PM Kisan: ಪಿಎಂ ಕಿಸಾನ್‌ 23ನೇ ಕಂತಿನ ಹಣ ಬಿಡುಗಡೆಯ ಬಿಗ್‌ ಅಪ್‌ಡೇಟ್‌ ಇದು

PM Kisan 23 Installment date: ನೀವು ಕೂಡ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಫಲಾನುಭವಿಯಾಗಿದ್ದೀರಾ? ಹಾಗಾದ್ರೆ ಈ ಸ್ಟೋರಿ ನಿಮ್ಮ ಪಾಲಿಗೆ ಅತಿ ಮುಖ್ಯ! ಶೀಘ್ರದಲ್ಲೇ ಬರಲಿರುವ 23ನೇ ಕಂತಿನ ಹಣವನ್ನು ಪಡೆಯಲು ರೈತರು ಮಾಡಬೇಕಾದ ಪ್ರಮುಖ ಕೆಲಸಗಳೇನು ಅಂತ ಇಲ್ಲಿ ನೋಡಿ.

ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ (PM Kisan Samman Nidhi Yojana) ನಮ್ಮ ದೇಶದ ಅತಿ ದೊಡ್ಡ ಜನಪ್ರಿಯ ಯೋಜನೆಗಳಲ್ಲಿ ಒಂದಾಗಿದೆ. ಈ ಯೋಜನೆಯ ಮೂಲಕ ದೇಶಾದ್ಯಂತ ಒಟ್ಟು 9 ಕೋಟಿಗೂ ಹೆಚ್ಚು ರೈತರು (Farmers) ಪ್ರತಿ ವರ್ಷ 3 ಕಂತುಗಳಲ್ಲಿ ಒಟ್ಟು 6,000 ರೂ.ಗಳನ್ನು ಪಡೆಯುತ್ತಿದ್ದಾರೆ. ಇತ್ತೀಚೆಗಷ್ಟೇ ಅಂದರೆ 2026ರ ಮಾರ್ಚ್ 13ರಂದು ಕೇಂದ್ರ ಸರ್ಕಾರ (Central Government) ಪಿಎಂ ಕಿಸಾನ್ ಯೋಜನೆಯ 22ನೇ ಕಂತನ್ನು (22nd Installment) ಬಿಡುಗಡೆ ಮಾಡಿತ್ತು. ಇದೀಗ ಎಲ್ಲರೂ 23ನೇ ಕಂತಿನ (23rd Installment) ಹಣ ಯಾವಾಗ ಖಾತೆ ಸೇರಲಿದೆ ಅಂತ ಕಾಯುತ್ತಿದ್ದಾರೆ.

ರೈತರು ಸಾಮಾನ್ಯವಾಗಿ ವರ್ಷಕ್ಕೆ ಮೂರು ಬೆಳೆಗಳನ್ನು ಬೆಳೆಯುತ್ತಾರೆ. ಹಾಗಾಗಿ ರೈತರು ಬೀಜ ಹಾಗೂ ಗೊಬ್ಬರಗಳನ್ನು ಖರೀದಿಸಲು ಅನುಕೂಲವಾಗಲಿ ಅಂತ ಮೋದಿ ಸರ್ಕಾರ ಪ್ರತಿ ವರ್ಷ ಮೂರು ಬಾರಿ (ಫೆಬ್ರವರಿ, ಜುಲೈ ಮತ್ತು ಅಕ್ಟೋಬರ್‌ನಲ್ಲಿ) ಕಂತಿನ ಹಣ ಬಿಡುಗಡೆ ಮಾಡುತ್ತದೆ. ಈ ಬಾರಿ ಇರಾನ್ ಯುದ್ಧದ ಭೀತಿಯಿಂದ ರಸಗೊಬ್ಬರಗಳ ಬೆಲೆ ಹೆಚ್ಚಾಗಿದ್ದು, ಸ್ವಲ್ಪ ಮುಂಚಿತವಾಗಿಯೇ ಅಂದರೆ ಜುಲೈ ತಿಂಗಳಲ್ಲೇ 23ನೇ ಕಂತಿನ 2000 ರೂ. ಹಣ ಬಿಡುಗಡೆಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ.

