್ಥೆ ಶೀಘ್ರ
ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ (ಇಪಿಎಫ್‌ಒ) ಚಂದಾದಾರರಿಗೆ ಸಂತಸದ ಸುದ್ದಿ. ಇನ್ನು ಮುಂದೆ ತುರ್ತು ಸಂದರ್ಭಗಳಲ್ಲಿ ಪಿಎಫ್ ಹಣವನ್ನು ಹಿಂಪಡೆಯಲು ಕಚೇರಿಗಳಿಗೆ ಅಲೆಯುವ ಅಥವಾ ತಿಂಗಳುಗಟ್ಟಲೆ ಕಾಯುವ ಅಗತ್ಯವಿಲ್ಲ. ಎಟಿಎಂ ಮತ್ತು ಯುಪಿಐ ಮೂಲಕ ನೇರವಾಗಿ ಪಿಎಫ್ ಹಣವನ್ನು ಡ್ರಾ ಮಾಡುವ ಇಪಿಎಫ್‌ಒ 3.0 ಹೊಸ ಸೌಲಭ್ಯವು ಮೇ ತಿಂಗಳ ಅಂತ್ಯದ ವೇಳೆಗೆ ಜಾರಿಗೆ ಬರುವ ಸಾಧ್ಯತೆ ಇದೆ.
ಪಿಎಫ್ ಹಣವನ್ನು ಹೆಚ್ಚು ಸುಲಭವಾಗಿ ಮತ್ತು ವೇಗವಾಗಿ ಚಂದಾದಾರರಿಗೆ ತಲುಪಿಸುವ ನಿಟ್ಟಿನಲ್ಲಿ ಇಪಿಎಫ್‌ಒ ಈ ಕ್ರಾಂತಿಕಾರಿ ಹೆಜ್ಜೆಯನ್ನು ಇಟ್ಟಿದೆ ಎಂದು ಇಟಿ ನೌ ವರದಿ ಮಾಡಿದೆ. ಈ ಹೊಸ ವ್ಯವಸ್ಥೆಯು ಜಾರಿಗೆ ಬಂದರೆ, ಕಾಗದಪತ್ರಗಳ ಜಂಜಾಟವಿಲ್ಲದೆ, ಕಚೇರಿಗಳಿಗೆ ಭೇಟಿ ನೀಡದೆ ಕೇವಲ ಒಂದೇ ನಿಮಿಷದಲ್ಲಿ ಪಿಎಫ್ ಖಾತೆಯಿಂದ ಹಣವನ್ನು ಕೈಗೆ ಪಡೆಯಬಹುದು. ಇದು ದೇಶದ ಕೋಟ್ಯಂತರ ಖಾಸಗಿ ವಲಯದ ನೌಕರರಿಗೆ ವರದಾನವಾಗಲಿದೆ. (ಇಪಿಎಫ್‌ಒ ಹೊಸ 4 ನಿಯಮ)
ಏನಿದು ಇಪಿಎಫ್‌ಒ 3.0?
ಕಳೆದ ವರ್ಷ ಇಪಿಎಫ್‌ಒ ತನ್ನ ಕಾರ್ಯಾಚರಣಾ ವಿಧಾನಗಳನ್ನು ಆಧುನೀಕರಿಸಲು ಇಪಿಎಫ್‌ಒ 3.0 ಯೋಜನೆಯನ್ನು ಪ್ರಾರಂಭಿಸಿತ್ತು. 2026ರ ಮಧ್ಯಭಾಗದ ವೇಳೆಗೆ ಇದು ಸಂಪೂರ್ಣವಾಗಿ ದೇಶಾದ್ಯಂತ ಜಾರಿಗೆ ಬರಲಿದೆ. ಈ ನೂತನ ವ್ಯವಸ್ಥೆಯಡಿ ಪಿಎಫ್ ಪ್ರಕ್ರಿಯೆಗಳು ಹೆಚ್ಚು ಸರಳವಾಗಲಿವೆ. ಇದರಲ್ಲಿ ಮುಖ್ಯವಾಗಿ ಸ್ವಯಂಚಾಲಿತ ಕ್ಲೈಮ್ ಸೆಟಲ್‌ಮೆಂಟ್ ಮತ್ತು ಉದ್ಯೋಗಿ ಬಯಸುವ ಬ್ಯಾಂಕ್ ಖಾತೆಗೆ ಸುಲಭವಾಗಿ ಹಣ ವರ್ಗಾವಣೆ ಮಾಡುವ ಸೌಲಭ್ಯಗಳು ಸೇರಿವೆ. ಅತ್ಯಂತ ಪ್ರಮುಖ ಮತ್ತು ಆಕರ್ಷಕ ಅಪ್‌ಗ್ರೇಡ್ ಎಂದರೆ ಎಟಿಎಂ ಮತ್ತು ಯುಪಿಐ ಮೂಲಕ ಹಣ ಹಿಂಪಡೆಯುವ ಆಯ್ಕೆಯಾಗಿದೆ.
