Course: ಪಿಯುಸಿ ಮುಗೀತಾ? ನೀವು ಕಲಾಸಕ್ತರೇ? ಹಾಗಿದ್ರೆ ಕೂಡಲೇ ಈ ಕೋರ್ಸ್‌ಗೆ ನೋಂದಾಯಿಸಿ, 15 ಲಕ್ಷವರೆಗೂ ಗಳಿಸಿರಿ

ಮೈಸೂರು ಚಾಮರಾಜೇಂದ್ರ ಸರ್ಕಾರಿ ದೃಶ್ಯಕಲಾ ಕಾಲೇಜು ಬಿ.ವಿ.ಎ. 2026-27 ಪ್ರವೇಶಕ್ಕೆ ಮೇ 30ರವರೆಗೆ UUCMS ಮೂಲಕ ಅರ್ಜಿ ಆಹ್ವಾನ, ದ್ವಿತೀಯ ಪಿಯುಸಿ ಉತ್ತೀರ್ಣ ವಿದ್ಯಾರ್ಥಿಗಳು ಇದಕ್ಕೆ ಅರ್ಜಿ ಸಲ್ಲಿಸಬಹುದು

ದೃಶ್ಯಕಲೆಯಲ್ಲಿ ಆಸಕ್ತಿ ಇರುವ ವಿದ್ಯಾರ್ಥಿಗಳಿಗೆ (Students) ಸುವರ್ಣಾವಕಾಶ ಬಂದಿದೆ. ಮೈಸೂರಿನ ಸಿದ್ದಾರ್ಥನಗರದಲ್ಲಿರುವ ಚಾಮರಾಜೇಂದ್ರ ಸರ್ಕಾರಿ ದೃಶ್ಯಕಲಾ ಕಾಲೇಜು (ಕಾವಾ) 2026-27ನೇ ಶೈಕ್ಷಣಿಕ ಸಾಲಿಗೆ ಬ್ಯಾಚುಲರ್ ಆಫ್ ವಿಷುಯಲ್ ಆರ್ಟ್ಸ್ (ಬಿ.ವಿ.ಎ.) ಪ್ರಥಮ ವರ್ಷದ ಪ್ರವೇಶಾತಿಗೆ (Entrance) ಅರ್ಜಿ ಆಹ್ವಾನಿಸಿದೆ. ಮೈಸೂರು ವಿಶ್ವವಿದ್ಯಾನಿಲಯಕ್ಕೆ ಶಾಶ್ವತವಾಗಿ ಸಂಯೋಜನೆಗೊಂಡಿರುವ ಈ ಸರ್ಕಾರಿ ಕಾಲೇಜಿನಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ ಅನ್ವಯ 4 ವರ್ಷ 8 ಸೆಮಿಸ್ಟರ್ ಪದವಿ ಶಿಕ್ಷಣ ನೀಡಲಾಗುತ್ತದೆ.

ಯಾರು ಅರ್ಜಿ ಸಲ್ಲಿಸಬಹುದು?

ದ್ವಿತೀಯ ಪಿ.ಯು.ಸಿ. ಉತ್ತೀರ್ಣರಾದ ವಿದ್ಯಾರ್ಥಿಗಳು ಹಾಗೂ ಪಿ.ಯು.ಸಿ.ಗೆ ಸಮಾನಾಂತರ ಕೋರ್ಸ್ ಮಾಡಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಮೈಸೂರು ವಿಶ್ವವಿದ್ಯಾನಿಲಯದ ಪ್ರವೇಶಾತಿ ಅಧಿಸೂಚನೆ ಸಂಖ್ಯೆ ಎಸಿ-4/01/2026-27 ದಿನಾಂಕ 09-04-2026ರ ಅನ್ವಯ Online (UUCMS) ಮೂಲಕ ಮೇ 30ರವರೆಗೆ ಅರ್ಜಿ ಸ್ವೀಕರಿಸಲಾಗುತ್ತದೆ.

ಯಾವ ಯಾವ ವಿಭಾಗಗಳಿವೆ?

