LPG ಇ - ಕೆವೈಸಿ ಎಲ್ಲರಿಗೂ ಕಡ್ಡಾಯವಲ್ಲ; 'ವದಂತಿಗೆ ಕಿವಿಗೊಡಬೇಡಿ' ಕೇಂದ್ರ ಸರ್ಕಾರದಿಂದ ಮಹತ್ವದ ಸ್ಪಷ್ಟನೆ

By SVR Creations

ಎಲ್‌ಪಿಜಿ ಗ್ಯಾಸ್ ಸಿಲಿಂಡರ್ ಗ್ರಾಹಕರಿಗೆ ಬಯೋಮೆಟ್ರಿಕ್ ಆಧಾರ್ ದೃಢೀಕರಣ ಕಡ್ಡಾಯ ಎಂಬ ವದಂತಿ ಹರಿದಾಡುತ್ತಿದೆ. ಆದರೆ, ಈ ಬಗ್ಗೆ ಕೇಂದ್ರ ಸರ್ಕಾರ ಸ್ಪಷ್ಟನೆ ನೀಡಿದ್ದು, ಎಲ್ಲಾ ಗ್ರಾಹಕರಿಗೂ ಕಡ್ಡಾಯವಲ್ಲ ಎಂದು ತಿಳಿಸಿದೆ. ಪ್ರಧಾನ ಮಂತ್ರಿ ಉಜ್ವಲ ಯೋಜನೆಯಡಿ ಬರುವ ಗ್ರಾಹರು ಪ್ರತಿ ಹಣಕಾಸು ವರ್ಷದಲ್ಲಿ ಒಮ್ಮೆ ಕಡ್ಡಾಯವಾಗಿ ಮಾಡಬೇಕಷ್ಟೇ. ಇನ್ನು ಇ-ಕೆವೈಸಿ ಮಾಡಿಸದಿದ್ದರೆ ಸಿಲಿಂಡರ್ ಪೂರೈಕೆ ಯಾವುದೇ ಕಾರಣಕ್ಕೂ ಸ್ಥಗಿತ ಮಾಡಲಲ್ಲ ಎಂದು ಸರ್ಕಾರ ಹೇಳಿದೆ.

  • ಎಲ್ಲರಿಗೂ ಎಲ್‌ಪಿಜಿ ಇ - ಕೆವೈಸಿ ಕಡ್ಡಾಯವಲ್ಲ ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯ ಮಾಹಿತಿ.ಸಾಮಾನ್ಯ ಗ್ರಾಹಕರು ಈ ಹಿಂದೆ ಒಮ್ಮೆ ಇ-ಕೆವೈಸಿ ಮಾಡಿಸಿದ್ದರೆ ಸಾಕು.ಇ-ಕೆವೈಸಿ ಮಾಡಿಸದ ಕಾರಣಕ್ಕೆ ನಿಮ್ಮ ಗ್ಯಾಸ್ ಸಿಲಿಂಡರ್ ಸರಬರಾಜನ್ನು ನಿಲ್ಲಿಸಲ್ಲ ಎಂದ ಕೇಂದ್ರ ಸರ್ಕಾರ.
  • ಕಳೆದ ಕೆಲವು ದಿನಗಳಿಂದ ಎಲ್‌ಪಿಜಿ ಗ್ಯಾಸ್ ಸಿಲಿಂಡರ್ ಗ್ರಾಹಕರು ಬಯೋಮೆಟ್ರಿಕ್ ಆಧಾರ್ ದೃಢೀಕರಣ ಅಥವಾ ಇ - ಕೆವೈಸಿ ಮಾಡಿಸುವುದು ಕಡ್ಡಾಯ ಎಂಬ ಸುದ್ದಿಗಳು ವ್ಯಾಪಕವಾಗಿ ಹರಿದಾಡುತ್ತಿದ್ದು, ಸಾರ್ವಜನಿಕರಲ್ಲಿ ಗೊಂದಲ ಮೂಡಿಸಿತ್ತು. ಈ ಗೊಂದಲಕ್ಕೆ ತೆರೆ ಎಳೆದಿರುವ ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯವು ಅಧಿಕೃತ ಸ್ಪಷ್ಟನೆಯನ್ನು ನೀಡಿದೆ.
  • ಸಚಿವಾಲಯದ ಪ್ರಕಟಣೆಯ ಪ್ರಕಾರ, ಇ-ಕೆವೈಸಿ ಪ್ರಕ್ರಿಯೆಯು ಎಲ್ಲಾ ಗ್ರಾಹಕರಿಗೆ ಅನ್ವಯಿಸುವುದಿಲ್ಲ. ಇದು ಕೇವಲ ಈವರೆಗೆ ಇ-ಕೆವೈಸಿ ಪೂರ್ಣಗೊಳಿಸದ ಅಥವಾ ದೃಢೀಕರಿಸದ ಗ್ರಾಹಕರಿಗೆ ಮಾತ್ರ ಸೀಮಿತವಾಗಿದೆ. ಆಧಾರ್ ಬಯೋಮೆಟ್ರಿಕ್ ದೃಢೀಕರಣವು ಹೊಸ ನಿಯಮವೇನಲ್ಲ. ಸರ್ಕಾರವು ಪಾರದರ್ಶಕತೆ ತರಲು ಮತ್ತು ನಕಲಿ ಗ್ರಾಹಕರನ್ನು ಪತ್ತೆಹಚ್ಚಲು ಮೊದಲಿನಿಂದಲೂ ಜಾರಿಯಲ್ಲಿರುವ ಪ್ರಕ್ರಿಯೆಯಾಗಿದೆ. (ಎಲ್‌ಪಿಜಿ ಕರ್ನಾಟಕ ಸಹಾಯವಾಣಿ)

