ವಾಟ್ಸಾಪ್ನಲ್ಲಿ ಪ್ರೀಪೇಡ್ ಮೊಬೈಲ್ ರೀಚಾರ್ಜ್; ಬಂದಿದೆ ಹೊಸ ಫೀಚರ್

WhatsApp introduces prepaid mobile recharge service in its platform: ಮೆಟಾ ಸಂಸ್ಥೆಯು ವಾಟ್ಸಾಪ್ನಲ್ಲಿ ಪ್ರೀಪೇಡ್ ಮೊಬೈಲ್ ರೀಚಾರ್ಜ್ ಸೇವೆಯನ್ನು ಪರಿಚಯಿಸಿದೆ. ಆಂಡ್ರಾಯ್ಡ್ ಮತ್ತು ಆ್ಯಪಲ್ ಫೋನ್ ಎರಡರಲ್ಲೂ ಈ ಸೇವೆ ಸಿಗುತ್ತದೆ. ಯಾವುದೇ ಮೊಬೈಲ್ ನಂಬರ್ ಅನ್ನು ರೀಚಾರ್ಜ್ ಮಾಡಲು ಅವಕಾಶ ಇದೆ. ವಾಟ್ಸಾಪ್ನಲ್ಲಿ ಈಗಾಗಲೇ ಯುಪಿಐ ಪೇಮೆಂಟ್, ಬಿಲ್ ಪೇಮೆಂಟ್, ಮೆಟ್ರೋ ರೀಚಾರ್ಜ್ ಇತ್ಯಾದಿ ಸೇವೆಗಳು ಲಭ್ಯ ಇವೆ.

ನಂಬರ್ ಒನ್ ಮೆಸೇಜಿಂಗ್ ಆ್ಯಪ್ ಆದ ವಾಟ್ಸಾಪ್ನಲ್ಲಿ ರೀಚಾರ್ಜ್ ಸರ್ವಿಸ್ ಅನ್ನು ಪರಿಚಯಿಸಲಾಗುತ್ತಿದೆ. ಭಾರತದಲ್ಲಿ ವಾಟ್ಸಾಪ್ ಬಳಕೆದಾರರಿಗೆ ಪ್ರೀಪೇಡ್ ಮೊಬೈಲ್ ರೀಚಾರ್ಜ್ ಸೇವೆ ಲಭ್ಯ ಇರಲಿದೆ. ಆಂಡ್ರಾಯ್ಡ್ ಮತ್ತು ಆ್ಯಪಲ್ ಮೊಬೈಲ್ಗಳಲ್ಲಿ ಎರಡರಲ್ಲೂ ಇದು ಸಿಗಲಿದೆ. ಆದರೆ, ಹಂತ ಹಂತವಾಗಿ ಇದು ಜಾರಿಯಾಗುತ್ತದೆ. ಮುಂಬರುವ ಕೆಲ ವಾರಗಳಲ್ಲಿ ಎಲ್ಲಾ ವಾಟ್ಸಾಪ್ ಬಳಕೆದಾರರಿಗೂ ಈ ಸೇವೆ ಸಿಗುತ್ತದೆ. ಮೊಬೈಲ್ ರೀಚಾರ್ಜ್ ಸೇವೆ ನೀಡಲು ವಾಟ್ಸಾಪ್ಗೆ ಪೇಯು (PayU) ನೆರವು ನೀಡುತ್ತಿದೆ