ATM ಮೂಲಕ ಪಿಎಫ್ ಹಣ ವಿತ್‌ಡ್ರಾ ಮಾಡುವುದು ಹೇಗೆ ?
ವರದಿಗಳ ಪ್ರಕಾರ, ಇಪಿಎಫ್‌ಒ ತನ್ನ ಚಂದಾದಾರರಿಗೆ ವಿಶೇಷ ಎಟಿಎಂ ಕಾರ್ಡ್‌ಗಳನ್ನು ನೀಡಲು ಯೋಜಿಸುತ್ತಿದೆ. ಈ ಕಾರ್ಡ್‌ಗಳನ್ನು ಸದಸ್ಯರ ಪಿಎಫ್ ಖಾತೆಗೆ ನೇರವಾಗಿ ಲಿಂಕ್ ಮಾಡಲಾಗುತ್ತದೆ. ಇದರಿಂದಾಗಿ ಚಂದಾದಾರರು ಸಾಮಾನ್ಯ ಬ್ಯಾಂಕ್ ಕಾರ್ಡ್‌ಗಳಂತೆಯೇ ಎಟಿಎಂ ಯಂತ್ರಗಳಿಗೆ ಹೋಗಿ ಪಿಎಫ್ ಖಾತೆಯಿಂದ ನೇರವಾಗಿ ಹಣವನ್ನು ಡ್ರಾ ಮಾಡಬಹುದು. ಯುಪಿಐ ಮೂಲಕವೂ ಡಿಜಿಟಲ್ ರೂಪದಲ್ಲಿ ಹಣವನ್ನು ವರ್ಗಾಯಿಸಿಕೊಳ್ಳಬಹುದು ಅಥವಾ ಪಾವತಿಸಬಹುದು.
ಎಷ್ಟು ಹಣ ಡ್ರಾ ಮಾಡಲು ಅವಕಾಶವಿದೆ?
ಸುರಕ್ಷತೆಯ ದೃಷ್ಟಿಯಿಂದ ಇಪಿಎಫ್‌ಒ ಇದಕ್ಕೆ ಮಿತಿ ವಿಧಿಸಿದೆ. ಚಂದಾದಾರರು ತಮ್ಮ ಒಟ್ಟು ಪಿಎಫ್ ಬ್ಯಾಲೆನ್ಸ್‌ನಲ್ಲಿ ಗರಿಷ್ಠ ಶೇಕಡಾ 50 ರಷ್ಟು ಹಣವನ್ನು ಮಾತ್ರ ಎಟಿಎಂ ಅಥವಾ ಯುಪಿಐ ಮೂಲಕ ಹಿಂಪಡೆಯಲು ಅವಕಾಶ ನೀಡುವ ಸಾಧ್ಯತೆಯಿದೆ.
ಯಾರಿಗೆಲ್ಲಾ ಈ ಸೌಲಭ್ಯ ಸಿಗಲಿದೆ?
ಈ ಅತ್ಯಾಧುನಿಕ ಸೌಲಭ್ಯವನ್ನು ಪಡೆಯಲು ಇಪಿಎಫ್‌ಒ ಸದಸ್ಯರು ಕೆಲವು ಪ್ರಮುಖ ಅರ್ಹತೆಗಳನ್ನು ಹೊಂದಿರಬೇಕಾಗುತ್ತದೆ:
ಚಂದಾದಾರರು ಸಕ್ರಿಯ ಯುಎಎನ್ (ಯೂನಿವರ್ಸಲ್ ಅಕೌಂಟ್ ನಂಬರ್) ಹೊಂದಿರಬೇಕು. ಯುಎಎನ್ ಸಂಖ್ಯೆಗೆ ಕೆವೈಸಿ ಪ್ರಕ್ರಿಯೆ ಪೂರ್ಣಗೊಂಡಿರಬೇಕು. ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್, ಬ್ಯಾಂಕ್ ಖಾತೆ ಸಂಖ್ಯೆ ಮತ್ತು ಐಎಫ್‌ಎಸ್‌ಸಿ ಕೋಡ್ ಅನ್ನು ಯುಎಎನ್‌ಗೆ ಕಡ್ಡಾಯವಾಗಿ ಲಿಂಕ್ ಮಾಡಿರಬೇಕು.
0 Comments