ಸಾಮಾನ್ಯ ಗ್ರಾಹಕರಿಗೆ ರಿಯಾಯಿತಿ

ಪ್ರಧಾನ ಮಂತ್ರಿ ಉಜ್ವಲ ಯೋಜನೆ ಅಲ್ಲದ ಸಾಮಾನ್ಯ ಗ್ರಾಹಕರಾಗಿದ್ದು, ಈ ಹಿಂದೆ ಈಗಾಗಲೇ ಒಮ್ಮೆ ಇ-ಕೆವೈಸಿ ಮಾಡಿಸಿದ್ದರೆ, ನೀವು ಮತ್ತೆ ಮಾಡಿಸುವ ಅಗತ್ಯವಿಲ್ಲ. ಆದರೆ, ಪ್ರಧಾನ ಮಂತ್ರಿ ಉಜ್ವಲ ಯೋಜನೆ ಬರುವ ಗ್ರಾಹಕರು ಪ್ರತಿ ಹಣಕಾಸು ವರ್ಷದಲ್ಲಿ ಕೇವಲ ಒಂದು ಬಾರಿ ಮಾತ್ರ ಇ - ಕೆವೈಸಿ ಮಾಡಿಸಬೇಕು. ಇದು ಕೂಡ ಕೇವಲ ಸಬ್ಸಿಡಿ ಹಣ ಪಡೆಯುವ ಉದ್ದೇಶಕ್ಕಾಗಿ ಮಾತ್ರ. ಪ್ರಮುಖವಾಗಿ ಒಂದು ವರ್ಷದಲ್ಲಿ 7 ರೀಫಿಲ್ ಆದ ಬಳಿಕ, ಅಂದರೆ 8 ಮತ್ತು 9ನೇ ಸಿಲಿಂಡರ್ ಪಡೆಯುವ ಸಮಯದಲ್ಲಿ ಇದನ್ನು ಮಾಡಿಸಬೇಕಾಗುತ್ತದೆ.

ಮನೆಯಲ್ಲೇ ಇ ಕೆವೈಸಿ ಮಾಡಬಹುದು; ಗ್ಯಾಸ್‌ ಸರಬರಾಜು ನಿಲ್ಲಿಸಲ್ಲ

ಗ್ರಾಹಕರು ಗ್ಯಾಸ್ ಏಜೆನ್ಸಿಗಳಿಗೆ ಅಲೆಯುವ ಅಗತ್ಯವಿಲ್ಲ. ಸ್ಮಾರ್ಟ್‌ಫೋನ್ ಮೂಲಕ ಮನೆಯಲ್ಲೇ ಕುಳಿತು ಉಚಿತವಾಗಿ ಇ-ಕೆವೈಸಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಬಹುದು. ಇ-ಕೆವೈಸಿ ಮಾಡಿಸದ ಕಾರಣಕ್ಕೆ ನಿಮ್ಮ ಗ್ಯಾಸ್ ಸಿಲಿಂಡರ್ ಸರಬರಾಜನ್ನು ಯಾವುದೇ ಕಾರಣಕ್ಕೂ ನಿಲ್ಲಿಸಲಾಗುವುದಿಲ್ಲ ಅಥವಾ ವಿಳಂಬ ಮಾಡಲಾಗುವುದಿಲ್ಲ ಎಂದು ಸರ್ಕಾರ ಖಚಿತಪಡಿಸಿದೆ.

ಇ-ಕೆವೈಸಿ ಮಾಡಿಸುವ ಉದ್ದೇಶವೇನು?

  • ಸಬ್ಸಿಡಿ ಹಣವು ನೇರವಾಗಿ ಅರ್ಹ ಫಲಾನುಭವಿಗಳ ಖಾತೆಗೆ ತಲುಪುವುದನ್ನು ಖಚಿತಪಡಿಸಿಕೊಳ್ಳಲು.
  • ನಕಲಿ ಗ್ರಾಹಕರನ್ನು ಪತ್ತೆಹಚ್ಚಿ ವ್ಯವಸ್ಥೆಯಿಂದ ಹೊರಹಾಕಲು.
  • ಎಲ್‌ಪಿಜಿ ಸಿಲಿಂಡರ್‌ಗಳ ದುರ್ಬಳಕೆಯನ್ನು ತಡೆಗಟ್ಟಲು ಈ ಪ್ರಕ್ರಿಯೆಯು ಸಹಕಾರಿಯಾಗಿದೆ.

ಗ್ರಾಹಕರು ವದಂತಿಗೆ ಕಿವಿಗೊಡಬೇಡಿ

ಗ್ರಾಹಕರು ಯಾವುದೇ ವದಂತಿಗಳಿಗೆ ಕಿವಿಗೊಟ್ಟು ಆತಂಕಕ್ಕೊಳಗಾಗುವ ಅಗತ್ಯವಿಲ್ಲ. ಕೇವಲ ಅಗತ್ಯವಿದ್ದವರು ಮಾತ್ರ ಇ-ಕೆವೈಸಿ ಮಾಡಿಸಿಕೊಳ್ಳಬಹುದು ಎಂದು ಸರ್ಕಾರ ತಿಳಿಸಿದೆ. ಸಹಾಯವಾಣಿ ಸಂಖ್ಯೆ: 18002333555