3ನೇ ಸೆಮಿಸ್ಟರ್‌ನಿಂದ ಚಿತ್ರಕಲೆ, ಶಿಲ್ಪಕಲೆ, ಗ್ರಾಫಿಕ್ಸ್ ಕಲೆ (ಅಚ್ಚಕಲೆ), ಅನ್ವಯಕಲೆ, ಕಲಾ ಇತಿಹಾಸ ಹಾಗೂ ಛಾಯಾಚಿತ್ರ ಮತ್ತು ಛಾಯಾಚಿತ್ರ ಪತ್ರಿಕೋದ್ಯಮ ವಿಭಾಗಗಳಲ್ಲಿ ವಿಶೇಷ ಅಧ್ಯಯನ ಮಾಡಬಹುದು. ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ ಅರ್ಹತಾ ಪರೀಕ್ಷೆ ಮತ್ತು ಸಂದರ್ಶನದ ದಿನಾಂಕವನ್ನು ಪ್ರತ್ಯೇಕವಾಗಿ ತಿಳಿಸಲಾಗುತ್ತದೆ.

ಅರ್ಜಿ ಸಲ್ಲಿಸುವ ರೀತಿ ಹಾಗೂ ವಿಧಾನ

ಆಸಕ್ತ ವಿದ್ಯಾರ್ಥಿಗಳು UUCMS ಪೋರ್ಟಲ್ https://uucms.karnataka.gov.in ಅಥವಾ https://www.cavamysore.karnataka.gov.in ಮೂಲಕ ಮೇ 30ರ ಒಳಗಾಗಿ ಅರ್ಜಿ ಸಲ್ಲಿಸಬೇಕು. UUCMS ಪೋರ್ಟಲ್‌ನಲ್ಲಿ ಹೊಸ ನೋಂದಣಿ ಮಾಡಿಕೊಳ್ಳಲು ವೆಬ್‌ಸೈಟ್‌ಗೆ ಭೇಟಿ ನೀಡಿ NEW REGISTRATION ಕ್ಲಿಕ್ ಮಾಡಿ, ಕೋರ್ಸ್ ಮಟ್ಟ ಆಯ್ಕೆ ಮಾಡಿ, ಆಧಾರ್ ಸಂಖ್ಯೆ, ಮೊಬೈಲ್ ನಂಬರ್, ಕರ್ನಾಟಕ ಪಿ.ಯು. ಮಾಹಿತಿ, ವೈಯಕ್ತಿಕ ವಿವರ ಮತ್ತು ವಿಳಾಸ ನಮೂದಿಸಬೇಕು. ಅರ್ಜಿ ಸಲ್ಲಿಸಿದ ನಂತರ ಪ್ರವೇಶಾತಿ ಪ್ರಕ್ರಿಯೆ ಅರ್ಹತಾ ಪರೀಕ್ಷೆ ಮತ್ತು ಸಂದರ್ಶನ ಆಧಾರದಲ್ಲಿ ನಡೆಯಲಿದ್ದು, ಆ ದಿನಾಂಕಗಳನ್ನು ಪ್ರತ್ಯೇಕವಾಗಿ ತಿಳಿಸಲಾಗುತ್ತದೆ. ಹೆಚ್ಚಿನ ಮಾಹಿತಿಗೆ 0821-2438931 ಸಂಖ್ಯೆಗೆ ಕಚೇರಿ ಸಮಯದಲ್ಲಿ ಸಂಪರ್ಕಿಸಬಹುದು.

ಬಿ.ವಿ.ಎ. ಮಾಡಿದರೆ ಯಾವ ಉದ್ಯೋಗ ಸಿಗುತ್ತದೆ?