ಈ ಯೋಜನೆಯಡಿ ಕಂತಿನ ಹಣ ತಡೆರಹಿತವಾಗಿ ನಿಮ್ಮ ಖಾತೆಗೆ ಜಮಾ ಆಗಬೇಕಾದರೆ, ನೀವು ಮುಖ್ಯವಾಗಿ ಮೂರು ಕೆಲಸಗಳನ್ನು ಪೂರ್ಣಗೊಳಿಸಿರಬೇಕು. ಮೊದಲನೆಯದಾಗಿ, ನಿಮ್ಮ ಆಧಾರ್ ಕಾರ್ಡ್ ಅನ್ನು ನಿಮ್ಮ ಬ್ಯಾಂಕ್ ಖಾತೆಗೆ ಕಡ್ಡಾಯವಾಗಿ ಲಿಂಕ್ ಮಾಡಿರಬೇಕು. ಎರಡನೆಯದು, ಪಿಎಂ ಕಿಸಾನ್ ವೆಬ್‌ಸೈಟ್ ಅಥವಾ ಸಿಎಸ್‌ಸಿ ಕೇಂದ್ರಗಳ ಮೂಲಕ ನಿಮ್ಮ ಇ-ಕೆವೈಸಿ (eKYC) ಅಪ್‌ಡೇಟ್ ಆಗಿರಬೇಕು. ಮೂರನೆಯದು, ಕಂದಾಯ ಇಲಾಖೆಯಿಂದ ನಿಮ್ಮ ಜಮೀನಿನ ಭೂ ಪರಿಶೀಲನೆ ಪೂರ್ಣಗೊಂಡಿರಬೇಕು.

ನೀವು ಈ ಯೋಜನೆಗೆ ಅರ್ಹರಿದ್ದೀರೋ ಇಲ್ಲವೋ ಎಂಬುದನ್ನು ಮೊಬೈಲ್‌ನಲ್ಲೇ ಚೆಕ್ ಮಾಡಬಹುದು. ಅಧಿಕೃತ ವೆಬ್‌ಸೈಟ್ pmkisan.gov.in ಗೆ ಭೇಟಿ ನೀಡಿ, 'ನಿಮ್ಮ ಸ್ಥಿತಿ ತಿಳಿಯಿರಿ' (Know Your Status) ಎಂಬ ಆಯ್ಕೆಯ ಮೇಲೆ ಕ್ಲಿಕ್ ಮಾಡಿ. ಅಲ್ಲಿ ನಿಮ್ಮ ರೈತ ನೋಂದಣಿ ಸಂಖ್ಯೆ ಮತ್ತು ಕ್ಯಾಪ್ಚಾ ನಮೂದಿಸಿದರೆ ನಿಮ್ಮ ಸ್ಟೇಟಸ್ ಸ್ಕ್ರೀನ್ ಮೇಲೆ ಬರುತ್ತದೆ. ಅಲ್ಲಿ 'ಅರ್ಹ' (Eligible) ಎಂದು ತೋರಿಸಿದರೆ ಮಾತ್ರ 23ನೇ ಕಂತು ಖಾತೆ ಸೇರಲಿದೆ. ಇಲ್ಲವಾದರೆ ನೀವು ಮತ್ತೆ ಅರ್ಜಿ ಸಲ್ಲಿಸಬೇಕಾಗುತ್ತದೆ.

ನಿಮ್ಮ ಹೆಸರು ಫಲಾನುಭವಿಗಳ ಪಟ್ಟಿಯಲ್ಲಿದೆಯೇ ಎಂದು ಪರಿಶೀಲಿಸಲು ವೆಬ್‌ಸೈಟ್‌ನಲ್ಲಿರುವ 'ಫಲಾನುಭವಿಗಳ ಪಟ್ಟಿ' (Beneficiary List) ಎಂಬ ಆಯ್ಕೆಯ ಮೇಲೆ ಕ್ಲಿಕ್ ಮಾಡಿ. ಬಳಿಕ ನಿಮ್ಮ ರಾಜ್ಯ, ಜಿಲ್ಲೆ, ತಾಲೂಕು ಮತ್ತು ಗ್ರಾಮವನ್ನು ಆಯ್ಕೆ ಮಾಡಿ 'ವರದಿ ಪಡೆಯಿರಿ' (Get Report) ಬಟನ್ ಒತ್ತಿ. ಆಗ ಬರುವ ಪಟ್ಟಿಯಲ್ಲಿ ನಿಮ್ಮ ಹೆಸರಿದ್ದರೆ ನಿಮಗೆ ಹಣ ಪಕ್ಕಾ ಅಂತ ಅರ್ಥ.

