E-Swathu: ಇ-ಸ್ವತ್ತು ಅರ್ಜಿ ಪ್ರಕ್ರಿಯೆ ಸುಲಭ: ಗ್ರಾಮ ಒನ್‌, ಕರ್ನಾಟಕ ಒನ್‌ ಕೇಂದ್ರಗಳಲ್ಲಿ ಹೊಸ ಸೇವೆ

E-Swathu: ಕರ್ನಾಟಕ ಸರ್ಕಾರವು ಬಿ ಖಾತಾ ಹಾಗೂ ಇ ಖಾತಾ ವಿಚಾರದಲ್ಲಿ ಹಲವು ಬದಲಾವಣೆಗಳನ್ನು ತಂದಿದೆ. ಇದೀಗ ಇ-ಸ್ವತ್ತು ಅರ್ಜಿಗಳ ವಿಚಾರದಲ್ಲಿ ಮಹತ್ವದ ಬದಲಾವಣೆಯನ್ನು ತಂದಿದೆ. ಕರ್ನಾಟಕದ ವಿವಿಧ ಭಾಗಗಳಲ್ಲಿ ಆಸ್ತಿದಾರರು ಅದರಲ್ಲೂ ಮುಖ್ಯವಾಗಿ ಗ್ರಾಮೀಣ ಭಾಗದ ಆಸ್ತಿದಾರರು ಇ ಸ್ವತ್ತುಗಳನ್ನು ಪಡೆದುಕೊಳ್ಳುವುದಕ್ಕೆ ಪರದಾಡುತ್ತಿದ್ದಾರೆ. ಇ ಸ್ವತ್ತು ವಿಚಾರದಲ್ಲಿ ಹಲವು ಗೊಂದಲಗಳು ಇವೆ. ಇದೀಗ ಆಸ್ತಿದಾರರು ಇ ಸ್ವತ್ತಿನಲ್ಲಿ ಎದುರಿಸುತ್ತಿರುವ ಸಮಸ್ಯೆಗಳನ್ನು ಪರಿಹರಿಸುವುದಕ್ಕೆ ಕರ್ನಾಟಕ ಸರ್ಕಾರವು ಮುಂದಾಗಿದೆ.



ಇನ್ಮುಂದಿನ ದಿನಗಳಲ್ಲಿ ಸಮೀಪದ ಕೇಂದ್ರಗಳಲ್ಲೇ ಇ-ಸ್ವತ್ತು ಅರ್ಜಿ ಸಲ್ಲಿಕೆ ಅವಕಾಶ ಇರಲಿದೆ. ಹೌದು ಇ-ಸ್ವತ್ತು ಅರ್ಜಿಗಳನ್ನು ಇನ್ನು ಮುಂದಿನ ದಿನಗಳಲ್ಲಿ ರಾಜ್ಯಾದ್ಯಂತ ಇರುವ ಬಾಪೂಜಿ ಸೇವಾ ಕೇಂದ್ರ (ಗ್ರಾಮ ಒನ್), ಕರ್ನಾಟಕ ಒನ್‌, ಬೆಂಗಳೂರು ಒನ್ ಕೇಂದ್ರಗಳ ಮೂಲಕ ಸಲ್ಲಿಸಬಹುದು. ಈ ಅವಕಾಶದಿಂದ ಆಸ್ತಿದಾರರು ಸರಳವಾಗಿ ಇ- ಸ್ವತ್ತು ಪಡೆದುಕೊಳ್ಳುವುದಕ್ಕೆ ಅನುಕೂಲವಾಗಲಿದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಅವರು ತಿಳಿಸಿದ್ದಾರೆ.