ಬಿ.ವಿ.ಎ. ಪದವಿ ಮುಗಿಸಿದ ವಿದ್ಯಾರ್ಥಿಗಳಿಗೆ ಆರ್ಟ್ ಸ್ಟುಡಿಯೋ, ಮ್ಯೂಸಿಯಂ ಮತ್ತು ಗ್ಯಾಲರಿ, ಚಲನಚಿತ್ರ ಉದ್ಯಮ, ದೂರದರ್ಶನ ಉದ್ಯಮ, ಫೋಟೋ ಸ್ಟುಡಿಯೋ ಮತ್ತು ಉಡುಪು ಉದ್ಯಮ ಕ್ಷೇತ್ರಗಳಲ್ಲಿ ಉದ್ಯೋಗಾವಕಾಶ ಇದೆ. ಗ್ರಾಫಿಕ್ ಡಿಸೈನರ್, ಇಲಸ್ಟ್ರೇಟರ್, ಆನಿಮೇಟರ್, ಮಲ್ಟಿಮೀಡಿಯಾ ಡಿಸೈನರ್, ಆರ್ಟ್ ಡೈರೆಕ್ಟರ್, UI/UX ಡಿಸೈನರ್, ಪ್ಯಾಕೇಜಿಂಗ್ ಡಿಸೈನರ್ ಮತ್ತು ಬ್ರಾಂಡಿಂಗ್ ಸ್ಪೆಷಲಿಸ್ಟ್ ಹುದ್ದೆಗಳಲ್ಲಿ ಕೆಲಸ ಮಾಡಬಹುದು. ಫ್ರೀಲಾನ್ಸ್ ಮಾಡಿ ಡಿಜಿಟಲ್ ಮಾಧ್ಯಮ ಕ್ಷೇತ್ರದಲ್ಲಿ ವ್ಯಾಪಾರ ವಿಸ್ತರಿಸಿಕೊಳ್ಳಲು ಕೂಡ ಅವಕಾಶ ಇದೆ.

15 ಲಕ್ಷದವರೆಗೂ ಆದಾಯ ಪಡೆಯಲು ಇದೆ ಅವಕಾಶ

ಆರಂಭಿಕ ವೇತನ ಗ್ರಾಫಿಕ್ ಡಿಸೈನರ್‌ಗಳಿಗೆ ವಾರ್ಷಿಕ ₹3–6 ಲಕ್ಷ, ಆನಿಮೇಟರ್‌ಗಳಿಗೆ ₹4–8 ಲಕ್ಷ ಮತ್ತು ಆರ್ಟ್ ಡೈರೆಕ್ಟರ್‌ಗಳಿಗೆ ₹8–15 ಲಕ್ಷ ವಾರ್ಷಿಕ ಆದಾಯ ಗಳಿಸಬಹುದು. ಫ್ರೀಲಾನ್ಸ್ ಮಾಡುವ ಕಲಾವಿದರು ತಿಂಗಳಿಗೆ ₹20,000 ರಿಂದ ₹1 ಲಕ್ಷದವರೆಗೂ ಸಂಪಾದಿಸಬಹುದು. ಸರ್ಕಾರಿ ಮತ್ತು ಖಾಸಗಿ ಶಾಲೆಗಳಲ್ಲಿ ಕಲಾ ಶಿಕ್ಷಕರಾಗಿ ಹಾಗೂ ಮ್ಯೂಸಿಯಂ, ಆರ್ಟ್ ಗ್ಯಾಲರಿ, ಜಾಹೀರಾತು ಏಜೆನ್ಸಿ, ಡಿಸೈನ್ ಸ್ಟುಡಿಯೋ, ಅನಿಮೇಷನ್ ಕಂಪನಿ ಮತ್ತು ವಿಡಿಯೋ ಗೇಮ್ ಡೆವಲಪ್‌ಮೆಂಟ್ ಕ್ಷೇತ್ರದಲ್ಲಿ ಉದ್ಯೋಗ ಪಡೆಯಬಹುದು. ಒಟ್ಟಿನಲ್ಲಿ ಕಲೆಯ ಮೇಲೆ ಪ್ರೀತಿ ಇರುವ ವಿದ್ಯಾರ್ಥಿಗಳಿಗೆ ಬಿ.ವಿ.ಎ. ಒಂದು ಭವಿಷ್ಯದ ದಾರಿ ತೆರೆಯುವ ಸುವರ್ಣ ಅವಕಾಶ.


Previous Post Next Post