ನಿಮ್ಮ ಎಲ್ಲಾ ದಾಖಲೆಗಳು ಸರಿಯಾಗಿದ್ದರೂ, ಕೆಲವೊಮ್ಮೆ ತಾಂತ್ರಿಕ ಕಾರಣಗಳಿಂದ 22ನೇ ಕಂತಿನ ಹಣ ಜಮಾ ಆಗಿರಲ್ಲ. ಅಂಥವರು ಎಲ್ಲಿ ತಪ್ಪು ನಡೆದಿದೆ ಎಂದು ತಿಳಿದುಕೊಂಡು ಅದನ್ನು ಸರಿಪಡಿಸಿಕೊಳ್ಳಬೇಕು. ಹೀಗೆ ಮಾಡಿದರೆ, ಮುಂಬರುವ ಜುಲೈನಲ್ಲಿ 23ನೇ ಕಂತಿನ ಜೊತೆಗೇ ಬಾಕಿ ಇರುವ 22ನೇ ಕಂತಿನ ಹಣ ಕೂಡ ಸೇರಿ ಒಟ್ಟು 4,000 ರೂ. ನಿಮ್ಮ ಖಾತೆಗೆ ಜಮಾ ಆಗಲಿದೆ.

ಯಾರು ರೈತರೇ ಅಲ್ಲವೋ, ಅವರು ಕೂಡ ಸುಳ್ಳು ದಾಖಲೆ ನೀಡಿ ಈ ಯೋಜನೆಯ ಲಾಭ ಪಡೆಯುತ್ತಿರುವುದು ಸರ್ಕಾರದ ಗಮನಕ್ಕೆ ಬಂದಿದೆ. ಹಾಗಾಗಿ ಸರ್ಕಾರ ಕಳೆದ ಒಂದು ವರ್ಷದಿಂದ ಕಟ್ಟುನಿಟ್ಟಾಗಿ ದಾಖಲೆಗಳನ್ನು ಪರಿಶೀಲಿಸುತ್ತಿದ್ದು, ಇದುವರೆಗೆ ದೇಶಾದ್ಯಂತ ಬರೋಬ್ಬರಿ ಒಂದು ಕೋಟಿಗೂ ಹೆಚ್ಚು ಅನರ್ಹ ರೈತರ ಹೆಸರನ್ನು ಪಟ್ಟಿಯಿಂದ ಡಿಲೀಟ್ ಮಾಡಿದೆ. ಮುಂದಿನ ದಿನಗಳಲ್ಲೂ ಈ ಪರಿಶೀಲನೆ ಮುಂದುವರಿಯಲಿದೆ.

ನೀವು ಅರ್ಹ ರೈತರಾಗಿದ್ದು, ನಿಮ್ಮ ಎಲ್ಲಾ ದಾಖಲೆಗಳು ಸರಿಯಿದ್ದರೂ ಕಂತಿನ ಹಣ ನಿಮ್ಮ ಬ್ಯಾಂಕ್ ಖಾತೆಗೆ ಬಂದಿಲ್ಲವಾದರೆ ಚಿಂತಿಸುವ ಅಗತ್ಯವಿಲ್ಲ. ನಿಮ್ಮ ಸಮಸ್ಯೆಯನ್ನು ಬಗೆಹರಿಸಿಕೊಳ್ಳಲು ಸರ್ಕಾರ ಸಹಾಯವಾಣಿಯನ್ನು (Helpline Number) ಒದಗಿಸಿದೆ. ನೀವು 155261 ಅಥವಾ 011-24300606 ನಂಬರ್‌ಗೆ ಕರೆ ಮಾಡಿ ದೂರು ನೀಡಬಹುದು. ಈ ಸಹಾಯವಾಣಿಯು ಬೆಳಿಗ್ಗೆ 9:30 ರಿಂದ ಸಂಜೆ 6:00 ಗಂಟೆಯವರೆಗೆ ಕೆಲಸ ಮಾಡುತ್ತದೆ.

Previous Post Next Post