E-Swathu

ಈ ಕುರಿತು ಮಾಹಿತಿ ಹಂಚಿಕೊಂಡ ಸಚಿವರು, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಹಾಗೂ ಇ-ಆಡಳಿತ ಇಲಾಖೆಯ ವಿದ್ಯುನ್ಮಾನ ವಿತರಣಾ ನಿರ್ದೇಶನಾಲಯದ (ಇಡಿಸಿಎಸ್) ನಡುವೆ ಮೂರು ವರ್ಷಗಳ ಅವಧಿಗೆ ಒಪ್ಪಂದ ಮಾಡಿಕೊಳ್ಳಲಾಗಿದೆ ಎಂದು ಹೇಳಿದ್ದಾರೆ.

ಇದೀಗ ನಡೆದಿರುವ ಒಪ್ಪಂದದ ಅನ್ವಯ, ರಾಜ್ಯದ ಎಲ್ಲ ಸಮಗ್ರ ನಾಗರಿಕ ಸೇವಾ ಕೇಂದ್ರಗಳಲ್ಲಿ ಇ-ಸ್ವತ್ತು ಅರ್ಜಿ ಸಲ್ಲಿಕೆ ಸೌಲಭ್ಯ ಸಿಗಲಿವೆ. ಸೇವೆಗಳ ಸಮನ್ವಯಕ್ಕಾಗಿ ನೋಡಲ್ ಅಧಿಕಾರಿಗಳನ್ನು ನೇಮಿಸಲಾಗುವುದು.

ಅಲ್ಲದೇ ಈ ಕೇಂದ್ರಗಳ ನಿರ್ವಾಹಕರಿಗೆ ತರಬೇತಿಯನ್ನು ಸಹ ಕೊಡಲಾಗುವುದು. ಈ ರೀತಿ ತರಬೇತಿ ನೀಡುವವರಿಗೆ ಪ್ರತ್ಯೇಕವಾಗಿ ಲಾಗಿನ್ ಖಾತೆಗಳನ್ನು ಸೃಷ್ಟಿಸಲಾಗುವುದು. ಹೊಸ ಖಾತಾ ಸೇವೆಗೆ 145 ಶುಲ್ಕ ನಿಗದಿಪಡಿಸಲಾಗಿದ್ದು, ಅಗತ್ಯ ದಾಖಲೆಗಳನ್ನು ಸ್ಕ್ಯಾನ್ ಮಾಡಿ ಅಪ್‌ಲೋಡ್ ಮಾಡಲು ಪ್ರತಿ ಪುಟಕ್ಕೆ 5 ರೂ. ಶುಲ್ಕ ಪಾವತಿಸ ಬೇಕಾಗುತ್ತದೆ. ಮುಂದುವರಿದು ಈ ಕೇಂದ್ರಗಳು ವರ್ಷದ ಎಲ್ಲ ದಿನಗಳಲ್ಲಿ ಬೆಳಗ್ಗೆ 8ರಿಂದ ಸಂಜೆ 7 ಗಂಟೆವರೆಗೆ ಕಾರ್ಯನಿರ್ವಹಿಸಲಿವೆ.

ಒಪ್ಪಂದಕ್ಕೆ ಇಲಾಖೆ ನಿರ್ದೇಶಕ ರಾಹುಲ್ ರತ್ನಂ ಪಾಂಡೆ ಮತ್ತು ಇಡಿಸಿಎಸ್ ನಿರ್ದೇಶಕಿ ಅಪರ್ಣಾ ರಮೇಶ್ ಸಹಿ ಹಾಕಿದ್ದಾರೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಅವರು ಮಾಹಿತಿ ನೀಡಿದ್ದಾರೆ. ಈ ಮೂಲಕ ಹಲವು ದಿನಗಳಿಂದ ಆಸ್ತಿದಾರರು ಎದುರಿಸುತ್ತಿದ್ದ, ಅದರಲ್ಲೂ ಮುಖ್ಯವಾಗಿ ಗ್ರಾಮೀಣ ಭಾಗದ ಜನ ಎದುರಿಸುತ್ತಿದ್ದ ಸಮಸ್ಯೆಗಳಿಗೆ ಪರಿಹಾರ ಸಿಕ್ಕಂತಾಗಿದೆ.



Previous Post Next Post