ವಾಟ್ಸಾಪ್ ಬಳಕೆದಾರರು ತಮ್ಮದೇ ಮೊಬೈಲ್ ನಂಬರ್ ಅನ್ನು ರೀಚಾರ್ಜ್ ಮಾಡಬಹುದು. ತಮ್ಮ ಸ್ನೇಹಿತರು, ಕುಟುಂಬ ಸದಸ್ಯರು ಅಥವಾ ಯಾರದೇ ಮೊಬೈಲ್ ನಂಬರ್ ಆದರೂ ಕೆಲ ಸರಳ ಕ್ರಮಗಳಲ್ಲಿ ರೀಚಾರ್ಜ್ ಮಾಡಬಹುದು. ಜಿಯೋ, ಏರ್ಟೆಲ್, ವೊಡಾಫೋನ್ ಐಡಿಯಾದ ಪ್ರೀಪೇಡ್ ನಂಬರ್ಗಳನ್ನು ರೀಚಾರ್ಜ್ ಮಾಡಬಹುದು. ಇದಕ್ಕೆ ಪೇಮೆಂಟ್ ಕೂಡ ವಾಟ್ಸಾಪ್ ಪ್ಲಾಟ್ಫಾರ್ಮ್ನಲ್ಲೇ ಮಾಡಬಹುದು. ಬೇರೆ ಯುಪಿಐ ಆ್ಯಪ್ಗೆ ಹೋಗುವ ಅವಶ್ಯಕತೆ ಇರುವುದಿಲ್ಲ. ಮೆಟಾ ಮತ್ತು ಪೇಯು ಸಂಸ್ಥೆಗಳು ಈ ಮಾಹಿತಿ ಪ್ರಕಟಿಸಿವೆ.

ವಾಟ್ಸಾಪ್ನಲ್ಲಿ ₹ ಐಕಾನ್ ಗಮನಿಸಿ

ವಾಟ್ಸಾಪ್ನ ಹೋಮ್ ಸ್ಕ್ರೀನ್ನ ಮೇಲ್ಭಾಗದಲ್ಲಿ ₹ ಚಿಹ್ನೆ ಇರುತ್ತದೆ. ಅದನ್ನು ಒತ್ತಿದರೆ ಪೇಮೆಂಟ್ ಸೇವೆಗಳು ಲಿಸ್ಟ್ ಆಗಿರುವುದನ್ನು ಕಾಣಬಹುದು. ಫೋನ್ ಪೇ, ಗೂಗಲ್ ಪೇ ಇತ್ಯಾದಿ ಯುಪಿಐ ಆ್ಯಪ್ಗಳಂತೆ ವಾಟ್ಸಾಪ್ನಲ್ಲೂ ಯುಪಿಐ ಪೇಮೆಂಟ್ ಸರ್ವಿಸ್ ಲಭ್ಯ ಇದ್ದು, ಬ್ಯಾಂಕ್ ಅಕೌಂಟ್ಗಳನ್ನು ಸೇರಿಸಬಹುದು.

ಯುಪಿಐ ಆ್ಯಪ್ಗಳಂತೆ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿ ಹಣ ಕಳುಹಿಸಬಹುದು. ಯಾವುದೇ ಮೊಬೈಲ್ ನಂಬರ್ಗೆ ಹಣ ಕಳುಹಿಸಬಹುದು.

ಇದರ ಜೊತೆಗೆ ಈಗ ಮೊಬೈಲ್ ರೀಚಾರ್ಜ್ ಸೇವೆ ಪರಿಚಯಿಸಲಾಗಿದೆ. ಪೇಯು ಸಂಸ್ಥೆಯು ವಾಟ್ಸಾಪ್ಗೆ ಸಪೋರ್ಟ್ ನೀಡುತ್ತಿದೆ.

ವಾಟ್ಸಾಪ್ನಲ್ಲಿ ಸದ್ಯ ಹಣದ ಟ್ರಾನ್ಸಾಕ್ಷನ್ ಜೊತೆಗೆ ಬಿಲ್ ಪೇಮೆಂಟ್, ಮೆಟ್ರೋ ಟಿಕೆಟ್ ಬುಕಿಂಗ್ ಇತ್ಯಾದಿಯನ್ನು ಮಾಡಬಹುದು. ಅದಕ್ಕೆ ಈಗ ಪ್ರೀಪೇಡ್ ಮೊಬೈಲ್ ರೀಚಾರ್ಜ್ ಸೇವೆಯೂ ಸೇರ್ಪಡೆಯಾಗಿದೆ. ಸದ್ಯ ಕೆಲ ಬಳಕೆದಾರರಿಗೆ ಅಲಭ್ಯ ಇರಬಹುದು. ಮುಂದಿನ ದಿನಗಳಲ್ಲಿ ಎಲ್ಲರಿಗೂ ಅದು ಸಿಗಲಿದೆ.


Previous Post Next Post